ಮರಳು ಲೂಟಿಯಲ್ಲಿ ಪ್ರಿಯಾಂಕ್ ಭಾಗಿ
ಕನ್ನಡಪ್ರಭ ವಾರ್ತೆ ಚಿತ್ತಾಪುರ ಡಿ.25
ತಾಲೂಕಿನ ಕಾಗಿಣಾ ನದಿ ತೀರದಲ್ಲಿ ರಾತ್ರೋರಾತ್ರಿ ಅಕ್ರಮ ಮರಳು ಲೂಟಿ ನಡೆಯುತ್ತಿದ್ದು, ಇದರಲ್ಲಿ ಕೆಲ ಕಾಂಗ್ರೆಸ್ ಮುಖಂಡರು ನೇರವಾಗಿ ಭಾಗಿಯಾಗಿದ್ದಾರೆ. ಇವರಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಅವರೂ ಪಾಲುದಾರರು ಎಂದು ಮಾಜಿ ಶಾಸಕ ವಾಲ್ಮೀಕಿ ನಾಯಕ ನೇರವಾಗಿ ಆರೋಪಿಸಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಬಾಗೋಡಿ, ಮುತ್ತಗಿ, ಕದ್ದರಗಿಯ ಕಾಗಿಣಾ ನದಿ, ಕುಂದನೂರನ ಭೀಮಾ ನದಿಯಲ್ಲಿ ರಾತ್ರಿ ಹೊತ್ತು ಹಿಟಾಚಿ ಬಳಸಿ ಮರಳನ್ನು ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಬ್ಲಾಕ್ಗಳಲ್ಲಿ ಮರಳು ಮಾರುವ ಮುಖಂಡರ ಮೇಲೇಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿ, ಇವರಿಗೆ ಶಾಸಕರ ಬೆಂಬಲ ಇದೆ ಎಂದರು.
ಅಭಿವೃದ್ಧಿ ನಗಣ್ಯ: ಪ್ರಿಯಾಂಕ್ ಖರ್ಗೆಯವರು ಅಧಿಕಾರಕ್ಕೆ ಬಂದ ನಂತರ ಯಾವುದೇ ಅಭಿವೃದ್ಧಿಗೆ ಹಣ ತರದೆ ತಮ್ಮ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಸಹ ಸ್ಥಗಿತಗೊಂಡಿವೆ ಎಂದರು.
ತಮ್ಮ ಅವಧಿಯಲ್ಲಿ ನಮ್ಮ ರಸ್ತೆ ನಮ್ಮ ಗ್ರಾಮ ಯೋಜನೆಯಲ್ಲಿ ಪ್ರಾರಂಭವಾಗಿದ್ದ ಕೊಲ್ಲೂರ ಕುಲಕುಂದಿ ನಬಾರ್ಡ್ ರಸ್ತೆ, ಮಲಘಾಣದ 3 ಕಿಮೀ ರಸ್ತೆ ಡಾಂಬರೀಕರಣ, ಕೊಲ್ಲೂರ ಕ್ರಾಸ್ನಿಂದ ಬನ್ನಟ್ಟಿಯವರೆಗೆ 3 ಕೋಟಿ ವೆಚ್ಚದ 7 ಕಿಮೀ ರಸ್ತೆ, ನಾಲವಾರದಿಂದ ಸೂಗೂರ(ಎನ್) ವರೆಗಿನ 3 ಕಿಮೀ ರಸ್ತೆ, ನಾಲವಾರದಿಂದ ಕುಲಕುಂದಿವರೆಗಿನ ರಸ್ತೆಗಳನ್ನು ಪ್ರಾರಂಭಿಸಲಾಗಿತ್ತು. ಆದರೆ, ಈಗ ಕಾಮಗಾರಿ ಸ್ಥಗಿತಗೊಂಡಿದ್ದು, ಈ ಹಣವನ್ನು ಬೇರೆಡೆಗೆ ವರ್ಗಾಯಿಸಲಾಗಿದೆ ಎಂದು ದೂರಿದರು.
