ಬೀದಿಗಿಳಿದ ತೊಗರಿ ರೈತರು...
ಗುಲ್ಬರ್ಗ/ಆಳಂದ/ಚಿತ್ತಾಪುರ: ತೊಗರಿ ಪ್ರತಿ ಕ್ವಿಂಟಲ್ಗೆ 6,450 ಬೆಂಬಲ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ತಹಸೀಲ್ದಾರ್ ಕಚೇರಿಗಳ ಎದುರು ಪ್ರತಿಭಟನೆ ನಡೆಸಿದರು.
ಆಳಂದ: ತೊಗರಿಗೆ ಬೆಂಬಲ ಬೆಲೆ ನೀಡಬೇಕೆಂದು ಪಟ್ಟಣದ ಬಸ್ ನಿಲ್ದಾಣ ಮುಂದೆ ತಾಲೂಕು ತೊಗರಿ ಬೆಳೆಗಾರರ ಸಂಘ, ಜಿಲ್ಲಾ ಕೃಷಿಕ ಸಮಾಜ, ಹೈದ್ರಾಬಾದ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್, ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಅಖಿಲ ಭಾರತ ಕಿಸಾನ್ ಸಭಾ ಜಂಟಿ ಆಶ್ರಯದಲ್ಲಿ ರಸ್ತೆ ತಡೆ ಚಳವಳಿ ನಡೆಸಿದರು.
6,450 ನಿಗದಿ ಮಾಡಿ: ಕೇಂದ್ರ ಸರ್ಕಾರ ನಿಗದಿಪಡಿಸಿದ ತೊಗರಿಗೆ ಕ್ವಿಂ.ಗೆ 4,300 ಹಾಗೂ ಎಂ.ಎಸ್. ಸ್ವಾಮಿನಾಥನ್ ಶಿಪಾರಸ್ಸಿನಂತೆ 2,150 ಸೇರಿ ಒಟ್ಟು 6,450 ಬೆಲೆ ನೀಡಬ್ಕೆಂದು ಸಾವಯವ ರೈತ ಸಂಘದ ಅಧ್ಯಕ್ಷ ಬಸವರಾಜ ಪವಾಡಶೆಟ್ಟಿ, ಕೆಜೆಪಿ ತಾಲೂಕು ಅಧ್ಯಕ್ಷ ಶಿವುಪುತ್ರಪ್ಪ ಪಾಟೀಲ ಒತ್ತಾಯಿಸಿದರು.
ರಾಜ್ಯದ ತೊಗರಿ ಕಣಜ ಖ್ಯಾತಿಯ ಗುಲ್ಬರ್ಗ ಜಿಲ್ಲೆಯಲ್ಲಿ ಅತೀ ಹೆಚ್ಚು ರೈತರು ತೊಗರಿಯನ್ನೇ ತಮ್ಮ ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ಮಾಡಿಕೊಂಡಿದ್ದು, ತೊಗರಿ ಮಂಡಳಿಗೆ 100 ಕೋಟಿ ಒದಗಿಸಬೇಕು. ಎಂ.ಎಸ್. ಸ್ವಾಮಿನಾಥನ್ ವರದಿಯಂತೆ ತೊಗರಿ, ಕಡಲೆ, ಉದ್ದು, ಹೆಸರು ಈ ಬೆಳೆಗೂ ಪ್ರತಿ ಕ್ವಿಂಟಲ್ಗೆ 6,450 ನಿಗದಿ ಪಡಿಸಬೇಕೆಂದು ಆಗ್ರಹಿಸಿದರು.
