ಜಿಎಸ್ಎಸ್ ಗಲಿಕೆ: ಕಸಾಪ ಕಂಬನಿ
ಯಾದಗಿರಿ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಅಕಾಲಿಕ ನಿಧನಕ್ಕೆ ಜಿಲ್ಲಾ ಕಸಾಪ ತೀವ್ರ ಕಂಬನಿ ಮಿಡಿದಿದೆ. ಇಂದು ಕಾರ್ಯಲಯದಲ್ಲಿ ಜರುಗಿದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಸುಭಾಷ್ಚಂದ್ರ ಕೌಲಗಿ, ಕವಿಗಳು, ವಿಮರ್ಶಕರು, ಸಾಹಿತಿಗಳು, ಸಂಶೋಧಕರು ಆಗಿದ್ದ ಡಾ. ಜಿ.ಎಸ್. ಶಿವರುದ್ರಪ್ಪ ಅಗಲಿಕೆಯಿಂದ ಕನ್ನಡ ಸಾಹಿತ್ಯಕ್ಕೆ ಅಗಾಧ ನಷ್ಟವಾಗಿದೆ. ಯಾವುದೇ ಸಿದ್ಧಾಂತಗಳಿಗೆ ಅಂಟಿಕೊಳ್ಳದೇ ಸಮನ್ವಯ ಶೀಲ ಕವಿಯಾಗಿ ಜನಪರ ಮತ್ತು ಜೀವಪರವಾದ ಸಾಹಿತ್ಯ ರಚನೆಯಿಂದ ಜಿಎಸ್ಎಸ್ ಉತ್ತಮ ಸಾಹಿತಿ ಎನಿಸಿಕೊಂಡಿದ್ದರು. ಅಪಾರವಾದ ಶಿಷ್ಯ ಬಳಗವನ್ನು ಹೊಂದಿದ್ದ ಅವರು ತಮ್ಮ ಶಿಷ್ಯವೃಂದವನ್ನು ಮಾನವೀಯ ನೆಲೆಗಟ್ಟಿನಲ್ಲಿ ಕಟ್ಟಿ ಬೆಳೆಸಿದ್ದರು. ಗಂಗೆಯ ಗಿರಿಶಿಖರಗಳಲ್ಲಿ, ಸೌಂದರ್ಯ ಮಿಮಾಂಸೆ, ಕಾವ್ಯರ್ಥ ಚಿಂತನ, ಕೃತಿಗಳು ಸಾಹಿತ್ಯ ಲೋಕದಲ್ಲಿ ಅವರ ಹೆಸರನ್ನು ಚಿರಂತನಗೊಳಿಸಿವೆ. ಸಾಮಗಾನ ಕವನ ಸಂಕಲನದ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಜಿಎಸ್ಎಸ್ ಆಧುನಿಕ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸುವಲ್ಲಿ ಬಹುವಾಗಿ ಶ್ರಮಿಸಿದ್ದಾರೆಂದು ಕೊಂಡಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಪ್ರಕಾಶ ಅಂಗಡಿ, ಬಸವರಾಜ ಮಾಟ್ನಳ್ಳಿ, ಅಯ್ಯಣ್ಣ ಹುಂಡೇಕಾರ, ವಿ.ಸಿ. ರೆಡ್ಡಿ ಸೇರಿದಂತೆ ಅನೇಕರು ಇದ್ದರು.
ಶಿವರುದ್ರಪ್ಪ ನಿಧನಕ್ಕೆ ಗಣ್ಯರ ಶೋಕ
ಗುಲ್ಬರ್ಗ: ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಂಸದ ಧರ್ಮಸಿಂಗ್, ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್, ವಿಧಾನಪರಿಷತ್ ಮಾಜಿ ಸದಸ್ಯ ಶಶೀಲ್ ಜಿ. ನಮೋಶಿ, ಮಾಜಿ ಸಚಿವ ವೈಜನಾಥ ಪಾಟೀಲ್, ಜಿಲ್ಲಾ ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು, ಗೌರವ ಕಾರ್ಯದರ್ಶಿಗಳಾದ ಸುರೇಶ ಬಡಿಗೇರ, ಬಿ.ಎಚ್. ನಿರಗುಡಿ, ಗೌರವ ಕೋಶಾಧ್ಯಕ್ಷ ಡಾ. ರಾಜೇಂದ್ರ ಯರನಾಳೆ, ವಚನ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ, ಪ್ರಮುಖರಾದ ಬಿ.ಎಂ. ಪಾಟೀಲ್ ಕಲ್ಲೂರ್, ಶ್ರೀಕಾಂತಗೌಡ ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರು ಸಂತಾಪ ಸೂಚಿಸಿದ್ದಾರೆ.
