ವಿಠ್ಠಲ್ ಪಂಚಭೂತಗಳಲ್ಲಿ ಲೀನ
ಕನ್ನಡಪ್ರಭ ವಾರ್ತೆ , ಅಫಜಲ್ಪುರ , ಡಿ.4
ಕೋಲಿ ಸಮಾಜದ ನಾಯಕ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ವಿಠ್ಠಲ್ ಹೇರೂರ್ ಅವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರ ದೇವಲಗಾಣಗಾಪುರದ ಕಂಠೆಪ್ಪ ಹೇರೂರ್ ಶಾಲಾ ಆವರಣದಲ್ಲಿ ಬುಧವಾರ ಮಧ್ಯಾಹ್ನ ನಡೆಯಿತು.
ದೇವಲಗಾಣಗಾಪುರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯೊಂದಿಗೆ ಹೇರೂರ್ ಅವರ ಪಾರ್ಥೀವ ಶರೀರವನ್ನು ಶಾಲಾ ಆವರಣಕ್ಕೆ ತಂದಾಗ ಸೇರಿದ್ದ ಸಾವಿರಾರು ಜನ ಕಣ್ಣೀರಿಟ್ಟರು.
ಈ ವೇಳೆ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಶಾಸಕ ಮಾಲಿಕಯ್ಯ ಗುತ್ತೇದಾರ ಮಾತನಾಡಿ, ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿರದೆ ತಮ್ಮ ಸಮಾಜದ ಒಳಿತಿಗಾಗಿ ಯಾರು ಬರುತ್ತಾರೋ ಅಂತವರ ಜತೆ ಗುರುತಿಸಿಕೊಂಡು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು ಎಂದು ಅಭಿಪ್ರಾಯಪಟ್ಟರು.
ಹೋರಾಟ ಮುನ್ನಡೆಸಿ: ನಾನು ಆಸ್ಪತ್ರೆಗೆ ಅವರ ಆರೋಗ್ಯ ವಿಚಾರಿಸಲು ಹೋದಾಗಲೂ ತಮ್ಮ ಜನಾಂಗವನ್ನು ಎಸ್ಟಿಗೆ ಸೇರಿಸುವ ಕುರಿತು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಸೂಚಿಸಿದ್ದರು. ಹೀಗಾಗಿ ಅವರ ಮುಂದಿನ ಹೋರಾಟದ ಹಾದಿಯನ್ನು ಸಮಾಜ ಬಾಂಧವರು ಮುನ್ನಡೆಸಿಕೊಂಡು ಹೋಗಬೇಕೆಂದು ಶಾಸಕ ಮಾಲಿಕಯ್ಯ ಗುತ್ತೇದಾರ ಹೇಳಿದರು.
ತಮ್ಮ ಜೀವಿತದ ಕೊನೆಯ ಉಸಿರಿನ ತನಕವೂ ಸಮಾಜಕ್ಕಾಗಿ ದುಡಿಯುವ ಹಂಬಲ ತಮ್ಮ ಸಮಾಜ ಬಾಂಧವರಿಗಾಗಿ ಏನನ್ನಾದರೂ ಕೊಡುಗೆ ನೀಡುವ ಕನಸು ಅವರ ಕಂಗಳಲ್ಲಿ ಕಾಣುತ್ತಿತ್ತು. ಹೇರೂರ್ ಅವರ ಅಗಲಿಕೆಯಿಂದಾಗಿ ರಾಜ್ಯ ಕೋಲಿ ಸಮಾಜಕ್ಕೆ ಮತ್ತು ಪ್ರಗತಿಪರ ಹೋರಾಟಗಾರರಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು.
ರಾಜ್ಯಕ್ಕೆ ತುಂಬಲಾರದ ನಷ್ಟ: ಕಾಡಾ ಮಾಜಿ ಅಧ್ಯಕ್ಷ ಗಿರೀಶ ಮಟ್ಟಣ್ಣವರ್ ಮಾತನಾಡಿ, ರಾಜ್ಯದ ಯಾವುದೇ ಮೂಲೆಯಲ್ಲಿ ಹಿಂದುಳಿದ ವರ್ಗಗಳಿಗೆ ತೊಂದರೆಗಳು ಕಂಡುಬಂದರೆ ಅಲ್ಲಿ ವಿಠ್ಠಲ್ ಹೇರೂರ್ ನೇತೃತ್ವ ವಹಿಸಿ ನೊಂದ ಜನತೆಗೆ ಕಣ್ಣೊರೆಸುವ ಸಹೃದಯಿಗಳಾಗಿದ್ದರು. ಇಂತಹ ವ್ಯಕ್ತಿಯನ್ನು ಕಳೆದುಕೊಂಡಿರುವುದು ರಾಜ್ಯಕ್ಕೆ ನಷ್ಟವಾಗಿದೆ ಎಂದರು.
