ರೈತರಿಗೆ ಯಂತ್ರ ಉಪಕರಣ ಸೌಲಭ್ಯ
ಯಾದಗಿರಿ: 2013-14ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಆರ್ಕೆವಿವೈ ತೋಟಗಾರಿಕೆಯಲ್ಲಿ ಯಾಂತ್ರೀಕರಣ ಯೋಜನೆಯಡಿ ಸಹಾಯಧನವಿದ್ದು, ಸಾಮಾನ್ಯ ವರ್ಗದ ರೈತರು ಖರೀದಿಸಿದ ಯಂತ್ರೋಪ ಕರಣಗಳಿಗೆ ಶೇ.50ರಷ್ಟು ಸಹಾಯಧನ ಗರಿಷ್ಠ 50000 ವರೆಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ.75 ರಷ್ಟು ಗರಿಷ್ಠ 75000 ಸಹಾಯಧನದ ಸೌಲಭ್ಯವಿರುತ್ತದೆ. ಈ ಸೌಲಭ್ಯ ಪಡೆಯಲು ರೈತರು ತಮ್ಮ ಜಮೀನಿನಲ್ಲಿ ತೋಟಗಾರಿಕೆ ಬೆಳೆಯನ್ನು ಬೆಳೆಯುತ್ತಿರಬೇಕು. ಹೆಚ್ಚಿನ ಮಾಹಿತಿಗೆ ತಾಲೂಕಾ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
ಡಿಇಡಿ ಪೂರಕ ಪರೀಕ್ಷೆ ವೇಳಾಪಟ್ಟಿ
ಯಾದಗಿರಿ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಜಿಲ್ಲಾ ಕೇಂದ್ರದಲ್ಲಿ ಡಿಇಡಿ ಪ್ರಥಮ, ದ್ವಿತೀಯ ಪೂರಕ ಪರೀಕ್ಷೆಗಳು ಜ.3ರಿಂದ 11ರವರೆಗೆ ಜವಾಹರ ಡಿ.ಇಡಿ ಕಾಲೇಜಿನಲ್ಲಿ ನಡೆಯುತ್ತಿದೆ. ಪ್ರಥಮ ಡಿಇಡಿ ಪೂರಕ ಪರೀಕ್ಷೆ ವೇಳಾಪಟ್ಟಿ ಈ ರೀತಿ ಇದೆ. ಜ.3ರಂದು ಶಿಕ್ಷಣದ ಪರಿಕಲ್ಪನಾತ್ಮಕ ಆಧಾರಗಳು. ಜ.6ರಂದು ಆಧುನಿಕ ಶಿಕ್ಷಣದಲ್ಲಿ ಮನೋವಿಜ್ಞಾನ, ಜ.8ರಂದು ಪಠ್ಯಕ್ರಮ ಸಂವಹನಾ ತತ್ವಗಳು, ಜ.10 ರಂದು ವಿಷಯಾಧಾರಿತ ಬೋಧನಾ ಪದ್ಧತಿ, ಕನ್ನಡ, ಹಿಂದಿ, ಉರ್ದು, ಮರಾಠಿ, ತಮಿಳು, ತೆಲಗು ಪರೀಕ್ಷೆಗಳು ಆಯಾ ದಿನಾಂಕದಂದು ಬೆ.10 ಗಂಟೆಯಿಂದ ಮ.1ರವರೆಗೆ ನಡೆಯಲಿವೆ. ದ್ವಿತೀಯ ಡಿಇಡಿ ಪೂರಕ ಪರೀಕ್ಷೆ ವೇಳಾಪಟ್ಟಿ ಇಂತಿದೆ. ಜ.4 ರಂದು ಆಧುನಿಕ ಶಿಕ್ಷಣದ ಒಲವುಗಳು, ಜ.7ರಂದು