ಉ.ಕ.ದಲ್ಲಿ 25 ಶಾಖೆ ಹೊಂದುವ ಗುರಿ
ಯಾದಗಿರಿ: ಸಾಮಾಜಿಕ, ಶೈಕ್ಷಣಿಕ, ನೈತಿಕ ಹಾಗೂ ಆಧ್ಯಾತ್ಮಿಕತೆಯಲ್ಲಿನ ನಮ್ಮ ಪೂರ್ವಜರ ಕೊಡುಗೆಗಳನ್ನು ಪುನರ್ಬಲನಗೊಳಿಸುವ ನಿಟ್ಟಿನಲ್ಲಿ 50 ವರ್ಷಗಳಿಂದ ನಿರಂತರ ಕೆಲಸ ಮಾಡುತ್ತಿರುವ ಭಾರತ ವಿಕಾಸ ಪರಿಷತ್ ರಾಜ್ಯದಲ್ಲಿ ರಜತ ಜಯಂತಿ ಆಚರಿಸುತ್ತಿದೆ. ಈ ಸಂದರ್ಭದಲ್ಲಿ 25 ಶಾಖೆಗಳನ್ನು ಉತ್ತರ ಕರ್ನಾಟಕ ಭಾಗದಲ್ಲಿ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಭಾರತ ವಿಕಾಸ್ ಪರಿಷತ್ನ ಕ್ಷೇತ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ ಎಂ. ಮಳಗಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಷತ್ ರಾಜಕೀಯ ಕ್ಷೇತ್ರ ಹೊರತುಪಡಿಸಿದ ಒಂದು ಸ್ವಯಂ ಸೇವಾ ಸಂಸ್ಥೆಯಾಗಿದೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 17 ಕ್ಷೇತ್ರಗಳು ಹಾಗೂ 60 ಪ್ರಾಂತಗಳಲ್ಲಿ 1200ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ರಾಜ್ಯದಲ್ಲಿ ಉತ್ತರ ಹಾಗೂ ದಕ್ಷಿಣ ಎಂಬ ಎರಡು ಪ್ರಾಂತಗಳನ್ನು ಹೊಂದಿದೆ. ರಾಜ್ಯದಲ್ಲಿ ಈಗಾಗಲೇ 39 ಶಾಖೆಗಳಿದ್ದು, ದಕ್ಷಿಣ ಕ್ಷೇತ್ರದಲ್ಲಿ 26 ಶಾಖೆಗಳಿದ್ದರೆ, ಉತ್ತರ ಕರ್ನಾಟಕದಲ್ಲಿ 13 ಶಾಖೆಗಳು ಮಾತ್ರ ಇವೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ 25 ಶಾಖೆಗಳು ಆರಂಭಿಸುವ ಗುರಿ ಹೊಂದಲಾಗಿದೆ. ಆದ್ದರಿಂದ ಯಾದಗಿರಿ, ಗುಲ್ಬರ್ಗ, ರಾಯಚೂರು, ಬೀದರ್ ಜಿಲ್ಲೆಗಳಲ್ಲಿ ಶಾಖೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಯಾದಗಿರಿ ಹಾಗೂ ಶಹಾಪುರದಲ್ಲಿ ಶಾಖೆ ಆರಂಭಿಸಲಾಗುತ್ತಿದೆ. ಸುರಪುರ, ಹುಣಸಗಿ ಸೇರಿದಂತೆ ಇತರರೆಡೆ ಶಾಖೆ ಆರಂಭಿಸಲು ಜಿಲ್ಲೆಯ ಬುದ್ಧಿಜೀವಿಗಳು, ಸಾಧನ ಸಂಪನ್ನರು, ಸಾಮಾಜಿಕ ಸಮಸ್ಯೆಗಳ ಬಗ್ಗೆ ಕಳಕಳಿ ಹೊಂದಿರುವವರು ಮತ್ತು ಸ್ವಯಂ ಸ್ಫೂರ್ತಿ ಹೊಂದಿರುವವರನ್ನು ಸಂಪರ್ಕಿಸಿ ಸಂಸ್ಥೆಗೆ ಸೇರ್ಪಡೆಗೊಳ್ಳುವಂತೆ ಪ್ರೇರೇಪಿಸಲಾಗುತ್ತಿದೆ. ಸಂಸ್ಥೆ ಸಂಪರ್ಕ, ಸಹಯೋಗ, ಸಂಸ್ಕಾರ, ಸೇವೆ ಮತ್ತು ಸಮರ್ಪಣೆ ಎಂಬ ಪಂಚಸೂತ್ರಗಳ ಕ್ರಿಯಾ ಯೋಜನೆ ರೂಪಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಭಾರತ ಪಾಶ್ಚಿಮಾತ್ಯ ಸಂಸ್ಕೃತಿಗೆ ಒಳಗಾಗುತ್ತಿದ್ದು, ನಮ್ಮತನ ಉಳಿಸಿಕೊಳ್ಳಲು ಸಂಸ್ಥೆ ರಾಷ್ಟ್ರಾದ್ಯಂತ ವಿಚಾರಗೋಷ್ಠಿಗಳು, ಭಾಷಣ ಮಾಲೆಗಳು, ಮಹಾತ್ಮರ ಚರಿತ್ರೆಗಳ ಅಭ್ಯಾಸ, ಬಾಲ, ಯುವ ಮತ್ತು ಪ್ರೌಢ ಸಂಸ್ಕಾರ ಶಿಬಿರ, ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಅವಿನಾಶ ಸಿನ್ನೂರ, ಕಾಂತಿಲಾಲ ದೋಖಾ, ರಾಜಶೇಖರ ಶೆಟ್ಟಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