ಮನುಷ್ಯ ಜೀವನದಲ್ಲಿ ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸಬೇಕು. ಅಂದಾಗ ಬದುಕು ಸಾರ್ಥಕವಾಗುತ್ತದೆ. ಅಂತಹ ಸಾರ್ಥಕ ಬದುಕು ಸಾಗಿಸಿದ ಹೇರೂರ್ ಅವರ ಆತ್ಮಕ್ಕೆ ಪರಮಾತ್ಮನು ಶಾಂತಿ ಕಲ್ಪಿಸಲಿ ಮತ್ತು ದುಃಖತಪ್ತ ಕುಟುಂಬಕ್ಕೆ ಅವರ ಅಗಲಿಕೆಯ ನೋವು ತಡೆದುಕೊಳ್ಳುವ ಶಕ್ತಿಯನ್ನು ದೇವರು ಕಲ್ಪಿಸಲಿ ಎಂದು ಬಡದಾಳದ ಚನ್ನಮಲ್ಲೇಶ್ವರ ಶಿವಾಚಾರ್ಯರು, ಚಿನ್ಮಯಗಿರಿಯ ಸಿದ್ದರಾಮ ಶಿವಾಚಾರ್ಯರು, ಅಂಬಿಗರ ಚೌಡಯ್ಯ ಪೀಠದ ಶಾಂತಮುನಿ ಸ್ವಾಮೀಜಿ, ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ, ಕುಮಸಗಿಯ ಶಿವಾನಂದ ಸ್ವಾಮೀಜಿ, ಉರಿಲಿಂಗ ಪೆದ್ದಿ ಸ್ವಾಮೀಜಿ, ಮಲ್ಲಯ್ಯ ಮುತ್ಯಾ, ಪ್ರಭು ಶ್ರೀಗಳು, ಗುರುನಾಥ ಶ್ರೀಗಳು, ಹಳ್ಳಿರಾಯ ಸ್ವಾಮೀಜಿ ಹೇಳಿದರು.
ಮಾಜಿ ಸಚಿವರಾದ ವೈಜನಾಥ ಪಾಟೀಲ್, ರೇವೂನಾಯಕ ಬೆಳಮಗಿ, ಮಾಜಿ ಶಾಸಕ ಎಂ.ವೈ. ಪಾಟೀಲ್, ವಾಲ್ಮೀಕಿ ನಾಯಕ, ಶಾಸಕ ಡಾ. ಅಜಯಸಿಂಗ್, ಮುಖಂಡ ಕೆ. ಮುಕಡಪ್ಪ, ಅಲ್ಲಂಪ್ರಭು ಪಾಟೀಲ್, ಗೌತಮ ಚೌಧರಿ, ರಝಾಕ್ ಪಟೇಲ್, ತಾಲೂಕು ಕೋಲಿ ಸಮಾಜದ ಉಪಾಧ್ಯಕ್ಷ ಗುರಣ್ಣ ಜಮಾದಾರ, ದಿಲೀಪ ಕಳಸಿ, ಕಾರ್ಯದರ್ಶಿ ಮಲ್ಕಣ್ಣ ಯಂಕಂಚಿ, ಸುರೇಶ ಅವಟೆ, ಶಿವುಕುಮಾರ ನಾಟಿಕಾರ, ಶ್ರೀಮಂತ ಬಿರಾದಾರ, ಬಿ.ವೈ. ಪಾಟೀಲ್, ವಿಶ್ವನಾಥ ರೇವೂರ, ಶಾಂತಯ್ಯ ಹಿರೇಮಠ, ಬಸವರಾಜ ಸಪ್ಪನಗೋಳಿ, ಹೇರೂರ ಬಂಧುಗಳು ಹಾಗೂ ಸಮಾಜ ಬಾಂಧವರು, ಹಲವು ಸಂಘಟನೆಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
'ಜನಪರ ನಾಯಕ'
ಗುಲ್ಬರ್ಗ: ಕೋಲಿ ಸಮಾಜದ ಮುಖಂಡ, ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ವಿಠ್ಠಲ್ ಹೆರೂರ್ ನಿಧನಕ್ಕೆ ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ನಿರ್ದೇಶಕಿ ಡಾ. ನಾಗಾಬಾಯಿ ಬುಳ್ಳಾ, ಆಳಂದ ಶಾಸಕ ಬಿ.ಆರ್. ಪಾಟೀಲ್, ಹೋರಾಟಗಾರ ಗೋಪಾಲರಾವ ಗುಡಿ ಸಂತಾಪ ಸೂಚಿಸಿದ್ದಾರೆ.
