ಆಹಾರ ವಿಷಕಾರಿಯಾದದ್ದೇಕೆ?
ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಆ.14
ಜೇವರ್ಗಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿನ ಅನ್ನ ಹಾಗೂ ಸಾಂಬಾರ ವಿಷಯುಕ್ತವಾದದ್ದು ಹೇಗೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.
ಏಕೆಂದರೆ- ನಿಲಯದಲ್ಲಿ ಹಾಜರಿದ್ದ 42 ಮಕ್ಕಳ ಪೈಕಿ ಮೂವರು ಊಟ ಮಾಡಿದರೂ ಯಾವ ಬಾಧೆಯೂ ತಾಗದೆ ಚೆನ್ನಾಗಿದ್ದಾರೆ. ಇನ್ನು ಅಡುಗೆಯವರು ಮನೆಗೆ ಇದೇ ಊಟ ಕಟ್ಟಿಕೊಂಡು ಹೋಗಿ ಮಕ್ಕಳಿಗೆ ಬಡಿಸಿ ತಾವೂ ತಿಂದಿದ್ದಾರೆ, ಅವರಿಗೂ ಯಾವ ಬಾಧೆ ಆಗಿಲ್ಲ.
ಅಡುಗೆಯವರು, ಅವರ ಪುಟಾಣಿ ಮಕ್ಕಳು, ನಿಲಯದಲ್ಲೇ ಇದ್ದ ಇನ್ನೂ 3 ಮಂದಿ ವಿದ್ಯಾರ್ಥಿಗಳು ಮಂಗಳವಾರ ರಾತ್ರಿ ಸಿದ್ಧಪಡಿಸಿದ ಅಡುಗೆಯನ್ನೇ ಉಂಡರೂ ಬಾಧೆಯಾಗದೆ ಚೆನ್ನಾಗಿರುವಾಗ ಉಳಿದ 39 ಮಕ್ಕಳಿಗೇಕೆ ವಾಂತಿ- ಭೇದಿ, ಹೊಟ್ಟೆನೋವು, ರಕ್ತವಾಂತಿ ಏಕಾಯ್ತು ಎಂಬ ಪ್ರಶ್ನೆಗಳು ಚರ್ಚೆಯಲ್ಲಿದ್ದರೂ ಉತ್ತರ ಮಾತ್ರ ಅಂತೆ- ಕಂತೆಗಳಲ್ಲೇ ಕಳೆದು ಹೋಗುತ್ತಿದೆ.
ಅಶುಚಿತ್ವವಂತೂ ಸತ್ಯ..: ವಸತಿ ನಿಲಯದಲ್ಲಿ ಅಡುಗೆ ಸಿದ್ಧಪಡಿಸುವ ಪರಿಸರ ಶುಚಿಯಾಗಿರಲಿಲ್ಲ, ತುಂಬ ಕೊಳಗಾಗಿತ್ತು, ಕುಡಿಯುವ ನೀರು ಸಂಗ್ರಹಿಸುವ ಪಾತ್ರೆಗಳು, ಅನ್ನ- ಸಾಂಬಾರ ಮಾಡಲು ಬಳಸುವ ಪಾತ್ರೆಗಳೆಲ್ಲವೂ ಶುಚಿಯಾಗಿರಲಿಲ್ಲ. ಆದ್ದರಿಂದಲೇ ಕೆಟ್ಟದಾದ ಪರಿಕರಗಳಲ್ಲಿ ಸಿದ್ಧಪಡಿಸಿದ ಆಹಾರ ವಿಷವಾಗದೆ ಇನ್ನೇನು ಆಗಲು ಸಾಧ್ಯ ಎಂದು ಸ್ಥಳೀಯರು ಕೇಳುತ್ತಿದ್ದಾರೆ. ಈ ಮಾತಿಗೆ ಪುಷ್ಟಿ ಎಂಬಂತೆ ಜಿಪಂ ಸಿಇಒ ಪಲ್ಲವಿ ಆಕುರಾತಿ, ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಹಾಗೂ ಜಿಪಂ ನೆಲೋಗಿ ಕ್ಷೇತ್ರ ಸದಸ್ಯೆ, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸದಸ್ಯೆ ಶೋಭಾ ಬಾಣಿ ಮತ್ತು ಇತರರು ಸಹ ತಾವು ವಸತಿ ನಿಲಯದ ಅಡುಗೆ ಕೋಣೆ ಕಂಡು ಹೌಹಾರಿದ್ದಾಗಿ ಹೇಳಿದ್ದಾರೆ.
ಇವರೆಲ್ಲರ ಮಾತುಗಳು ಹಾಗೂ ಈಗ ಸಂಭವಿಸಿರುವ ದುರಂತ ಘಟನೆ ಎಲ್ಲವನ್ನೂ ವಿಶ್ಲೇಷಣೆಗೆ ಒಳಪಡಿಸಲಾಗಿ ವಸತಿ ನಿಲಯದ ಶುಚಿತ್ವಕ್ಕೆ ಕವಡೆ ಕಾಸಿನ ಕಿಮ್ಮತ್ತು ಜೇವರ್ಗಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿರುವ ಅಧಿಕಾರಿಗಳು, ಹಾಸ್ಟೆಲ್ ವಾರ್ಡನ್ ಮತ್ತವರ ಸಹ ಅಧಿಕಾರಿಗಳು ನೀಡಿರಲಿಲ್ಲ ಎಂಬಂಶ ಸ್ಪಷ್ಟವಾಗುತ್ತದೆ.
