ಸುದ್ದಿ ಸಂಕ್ಷೇಪ
ಹೆರೂರ್ ಸಾವು; ಸಿಒಡಿ ತನಿಖೆಗೆ ಆಗ್ರಹ
ಗುಲ್ಬರ್ಗ: ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ವಿಠ್ಠಲ್ ಹೆರೂರ್ ಅವರ ಸಾವು ಸಂಶಯಾಸ್ಪದವಾಗಿದ್ದು, ಕೂಡಲೇ ಸಿಒಡಿ ತನಿಖೆಗೆ ಒಪ್ಪಿಸಬೇಕೆಂದು ಜಿಪಂ ಮಾಜಿ ಸದಸ್ಯ ಗುರುಶಾಂತ ಪಟ್ಟೇದಾರ, ಕೋಲಿ ಸಮಾಜದ ಮುಖಂಡರಾದ ಬಸವರಾಜ ಹರವಾಳ ಹಾಗೂ ಮಾರ್ಥಂಡಪ್ಪ ಒತ್ತಾಯಿಸಿದ್ದಾರೆ.
ಹೆರೂರ್ ಪತ್ನಿ ಡಾ. ಸುಧಾ ಮೂಲತಃ ಬೆಂಗಳೂರಿನವರು ಮತ್ತು ಅವರ ಚಿಕ್ಕಪ್ಪನ ಮಗ ಡಾ. ದಿಗಂಬರ ಸಹೋದರನಾಗಿದ್ದು, ಇಬ್ಬರು ಸರಿಯಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಗಮನ ಕೊಡದೆ ಇರುವುದರಿಂದ ಹೆರೂರ್ ಸಾವಿಗೀಡಾಗಿದ್ದಾರೆಂದು ಆರೋಪಿಸಿದ್ದಾರೆ.
ಕೂಡಲೇ ಸಿಒಡಿ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ನಾಳೆ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ
ಗುರುಮಠಕಲ್: ಪಟ್ಟಣದ ಕಟ್ಟೇಲಗೇರದಲ್ಲಿ ನೂತನವಾಗಿ ನಿರ್ಮಿಸಿದ ಅಂಜನೇಯ ದೇವರ ನೂತನ ಕಟ್ಟಡ ಹಾಗೂ ಮೂರ್ತಿ ಪ್ರತಿಷ್ಠಾಪನೆ ಉದ್ಘಾಟನೆ ಡಿ.16 ರಂದು ಬೆಳಗ್ಗೆ 11.30ಕ್ಕೆ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಜವಳಿ, ಬಂದರು, ಒಳನಾಡು ಸಾರಿಗೆ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಬಾಬೂರಾವ್ ಚಿಂಚನಸೂರ್, ಜಿಪಂ ಅಧ್ಯಕ್ಷ ಭೀಮವ್ವ ಕೃಷ್ಣಾ ಚಪೇಟ್ಲಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ. ಜಯಂತ ಪಾರ್ಥಿಕರ್ ಉತ್ತರಾದೇವಿ ಚಾರಿಟೇಬಲ್ ಟ್ರಸ್ಟ್ ಹೈದ್ರಾಬಾದ್, ನಿತಿನ್ ಸಿಂಧೆ ಗುರುಮಠಕಲ್ ಭಾಗವಹಿಸುವರು.