ಕಬ್ಬಲಿಗ ಜನಾಂಗದ ಹುಲಿ, ಕಬ್ಬಲಿಗ ಜನಾಂಗದ ಸೂರ್ಯನೆಂದೇ ಖ್ಯಾತರಾದ ವಿಠ್ಠಲ್ ಹೆರೂರ್ ಹುಟ್ಟು ಹೋರಾಟಗಾರರು, ಇವರಂಥ ನೇರ, ದಿಟ್ಟ ಮಾತುಗಾರ, ನುಡಿದಂತೆ ನಡೆದ ವ್ಯಕ್ತಿಯಾಗಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಬ್ಬಲಿಗ ಸಮಾಜದಲ್ಲಿ ಒಂಟಿ ಸಲಗದಂತೆ ಇದ್ದ ಇವರು ಎಷ್ಟೋ ಸಲ ಸಮಾಜದ ಹಿತಕ್ಕಾಗಿ ವೈಯಕ್ತಿಕ ಹಿತಾಸಕ್ತಿಗಳನ್ನು ಬಲಿಕೊಟ್ಟಿರುವರು. ತಮ್ಮ ತನು, ಮನ, ಧನವನ್ನು ಸಮಾಜದ ಹಿತಕ್ಕಾಗಿ ಶ್ರೀಗಂಧದಂತೆ ಸವೆಸಿದವರು. ಬದುಕಿನಲ್ಲಿ ಒಂದು ಬದ್ಧತೆ ಇರುವ ಕಾರಣಕ್ಕಾಗಿ ಅವರೆಂದೂ ಅಧಿಕಾರಕ್ಕಾಗಿ, ರಾಜಕೀಯ ಸ್ಥಾನಮಾನಕ್ಕಾಗಿ ರಾಜಿ ಮಾಡಿಕೊಳ್ಳಲಿಲ್ಲ, ಸ್ವಾಭಿಮಾನಿಯಾಗಿಯೇ ಕೊನೆಯವರೆಗೂ ಉಳಿದರು ಎಂದು ತಿಳಿಸಿದ್ದಾರೆ.
ವಾಡಿಯಲ್ಲಿ ಶ್ರದ್ಧಾಂಜಲಿ
ಗುಲ್ಬರ್ಗ: ವಾಡಿ ಪಟ್ಟಣದಲ್ಲಿ ಕೋಲಿ ಸಮಾಜದ ಪ್ರಶ್ನಾತೀತ ನಾಯಕ ಎನಿಸಿದ್ದ ಮಾಜಿ ಮುಖ್ಯ ಸಚೇತಕ ವಿಠ್ಠಲ್ ಹೇರೂರ ನಿಧನರಾದ ಹಿನ್ನೆಲೆ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೋಲಿ ಸಮಾಜದ ಅಧ್ಯಕ್ಷ ನಾಗೇಂದ್ರ ಭಮ್ಮನಳ್ಳಿ, ಮುಖಂಡರಾದ ಭೀಮರಾ ನಾಟಿಕರ್, ಶಿವಪ್ಪ ಕೆ., ವೆಂಕಯ್ಯ ಮಾಲಗತ್ತಿ, ಸೋಪಣ್ಣ, ರಘು, ಮಲ್ಲಣ್ಣ ತಳಂಗಿ, ಬಸ್ಸು ತಳವಾರ ನಾನಾ ಗ್ರಾಮದ ಮುಖಂಡರು ಇದ್ದರು.
