ಗುಲ್ಬರ್ಗಾ

ಕಾರ್ತೀಕದ ಬೆಳಗಲ್ಲಿ ಭಕ್ತರ ಸಂಗಮ

Published On :

ಕ.ಪ್ರ. ವಾರ್ತೆ, ಗುಲ್ಬರ್ಗ, ಡಿ. 3
ಇಲ್ಲಿನ ವರ್ತುಲ ರಸ್ತೆಯ ರಾಮಮಂದಿರ ಹಾಗೂ ಕೆಸರಟಗಿ ಬಳಿಯ ಸಮಾಧಾನ ಆಶ್ರಮದಲ್ಲಿ ಕಾರ್ತಿಕ ಮಾಸದ ಕಡೆಯ ಸೋಮವಾರ ರಾತ್ರಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಲಕ್ಷ ದೀಪೋತ್ಸವ ಸಮಾರಂಭ ಜರುಗಿದವು.
ರಾಮಮಂದಿರದಲ್ಲಿ ಸೇರಿದ್ದ ಭಕ್ತರು ರಾಮನನ್ನು ಭಜಿಸುತ್ತ ಭಜನೆ, ಮಂಗಳಾರತಿಗಳಲ್ಲಿ ಲಕ್ಷ ದೀಪಗಳನ್ನು ಬೆಳಗಿಸಿದಾಗ ಮಂದಿರದ ಅಂಗಳದಲ್ಲಿ ಕಾರ್ತಿಕದ ಬೆಳಕು ಹರಡಿತ್ತು. ಆಗ ಸೇರಿದ್ದ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಸರಸ್ವತಿ ತಂತ್ರಿ, ನವಲಿ ಕೃಣಾಚಾರ್ಯ ಮೊದಲ್ಗೊಂಡು ಅನೇಕ ಹಿರಿಯರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಈ ಬಾರಿಯ ಕಾರ್ತಿಕ ಮಾಸದ ಕೊನೆಯ ಸೋಮವಾರದ ಸಂಜೆಯ ದೀಪೋತ್ಸವಕ್ಕೆ ರಾಮಮಂದಿರದಲ್ಲಿ ಸುತ್ತಲಿನ ಬಡಾವಣೆಯ ಜನತೆ, ದೂರದ ಬಡಾವಣೆಗಳ ನಿವಾಸಿಗಳು ಬಲು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ವಿಶೇಷವಾಗಿತ್ತಲ್ಲದೆ ಮಂದಿರದ ಎಲ್ಲಾ ಕಡೆಗಳಲ್ಲಿ ದೀಪದ ಬೆಳಗು ಜಗಮಗಿಸುತ್ತಿರುವಾಗ ಇಡೀ ಮಂದಿರವೇ ಕಾರ್ತಿಕದ ಬೆಳಕಲ್ಲಿ ತೇಲಿ ಬಂದಂತೆ ಭಾಸವಾಗುತ್ತಿತ್ತು.
ಸಮಾಧಾನದಲ್ಲಿ ಲಕ್ಷದೀಪೋತ್ಸವ:
ಸಹಸ್ರಾರು ಭಕ್ತರ ಹಚ್ಚಿದ ಜ್ಯೋತಿಯ ಬೆಳಕಲ್ಲಿ ಕೆಸರಟಗಿ ರಸ್ತೆಯ ಸಮಾಧಾನದಲ್ಲಿ ಮೌನಯೋಗಿ ಜಡೆಯ ಶಾಂತಲಿಂಗ ಶ್ರೀ ಸಾನ್ನಿಧ್ಯದಲ್ಲಿ ಲಕ್ಷ ದೀಪೋತ್ಸವ ಜರುಗಿತು.
ಲಕ್ಷ ದೀಪೋತ್ಸವದಲ್ಲಿ ಕನ್ನಡ ನಾಡಿನಾದ್ಯಂತವಲ್ಲದೇ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್ ಸೇರಿದಂತೆ ಇತರ ರಾಜ್ಯಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ಭಾಗವಹಿಸಿದ್ದರು.
ಪ್ರಜ್ವಲಿಸಿದ ಲಕ್ಷದೀಪ: ಮೌನಯೋಗಿ ಜಡೆಯ ಶಾಂತಲಿಂಗ ಶ್ರೀ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದ ನಂತರ ಒಂದೊಂದಾಗಿ ದೀಪಗಳು ಬೆಳಲಾರಂಭಿಸಿ ಲಕ್ಷ ದೀಪಗಳು ಪ್ರಜ್ವಲಿಸಿದವು. ಬಂದ ಭಕ್ತರೆಲ್ಲರೂ ಭಾವದಿಂದ ಹೆಣೆದ ಬತ್ತಿ, ಭಕ್ತಿಯ ಎಣ್ಣೆ ಹಾಕಿ ದೀಪಗಳನ್ನು ಬೆಳಗಿಸಿದರು.
ಜಡೆ ಹಿರೇಮಠದ ಅಮರೇಶ್ವರ ಶ್ರೀ ಸಹ ಆಶೀರ್ವಚನ ನೀಡುತ್ತಾ, ದಕ್ಷಿಣ ಭಾರತದಲ್ಲಿಯೇ ಮಾದರಿ ಹಾಗೂ ವಿಶಿಷ್ಠ ಎನ್ನಬಹುದಾದ ಪುರಾತನ ಗುಂಪಾ ಮಾದರಿಯಲ್ಲಿ ಧ್ಯಾನ ಮಂದಿರವನ್ನು ಸುಮಾರು 4 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಭೂಮಿಯಿಂದ 63 ಅಡಿ ಎತ್ತರದ ಮತ್ತು 90 ಡಿಗ್ರಿ ವ್ಯಾಸದಲ್ಲಿ ಪೂಜ್ಯರ ಧ್ಯಾನಾಸಕ್ತರಾದ ಪುತ್ಥಳಿ ಒಳಗೊಂಡಿದೆ ಎಂದರು.
ಪ್ರೊ. ನಿಂಗಮ್ಮ ಪತಂಗೆ, ಹೇಮಾ ರುದ್ರಪ್ಪ ಜಡೆಯ ಶಾಂತಲಿಂಗೇಶ್ವರ ಶ್ರೀ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಮೂಡಿ ವಿರಕ್ತ ಮಠದ ಸದಾಶಿವ ಶ್ರೀ, ಹೊನ್ನಕಿರಣಗಿ ಚಂದ್ರಗುಂಡ ಶ್ರೀ, ಕಮಲಪುರದ ಶಾಂತವೀರ ದೇವರು, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ, ಎಂ.ವೈ.ಪಾಟೀಲ, ಎಚ್ಕೆಇ ಸಂಸ್ಥೆ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ ಇದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.