ಬಡವರಿಗೆ ಹಲವು ಯೋಜನೆ ಜಾರಿ
ಕನ್ನಡಪ್ರಭ ವಾರ್ತೆ ಯಾದಗಿರಿ ಆ.27
ರಾಜ್ಯದ ಹಿಂದುಳಿದ ಜನಾಂಗ, ಅಲ್ಪಸಂಖ್ಯಾತರು ಹಾಗೂ ದಲಿತ ವರ್ಗದ ಜನರ ಶ್ರೇಯೊಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆಗೊಳಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ್ ಚಿಂಚನಸೂರ ಹೇಳಿದರು.
ತಾಲೂಕಿನ ಗುಂಜಾನೂರ ಗ್ರಾಮದಲ್ಲಿ ಮಂಗಳವಾರ ರು. 7.78 ಲಕ್ಷ ವೆಚ್ಚದ ಆರ್ಸೆನಿಕ್ ಅಂಶ ಶುದ್ಧೀಕರಿಸುವ ಕುಡಿಯುವ ನೀರಿನ ಘಟಕವನ್ನು ಉದ್ಫಾಟಿಸಿ ಮಾತನಾಡಿದರು. ರಾಜ್ಯದ ಕಟ್ಟಕಡೆಯ ವ್ಯಕ್ತಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಸದ್ದುದೇಶವನ್ನು ರಾಜ್ಯ ಸರ್ಕಾರ ಹೊಂದಿದೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನೂರು ದಿನಗಳಲ್ಲಿಯೇ ನೂರಾರು ನಿರ್ಣಯಗಳನ್ನು ಕೈಗೊಂಡಿದೆ. ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಕ್ಷೀರಭಾಗ್ಯ ಯೋಜನೆ, ಬಡ ಜನರಿಗೆ ಅನ್ನಭಾಗ್ಯ ಯೋಜನೆ ಹಾಗೂ ರೈತರ ಸಾಲ ಮನ್ನಾದಂತಹ ಕ್ರಾಂತಿಕಾರಿ ಹೆಜ್ಜೆಗಳನ್ನು ರಾಜ್ಯ ಸರ್ಕಾರ ಇಟ್ಟಿದ್ದು, ಮುಂಬರುವ ದಿನಗಳಲ್ಲಿ ಇಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ಅವರು ಹೇಳಿದರು.
ಜವಳಿ ಪಾರ್ಕ್: ಗುರುಮಠಕಲ್ ವಿಧಾನಸಭಾ ಕ್ಷೇತ್ರವನ್ನು ಸಂಪೂರ್ಣ ನೀರಾವರಿವುಳ್ಳ ಹಾಗೂ ಮಾದರಿ ಕ್ಷೇತ್ರವನ್ನಾಗಿ ಅಬಿವೃದ್ಧಿ ಮಾಡಲಾಗುವುದು. ಬಡಮಕ್ಕಳ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಜವಳಿ ಪಾರ್ಕ್ ಹಾಗೂ ಇತರೆ ಕೈಗಾರಿಕೆಗಳನ್ನು ಸ್ಥಾಪಿಸಲು ಗಮನ ನೀಡಲಾಗುವುದು. ಸಂವಿಧಾನದ 371 (ಜೆ) ವಿಧಿ ಜಾರಿಗೆಯಿಂದ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆ ಜತೆಗೆ ಉದ್ಯೋಗ ಮತ್ತು ಶಿಕ್ಷಣಗಳಲ್ಲಿ ಮೀಸಲಾತಿ ಸೌಲಭ್ಯಗಳು ಪರಿಣಾಮಕಾರಿಯಾಗಿ ಜಾರಿಗೊಳ್ಳಲಿವೆ. ಬಡ ಜನರ ಋಣ ತೀರಿಸಲು ಮುಂಬರುವ ದಿನಗಳಲ್ಲಿ ತಾವು ಅಭಿವೃದ್ಧಿ ಪರವಾಗಿ ಹಗಲಿರುಳು ಶ್ರಮಿಸುವುದಾಗಿ ಸಚಿವರು ಹೇಳಿದರು.
ಶುದ್ಧೀಕರಿಸಿದ ನೀರು: ಪಂಚಾಯತ್ ರಾಜ್ ಇಲಾಖೆ ಹಾಗೂ ವಾಟರ್ ಲೈಫ್ ಇಂಡಿಯಾ ವತಿಯಿಂದ ಇಲ್ಲಿ ಸ್ಥಾಪಿಸಲಾದ ಘಟಕದಲ್ಲಿ ಪ್ರತಿ ಗಂಟೆಗೆ ಸಾವಿರ ಲೀಟರ್ ಶುದ್ಧೀಕರಿಸಿದ ನೀರು ದೊರೆಯುತ್ತದೆ. ಪ್ರತಿ 20 ಲೀ.ಗೆ 2 ರು. ಬಳಕೆ ದರ ಆಕರಿಸಲಾಗುತ್ತದೆ. ಈಗ ಗುಂಜನೂರ, ಕಿರದಳ್ಳಿ ತಾಂಡಾ, ಚಿಗರಿಹಾಳ, ಮಾವಿನಮಟ್ಟಿ, ಗೌಡ್ರಿಹಾಳ, ಜೈನಾಪುರ, ಹೂವಿನಾಳಗಳಲ್ಲಿ ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ ಎಂದು ತಿಳಿಸಿದರು. ಜಿಪಂ ಹಂಗಾಮಿ ಅಧ್ಯಕ್ಷ ಶರಣಿಕಕುಮಾರ ದೋಖಾ, ತಾಪಂ ಅಧ್ಯಕ್ಷೆ ಶ್ರೀಲಕ್ಷ್ಮಿ ಚಂಡ್ರಕಿ, ಜಿಪಂ ಸದಸ್ಯ ಭೀಮರಾವ ಕಂದಕೂರ, ಜಿಪಂ ಸಿಇಒ ಎಸ್.ಎ. ಜಿಲಾನಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