ಯಾದಗಿರಿ ಜಿಲ್ಲಾ ಉತ್ಸವಕ್ಕೆ ಆಗ್ರಹ
ಗುರುಮಠಕಲ್: ಯಾದಗಿರಿಯೂ ನೂತನವಾಗಿ ಜಿಲ್ಲಾ ಕೇಂದ್ರವಾಗಿ ರಚನೆಯಾಗಿ ಮೂರ ವರ್ಷ ಗತಿಸಿದರೂ, ಇಲ್ಲಿವರೆಗೆ ಜಿಲ್ಲಾಡಳಿತವು ಜಿಲ್ಲಾ ಉತ್ಸವ ಮಾಡದೆ ಇರುವುದು ಖಂಡನಿಯ ವಿಷಯವಾಗಿದೆ ಎಂದು ಸಮೃದ್ಧ ಕರ್ನಾಟಕ ಸಮಾಜ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಸಿದ್ದಲಿಂಗ ರೆಡ್ಡಿ ಕಂದಕೂರ ತಿಳಿಸಿದರು.ಈ ಕುರಿತು ಇಲ್ಲಿ ಪತ್ರಿಕಾ ಗೋಷ್ಠಿ ನಡೆಸಿ, ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಉತ್ಸವವನ್ನು ಅದ್ಧೂರಿಯಾಗಿ ಅಚರಣೆ ಮಾಡುವ ಮೂಲಕ ಆ ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಎಲ್ಲರಿಗೂ ಪರಿಚಯಿಸುವ ಕಾರ್ಯವನ್ನು ರಾಜ್ಯದ 29 ಜಿಲ್ಲೆಗಳಲ್ಲಿ ಮಾಡಲಾಗುತ್ತಲಿದೆ. ಆದರೆ ಜಿಲ್ಲೆಯ ವಿಷಯಕ್ಕೆ ಬಂದರೆ ಅದು ಕೇವಲ ಶೂನ್ಯವಾಗಿದೆ. ಕಳೆದ ಮೂರು ವರ್ಷಗಳಿಂದ ಈ ಕುರಿತು ಗಮನ ಹರಿಸದಿರುವುದು ವಿಷಾದನೀಯ ಎಂದರು.ಈ ಹಿಂದೆ ಈ ಭಾಗದ ಕನ್ನಡಪರ ಸಂಘಟನೆಗಳ ಹೋರಾಟ ಮಾಡಿ, ಉತ್ಸವಕ್ಕೆ ಆಗ್ರಹಿಸಿದ್ದರೂ, ಜಿಲ್ಲಾಡಳಿತ ಮಾತ್ರ ಗಾಢನಿದ್ರೆಗೆ ಜಾರಿದಂತೆ ಕಾಣುತ್ತಿದೆ. ಕೂಡಲೇ ಜಿಲ್ಲಾಡಳಿತ ಗಮನ ಹರಿಸಿ ಜಿಲ್ಲಾ ಉತ್ಸವಕ್ಕೆ ಸಿದ್ಧತೆ ನಡೆಸಿ ಅದಕ್ಕಾಗಿ ಪೂರ್ವಭಾವಿ ಸಭೆ ಕರೆದು ಸಭೆಯಲ್ಲಿ ಜಿಲ್ಲೆಯ ಸಾಹಿತಿಗಳು ಸಾಂಸ್ಕೃತಿಕವಾಗಿ ಗುರುತಿಸಿಕೊಂಡ ಪ್ರಮುಖರು ಸಾಹಿತಿಗಳು ಚಿಂತಕರನ್ನು ಒಳಗೊಂಡ ಸಮಿತಿ ರಚಿಸಿ ಯಾದಗಿರಿ ಜಿಲ್ಲಾ ಉತ್ಸವಕ್ಕೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.ಒಂದು ವೇಳೆ ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸದೆ ಇದ್ದಲ್ಲಿ ಜಿಲ್ಲೆಯಲ್ಲಿನ ಎಲ್ಲಾ ಸಾಹಿತಿಗಳು, ಚಿಂತಕರ ಜೊತೆಗೂಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಭ್ರೂಣ ಹತ್ಯೆ: ಅರಿವು ಅಗತ್ಯ
ಯಾದಗಿರಿ:ಹೆಣ್ಣು ಭ್ರೂಣ ಹತ್ಯೆಯಂತಹ ಸಾಮಾಜಿಕ ಪಿಡುಗು ಹೋಗಲಾಡಿಸುವ ಬಗ್ಗೆ ಪ್ರಜ್ಞಾವಂತ ನಾಗರಿಕರು ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದು ಮಂಗಳೂರ ಶಾಂತಿ ಪ್ರಕಾಶನ ಸಂಸ್ಥೆಯ ಸದಸ್ಯರು ಹಾಗೂ ಚಾರ್ಟಡರ್ ಅಕೌಂಟೆಂಟ್ರಾದ ಶ್ರೀ ಮಹ್ಮದ್ ಇಸ್ಹಾಖ್ ಹೇಳಿದರು.ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಿನ್ನೆ ಶಾಂತಿ ಪ್ರಕಾಶನ ಸಂಸ್ಥೆಯ ರಜತ ಮಹೋತ್ಸವ ಅಂಗವಾಗಿ ಸಾಹಿತ್ಯ ಮತ್ತು ಸಾಮಾಜಿಕ ಪರಿವರ್ತನೆ ಕುರಿತ ವಿಚಾರ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪವಿತ್ರ ಕುರ್ಆನ್ನಲ್ಲಿ ಸಮಾಜ ಸುಧಾರಣೆಗೆ ಹಲವಾರು ಸಂದೇಶಗಳು ಮತ್ತು ನಿರ್ದೇಶನಗಳು ಸಮಾಜಕ್ಕೆ ದಾರಿ ದೀಪಗಳಾಗಿವೆ ಎಂದು ಹೇಳಿದರು.ಸಮಾಜದಲ್ಲಿಂದು ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವುದು ವಿಷಾದಕರ. ಈ ಕುರಿತು ಪ್ರಜ್ಞಾವಂತ ನಾಗರಿಕರು ಅರಿವು ಮೂಡಿಸಲು ಕರೆ ನೀಡಿದರು. ಸಿದ್ದಪ್ಪ ಹೋಟ್ಟಿ, ಪ್ರಾಂಶುಪಾಲರಾದ ರಘುನಾಥರೆಡ್ಡಿ, ಕಸಾಪ ಮಾಜಿ ಅಧ್ಯಕ್ಷ ಅಯ್ಯಣ ಹುಂಡೇಕಾರ್, ನಗರಸಭೆ ಮಾಜಿ ಅಧ್ಯಕ್ಷೆ ನಾಗರತ್ನ ಅನಪೂರ, ಉರ್ದು ಕವಿ ಸಾಬಿರ್, ಸಾಹಿತಿ ಭೀಮರಾಯ ಲಿಂಗೇರಿ, ಮಹಮ್ಮದ್ ಇದ್ದರು.
