ಬೆಳೆಗಳ ಜೀವ ಕಾಪಾಡಿದ ಜಡಿ ಮಳೆ
ಕನ್ನಡಪ್ರಭ ವಾರ್ತೆ , ಯಾದಗಿರಿ , ಆ. 16
ಜಿಲ್ಲಾದ್ಯಂತ ಶುಕ್ರವಾರ ದಿನವಿಡೀ ಜಿಟಿಜಿಟಿ ಮಳೆಯಾಗುತ್ತಿದ್ದು, ವರಮಹಾಲಕ್ಷ್ಮೀ ವ್ರತದ ಫಲ ರೈತರಿಗೆ ಒಲಿದಂತೆ ಕಾಣುತ್ತಿದೆ. ಆದರೂ ಜಿಲ್ಲೆಯಲ್ಲಿ ಸರಾಸರಿ ಮಳೆ ಪ್ರಮಾಣದಲ್ಲಿ ಕೊರತೆಯಾಗಿದ್ದು, ಬೇಸಿಗೆಯಲ್ಲಿ ಬತ್ತಿ ಬರಡಾಗಿದ್ದ ಕೆರೆಗಳು ಇನ್ನೂ ಖಾಲಿಯಾಗಿಯೇ ಉಳಿದಿವೆ.
ಸದ್ಯ ಕಳೆದ ಒಂದು ವಾರದಿಂದ ಬಿಟ್ಟುಬಿಟ್ಟು ಮಳೆಯಾಗುತ್ತಿದೆ. ಶುಕ್ರವಾರ ಯಾದಗಿರಿಯಲ್ಲಿ 12.6 ಮಿಮೀ, ಶಹಾಪುರದಲ್ಲಿ 5.4 ಹಾಗೂ ಸುರಪುರದಲ್ಲಿ 4.6 ಮಿಮೀ ಮಳೆಯಾಗಿದೆ. ಇದು ಸದ್ಯ ಬಿತ್ತನೆಯಾಗಿರುವ ಹತ್ತಿ, ಹೆಸರು, ತೊಗರಿ, ಶೇಂಗಾ ಇನ್ನಿತರ ಬೆಳೆಗಳಿಗೆ ಅನುಕೂಲ ಕಲ್ಪಿಸಿದೆ. ಆದರೆ ಜಿಟಿಜಿಟಿ ಮಳೆಯಿಂದ ನಗರ ಪ್ರದೇಶಗಳಲ್ಲಿ ಕೆಸರು ನಿರ್ಮಾಣವಾಗುತ್ತಿದೆಯೇ ಹೊರತು ನೀರಿನ ಮೂಲಗಳು ಭರ್ತಿಯಾಗಿಲ್ಲ.
ಮುಂದೆ ನೀರಿನ ಬವಣೆ- ಆತಂಕ: ಗ್ರಾಮೀಣ ಪ್ರದೇಶದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಇದರಿಂದ ಜಿಲ್ಲೆಯ ನೂರಾರು ಕೆರೆಗಳು ಇನ್ನೂ ಭರ್ತಿಯಾಗಿಲ್ಲ. ಜಿಲ್ಲೆಯ ಕೃಷ್ಣಾ ಹಾಗೂ ಭೀಮಾ ನದಿ ತುಂಬಿ ಹರಿಯುತ್ತಿದ್ದರೂ ಪ್ರಮುಖ ಜಲ ಮೂಲಗಳು ಖಾಲಿಯಾಗಿರುವುದು ಮುಂದಿನ ದಿನಗಳಲ್ಲಿ ನೀರಿನ ಬವಣೆ ಹೆಚ್ಚಿಸುವ ಆತಂಕ ನಿರ್ಮಾಣವಾಗಿದೆ.
190 ಮಿಮೀ ಕೊರತೆ: ಮುಂಗಾರು ಹಂಗಾಮಿನ ಆಗಸ್ಟ್ ಅಂತ್ಯದವರೆಗೆ ಜಿಲ್ಲೆಯಲ್ಲಿ 502 ಮಿಮೀ ಮಳೆಯಾಗಬೇಕಿತ್ತು. ಆದರೆ ಇದುವರೆಗೆ ಆಗಿರುವುದು ಕೇವಲ 311 ಮಿಮೀ ಮಳೆ ಮಾತ್ರ. ಅಂದರೆ ಸುಮಾರು 190 ಮಿಮೀ ಕೊರತೆ ಕಾಣುತ್ತಿದೆ. ಅಲ್ಲದೇ ಜೂನ್ ಹಾಗೂ ಜುಲೈ ತಿಂಗಳಲ್ಲಿ ಸಮರ್ಪಕವಾಗಿ ಮಳೆಯಾಗದ್ದರಿಂದ ಬಿತ್ತನೆಗೂ ಹೊಡೆತ ಬಿದ್ದಿದೆ.
