ಗುಲ್ಬರ್ಗಾ

ಸನ್ನತಿಯಲ್ಲಿ ಮ್ಯೂಸಿಯಂ ಆರಂಭಿಸಿ

Published On :

ಕ.ಪ್ರ.ವಾರ್ತೆ  ಯಾದಗಿರಿ  ಆ.21
ಚಿತ್ತಾಪುರ ತಾಲೂಕಿನ ಸನ್ನತಿಯಲ್ಲಿ ಪುರಾತತ್ವ ಇಲಾಖೆಯಿಂದ ಅನೇಕ ವರ್ಷಗಳಿಂದ ಬೌದ್ಧರ ಕಾಲದ ಅವಶೇಷಗಳ ಉತ್ಖನನ ನಡೆದಿದ್ದರೂ ಇನ್ನೂ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಅಲ್ಲದೇ ಅಲ್ಲಿ ದೊರೆತಿರುವ ಸ್ಮಾರಕಗಳ ರಕ್ಷಣೆಗಾಗಿ ಶೀಘ್ರದಲ್ಲಿ ಮ್ಯೂಸಿಯಂ ಆರಂಭಿಸಬೇಕು ಎಂದು ಬುದ್ದಗಯಾದ ಭಂತೆ ತಿಸ್ಸಾವರೇ ಆಗ್ರಹಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸನ್ನತಿಯಲ್ಲಿ ಬುದ್ಧನ ಕಾಲದ ಅನೇಕ ಸ್ಮಾರಕಗಳು ಪತ್ತೆಯಾಗಿವೆ. ಭಾರತೀಯ ಪುರಾತತ್ವ ಇಲಾಖೆಯಿಂದ ಇನ್ನೂ ಉತ್ಖನನ ನಡೆಯುತ್ತಿದ್ದು, ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ದೇಶದಲ್ಲಿ ಅಶೋಕ ಚಕ್ರವರ್ತಿಯ ಮೂರ್ತಿ ದೊರೆತಿರುವುದು ಸನ್ನತಿಯಲ್ಲಿ ಮಾತ್ರ. ಇಂಥ ಐತಿಹಾಸಿಕ ಸ್ಥಳದ ಅಭಿವೃದ್ಧಿಗೆ ಇಲಾಖೆ ಸೂಕ್ತ ಗಮನ ನೀಡುತ್ತಿಲ್ಲ. ಅಲ್ಲಿ ಇನ್ನೂ ಅನೇಕ ಮಹತ್ವವಾದ ಕುರುಹುಗಳು ದೊರೆತಿವೆ. ಅವುಗಳನ್ನು ರಕ್ಷಿಸಲು ರಾಜ್ಯ ಸರ್ಕಾರದಿಂದ ಮ್ಯೂಸಿಯಂ ಕಟ್ಟಡ ನಿರ್ಮಾಣವಾಗಿದ್ದರೂ ಇನ್ನೂ ಅದನ್ನು ಪುರಾತತ್ವ ಇಲಾಖೆಗೆ ಹಸ್ತಾಂತರಿಸಿಲ್ಲ. ಇದರಿಂದ ಮ್ಯೂಸಿಯಂ ಇನ್ನೂ ಆರಂಭಗೊಂಡಿಲ್ಲ ಎಂದರು.
ವಿದೇಶಗಳಿಂದಲೂ ಪ್ರವಾಸಿಗರು: ದೇಶ ವಿದೇಶಗಳಿಂದ ಸನ್ನತಿಗೆ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಅಲ್ಲಿ ಯಾವುದೇ ಮೂಲಸೌಲಭ್ಯ ಕಲ್ಪಿಸಿಲ್ಲ. ರಸ್ತೆ, ಸಾರಿಗೆ ಸೌಕರ್ಯ ಸೇರಿದಂತೆ ಪ್ರವಾಸಿಗರಿಗೆ ಯಾವುದೇ ಸೌಲಭ್ಯ ಇಲ್ಲ. ಪುರಾತತ್ವ ಇಲಾಖೆಯೂ ಈ ನಿಟ್ಟಿನಲ್ಲಿ ನಿಷ್ಕ್ರಿಯವಾಗಿದೆ. ಯಾದಗಿರಿಯನ್ನು ಕೇಂದ್ರೀಯ ಪ್ರವಾಸಿ ಜಿಲ್ಲೆಯೆಂದು ಘೋಷಿಸಬೇಕು. ಭೀಮಾ, ಕೃಷ್ಣಾ ನದಿ ಪಾತ್ರದಲ್ಲಿ ಪುರಾತತ್ವ ಇಲಾಖೆಯಿಂದ ಉತ್ಖನನ ನಡೆಯಬೇಕು ಎಂದು ಆಗ್ರಹಿಸಿದರು.
ಬೌದ್ಧ ಭಿಕ್ಕುಗಳೇ ಸದಸ್ಯರು: ಸನ್ನತಿ ಅಭಿವೃದ್ಧಿಗಾಗಿ ಪ್ರಾಧಿಕಾರಕ್ಕೆ ಬೌದ್ಧ ಭಕ್ಕುಗಳನ್ನು ಸದಸ್ಯರನ್ನಾಗಿ ಮಾಡಬೇಕು ಎಂಬ ನಿಯಮವಿದೆ. ಇದುವರೆಗೆ ಯಾರನ್ನೂ ನೇಮಿಸಿಲ್ಲ. ಪ್ರಾಧಿಕಾರದ ಕಚೇರಿ ಶಹಾಪುರದಲ್ಲೇ ಪ್ರಾರಂಭಿಸಬೇಕು. ಶಹಾಪುರದ ಬುದ್ಧ ಮಲಗಿರುವ ಬೆಟ್ಟವನ್ನು ಕೇಂದ್ರೀಯ ಪ್ರವಾಸೋದ್ಯಮ ಇಲಾಖೆ ಸಂರಕ್ಷಿತ ಪ್ರದೇಶವೆಂದು ಘೋಷಿಸಿ ಅಭಿವೃದ್ಧಿ ಪಡಿಸಬೇಕು. ಪ್ರವಾಸೋದ್ಯಮಕ್ಕೆ ಜಿಲ್ಲೆ ಪ್ರಶಸ್ತ ಸ್ಥಳವಾದರೂ ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಗಮನ ನೀಡಿಲ್ಲ. ಧಾರವಾಡದಲ್ಲಿರುವ ಪುರಾತತ್ವ ಇಲಾಖೆಯ ಕ್ಷೇತ್ರೀಯ ಕಚೇರಿಯನ್ನು ಯಾದಗಿರಿಯಲ್ಲಿ ಸ್ಥಾಪಿಸಬೇಕು ಎಂದರು.
ಬೌದ್ಧ ಸಾಹಿತಿ ದೇವೇಂದ್ರ ಹೆಗ್ಗಡೆ, ನೀಲಕಂಠ ಬಡಿಗೇರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.