ಅರ್ಧಕ್ಕೆ ನಿಂತ ಕಾಮಗಾರಿಗಳು: ಭೂಸೇನಾ ನಿಗಮ ಕೈಗೊಂಡ ರಾವೂರ, ಕೊಲ್ಲೂರ, ಮಾಲಗತ್ತಿಗಳಲ್ಲಿ ಸ್ವರ್ಣ ಗ್ರಾಮ ಯೋಜನೆಯ ಅಡಿಯಲ್ಲಿ ಸಿಸಿ ರಸ್ತೆ, ಚರಂಡಿ, ಸಮುದಾಯ ಭವನಗಳ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಬಂಜಾರ ಅಭಿವೃದ್ಧಿ ನಿಗಮದಿಂದ ತಾಂಡಾಗಳ ಅಭಿವೃದ್ಧಿಗೆ ತಲಾ 10 ಲಕ್ಷ ವೆಚ್ಚದಲ್ಲಿ ವಾಡಿ, ತರಕಸಪೇಟ್, ಭೀಮನಳ್ಳಿ ಜಗಜೀವನರಾಮ ಭವನಕ್ಕೆ ಅಡಿಗಲ್ಲು ಹಾಕಿ ಭೂಮಿ ಪೂಜೆ ಮಾಡಲಾಗಿದೆ. ಚಿತ್ತಾಪುರ, ಬಳವಡಗಿ, ಅಳ್ಳೊಳ್ಳಿಗಳಲ್ಲಿ ಭೂಮಿ ಪೂಜೆ ಬಾಕಿ ಉಳಿದಿತ್ತು ಎಂದು ಹೇಳಿದರು. ಕುಲಕುಂದಿ, ಮಲಕೂಡ, ಡೊಣಗಾವ, ಯರಗಲ್, ದೇವಕೆರಿ ತಾಂಡಾಗಳಲ್ಲಿ ಬ್ರಿಜ್ ಕಂ. ಬ್ಯಾರೇಜ್ ಕಾಮಗಾರಿಗಳು ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದೆ. ಹೆಬ್ಬಾಳದಲ್ಲಿ 4.5 ಕೋಟಿ ವೆಚ್ಚದ ಬ್ರಿಜ್ ಕಂ. ಬ್ಯಾರೇಜ್ ಪೂಜೆ ಮಾಡಿದ್ದು, ಕೆಲಸ ಪ್ರಾರಂಭಿಸಿಲ್ಲ, ನಾಗಾವಿ ಅಭಿವೃದ್ಧಿಗೆ 1 ಕೋಟಿ ಮಂಜೂರಾಗಿದ್ದು, ಬುನಾದಿಯಿಂದ ದೇವಸ್ಥಾನ ಮೇಲಕ್ಕೆದ್ದಿಲ್ಲ ಎಂದು ತಿಳಿಸಿದರು.
ಹಣ ಬಿಡುಗಡೆಯಾದ್ರೂ ಯೋಜನೆ ಸಿದ್ಧಪಡಿಸಿಲ್ಲ: ವಾಡಿ ಪುರಸಭೆ ನೂತನ ಕಟ್ಟಡ ನಿರ್ಮಾಣಕ್ಕೆ 11 ಲಕ್ಷ ವೆಚ್ಚದಲ್ಲಿ ಎಪಿಎಂಸಿಗೆ ಸೇರಿದ 1 ಎಕರೆ ಭೂಮಿ ಖರೀದಿಸಿದ್ದು, ಕಟ್ಟಡಕ್ಕಾಗಿ 80 ಲಕ್ಷ ಮಂಜೂರಾಗಿದೆ, ಈವರೆಗೆ ಕಾಮಗಾರಿ ಪ್ರಾರಂಭಿಸಿಲ್ಲ. ಚಿತ್ತಾಪುರ, ವಾಡಿ ಅಭಿವೃದ್ಧಿಗೆ ತಲಾ 5 ಕೋಟಿ ಮಂಜೂರಾಗಿದ್ದರೂ ಯೋಜನೆ ಸಿದ್ಧಪಡಿಸಿಲ್ಲ ಎಂದರು.
ಹಫ್ತಾ ಪಡೆದಿಲ್ಲ, ಜುಲ್ಮಾನೆ ಹಾಕಿಸಿದ್ದೇನೆ
ಗುಲ್ಬರ್ಗದಿಂದ ವಾಡಿ ರಸ್ತೆ ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸದ ಕಾರಣ ಅವರಿಗೆ ಎರಡು ಬಾರಿ 10 ಲಕ್ಷನಂತೆ 20 ಲಕ್ಷ ಜಲ್ಮಾನೆ ವಿಧಿಸಿದ್ದು, ಗುತ್ತಿಗೆದಾರರಿಗೆ ಕಪ್ಪು ಪಟ್ಟಿಯಲ್ಲಿ ಸೇರಿಸಲು ಆಗ್ರಹಿಸಿ ಸಂಬಂಧಿಸಿದ ಅಧಿಕಾರಿಗಳಿಗೆ, ಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಇಲಾಖೆಯ ಕಡತಗಳನ್ನು ಖರ್ಗೆ ಪರಿಶೀಲನೆ ನಡೆಸಬಹುದು.
ಗುತ್ತಿಗೆದಾರರ ಬಳಿ ಹಪ್ತಾ ಪಡೆದಿದ್ದಾರೆಂಬ ಖರ್ಗೆ ಆರೋಪಕ್ಕೆ ತಿರುಗೇಟು ನೀಡಿದ ಅವರು, ಚಿತ್ತಾಪುರ ವಾಡಿ, ಟೆಂಗಳಿ ಕ್ರಾಸ್ ಚಿತ್ತಾಪುರ ರಸ್ತೆ ಕಾಮಗಾರಿ ಏಕೆ ಸ್ಥಗಿತಗೊಂಡಿದೆ ಎಂಬುದಕ್ಕೆ ಖರ್ಗೆ ಉತ್ತರಿಸಬೇಕೆಂದು ಮಾಜಿ ಶಾಸಕ ವಾಲ್ಮೀಕಿ ನಾಯಕ ಸವಾಲು ಹಾಕಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