ಶೈಕ್ಷಣಿಕ ನಿರ್ವಹಣೆ ಮತ್ತು ಶಾಲಾ ಸಂಘಟನೆ, ಜ.9ರಂದು ವಿಷಯಾಧಾರಿತಬೋಧನಾ ಪದ್ಧತಿ-1(ಇಂಗ್ಲಿಷ್) ವಿಷಯಾಧಾರಿತ ಭೋದನಾ ಪದ್ಧತಿ (ಸಮಾಜ ವಿಜ್ಞಾನ), ಜ.11ರಂದು ವಿಷಯ (ವಿಜ್ಞಾನ) ವಿಷಯಾಧಾರಿತ ಬೋಧನಾ ಪದ್ಧತಿ (ಗಣಿತ) ವಿಷಯಗಳ ಪರೀಕ್ಷೆ ಬೆ.10 ರಿಂದ 1ರವರೆಗೆ ನಡೆಯಲಿವೆ ಎಂದು ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಇಂದು ರಸಗ್ರಹಣ
ಯಾದಗಿರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಸಗ್ರಹಣ ಕಾರ್ಯಕ್ರಮವನ್ನು ಡಿ.28 ರಂದು ಬೆ.11ಕ್ಕೆ ಆದರ್ಶ ವಿದ್ಯಾಲಯ ಯಾದಗಿರಿಯಲ್ಲಿ ಏರ್ಪಡಿಸಲಾಗಿದೆ. ಚಿತ್ರ ಕಲಾವಿದ ಕುಮಾರಿ ಸ್ಮಿತಾ ಭಟ್, ಪ್ರಾತ್ಯಕ್ಷಿಕೆ ಪ್ರದರ್ಶನ ನೀಡುವರು.
ನೆಲೋಗಿ ಕಾಳಿಕಾದೇವಿ ಜಾತ್ರೆಗೆ ಚಾಲನೆ
ಜೇವರ್ಗಿ: ತಾಲೂಕಿನ ನೆಲೋಗಿ ಗ್ರಾಮದ ಆರಾಧ್ಯ ದೇವತೆ ಶ್ರೀಕಾಳಿಕಾದೇವಿ ಜಾತ್ರಾ ಮಹೋತ್ಸವಕ್ಕೆ ಗುರುವಾರ ವೈಭವದ ಚಾಲನೆ ದೊರೆಯಿತು. ಗುರುವಾರ ಸಂಜೆ 8 ಗಂಟೆಗೆ ಕಾಳಿಕಾದೇವಿ ಭವ್ಯ ಮೆರವಣಿಗೆ ನಡೆದು ಗ್ರಾಮದ ಲಕ್ಷ್ಮೀ ದೇವಸ್ಥಾನಕ್ಕೆ ಆಗಮನವಾಯಿತು. 27 ರಂದು ದೇವಿಗೆ ತನುಂಡಿ ನೈವೆಧ್ಯ ಸಮರ್ಪಿಸಲಾಗುತ್ತದೆ. 28 ರಂದು ದೇವಿಗೆ ಗ್ರಾಮೀಣ ಪ್ರದೇಶದ ಸೊಗಡು ಮಸರು ಬಾನಾ ಭಕ್ತರು ಸಮರ್ಪಿಸಲಿದ್ದಾರೆ. 29ರಂದು ಬೆಳಗ್ಗೆ ಕುಂಬ ಮೇಳ ನಂತರ ಭಕ್ತಾದಿಗಳು ದೇವಿಗೆ ನೈವೆಧ್ಯ ಸಮರ್ಪಿಸಲಿದ್ದಾರೆ. 30ರಂದು ರಾತ್ರಿ 10 ಗಂಟೆಯಿಂದ ಕಾಳಿಕಾದೇವಿಯು ನಡೂರ ಲಕ್ಷ್ಮೀ ದೇವಸ್ಥಾನದಿಂದ ಬಂಡಿಯಲ್ಲಿ ಭವ್ಯ ಮೆರವಣಿಗೆ ನಡೆಯಲಿದೆ. ಈ ಜಾತ್ರೆಯಲ್ಲಿ ಜಾನುವಾರುಗಳ ಜಾತ್ರೆ ಕೂಡ ನಡೆಯಲಿದೆ.
