ಗುಲ್ಬರ್ಗಾ

'ಛಾಯಾಗ್ರಹಣ ಸುಂದರ ಜಗತ್ತು'

Published On :

ಕ.ಪ್ರ.ವಾರ್ತೆ   ಯಾದಗಿರಿ   ಆ.19
ಸಾವಿರ ಪದಗಳಲ್ಲಿ ವಿವರಿಸುವುದನ್ನು ಒಂದು ಛಾಯಾಚಿತ್ರ ಹೇಳಬಲ್ಲದು. ಇತ್ತೀಚಿನ ದಿನಗಳಲ್ಲಿ ಛಾಯಾಚಿತ್ರದ ಪ್ರಾಮುಖ್ಯತೆ ಹೆಚ್ಚಾಗಿದೆ. ಜನರ ಸೌಂದರ್ಯಪ್ರಜ್ಞೆಯೂ ಇದರಿಂದ ಹೆಚ್ಚಾಗಿದೆ. ಕ್ಯಾಮರಾಗಳು ಜಗತ್ತಿನ ಸೃಷ್ಟಿ ವಿಸ್ಮಯಗಳನ್ನು ಸೆರೆಹಿಡಿಯುವ ಅದ್ಭುತ ಸಾಧನವಾಗಿದೆ ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಹೇಳಿದರು.
ಇಲ್ಲಿಯ ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಸೋಮವಾರ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಛಾಯಾಚಿತ್ರ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನ ಸೃಷ್ಟಿ ವಿಸ್ಮಯಗಳನ್ನು ಸೆರೆ ಹಿಡಿದು ಜನರಿಗೆ ಮುಟ್ಟಿಸುವ ಅದ್ಭುತ ಕೆಲಸವನ್ನು ಛಾಯಾಗ್ರಾಹಕರು ಇಂದು ಸಮರ್ಥವಾಗಿ ಮಾಡುತ್ತಿದ್ದಾರೆ. ಕ್ಯಾಮರಾ ಇದ್ದಲ್ಲಿ ಪ್ರತಿಯೊಬ್ಬರಲ್ಲೂ ಶಿಸ್ತು ನಿರೀಕ್ಷಿಸಬಹುದು. ಕ್ಯಾಮರಾ ಎಂಬ ಸಾಧನ ಇಂದು ಮಾಧ್ಯಮಗಳಿಗೆ ಹೆಚ್ಚಿನ ಬಲ ತಂದಿದೆ. ಆದ್ದರಿಂದ ಈ ಸಾಧನ ಕಂಡುಹಿಡಿದ ಜೋಸೆಫ್ ನೈಸಗೋರ್ ಮತ್ತು ಲೂಯಿಸ್ ಡಗರೆ ಸ್ಮರಣೆ ಮಾಡುವುದು ಅವಶ್ಯಕ. 1889ರಲ್ಲಿ ಫ್ರೆಂಚ್ ದೇಶವು ಈ ಸಾಧನವನ್ನು ವಿಶ್ವಕ್ಕೆ ಪ್ರದರ್ಶಿಸಿತು. ಅಂದಿನ ದಿನವನ್ನು ವಿಶ್ವ ಛಾಯಾಗ್ರಾಹಕರ ದಿನಾಚರಣೆ ಎಂದು ಅಚರಿಸಲಾಗುತ್ತಿದೆ ಎಂದರು.
ಇಂದು ಕ್ಯಾಮರಾಗಳು ಸಮಾಜದಲ್ಲಿನ ಅಂಕುಡೊಂಕು ತಿದ್ದುವ ಮೂಲಕ ರಾಜಕೀಯ ಮತ್ತು ಅಡಳಿತ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ. ಕ್ಯಾಮರಾ ಮತ್ತು ವಿಡಿಯೋ ಕ್ಯಾಮರಗಳ ಅವಿಷ್ಕಾರದಿಂದ ಇಂದು ಮಾಧ್ಯಮಗಳು ಸಮಾಜ ವಿರೋಧಿ ಚಟುವಟಿಕೆ ತೊಡಗಿದವರನ್ನು ಬಹಿರಂಗಪಡಿಸಿ ಶಿಕ್ಷೆಗೆ ಗುರಿಪಡಿಸುವಲ್ಲಿ ಸಹಕಾರಿಯಾಗಿದೆ. ಅಲ್ಲದೆ, ಸೃಷ್ಟಿಯಲ್ಲಿ ನಮ್ಮ ಕಣ್ಣಿಗೂ ಕಾಣದ ಜೀವಿಗಳ ಬಗ್ಗೆ ಅಧ್ಯಯನ ಮಾಡಲು ಅನುಕೂಲವಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ ಛಾಯಾಗ್ರಾಹರ ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಎನ್.ಸಿಂಗ್, ಫೋಟೋಗ್ರಫಿ ಬಗ್ಗೆ ಉಪನ್ಯಾಸ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಎ.ಜಿಲಾನಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಜೀವರಾವ್ ಕುಲಕರ್ಣಿ ಮಾತನಾಡಿ, ಫೋಟೋಗ್ರಫಿ ನಡೆದು ಬಂದ ದಾರಿ ಬಗ್ಗೆ ತಿಳಿಸಿದರು. ಸಭೆ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಗಿರೀಶ ಬಲಕಲ್ ವಹಿಸಿದ್ದರು.
ಮಾಸ್ಟರ್ ಸ್ಟುಡಿಯೋದ ಎಂ.ಜಾನ್ ಕೊರತಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಅನಿಲ ದೇಶಪಾಂಡೆ ಸ್ವಾಗತಿಸಿದರು. ಡಾ.ಸಿದ್ದರಾಜ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಇದೇ ಸಂದರ್ಭ ಹಿರಿಯ ಛಾಯಾಗ್ರಾಹಕರಾದ ಗುಲಾಮ ಅಬ್ಬಾಸ ಖಾನ್, ಭವರಲಾಲ ಝಂವ್ಹಾರ ಮತ್ತು ರಾಮಕಿಶನ್ ಗೋಂಗಲೆ ಅವರನ್ನು ಸನ್ಮಾನಿಸಲಾಯಿತು. ನಗರದ 10 ಸ್ಟುಡಿಯೋಗಳ ಮಾಲೀಕರನ್ನು ಸಾಯಿ ಕಲರ್ ಲ್ಯಾಬ್ ವತಿಯಿಂದ ಗೌರವಿಸಲಾಯಿತು.
ಇದಕ್ಕೂ ಮುನ್ನ ವಿಶ್ವ ಛಾಯಾಚಿತ್ರಗ್ರಾಹಕರ ದಿನಾಚರಣೆ ಅಂಗವಾಗಿ ನಗರದ ಫೋಟೊಗ್ರಾಫರ್ಸ್ ಹಮ್ಮಿಕೊಂಡಿದ್ದ ಛಾಯಾಚಿತ್ರ ಪ್ರದರ್ಶನವನ್ನು ಜಿಪಂ ಸಿಇಒ ಎಸ್.ಎ.ಜಿಲಾನಿ ಉದ್ಘಾಟಿಸಿದರು. ಅದ್ಭುತ ಛಾಯಾಚಿತ್ರಗಳನ್ನು ನೋಡಿ ಕ್ಯಾಮರಾಮನ್ಗಳ ಕೈಚಳಕಕ್ಕೆ ಗಣ್ಯರು ಹಾಗೂ ಸಾರ್ವಜನಿಕರು ಮೆಟ್ಟುಗೆ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.