ಜಲಾಭಿಷೇಕ ಮಹೋತ್ಸವ
ಗುಲ್ಬರ್ಗ: ನಗರದ ಜಗತ್ ಬಡಾವಣೆಯ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಮೈಲಾರಲಿಂಗೇಶ್ವರ ವಾರ್ಷಿಕ ಜಲಾಭಿಷೇಕ ಮಹೋತ್ಸವ ಸಂಪನ್ನಗೊಂಡಿತ್ತು. ಮೈಲಾರಲಿಂಗೇಶ್ವರ ಜಲಾಭಿಷೇಕ ಕುಂಭಗಳ ಮೆರವಣಿಗೆ ದೇವಸ್ಥಾನದಿಂದ ಆರಂಭಗೊಂಡು ಸಕಲ ವಾದ್ಯ, ವೈಭವಗಳೊಂದಿಗೆ ಬಡಾವಣೆಯ ಮೂಲಕ ಗಾಜಿಪುರದ ದಾಸೋಹ ಮಠಕ್ಕೆ ಜಲ ಪೂಜೆಗೆ ಹೋಗಿ ಮತ್ತೆ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಬರಲಾಯಿತು. ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ರೇವಣಸಿದ್ದ ಶ್ರೀ, ಬಸವರಾಜ ಖಾನಾಪುರ, ಜಗನ್ನಾಥ ಶೇಗಜಿ, ಹಣಮಂತ ಲೆಂಗಟಿ, ಶಿವಶರಣಪ್ಪ ಗೋಗಿ, ದಯಾನಂದ, ಸಿದ್ರಾಮಪ್ಪ ವಾಡೇದ, ಮಾಜಿ ಶಾಸಕಿ ಅರುಣಾ ಪಾಟೀಲ್ ರೇವೂರ, ಯಶ್ವಂತರಾಯ ಕಾಳೆ ಇತರರು ಇದ್ದರು.
1,61,280 ಲೀ. ಮದ್ಯ ವಶ
ಗುಲ್ಬರ್ಗ: ಅಬಕಾರಿ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ಸೇಡಂ ತಾಲೂಕಿನ ನಾಚವಾರ ಗ್ರಾಮದ ಸರ್ಕಾರಿ ಶಾಲೆ ಎದುರು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 1,61,280 ಲೀಟರ್ ಸ್ವದೇಶಿ ಮದ್ಯ ಮತ್ತು 1,17,480 ಲೀಟರ್ ಬೀರ್ ಹಾಗೂ ಒಂದು ಟೋಲೆರೋ ಮ್ಯಾಕ್ಸ್ ವಾಹನ ಜಪ್ತಿ ಮಾಡಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಬಕಾರಿ ಜಂಟಿ ಆಯುಕ್ತ ಎಂ. ಪ್ರಭುಸ್ವಾಮಿ, ಎಫ್.ಎಚ್. ಚಲುವಾದಿ ಆದೇಶದ ಮೇರೆಗೆ ಚಿತ್ತಾಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಮೈನುದ್ದೀನ್, ಜಾಫರಮಿಯ್ಯಾ, ಲಕ್ಷ್ಮಣ ರಾಠೋಡ, ಬಸವರಾಜ ಮಾಲಗತ್ತಿ, ಪೀರಪ್ಪ, ಸಂತೋಷ ಮಿಣಜಗಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಯಾದಗಿರಿ ಜಿಲ್ಲೆಯ ಗುರುಮಠಕಲ್ನ ಅನಂತರೆಡ್ಡಿ ತಂದೆ ಬಸರೆಡ್ಡಿ ಮತ್ತು ಸೈಯದ್ ಮುಸ್ತಾಕ್ ತಂದೆ ಸೈಯದ್ ನೂರುಲ್ಲಾ ಹಸನ್ ಎಂಬುವರನ್ನು ಬಂಧಿಸಿ ಸ್ವದೇಶಿ ಮದ್ಯ ಹಾಗೂ ವಾಹನ ಜಪ್ತಿ ಒಟ್ಟು 5 ಲಕ್ಷ ಮೌಲ್ಯದ ವಸ್ತುಗಳನ್ನು ವಶ ಮಾಡಿಕೊಂಡಿದ್ದಾರೆ.
