ಗುಲ್ಬರ್ಗಾ

ಹಿಂದುಳಿದವರ 'ಅರಸ' ದೇವರಾಜ

Published On :

ಕ.ಪ್ರ.ವಾರ್ತೆ ಟಿ ಯಾದಗಿರಿ ಟಿ ಆ.20
ಹಿಂದುಳಿದ ವರ್ಗದ ಜನರಿಗಾಗಿ ಭೂಸುಧಾರಣಾ ಕಾಯಿದೆ, ಜೀತದಾಳು ಪದ್ದತಿ ನಿರ್ಮೂಲನೆ, ಉದ್ಯೋಗಕ್ಕಾಗಿ ಮೀಸಲಾತಿ ಸೌಲಭ್ಯ ಹಾಗೂ ಬಡ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಶಿಷ್ಯ ವೇತನ ಸೌಲಭ್ಯವನ್ನು ಕಲ್ಪಿಸುವ ಮೂಲಕ ಬಡ ಜನರ ಶ್ರೇಯೋಭಿವೃದ್ದಿಗಾಗಿ ಶ್ರಮಿಸಿದ ಮಹಾನ ನಾಯಕ ದಿ. ಡಿ.ದೇವರಾಜ ಅರಸು ಅವರ ಕಾರ್ಯ ಸ್ಮರಣೀಯವಾಗಿದೆ ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ 98ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ದಿ. ಡಿ.ದೇವರಾಜ ಅರಸು ಅವರು ವಿಶಾಲ ದೃಷ್ಟಿಕೋನದೊಂದಿಗೆ ಸಮಾಜದ ಎಲ್ಲಾ ವರ್ಗಗಳ, ಅದರಲ್ಲಿಯೂ ವಿಶೇಷವಾಗಿ ಹಿಂದುಳಿದ ವರ್ಗಗಳ ಜನಾಂಗದ ಅಭಿವೃದ್ದಿಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ. ಬಡ ಜನರ ಅನುಕೂಲಕ್ಕಾಗಿ ಭೂಸುಧಾರಣ ಕಾಯ್ದೆ ಜಾರಿ, ಕೃಷಿಗೆ ಉತ್ತೇಜನ ನೀಡುವ ದಿಸೆಯಲ್ಲಿ ನೀರಾವರಿ ಕ್ಷೇತ್ರವನ್ನು ಅಭಿವೃದ್ದಿಪಡಿಸುವ ಜತೆಗೆ ಜೀತದಾಳು ಪದ್ದತಿ ನಿರ್ಮೂಲನೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಮಾಜದಲ್ಲಿ ಹಿಂದುಳಿದ ವರ್ಗದ ಜನರನ್ನು ಮೇಲಕ್ಕೆತ್ತುವ ಕಾರ್ಯವನ್ನು ಪರಿಣಾಮ ಕಾರಿಯಾಗಿ ಮಾಡಿದ ಮಹಾನ ನಾಯಕರಾಗಿದ್ದಾರೆ ಎಂದರು.
ಸಮಾರಂಭದಲ್ಲಿ ಉಪನ್ಯಾಸ ನೀಡಿದ ಹಿರೆವಡಗೇರಾ ಶಾಲೆಯ ಮುಖ್ಯೋಪಾಧ್ಯಾಯ ಸುರೇಶ ತಡಿಬಿಡಿ, ಅರಸು ಅವರು ಶೋಷಿತ ಜನಾಂಗದ ಅಭಿವೃದ್ದಿಯ ಹರಿಕಾರ ಹಾಗೂ ನೊಂದವರ ನಂದಾ ದೀಪದಂತೆ ಇದ್ದರು. ಧಿಮಂತ ನಾಯಕ ದಿ. ದೇವರಾಜ ಅರಸು ಅವರು ಹಿಂದುಳಿದ ವರ್ಗದವರ ಜನಾಂಗಕ್ಕಾಗಿ ಅವಿರತವಾಗಿ ಶ್ರಮಿಸಿದ ಮಹಾನ ನಾಯಕರಾಗಿದ್ದಾರೆ. ಮಹಾನ ಮಾನವತಾವಾಗಿ ಹಾಗೂ ಸಮಾಜ ಸುಧಾರಕರಾಗಿದ್ದ ಅವರು ಕೃಷಿ, ನೀರಾವರಿ, ವಿದ್ಯುತ್ ಸುಧಾರಣೆ, ಬಡವರ ಮನೆಗೆ ಬೆಳಕು ಎಂಬ ಯೋಜನೆ ಸೇರಿದಂತೆ ಇನ್ನಿತರ ಹಲವಾರು ಬಡವರ ಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಾ.ಎ.ಬಿ.ಮಾಲಕರೆಡ್ಡಿ, ಸಮಾಜದಲ್ಲಿ ಶೋಷಣೆಗೆ ಒಳಗಾದ, ಅವಕಾಶ ವಂಚಿತ, ಸಾಮಾಜಿಕವಾಗಿ ಹಿಂದುಳಿದ ಬಡಜನರನ್ನು ಮೇಲೆಕ್ಕೆತ್ತುವ ಕಾರ್ಯವವನ್ನು ಅರಸು ಅವರು ಮಾಡಿದರು. ಜೀತದಾಳು ಪದ್ದತಿ ನಿರ್ಮೂಲನೆ ಹಾಗೂ ಹಿಂದುಳಿದ ಜನಾಂಗಕ್ಕೆ ಮೀಸಲಾತಿ ಸೌಲಭ್ಯ ಕಲ್ಪಿಸಿದರು. ಮುಂದುವರಿದ ವರ್ಗದಲ್ಲಿನ ಬಡಜನರಿಗೂ ಗಮನ ನೀಡುವಂತೆ ಮತ್ತು ಕಳಕಳಿ ಹೊಂದಿರುವಂಥ ಮಹಾನ್ ವ್ಯಕ್ತಿತ್ವವನ್ನು ಅವರು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಎಲ್ಲರೂ ಸ್ಮರಿಸುವಂತಹ ಕಾರ್ಯ ಆಗಬೇಕು ಎಂದು ಹೇಳಿದರು.
ವಿದ್ಯಾರ್ಥಿನಿಯರಾದ ಭಾಗ್ಯಶಅರೀ ಹಾಗೂ ಲಕ್ಷ್ಮೀ ಅವರು ದೇವರಾಜ ಅರಸು ಅವರ ಬಗ್ಗೆ ಭಾಷಣ ಮಾಡಿ ಎಲ್ಲರ ಗಮನ ಸೆಳೆದರು. ಈ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶರಣಿಕಕುಮಾರ ಧೋಖಾ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಮಲಾ ಕಮತಗಿ, ತಾಪಂ ಅಧ್ಯಕ್ಷೆ ಶ್ರೀಲಕ್ಷ್ಮಿ ಚಂಡರಕಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ ಇದ್ದರು.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಮನಗೌಡ ಸ್ವಾಗತಿಸಿದರು. ವ್ಯವಸ್ಥಾಪಕ ಸಾಬಯ್ಯ ವಂದಿಸಿದರು. ಗಾಳೆಪ್ಪ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.