ಗುಲ್ಬರ್ಗಾ

ಹಕ್ಕು ಪಡೆಯಲು ಅರಿವು ಅಗತ್ಯ

Published On :

ಗುಲ್ಬರ್ಗ/ಶಹಾಬಾದ್: ಹೊಸ ಕಾನೂನನ್ನು ಮಾಡುವುದು ಎಷ್ಟು ಸಾಧ್ಯವೋ ಅದನ್ನು ಜಾರಿಗೆ ತರುವುದು, ಕಾನೂನಿನ ಹಕ್ಕು ಪಡೆಯುವುದು ಅಷ್ಟೇ ಮುಖ್ಯವಾಗಿದ್ದು, ಅದಕ್ಕಾಗಿ ಕಾನೂನಿನ ತಿಳಿವಳಿಕೆಯಿದ್ದರೆ ಮಾತ್ರ ಅದರ ಹಕ್ಕನ್ನು ಪಡೆಯಲು ಸಾಧ್ಯ ಎಂದು ಹೈ-ಕ ಹೋರಾಟ ಸಮಿತಿಯ ಉಪಾಧ್ಯಕ್ಷ ಡಾ. ಅಬ್ದುಲ್ ರಜಾಕ್ ಉಸ್ತಾದ್ ರಾಯಚೂರ ಹೇಳಿದರು.
ನಗರದ ಜಾಮಾ ಮಸೀದಿ ಸಭಾಗೃಹದಲ್ಲಿ ಹೈ-ಕ ಮುಸ್ಲಿಂ ಫೋರಂ ವತಿಯಿಂದ ಸಂವಿಧಾನದ ಕಲಂ 371(ಜೆ) ಕುರಿತ ತಿಳಿವಳಿಕೆ ಮತ್ತು ಜನಜಾಗೃತಿ ಅಭಿಯಾನದದಲ್ಲಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯದ ನಂತರ ನಿಜಾಮ ರಾಜ್ಯದ ಅಧೀನದಲ್ಲಿದ್ದ ಹೈ-ಕ ಪ್ರದೇಶ 1948ರಲ್ಲಿ ಸ್ವಾತಂತ್ರ್ಯ ಪಡೆಯಿತು. ಅಲ್ಲಿಂದ 1956ರವರೆಗೆ ಈ ಭಾಗದಲ್ಲಿ ಮುಲ್ಕಿ ಕಾನೂನು ಜಾರಿಗೆ ಇತ್ತು. ಮೈಸೂರು ಸಂಸ್ಥಾನದಲ್ಲಿ ಸರ್ಕಾರಿ ನೌಕರದಾರರಿಗೆ ಇದ್ದ ವೇತನಕ್ಕಿಂತಲೂ ಮುಲ್ಕಿ ಕ್ಷೇತ್ರದ ನೌಕರದಾರರಿಗೆ ಹೆಚ್ಚು ವೇತನವಿತ್ತು. 1956ರಲ್ಲಿ ಈ ಭಾಗವನ್ನು ಭಾಷಾವಾರು ವಿಂಗಡನೆಯಲ್ಲಿ ಮೈಸೂರು ರಾಜ್ಯಕ್ಕೆ ಸೇರಿಸಲ್ಪಟ್ಟಿತ್ತು ಎಂದರು.
ಹಿಂದುಳಿಯಲು ನಿರ್ಲಕ್ಷ್ಯ ಕಾರಣ: ಶೈಕ್ಷಣಿಕವಾಗಿ ಹಿಂದುಳಿದ ಈ ಭಾಗ ದಕ್ಷಿಣ ಕರ್ನಾಟಕದವರೊಂದಿಗೆ ಸ್ಪರ್ಧಿಸಲಾಗದೆ ಅತ್ಯಂತ ಹಿಂದುಳಿಯಿತು. ಮುಲ್ಕಿ ಮಾದರಿ ಹಕ್ಕನ್ನು ಪಡೆಯಲು ಮೈಸೂರು ರಾಜ್ಯದ ಮೇಲೆ ಒತ್ತಡ ತರಲು ಈ ಭಾಗದ ನಾಯಕರು ವಹಿಸಿದ ನಿರ್ಲಕ್ಷ್ಯದಿಂದ ಈ ಪರಿಸ್ಥಿತಿ ಉಂಟಾಯಿತು ಎಂದರು.
ಈಗ ಕಲಂ 371(ಜೆ) ಜಾರಿಯಾಗಿದೆ. ಕಾನೂನು ಜಾರಿಗೆ ಮಾಡಿದ ಸರ್ಕಾರವೇ ಅದನ್ನು ವಿಫಲಗೊಳಿಸಲು ಪ್ರಯತ್ನ ನಡೆಸುತ್ತಿದೆ. ಈ ಬಗ್ಗೆ ಎಚ್ಚರದಿಂದ ಇದ್ದು, ಈ ಕಾನೂನಿಂದ ನಮಗಿರುವ ಹಕ್ಕುಗಳನ್ನು ತಿಳಿದು, ಪಡೆಯಬೇಕೆಂದು ಹೇಳಿದರು.
ಹಕ್ಕಿಗಾಗಿ ಹೋರಾಟ ಅವಶ್ಯ: ಹೈ.ಕ. ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಮಾತನಾಡಿ, ಮುಲ್ಕಿ ಮಾದರಿ ಕಾನೂನು ಹಿಂದಿನಿಂದಲೂ ಈ ಭಾಗದಲ್ಲಿದ್ದರೆ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಯಲ್ಲಿ ಹಿಂದುಳಿಯುತ್ತಿರಲಿಲ್ಲ. ಈಗ ಕಲಂ 371(ಜೆ) ಜಾರಿಗೆ ಬಂದಿದ್ದು, ಈ ಕಾನೂನಿನನ್ವಯ ಸಿಗುವ ಎಲ್ಲ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಡಬೇಕೆಂದು ಕರೆ ನೀಡಿದರು.
