ಬತ್ತದ ಯಂತ್ರಗಳಿಗೆ ಭಾರಿ ಬೇಡಿಕೆ
ಕೆಂಭಾವಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಎಲ್ಲೆಂದರಲ್ಲಿ ಬತ್ತದ ಯಂತ್ರಗಳ ಮುಖಾಂತರ ಬತ್ತದ ರಾಶಿ(ಕಟಾವ್) ಮಾಡುವ ಕಾರ್ಯ ಭರದಿಂದ ನಡೆದಿದ್ದು, ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ರೈತರು ಮುಂದಿನ ಬೆಳೆ ನಾಟಿ ಮಾಡುವ ಭರಾಟೆಯಲ್ಲಿ ಯಂತ್ರಗಳಿಂದ ರಾಶಿ ಮಾಡುತ್ತಿದ್ದು ಯಂತ್ರಗಳ ಬೇಡಿಕೆಯೂ ಹೆಚ್ಚಾಗಿದೆ.
ಕಳೆದ ಬಾರಿಗಿಂತ ಈ ಬಾರಿ ಯಂತ್ರಗಳ ಕಟಾವ ಬೆಲೆ ಕೂಡ ಕೊಂಚ ಜಾಸ್ತಿಯಾಗಿದ್ದರೂ ರೈತರು ಮಾತ್ರ ಇದ್ಯಾವುದನ್ನು ಲೆಕ್ಕಿಸದೆ ಯಂತ್ರಗಳಿಂದಲೇ ರಾಶಿ ಮಾಡುತ್ತಿದ್ದಾರೆ. ಹೀಗಾಗಿ ರಾಶಿ ಯಂತ್ರಗಳ ಏಜೆಂಟರುಗಳೇ ಹುಟ್ಟಿಕೊಂಡಿದ್ದಾರೆ. ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ರಾಯಚೂರ, ಗಂಗಾವತಿ, ಕಾರಟಗಿ ಮುಂತಾದ ಪಟ್ಟಣಗಳಿಂದ ಯಂತ್ರಗಳು ಬರುತ್ತಿದ್ದು, ಎಕರೆಗೆ 2800 ಗಳಂತೆ ಬತ್ತ ರಾಶಿ ಮಾಡಲು ತೆಗೆದುಕೊಳ್ಳುತ್ತಾರೆ.
ನಾಟಿ ಮಾಡಲು ರೈತರು ತರಾತುರಿ: ಯಂತ್ರವನ್ನು ರೈತರು ತಮ್ಮ ಹೊಲಗಳಿಗೆ ತೆಗೆದುಕೊಂಡು ಹೋಗಲು ನಾ ಮುಂದು, ತಾ ಮುಂದು ಎಂದು ಬಡದಾಡುತ್ತಿದ್ದು, ಇದರಿಂದ ಯಂತ್ರದ ರಾಶಿಯ ಬೆಲೆ ಗಗನಕ್ಕೇರುತ್ತಿದೆ. ಮಾ.10ರ ವರೆಗೆ ಮಾತ್ರ ಕಾಲುವೆಯಲ್ಲಿ ನೀರು ಹರಿಯುತ್ತವೆ ಎನ್ನುವುದರಿಂದ ರಾಶಿ ಮಾಡಿ ಮತ್ತೆ ಬತ್ತ ನಾಟಿ ಮಾಡಲು ರೈತರು ತರಾತುರಿಯಲ್ಲಿದ್ದಾರೆ.
ಎರಡನೇ ಅವಧಿಯ ಬೆಳೆ ಬಂದರೆ ಒಂದಿಷ್ಟು ಲಾಭವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದ ರೈತರಿಗೆ ಈಗ ಎರಡನೇ ಅವಧಿಯ ಬೆಳೆಗೆ ನೀರು ಬರುತ್ತದೆಯೋ ಇಲ್ಲವೋ ಎಂಬ ಗೊಂದಲದಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು ನಾಟಿ ಕಾರ್ಯ ಕೂಡ ನಡೆಸಿದ್ದಾರೆ.
ವಿವಿಧ ಪಕ್ಷದ ಮುಖಂಡರುಗಳು ಮಾ.31ರ ವರೆಗೆ ನೀರು ಬರುತ್ತದೆ ಎಂದು ಹೇಳಿಕೆ ಕೊಡುತ್ತಿದ್ದಾರೆ. ರಾಜಕೀಯ ಗುದ್ದಾಟದಲ್ಲಿ ನೀರು ಬರುತ್ತದೆಯೋ ಇಲ್ಲವೋ ಎಂದು ತಿಳಿಯದಾಗಿ ಬತ್ತ ನಾಟಿ ಮಾಡಬೇಕೊ ಬೇಡವೋ ಎಂದು ಕೆಲ ರೈತರು ಗೊಂದಲದಲ್ಲಿದ್ದರೆ, ಇನ್ನು ಕೆಲವರು ನಾಟಿ ಕಾರ್ಯ ನಡೆಸಿದ್ದಾರೆ.
ಬತ್ತಕ್ಕೆ ಮಾರುಕಟ್ಟೆ ಇಲ್ಲ: ಬತ್ತದ ಕಣಜವೆಂದೇ ಹೇಳಲಾಗುವ ಕೆಂಭಾವಿಯಲ್ಲಿ ಬತ್ತಕ್ಕೆ ಮಾರುಕಟ್ಟೆ ಇಲ್ಲ, ಬತ್ತ ಬೆಳೆದ ಹೊಲದಿಂದಲೇ ನೇರವಾಗಿ ದಲ್ಲಾಳಿಗಳು ಬತ್ತವನ್ನು ಖರೀದಿಸಿ, ಅಲ್ಲಿಯೇ ತೂಕ ಮಾಡುವುದು ಇಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತದೆ. ಆದರೆ ಇದು ಎಷ್ಟರ ಮಟ್ಟಿಗೆ ಸೂಕ್ತ ಎಂಬುವುದು ಮಾತ್ರ ಪ್ರಶ್ನೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