ನಾಳೆ ಇಟಗಾದಲ್ಲಿ ದಿ. ಹೇರೂರ್ ನುಡಿನಮನ
ಜೇವರ್ಗಿ: ತಾಲೂಕಿನ ಇಟಗಾ ಗ್ರಾಮದಲ್ಲಿ 29ರಂದು ದಿ. ವಿಠ್ಠಲ್ ಹೆರೂರ ಅವರ ವೃತ್ತ ಉದ್ಘಾಟನೆ ಹಾಗೂ ನುಡಿ ನಮನ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು 12 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಕುಮಸಗಿ ಕಲ್ಲಾಲಿಂಗ ಮಠದ ಶಿವಾನಂದ ಸ್ವಾಮೀಜಿ, ಇಟಗಾದ ಶರಣಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಡಾ. ಅಜಯಸಿಂಗ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಶರಣಪ್ಪ ಸುಣಗಾರ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ತಿಪ್ಪಣ್ಣಪ್ಪ ಕಮಕನೂರ, ಎಂ.ಎಸ್. ಶಿರವಾಳ, ಕೇದಾರಲಿಂಗಯ್ಯ ಹಿರೇಮಠ, ಗೋಪಾಲರಾವ ಗುಡಿ ಪಾಲ್ಗೊಳ್ಳಲಿದ್ದು, ಜಿಪಂ ಸದಸ್ಯೆ ಶೋಭಾ ಶಂಕರ ಬಾಣಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಡಿವಾಳ ಹಣಮಂತಗೋಳ ತಿಳಿಸಿದ್ದಾರೆ.
ಪಂಚನಕರ್ಗೆ ಜ್ಞಾನ ಸಂಜೀವಿನಿ ಪ್ರಶಸಿ
ಗುಲ್ಬರ್ಗ: ಬೆಂಗಳೂರಿನಲ್ಲಿ ಇದೇ 29ರಂದು ಶಿಕ್ಷಣ ಜ್ಞಾನ ಪತ್ರಿಕೆ ಆಯೋಜಿಸಿದ್ದ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗುಲ್ಬರ್ಗದ ಉಪನ್ಯಾಸಕ ಪರಮೇಶ್ವರ ಡಿ. ಪಂಚನಕರ್ ಅವರಿಗೆ ಜ್ಞಾನ ಸಂಜೀವಿನಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಗುಲ್ಬರ್ಗ ಜಿಲ್ಲೆಯ ಅಫಜಲ್ಪುರ ತಾಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪರಮೇಶ್ವರ ಪಂಚನಕರ್ ಅವರ ಸೇವೆಯನ್ನು ಪರಿಗಣಿಸಿ ಜ್ಞಾನ ಸಂಜೀವಿನಿ ಪ್ರಶಸ್ತಿ ನೀಡಲಾಗುತ್ತಿದೆ. ಅಂದು ಡಾ. ತುಮಕುರು ಸಿದ್ಧಗಂಗಾ ಮಠದ ಡಾ. ಶಿವಕುಮಾರ್ ಮಹಾಸ್ವಾಮೀಜಿ ಪ್ರಶಸ್ತಿ ನೀಡಲಿದ್ದಾರೆ. ಪಂಚನಕರ್ ಅವರ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಎಚ್.ಸಿ. ಪಾಟೀಲ್ ಹಾಗೂ ಉಪನ್ಯಾಸಕರು, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಕೃಷ್ಣ ಕಾಕಲವಾರ ಸಂಶೋಧನಾಪ್ರಬಂಧ ಮಂಡನೆ
ಗುಲ್ಬರ್ಗ: ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಇತ್ತೀಚೆಗೆ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಹಮ್ಮಿಕೊಂಡಿದ್ದ ಮೂರು ದಿನಗಳ ಅಂತಾರಾಷ್ಟ್ರೀಯ ಸಂಸ್ಕೃತ ಸಮ್ಮೇಳನದಲ್ಲಿ ಗುಲ್ಬರ್ಗ ಕೇಂದ್ರೀಯ ವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕ ಡಾ. ಕೃಷ್ಣ ಕಾಕಲವಾರ ಅವರು ತಮ್ಮ ಸಂಶೋಧನಾ ಪ್ರಬಂಧ ಮಂಡಿಸಿದರು. ಪ್ರಾಚೀನ ಭಾರತೀಯ ಗಣಿತ ಎಂಬ ವಿಷಯದ ಬಗ್ಗೆ ದೇಶ ವಿದೇಶಗಳಿಂದ ಬಂದ ಅನೇಕ ವಿದ್ವಾಂಸರಿಂದ ಚರ್ಚೆ ನಡೆಯಿತು. ರಾಜ್ಯಪಾಲ ಹಂಸರಾಜ ಭಾರದ್ವಾಜ ಸಮ್ಮೇಳನ ಉದ್ಘಾಟಿಸಿದರು.