ಕೋಲಿ ಸಮಾಜ ಶ್ರದ್ಧಾಂಜಲಿ
ಸೇಡಂ: ವಿಠ್ಠಲ್ ಹೇರೂರ ನಿಧನರಾದ ಹಿನ್ನೆಲೆಯಲ್ಲಿ ಸೇಡಂ ತಾಲೂಕು ಕೋಲಿ ಸಮಾಜದ ವತಿಯಿಂದ ಸೇಡಂನ ಕೋಲಿವಾಡಾ ಸಮುದಾಯ ಭವನದಲ್ಲಿ ಸಂತಾಪ ಸೂಚಕ ಸಭೆ ನಡೆಸಿ, ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯಲ್ಲಿ ಕೋಲಿ ಗಂಗಾಮತ ಸಮಾಜದ ತಾಲೂಕು ಅಧ್ಯಕ್ಷ ಸೋಮಶೇಖರ ಹೊಸ್ಮನಿ ಬಿಬ್ಬಳ್ಳಿ, ಪ್ರಧಾನ ಕಾರ್ಯದರ್ಶಿ ರಮೇಶ ಇಂಜಳ್ಳಿಕರ್, ನಗರಾಧ್ಯಕ್ಷ ಮಲ್ಲಿಕಾರ್ಜುನ ಗುಡ್ಡದ, ಜಿಲ್ಲಾ ಉಪಾಧ್ಯಕ್ಷ ಭೀಮರಾಯ ಅಳ್ಳೊಳ್ಳಿ, ಸಂಘಟನಾ ಕಾರ್ಯದರ್ಶಿ ಶರಣಪ್ಪ ಎಳ್ಳಿ, ಕಾಶಿನಾಥ ನಿಡಗುಂದಾ, ಜಗನ್ನಾಥ ಭಾಗೋಡಿ, ಅಶೋಕ ದಂದೋತಿ, ಮರೆಣ್ಣ ತಾಯಿತ, ಭೀಮರಾಯ ದಂಡೋತಿ, ಸಂತೋಷ ತಳವಾರ, ಕಾಶಿನಾಥ ಕೊಳ್ಳಿ, ರುದ್ರು ಪಿಲ್ಲಿ, ಅರ್ಜುನ ಚನ್ನಕ್ಕಿ, ಜಗನ್ನಾಥ ಪಾಟೀಲ್, ಕೋಲಿ ಸಮಾಜದ ಇನ್ನಿತರ ಮುಖಂಡರು ಸಂತಾಪ ಸೂಚಕ ಸಭೆಯಲ್ಲಿ ಪಾಲ್ಗೊಂಡಿದ್ದರು.
ಮೌನಾಚರಣೆ ಸಲ್ಲಿಸಿ ಸಂತಾಪ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರದ ವಾಡಿ ಕ್ರಾಸ್ ಬಳಿ ಕೋಲಿ ಸಮಾಜದ ಮುಖಂಡ, ಹೋರಾಟಗಾರ ವಿಠ್ಠಲ್ ಹೇರೂರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸಿ, ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಮುಖಂಡರಾದ ದೇವೇಂದ್ರ ಯಲಗೂಡಕರ್, ತಾಪಂ ಸದಸ್ಯ ನಿಂಗಣ್ಣ ಹುಳಗೋಳ, ಪರಮಾನಂದ ಹುಳಗೋಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಶಾಂತಿ ಕೋರಿ ಒಂದು ನಿಮಿಷ ಮೌನಾಚರಿಸಿದರು. ಸುಭಾಷ ಜಾಪೂರ, ಮೋಹನ ತಳವಾರ, ಕಾಶಪ್ಪ ಸಂಗಾವಿ, ದೇವೇಂದ್ರ ಅಂಬೇಕರ್, ರಾಜು ಜೀವಣಗಿ, ಅಂಜನಯ್ಯ ಇತರರಿದ್ದರು
ಗಣ್ಯರ ಕಂಬನಿ
ಜೇವರ್ಗಿ: ಕೋಲಿ ಸಮಾಜದ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ವಿಠ್ಠಲ್ ಹೇರೂರ ನಿಧನಕ್ಕೆ ತಾಲೂಕಿನ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಶಾಸಕ ಡಾ. ಅಜಯಸಿಂಗ್, ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ, ಜಿಪಂ ಸದಸ್ಯೆ ಶೋಭಾ ಬಾಣಿ, ಬೈಲಪ್ಪ ನೆಲೋಗಿ, ರಮೇಶಬಾಬು ವಕೀಲ್, ರಾಜಶೇಖರ ಸೀರಿ, ಶಿವಪುತ್ರಪ್ಪ ಕೋಣಿನ್, ಶಂಕರ ಕಟ್ಟಿಸಂಗಾವಿ, ವಸಂತ ನರಿಬೋಳ, ಭೀಮರಾವ ಸಾಹು ಹೊನ್ನಾಳ, ಯಮನಪ್ಪ ಇಜೇರಿ ರೇವನೂರ, ಬಸವರಾಜ ಗುಂಡಳ್ಳಿ, ಪ್ರಕಾಶ ಪಾಟೀಲ್, ಶಿವಶರಣಪ್ಪ ಹೊನ್ನಾಳ, ಶಿವಶರಣಪ್ಪ ಜಂಬೇರಾಳ, ಭೀಮರಾಯ ಜನಿವಾರ, ಸಿದ್ದಣ್ಣ ಹಾಲಗಡ್ಲಾ, ಭೂತಾಳಿ ದಾವಜಿ, ಗೊಲ್ಲಾಳಪ್ಪ ಬೆಣ್ಣೂರ ಇತರರು ಶೋಕ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