ರೈತರ ನಿರ್ಲಕ್ಷಿಸಿದರೆ ಉಳಿಗಾಲವಿಲ್ಲ: ರೈತರನ್ನು ನಿರ್ಲಕ್ಷಿಸುವ ಸರ್ಕಾರಕ್ಕೆ ಉಳಿಗಾಲವಿಲ್ಲ. ಕೂಡಲೇ ರೈತರ ಸಮಸ್ಯೆಗಳಿಗೆ ಮತ್ತು ಅವರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸವನ್ನು ಸಿಎಂ ಸಿದ್ದರಾಮಯ್ಯನವರ ಸರ್ಕಾರ ಕ್ರಮ ಕೈಗೊಳ್ಳಬೇಕು. ತೊಗರಿ ಇತರೆ ಬೇಳೆ ಕಾಳುಗಳನ್ನು ವಿದೇಶದಿಂದ ತಡೆ ರಹಿತವಾಗಿ ಆಮದಾಗುವುದನ್ನು ತಡೆಯಲು ಸುಂಕ ಶೇ.30 ರಷ್ಟು ಹಾಕಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ತೊಗರಿ ಹೂ ಉದುರಿ ಬೆಳೆ ನಾಶವಾಗಿದೆ. ಸರ್ವೆ ನಡೆಸಿ ಬೆಳೆ ಹಾನಿ ಪರಿಹಾರ, ಬೆಳೆ ವಿಮೆ ಮಂಜೂರು ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಸ್ಥಳಕ್ಕೆ ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ ಅವರು ಆಗಮಿಸಿ ಮನವಿ ಸ್ವೀಕರಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ಮುಖಂಡ ವೈಜನಾಥ ಬುರಾಣಪುರೆ, ಕಲ್ಯಾಣಿ ಅವುಟೆ, ಬಿಜೆಪಿಯ ವಿಜಯಕುಮಾರ್ ಕೋರೆ, ಗೋಪಿನಾಥ ಸಿಂಗೆ ತೀರ್ಥ, ದಲಿತ ಸೇನೆ ರಾಜ್ಯ ಅಧ್ಯಕ್ಷ ಬಾಬುರಾವ ಅರುಣೋದಯ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ರಸ್ತೆ ತಡೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆಯಾಯಿತು.
ಚಿತ್ತಾಪುರದಲ್ಲಿ..: ಇಲ್ಲಿಯ ತೊಗರಿ ಬೆಳೆ ಹೋರಾಟಗಾರರು ತೊಗರಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು. ತೊಗರಿ ಮಂಡಳಿ ಬಲಪಡಿಸಿ 100 ಕೋಟಿ ಅನುದಾನ ಒದಗಿಸಬೇಕು. ಮಂಡಳಿಯನ್ನು ಕೃಷಿ ಇಲಾಖೆಯಿಂದ ಮಾರುಕಟ್ಟೆ ಇಲಾಖೆಗೆ ವರ್ಗಾಯಿಸಬೇಕು ಎಂಬ ಬೇಡಿಕೆಗಳ ಈಡೇರಿಗೆಗಾಗಿ ಒತ್ತಾಯಿಸಿ ಲಾಜಿಂಗ್ ಕ್ರಾಸ್ ಬಳಿ ಸೋಮವಾರ ರಸ್ತೆ ತಡೆ ನಡೆಸಿದರು.
ರಸ್ತೆ ತಡೆ ನೇತೃತ್ವವನ್ನು ಹೋರಾಟ ಸಮಿತಿ ಸಂಚಾಲಕ ಮಂಜುಗೌಡ ಪೊಲೀಸ್ ಪಾಟೀಲ್ ಹಾಗೂ ಸಿದ್ರಾಮಪ್ಪ ರೇಶ್ಮಿ ವಹಿಸಿದ್ದರು. ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಮಲ್ಲೇಶ ತಂಗಾ ಅವರು ಸ್ಥಳಕ್ಕೆ ಬಂದು ಸ್ವೀಕರಿಸಿದರು. ಒಂದು ತಾಸುಗಳ ಕಾಲ ರಸ್ತೆ ತಡೆ ನಡೆಸಿದರು. ರಸ್ತೆ ತಡೆಯಿಂದಾಗಿ ವಾಹನಗಳ ಸ್ಥಗಿತಗೊಂಡಿದ್ದವು. ಪ್ರಯಾಣಿಕರು ಪರದಾಡಿದರು.