ಸರಸ್ವತಿ ವಿದ್ಯಾಮಂದಿರ ಶಾಲೆ ಉದ್ಘಾಟನೆ
ಗುಲ್ಬರ್ಗ: ಇಲ್ಲಿನ ಗೋದುತಾಯಿ ಕಾಲೋನಿಯ ಶರಣ ಜ್ಯೋತಿ ಕಲ್ಯಾಣ ಸಂಸ್ಥೆಯ ಅಡಿಯಲ್ಲಿ ಸರಸ್ವತಿ ವಿದ್ಯಾಮಂದಿರ ಶಾಲೆ ಉದ್ಘಾಟಿಸಲಾಯಿತು. ನಿವೃತ್ತ ಶಿಕ್ಷಕ ಬಿ.ಎಸ್. ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿದರು. ವೆಂಕಟೇಶ ನಿರಗುಡಿ, ಚಂದ್ರಕಾಂತ ಬಿರಾದಾರ, ಶ್ರೀಮಂತ ರೇವೂರ, ಎಸ್. ಎಸ್. ಹತ್ತಿ, ಶಿವಲೀಲಾ ಸೂರ್ಯಪ್ರಕಾಶ ಕುಲಕುರ್ತಿ, ಜಂಬನಗೌಡ, ಮೋಹನ ಗುಗವಾಡ, ಬಸವರಾಜ ಪಂಚಾಳ ಇತರರು ಪಾಲ್ಗೊಂಡಿದ್ದರು.
ನಾಳೆ ಬ್ಲಾಕ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ
ಗುಲ್ಬರ್ಗ: ಗುಲ್ಬರ್ಗ ಉತ್ತರ ವಲಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಬ್ಲಾಕ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಡಿ.28 ರಂದು ಬೆಳಗ್ಗೆ 10ಕ್ಕೆ ಆದರ್ಶ ನಗರದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕರಾದ ಜಿ. ರಾಮಕೃಷ್ಣ, ದತ್ತಾತ್ರೇಯ ಪಾಟೀಲ್ ರೇವೂರ, ಅಮರನಾಥ ಪಾಟೀಲ್, ಗುಲ್ಬರ್ಗ ತಾಪಂ ಅಧ್ಯಕ್ಷ ಪ್ರಭು ಲಕ್ಷ್ಮಣ ರಾವೂರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ. ಪರಮೇಶ್ವರ, ಜಿಲ್ಲಾ ಉಪ ಯೋಜನಾಧಿಕಾರಿ ಜನಾರ್ದನ ರೆಡ್ಡಿ ಇತರರು ಪಾಲ್ಗೊಳ್ಳಲಿದ್ದಾರೆ. ಗುಲ್ಬರ್ಗ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ ಅಧ್ಯಕ್ಷತೆ ವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