ಬೊಲೆರೋ ಜೀಪ್ ಪಲ್ಟಿ
ಗುಲ್ಬರ್ಗ: ಹುಮನಾಬಾದ್ ಗುಲ್ಬರ್ಗ ರಾಷ್ಟ್ರೀಯ ಹೆದ್ದಾರಿ 218ರ ಭೀಮಾಶಂಕರ ಚಿಕ್ಕಗೌಡ ಇವರ ಹೊಲದ ಬಳಿ ಬುಲೇರೋ ಜೀಪೊಂದು ಪಲ್ಟಿಯಾಗಿದ್ದು, ಚಾಲಕ ಗಾಯಗೊಂಡ ಘಟನೆ ನಡೆದಿದೆ. ಚಾಲಕ ಮರದಸಾಬ್ನ ನಿರ್ಲಕ್ಷ್ಯದಿಂದ ಬಿದ್ದಿದೆ. ಈ ಕುರಿತು ಕಮಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಗಳ್ಳತನ
ಗುಲ್ಬರ್ಗ: ಸರಗಳ್ಳನೊಬ್ಬ 1,35 ಲಕ್ಷ ಮೌಲ್ಯದ ಮಹಿಳೆಯ ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾದ ಘಟನೆ ಭಾನುವಾರ ಮಧ್ಯಾಹ್ನ ತಿರಂದಾಜ ಟಾಕೀಜ್ ಬಿಗ್ ಬಜಾರ್ ಹಿಂದೆ ನಡೆದಿದೆ. ಶಹಾಬಜಾರ್ನ ಕಬಾಡೆಗಲ್ಲಿಯ ನಿವಾಸಿ ಅನ್ನಪೂರ್ಣ ದೀಪಕ ತಿವಾರಿ ಎಂಬುವರು ತಮ್ಮ ಬಂಧುಗಳೊಂದಿಗೆ ಗೃಹಪ್ರವೇಶಕ್ಕಾಗಿ ಹೋರಟಿದ್ದಾಗ ಇಬ್ಬರು ಸರಗಳ್ಳರು ದ್ವಿಚಕ್ರ ವಾಹನದ ಮೇಲೆ ವೇಗವಾಗಿ ಬಂದು ಅನ್ನಪೂರ್ಣರ ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿ ನಾಪತ್ತೆ
ಗುಲ್ಬರ್ಗ: ನಗರದ ಕಾಲೇಜುಮೊಂದಕ್ಕೆ ಹೋಗಿ ಪರೀಕ್ಷೆ ಶುಲ್ಕ ಕಟ್ಟಿ ಬರುವುದಾಗಿ ಹೋದ ವಿದ್ಯಾರ್ಥಿನಿ ಮರಳಿ ಬಾರದೆ ನಾಪತ್ತೆಯಾದ ಘಟನೆ ಶನಿವಾರ ನಡೆದಿದೆ.
ಮಹಾರಾಷ್ಟ್ರ ಪೂನಾದ ಬಲವಂತನಗರದ ಮೂಲದ ಅಫಜಲ್ಪುರ ತಾಲೂಕಿನ ಸಾಗನೂರ ಗ್ರಾಮದ ಪ್ರೇಮಲತಾ ನಾಪತ್ತೆಯಾದ ವಿದ್ಯಾರ್ಥಿನಿ. ಆಕೆಯ ಸಹೋದರಿ ದಾನಮ್ಮ ಗಂಡ ಶ್ರೀಮಂತ ಓತಿಹಾಳ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ದಾನಮ್ಮ ತನ್ನ ಮಗುವಿಗೆ ಆಸ್ಪತ್ರೆಗೆ ತೋರಿಸಲು ತನ್ನ ತಂಗಿಯಾದ, ಕಲ್ಪನಾ ಮತ್ತು ಪ್ರೇಮಲತಾಳೊಂದಿಗೆ ಗುಲ್ಬರ್ಗ ಬಸ್ನಿಲ್ದಾಣಕ್ಕೆ ಬಂದಾಗ ಪ್ರೇಮಲತಾ ಪರೀಕ್ಷೆ ಶುಲ್ಕ ಕಟ್ಟುವುದಿದೆ ಎಂದು ಒಬ್ಬಳೆ ಹೋಗಿ ಮರಳಿ ಬಂದಿಲ್ಲ. ಈ ಕುರಿತು ಪ್ರೇಮಲತಾಳ ಗೆಳತಿಯರನ್ನು ವಿಚಾರಿಸಿದರೂ ಎಲ್ಲಿಯೂ ಪತ್ತೆಯಾಗಿಲ್ಲ. ಪಿಂಕ್ ಮತ್ತು ಗ್ರೀನ್ ಕಲರ್ ಬಟ್ಟೆ ಧರಿಸಿದ್ದು, ಆಕೆಯನ್ನು ಹುಡುಕಿಕೊಡಿ ಎಂದು ಠಾಣೆಯಲ್ಲಿ ನೀಡಿದ ದೂರಿನಲ್ಲಿ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