ನಗರಸಭೆ ಅಧ್ಯಕ್ಷ ಗಿರೀಶ ಕಂಬಾನೂರ, ನಗರಸಭೆ ಮುಖ್ಯಾಧಿಕಾರಿ ಕೆ. ಗುರುಲಿಂಗಪ್ಪ, ಅಲ್ ಹುದಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಹ್ಮದ್ ಅಲಿ ಆಫಸರ್ ಸೇಠ್, ಸೈಯದ್ ಮಹಿಮೂದ್, ಕರವೇಯ ಕಲ್ಯಾಣರಾವ ಪಾಟೀಲ್, ಸಭೆಯ ಸಂಚಾಲಕ ಮಹ್ಮದ್ ಫಜಲ್ ಪಟೇಲ್ ಉಪಸ್ಥಿತರಿದ್ದರು.
ಶಮಶೋದ್ದಿನ್ ಪೀರ್ ಮಹ್ಮದ್ ಸಾಬ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರದ ಪ್ರಮುಖರಾದ ಜಬ್ಬಾರ್ ಪಟೇಲ್, ರಾಜು ಜಂಬಗಿ, ಎಂ.ಎ.ಜಲೀಲ್, ಅಬ್ದುಲ್ ಕರಿಂ ಇನಾಮನ್ದಾರ, ರಾಜ ಮಹ್ಮದ್ ಅಮರ, ಮಹ್ಮದ್ ಇಸ್ಮಾಯಿಲ್ ಸೇರಿದಂತೆ ನಗರದ ಗಣ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಹೈ.ಕ. ಮುಸ್ಲಿಂ ಫೋರಂ ಅಧ್ಯಕ್ಷ ಮಹ್ಮದ್ ಉಬೇದುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಫೋರಂ ಸಂಚಾಲಕ ಎಂ.ಎ. ರಜಾಕ್ ರಫತ್ ಸ್ವಾಗತಿಸಿದರು. ಮಹ್ಮದ್ ರಫೀಕ್ ಭಾಗಬಾನ ಕಾರ್ಯಕ್ರಮ ನಿರೂಪಿಸಿದರು. ಮಹ್ಮದ್ ಅಲಿ ಖಾನ್ ಜಮಾದಾರ ವಂದಿಸಿದರು.
ನಿರ್ಣಯಗಳು...
ಹೈದ್ರಾಬಾದ್ ಕರ್ನಾಟಕ ಮುಸ್ಲಿಂ ಫೋರಂ ವತಿಯಿಂದ ಕಲಂ 371(ಜೆ) ಜನಜಾಗೃತಿ ಅಭಿಯಾನ ಸಭೆಯಲ್ಲಿ ಅಲ್ಪಸಂಖ್ಯಾತರಿಗೆ ಅನುಕೂಲವಾಗಲು ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
1. ಹೈ.ಕ. ಭಾಗಕ್ಕೆ ವಿಶೇಷ ಸೌಲಭ್ಯ ಕಲ್ಪಿಸಿದ್ದು, ಇದರಲ್ಲಿ ಜನಸಂಖ್ಯಾ ಆಧಾರದ ಮೇಲೆ ಮುಸ್ಲಿಂ ಸಮಾಜಕ್ಕೆ ಆದ್ಯತೆ ನೀಡಬೇಕು
2. ಕೇಂದ್ರ ಸರ್ಕಾರ ರಾಜ್ಯದಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಿಸಲು ಯೋಜಿಸಿದ್ದು, ಮುಸ್ಲಿಮರ ಜನಸಂಖ್ಯೆ ಹೆಚ್ಚು ಇರುವ ಬೀದರ್ನಲ್ಲೇ ವಿವಿ ಸ್ಥಾಪಿಸಲು ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಸಚಿವ ರೆಹಮಾನ್ಖಾನ್ ಗಂಭೀರವಾಗಿ ಪರಿಗಣಿಸಬೇಕು.
3. ಕಲಂ 371(ಜೆ) ಅನ್ವಯ ಜನಸಂಖ್ಯಾ ಆಧಾರದ ಮೇಲೆ ಶಿಕ್ಷಣ, ನೇಮಕಾತಿಯಲ್ಲಿ ಮೀಸಲಾತಿ, ಕಲಂ 371 ಅನುಷ್ಠಾನಗೊಳಿಸಲು ಸಮಿತಿ ರಚಿಸಬೇಕೆಂದು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.