ಇಂದು ಪಂಚಲಿಂಗಗಳ ದರ್ಶನ ವಿಶೇಷ
ಕೆಂಭಾವಿ: ಸಗರ ನಾಡಿನ ಪುಣ್ಯ ಭೂಮಿ ಕೆಂಭಾವಿಯಲ್ಲಿ ಪಂಚಲಿಂಗಗಳ ಬೀಡು ಇದ್ದು, ಇದು ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಮೈಸೂರು ಜಿಲ್ಲೆಯ ತಲಕಾಡು ಗ್ರಾಮದಲ್ಲಿರುವಂತೆ ಇಲ್ಲಿಯೂ ಕೂಡ ಒಂದೇ ಸ್ಥಳದಲ್ಲಿ ಐದು ಲಿಂಗಗಳಿದ್ದು, ಇದು ಧಾರ್ಮಿಕ ಕೇಂದ್ರಗಳಲ್ಲಿ ಇತಿಹಾಸ ನಿರ್ಮಿಸಿದೆ. ಅದೇ ಕೆಂಭಾವಿಯಲ್ಲಿ ಪುರಾತನ ಪಂಚಲಿಂಗಗಳು ರೇವಣಸಿದ್ದೇಶ್ವರ ದೇವಾಲಯ.
ಕಾರ್ತೀಕ ಮಾಸದಲ್ಲಿ 5ನೇ ಸೋಮವಾರ ವಿಶಾಖಾ ನಕ್ಷತ್ರದೊಂದಿಗೆ ಅಮಾವಾಸ್ಯೆಯಂದು ಯಾರು ಪಂಚಲಿಂಗಗಳ ದರ್ಶನ ಮಾಡುವರೋ ಅವರ ಕಾಮನೆಗಳೆಲ್ಲ ಈಡೇರುತ್ತವೆ ಎನ್ನುವುದು ನಂಬಿಕೆ.
ಸಾಮಾನ್ಯವಾಗಿ ಈ ಪುಣ್ಯಕಾಲವು ಮೂರು, ಐದು, ಏಳು, ಹನ್ನೆರಡು, ಹದಿಮೂರು ವರ್ಷಗಳಿಗೊಮ್ಮೆ ಬರುತ್ತದೆ. ಕಾರ್ತೀಕ ಮಾಸದಲ್ಲಿ ಐದನೇ ಸೋಮವಾರ ಅಮಾವಾಸ್ಯೆ ದಿನದಂದು ವಿಶಾಖಾ, ಅನುರಾಧಾ, ಜೇಷ್ಠಾ ಇವುಗಳಲ್ಲಿ ಒಂದು ನಕ್ಷತ್ರ ಬಂದರೆ ಅದು ಪದ್ಮಕ ಯೋಗವಾಗುತ್ತದೆ ಎಂಬ ಪ್ರತೀತಿ ಇದೆ. ಅಂದು ಪಂಚ ಲಿಂಗಗಳ ದರ್ಶನ ಬಹು ಶ್ರೇಷ್ಠ ಎನ್ನಲಾಗುತ್ತದೆ.
ಕೂಡಿ ಬಂದ ಸಂದರ್ಭ: ಡಿ. 2ರಂದು ಸೋಮವಾರ ಎಲ್ಲ ನಕ್ಷತ್ರ, ತಿಥಿ ಕೂಡಿ ಬಂದಿದೆ. ಅಂದು ಅಮಾವಾಸ್ಯೆ ಇದ್ದು, ಈ ಸಂದರ್ಭದಲ್ಲಿ ದರ್ಶನ ಮಾಡಿದರೆ, ಕಾಶಿ ವಿಶ್ವನಾಥನ ದರ್ಶನ ಮಾಡಿದ ಭಾಗ್ಯ ಬರುತ್ತದೆ.
ಕೆಂಭಾವಿಯಲ್ಲಿ ಪುರಾತನ ಪಂಚಲಿಂಗಗಳು ರೇವಣಸಿದ್ದೇಶ್ವರ ದೇವಾಲಯದ ಮಹಾ ಮಂಟಪದಲ್ಲಿ 4 ದಿಕ್ಕುಗಳಿಗೆ ಒಂದು ಲಿಂಗ ಮಧ್ಯದಲ್ಲಿ ಒಂದರಂತೆ ಹಿಮವತ್ಕೆದಾರ ಲಿಂಗ, ಕಾಶಿ ವಿಶ್ವನಾಥ, ಶ್ರೀಶೈಲ ಮಲ್ಲಿಕಾರ್ಜುನ, ಸೇತುಬಂಧ ರಾಮೇಶ್ವರ, ಸೌರಾಷ್ಟ್ರ ಸೋಮನಾಥ ಎಂಬ ಒಟ್ಟು ಪಂಚಲಿಂಗಗಳು ಇಂದಿಗೂ ಪೂಜಿಲ್ಪಡುತ್ತವೆ.
ವಿಶಿಷ್ಟ ವಾಸ್ತು: ಈ ಪಂಚಲಿಂಗ ಮಹಾ ಮಂಟಪದಲ್ಲಿ 4 ಮಹಾದ್ವಾರಗಳಿಂದ ಕೂಡಿದ್ದು, ವಿಶಿಷ್ಟ ವಾಸ್ತು ವಿನ್ಯಾಸದ ದೇವಸ್ಥಾನವಾಗಿದೆ ಎಂದು ಈ ದೇವಸ್ಥಾನ ವೀಕ್ಷಿಸಿದ ಕವಿವಿ ಕನ್ನಡ ಪ್ರಾಧ್ಯಾಪಕರಾಗಿದ್ದ ಡಾ. ವೃಷಭೇಂದ್ರ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಇಂಥಾ ಪವಿತ್ರ ಮಹತ್ವದ ಐತಿಹಾಸಿಕ ಸ್ಥಳವನ್ನು ಈ ಭಾಗದ ಬುದ್ಧಿಜೀವಿಗಳಾಗಲಿ ರಾಜಕಾರಣಿಗಳಾಗಲಿ, ಜಿಲ್ಲಾಡಳಿತವಾಗಲಿ, ಪ್ರವಾಸೋದ್ಯಮ ಇಲಾಖೆಯಾಗಲಿ ಈ ಕ್ಷೇತ್ರವನ್ನು ಗುರ್ತಿಸುವ ಪ್ರಯತ್ನ ಮಾಡಿಲ್ಲ. ಈಗಲಾದರೂ ಸರ್ಕಾರ ಗಮನಹರಿಸಿ ಈ ಕ್ಷೇತ್ರವನ್ನು ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಬೇಕೆಂದು ರೇವಣಸಿದ್ದೆಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಲಿಂಗನಗೌಡ ಮಾಲಿಪಾಟೀಲ ಹೇಳುತ್ತಾರೆ. ಈ ದೇವಸ್ಥಾನವನ್ನು ತಲಕಾಡು ಮಾದರಿಯಲ್ಲಿ ಅಭಿವೃದ್ಧಿಪಡಿಸಿ, ಇದನ್ನು ಪ್ರಸಿದ್ಧ ಯಾತ್ರಾಸ್ಥಳವನ್ನಾಗಿ ಮಾಡಬೇಕೆನ್ನುವುದು ಇಲ್ಲಿನ ನಾಗರಿಕರ ಅಭಿಪ್ರಾಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