ಕ್ರೀಡೆಗಳಿಂದ ಯುವಕರಲ್ಲಿ ಸಾಮರಸ್ಯ: ಸುರೇಶ್ ಸಜ್ಜನ್
ಗುರುಮಠಕಲ್:ಸ್ಪರ್ಧಾತ್ಮಕ ಯುಗದಲ್ಲಿ ಯುವಕರು ದೈಹಿಕ ಹಾಗೂ ಮಾನಸಿಕವಾಗಿ ಸದೃಢತೆ ಹೊಂದಲು ಕ್ರೀಡೆಗಳು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಕ್ರೀಡೆಗಳಲ್ಲಿ ಯುವಕರು ಪಾಲ್ಗೊಳ್ಳುವುದರಿಂದ ಅವರಲ್ಲಿ ಸಾಮರಸ್ಯ ಮೂಡುತ್ತದೆ ಎಂದು ಜಿ.ಪಂ. ಮಾಜಿ ಉಪಾಧ್ಯಕ್ಷ ಸುರೇಶ ಸಜ್ಜನ್ ಹೇಳಿದರು. ಶನಿವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವೇಗವಾಹಿನಿ ದಿನಪತ್ರಿಕೆ ಬಳಗ ಕ್ರಿಸ್ಮಸ್ ನಿಮಿತ್ತ ಹಮ್ಮಿಕೊಂಡಿದ್ದ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟಿಸಿ ಮಾತನಾಡಿದರು. ಸಾನಿಧ್ಯ ವಹಿಸಿ ಮಾತನಾಡಿದ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಯ ಫಾದರ್ ಜೋಷಿ ಪುತ್ತೂರ, ವೇಗವಾಹಿನಿ ದಿನಪತ್ರಿಕೆ ಬಳಗದವರು ಜಿಲ್ಲೆಯ ಜನರ ಸಮಸ್ಯೆಗಳ ಮೇಲೆ ತಮ್ಮ ಪತ್ರಿಕೆ ಮೂಲಕ ಬೆಳಕು ಚೆಲ್ಲುವದರ ಜೊತೆಗೆ ಸಾಮಾಜಿಕ ಹಾಗೂ ಕ್ರೀಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕ್ರೀಡಾಪಟುಗಳ ಪ್ರತಿಭೆ ಗುರುತಿಸುತ್ತಿದೆ ಎಂದರು. ಅಧ್ಯಕ್ಷತೆಯನ್ನು ಪತ್ರಿಕೆ ವ್ಯವಸ್ಥಾಪಕ ಸುರೇಶಕುಮಾರ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಶ್ರೀನಿವಾಸರೆಡ್ಡಿ ಪಾಟೀಲ್ ಚನ್ನೂರ, ನಗರಸಭೆ ಪೌರಾಯುಕ್ತ ಖಾಜಾ ಮೈನೋದ್ದೀನ್, ಜಿಲ್ಲಾ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಸಿ.ಎಸ್. ಮಾಲಿಪಾಟೀಲ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಜೀವ ಕುಲಕರ್ಣಿ ಉಪಾಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ ಹತ್ತಿಕುಣಿ, ಅನೀಲ ದೇಶಪಾಂಡೆ, ರಾಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