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 2.68 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಇದುವರೆಗೆ ನೀರಾವರಿ ಪ್ರದೇಶವೂ ಸೇರಿದಂತೆ ಬಿತ್ತನೆಯಾಗಿರುವುದು 2.43 ಲಕ್ಷ ಹೆಕ್ಟೇರ್ ಮಾತ್ರ. ಅಂದರೆ ಸುಮಾರು ಶೇ. 90ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಕೆಲವರು ಮಳೆಯಾಗದಿದ್ದರೂ ಪಂಪ್ಸೆಟ್ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಿಕೊಂಡು ಬಿತ್ತನೆ ಮಾಡಿದ್ದರಿಂದ ಇಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಕೆರೆಗಳು ಖಾಲಿ ಖಾಲಿ: ನಾರಾಯಣಪುರ ಎಡದಂಡೆ ಕಾಲುವೆ ವ್ಯಾಪ್ತಿಯ ಜಮೀನು ಹೊರತುಪಡಿಸಿದರೆ ಉಳಿದವು ಒಣ ಬೇಸಾಯದ ಜಮೀನುಗಳು. ಅಲ್ಲಿ ಕೆರಗಳೇ ಜಲ ಮೂಲಗಳು. ಆದರೆ ಈ ವರ್ಷ ಆರಂಭದಲ್ಲಿ ಸರಿಯಾಗಿ ಮಳೆಯಾಗದ್ದರಿಂದ ಈ ಜಲಮೂಲಗಳು ಭರ್ತಿಯಾಗಲೇ ಇಲ್ಲ. ಅದರಲ್ಲೂ ಮುಖ್ಯವಾಗಿ ಯಾದಗಿರಿ ಹಾಗೂ ಗುರುಮಠಕಲ್ ಭಾಗದ ನೂರಾರು ಕೆರೆಗಳು ನೆಲ ಕಾಣುತ್ತಿವೆ.
ಕಳೆದ ಒಂದು ವಾರದಿಂದ ಬೀಳುತ್ತಿರುವ ಮಳೆ ಕೆರೆ ಭರ್ತಿಯಾಗಲು ನೆರವಾಗಿಲ್ಲ. ಸಣ್ಣ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ನೀರು ಹರಿಯುತ್ತಿಲ್ಲ. ಇದರಿಂದ ಬಿತ್ತನೆ ಮಾಡಿದ ಬೆಳೆಗಳಿಗೆ ಮಾತ್ರ ಅನುಕೂಲ ಕಲ್ಪಿಸಿದೆಯೇ ಹೊರತು ಮುಂದಿನ ದಿನಗಳಿಗೆ ನೀರಿನ ಕೊರತೆ ನೀಗಿಸಲು ಈ ಕೆರೆಗಳಿಂದ ಸಾಧ್ಯವಿಲ್ಲ.
ಹೆಸರಿಗೆ ಉತ್ತಮ ಧಾರಣೆ: ಮುಂಗಾರು ಆರಂಭದಲ್ಲಿ ಮಳೆ ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಹೆಸರು ಬಿತ್ತನೆ ತಡವಾಗಿದೆ. ಆದ್ದರಿಂದ ಹೆಸರು ಬೆಳೆ ರೈತರ ಕೈಗೆ ಬರಲು ಇನ್ನೂ ಒಂದು ತಿಂಗಳಾದರೂ ಕಾಯಬೇಕು.
ಆದರೆ ಮಾರುಕಟ್ಟೆಯಲ್ಲಿ ಹೆಸರಿಗೆ ಉತ್ತಮ ಧಾರಣೆ ಬಂದಿದೆ. ಸದ್ಯ ಕ್ವಿಂಟಲ್ ಹೆಸರಿಗೆ 4,800ರಿಂದ 6 ಸಾವಿರದವರೆಗೆ ಮಾರಾಟವಾಗುತ್ತಿದೆ. ಇದೇ ದರ ನಂತರವೂ ಇದ್ದರೆ ಹೆಸರು ಬೆಳೆ ಬೆಳೆದ ರೈತರಿಗೆ ಅನುಕೂಲವಾಗುತ್ತಿತ್ತು. ಒಟ್ಟಿನಲ್ಲಿ ಶ್ರಾವಣ ಮಾಸದಲ್ಲಿ ಮಳೆಯಾಗುತ್ತಿದ್ದು, ರೈತರಿಗೆ ಸ್ವಲ್ಪ ಸಂತಸ ತಂದಿದೆ. ವಾತಾವರಣವೂ ತಂಪಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