ರಸ್ತೆ ತಡೆಯಲ್ಲಿ ರೈತ ಮುಖಂಡರಾದ ಅಬ್ದುಲ್ ಸಲಿಂ ಡಕಾರೆ, ರವಿಂದ್ರ ಸಜ್ಜನಶೆಟ್ಟಿ, ಮಲ್ಲಿಕಾರ್ಜುನ ಎಮ್ಮೆನೋರ್, ಅಂತಯ್ಯ ಕಲಾಲ್, ರಮೇಶ ಬೋಮ್ಮನಹಳ್ಳಿ, ವೀರಣ್ಣ ಸುಲ್ತಾನಪುರ, ಮಹಾದೇವಪ್ಪ ಪಾಲಪ, ಅಂಬಾದಾಸ ತುರೆ, ಸೋಮಶೇಖರ ಅಜಲಾಪುರ, ಶರಣಗೌಡ ಹೊನ್ನಾಳ, ನಾಗರಾಜ ರೇಷ್ಮೀ, ನಾಗರಾಜ ಹೂಗಾರ, ಬಾಲಾಜಿ ಬುರುಬುರೆ, ಅನೀಲ್ ವಡ್ಡಡಗಿ, ವೆಂಕಣಗೌಡ, ಸತ್ಯನಾರಾಯಣ, ರಾಜು ದಹಿಂಡೆ, ಗಿರೀಸ ಭಜಂತ್ರಿ, ಸತೀಶ ಕಾಂತಾ, ಬಸವರಾಜ ಬಟಗೇರಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
ಚಿಂಚೋಳಿಯಲ್ಲಿ...: ರೈತರ ತೊಗರಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ತಾಲೂಕಿನ ಕೊಳ್ಳೂರ, ಚಿಮ್ಮಾಇದಲಾಯಿ, ಕೋಡ್ಲಿ ಹಾಗೂ ಚಿಂಚೋಳಿ ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಚಂದ್ರಂಪಳ್ಳಿ ನೀರಾವರಿ ಯೋಜನೆ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಗೋಪಾಲರಾವ ಕಟ್ಟಿಮನಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಭೂಶೆಟ್ಟಿ, ಅಖಿಲ ಭಾರತ ಕಿಸಾನ್ ಸಭಾ ತಾಲೂಕಾಧ್ಯಕ್ಷ ಶಿವಪ್ಪ ಪೂಜಾರಿ ಮುಂತಾದವರು ಒಟ್ಟು 18 ಬೇಡಿಕೆಗಳ ಮನವಿ ಪತ್ರವನ್ನು ತಹಸೀಲ್ದಾರ್ ಮೋಹನ ಜೋಶಿ ಅವರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಾಫರಖಾನ್ ಮಿರಿಯಾಣ, ಬಸವರಾಜ ವಾಡಿ, ಹಣಮಂತಪ್ಪ ಪೂಜಾರಿ, ಶಿವಾನಂದ ರಮೆಣಿ, ನಾಗೇಂದ್ರಪ್ಪ ಸರಡಗಿ, ಸುರೇಶ ಬಳಂಕರ್, ಪ್ರಕಾಶರೆಡ್ಡಿ ಮುಂತಾದವರರು ಭಾಗವಹಿಸಿದರು. ಚಿಂಚೋಳಿ ಪೊಲೀಸರು ಸೂಕ್ತ ಪೊಲೀಸ್ ವ್ಯವಸ್ಥೆಗೊಳಿಸಿದರು.
ಒಂದು ತಾಸಿನವರೆಗೆ ನಡೆದ ರಸ್ತೆ ತಡೆಯಿಂದಾಗಿ ವಾಹನಗಳ ಸಂಚಾರಕ್ಕೆ ಭಾರಿ ಅಡ್ಡಿಯಾಯಿತು ಹಾಗೂ ಪ್ರಯಾಣಿಕರು ತೊಂದರೆ ಪಡುವಂತಾಯಿತು. ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು.
ಸಾಲ ಬಾಧೆ; ರೈತ ಆತ್ಮಹತ್ಯೆ
ಗುಲ್ಬರ್ಗ: ಸಾಲ ಬಾಧೆ ತಾಳದೆ ರೈತನೊಬ್ಬ ನೇಣಿಗೆ ಶರಣಾದ ಘಟನೆ ಗುಲ್ಬರ್ಗ ತಾಲೂಕಿನ ಪಾಣೆಗಾಂವ ಗ್ರಾಮದಲ್ಲಿ ನಡೆದಿದೆ. ಸಂಜುಕುಮಾರ್ ರಾಠೋಡ(26) ಆತ್ಮಹತ್ಯೆ ಮಾಡಿಕೊಂಡ ರೈತ.
ಗುಲ್ಬರ್ಗದ ವಿಜಯ ಬ್ಯಾಂಕ್ನಲ್ಲಿ 1.50 ಲಕ್ಷ ಸಾಲ ಪಡೆದು 6 ಎಕರೆ ಪ್ರದೇಶದಲ್ಲಿ ತೊಗರಿ ಮತ್ತು ಸಜ್ಜೆ ಬೆಳೆದಿದ್ದ. ಆದರೆ, ಸರಿಯಾಗಿ ಫಸಲು ಬಾರದ ಕಾರಣ ಸಾಲ ತೀರಿಸುವುದಕ್ಕೆ ಹೆದರಿ ಸೋಮವಾರ ಬೆಳಗಿನ ಜಾವ ತಮ್ಮ ಹೊಲದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಜಿಪಂ ಉಪಾಧ್ಯಕ್ಷ ಅನೀತ ಪವನಕುಮಾರ್ ವಳಕೇರಿ, ಪವನಕುಮಾರ್ ವಳಕೇರಿ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