ದೊಡ್ಡ ಸಂಖ್ಯೆಯಲ್ಲಿ ಮಕ್ಕಳನ್ನು ಕಾಡಿದೆ: ಆಹಾರ ವಿಷವಾಗಿ ಬಹು ಮಕ್ಕಳನ್ನು ಕಾಡಿದೆ, ಇದು ಚಲ್ತೆ ಹೈ ಎಂದು ಸುಮ್ಮನಾಗುವಂತಹ ಘಟನೆಯಲ್ಲ ಎನ್ನುತ್ತದೆ ಜಿಲ್ಲಾಡಳಿತ. ಮಕ್ಕಳಿಗೆ ಚಿಕಿತ್ಸೆ ನೀಡಿರುವ ವೈದ್ಯರು ಹೇಳುವಂತೆ ಆಹಾರ ಸಿದ್ಧಪಡಿಸಲು ಬಳಸುವ ಪಾತ್ರೆಗಳು ಶುಚಿಯಾಗಿರದಿದ್ದರೂ ಆಹಾರ ವಿಷವಾಗಿ ಇಂತಹ ನೋವು ಕಾಣಿಸಿಕೊಂಡು ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆಗಳಿವೆ. ಜೇವರ್ಗಿಯಲ್ಲೂ ಇಂಥದ್ದೇ ಪ್ರಸಂಗ ಎದುರಾಗಿರಲು ಸಾಕು ಎಂಬ ಅಭಿಪ್ರಾಯಗಳೇ ಕೇಳಿಬರುತ್ತಿವೆ.
ಘಟನೆ ತುಂಬ ಸೂಕ್ಷ್ಮವಾಗಿದೆ. 39ಕ್ಕೂ ಹೆಚ್ಚು ಮಕ್ಕಳಿಗೆ ಅನಾರೋಗ್ಯ ಕಾಡಿದೆ. ಮಕ್ಕಳು ತುಂಬ ಸುಸ್ತಾಗಿ ನೆಲದ ಮೇಲೆ ಕುಸಿದಿದ್ದರು. ಆಹಾರ ವಿಷವಾಗಿದ್ದು ತುಂಬ ತೀಕ್ಷ್ಮವಾದಂತಹ ವಿಷವೇ ಮಕ್ಕಳ ದೇಹ ಸೇರಿದೆ ಎಂಬುದಕ್ಕೆ ಅವರನ್ನು ಕಾಡಿರುವ ಅನಾರೋಗ್ಯವೇ ಕನ್ನಡಿ ಎನ್ನುವ ಜಿಪಂ ಸದಸ್ಯೆ ಶೋಭಾ ಬಾಣಿ, ಈ ಪ್ರಕರಣದ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಜರುಗಿಸಲಿ. ಯಾರು ತಪ್ಪಿತಸ್ಥರು, ಆಹಾರ ವಿಷವಾಗಿದ್ದು ಯಾಕೆ ಎಂಬುದನ್ನು ಪತ್ತೆ ಹಚ್ಚಿ ಆರೋಪಿಗಳಿಗೆ ಶಿಕ್ಷಿಸಲಿ ಎಂದು ಆಗ್ರಹಿಸಿದ್ದಾರೆ.
ಪಾಲಕರಲ್ಲಿ ಆತಂಕ: ಹಾಸ್ಟೆಲ್‌ನಾಗ ಅವ್ಯವಸ್ಥಾ ಬಕ್ಳ ಅದ ಅಂತ್ರಿ, ನಮ್ಮ ಮಕ್ಕಳು ವಾಂತಿ ಮಾಡಿಕೊಂತಲೇ ನಮಗೆ ಫೋನ್ ಮಾಡಿದ್ವು. ನಾವು ಓಡೋಡಿ ಬರೋಮಟ್ಟಾ ಅಲ್ಲಿ ನೀರ ಕೊಡ್ಲಿಕ್ಕೂ ಯಾರೂ ಇರಲಿಲ್ಲ ಎಂದು ಪಾಲಕರು ಅನೇಕರು ಆಸ್ಪತ್ರೆಯಲ್ಲಿ ಅಳುತ್ತಲೇ ತಮ್ಮ ಕರುಳ ಕುಡಿಗಳು ಮಂಗಳವಾರ ರಾತ್ರಿ ಎದುರಿಸಿದ ನರಕಯಾತನೆ ಹೇಳಿದರು.
ಮಕ್ಕಳೆಲ್ಲರೂ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಇದು ಮಕ್ಕಳಿಗೆಲ್ಲರಿಗೂ ಪುನರ್ಜನ್ಮವಾದ ಪ್ರಸಂಗ ಎಂದು ಪಾಲಕರು ಹೇಳುತ್ತಿದ್ದಾರೆ. ಇನ್ನಾದರೂ ಜಿಲ್ಲಾಡಳಿತ, ಸರ್ಕಾರ ವಸತಿ ನಿಲಯಗಳಲ್ಲಿನ ಅವ್ಯವಸ್ಥೆ ಸುಧಾರಿಸುವುದೆ ಮಕ್ಕಳ ಯೋಗಕ್ಷೇವುಕ್ಕೆ ಸೂಕ್ತ ಕ್ರಮಗಳನ್ನು ಜರುಗಿಸುವುದೆ ಕಾದು ನೋಡಬೇಕಷ್ಟೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

