ಬಹುಕೋಟಿ ಹಗರಣ: ಎಚ್ಕೆಪಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.1
ಇಲ್ಲಿನ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದಲ್ಲಿನ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಯಲ್ಲಿ ಆಗಿದೆ ಎನ್ನಲಾಗಿರುವ ಹಗರಣದ ತನಿಖೆಗೆ ಉದ್ಯೋಗಖಾತ್ರಿ ಯೋಜನೆಯ ರಾಜ್ಯ ನಿರ್ದೇಶಕ ಮುನೀಶ ಮೌದ್ಗಿಲ್ ತನಿಖೆ ನಡೆಸುತ್ತಿದ್ದಾರೆ ಎಂದಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಎಚ್.ಕೆ. ಪಾಟೀಲ್ ಹಗರಣದ ನಿಷ್ಪಕ್ಷಪಾತ ತನಿಖೆ ನಡೆಸಲಾಗುತ್ತದೆ. ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುತ್ತದೆ ಎಂದರು.
ಬೋಗಸ್ ದಾಖಲೆಗಳ ಸೃಷ್ಟಿ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೋಗಸ್ ದಾಖಲೆಗಳನ್ನು ಸೃಷ್ಟಿಸಿ ಬಹುಕೋಟಿ ಹಣ ನುಂಗಿ ಹಾಕಿರುವ ಹಗರಣವಿದು, ಈ ಬಗ್ಗೆ ಚುನಾಯಿತ ಪ್ರತಿನಿಧಿಗಳಿಂದ ಹಾಗೂ ಇತರೆ ಮೂಲಗಳಿಂದ ಇಲಾಖೆಗೆ ಅನೇಕ ದೂರುಗಳು ಬಂದಿದ್ದವು. ಇವನ್ನೆಲ್ಲ ಆಧರಿಸಿ ತನಿಖೆಗೆ ಮುಂದಾಗಿದ್ದೇವೆ. ಈಗಾಗಲೇ ಮುನೀಶ ಮೌದ್ಗಿಲ್ ಗುಲ್ಬರ್ಗಕ್ಕೆ ಬಂದು ಹೋಗಿದ್ದಾರೆ. ಜಿಪಂ ಎಂಜಿನಿಯರಿಂಗ್ ವಿಭಾಗದ ದಾಖಲೆಗಳ ಕೋಣೆ ಸೀಲ್ ಮಾಡಲಾಗಿದೆ. ತನಿಖಾ ವರದಿ ನೀಡಿದ ನಂತರ ಈ ಬಗ್ಗೆ ನಿಖರ ಮಾಹಿತಿ ನೀಡಲು ಸಾಧ್ಯ ಎಂದರು.
ಇಲಾಖೆಯ ಹಲವು ಎಂಜಿನಿಯರ್ಗಳು ಹಗರಣದಲ್ಲಿ ಶಾಮೀಲಾಗಿರುವ ಸಾಧ್ಯತೆಗಳಿವೆ. ಮೌದ್ಗಿಲ್ ಅವರು ವರದಿ ನೀಡಿದ ನಂತರವಷ್ಟೇ ಎಷ್ಟು ಮೌಲ್ಯದ ಹಣ ಗುಳುಂ ಆಗಿದೆ, ಹೇಗೆ ಹಗರಣ ಮಾಡಲಾಗಿದೆ ಎಂಬ ವಿವರಗಳು ಹೊರಗಡೆ ಬರಲಿವೆ ಎಂದು ಪಾಟೀಲ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹೇಳಿದರು.
ನಿಯಮ ಜಾರಿಗೊಳಿಸುತ್ತಿದ್ದೇವಷ್ಟೆ: ಗ್ರಾಮಸಭೆ ನಡೆಸದ ಪಂಚಾಯ್ತಿ ಅಧ್ಯಕ್ಷರನ್ನು ಹೊಣೆಗಾರರನ್ನಾಗಿ ಮಾಡುವ ವಿಚಾರವಾಗಲಿ, ಜಿಪಂ, ತಾಪಂನ ಕೆಲವು ಅನುದಾನ ಬಳಕೆಯ ವಿಚಾರದಲ್ಲಿ ಗ್ರಾಪಂ ಬೇಡಿಕೆ, ಇಷ್ಟಾನಿಷ್ಟ ಗಮನದಲ್ಲಿಟ್ಟು ಕ್ರಿಯಾ ಯೋಜನೆ ರೂಪಿಸಬೇಕೆಂಬ ಸುತ್ತೋಲೆ ವಿಚಾರಗಳಲ್ಲಿ ಪ್ರತಿಕ್ರಿಸಿದ ಸಚಿವರು ಪಂಚಾಯತ್ ವ್ಯವಸ್ಥೆ ಬಲವರ್ಧನೆಗೆ ಈ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದರಲ್ಲದೆ ಅವುಗಳನ್ನು ಬಲವಾಗಿ ಸಮರ್ಥಿಸಿಕೊಂಡರು.
ಬಿಆರ್ಜಿಎಫ್, 13ನೇ ಹಣಕಾಸು ಅನುದಾನಗಳ ಬಳಕೆ ವಿಚಾರದಲ್ಲಿ ಅನೇಕ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಗ್ರಾಮಗಳ ಬೇಕು- ಬೇಡಗಳನ್ನು ಅರಿಯಲು ಅಲ್ಲಿನ ಚುನಾಯಿತ ಸಂಸ್ಥೆಯಾಗಿರುವ ಗ್ರಾಪಂಗೆ ಹೋಗದೆ ಜಿಪಂ, ತಾಪಂ ಕ್ರಿಯಾ ಯೋಜನೆ ರೂಪಿಸುವುದು ಅದೆಷ್ಟು ಸಮಂಜಸ ಈ ವಿಚಾರದಲ್ಲಿ ತಾವು ತುಂಬ ಕಟ್ಟುನಿಟ್ಟು ಎಂದರಲ್ಲದೆ ಇದರಿಂದ ಯಾವುದೇ ಅಧಿಕಾರ ಮೊಟಕು ಆಗಿಲ್ಲ ಎಂದರು.
ಜಿಪಂ ನೌಕರರಿಗೆ ಕಂಟಕವಾಗಿದ್ದ 2009ರ ಆದೇಶ ವಾರದಲ್ಲಿ ವಾಪಸ್
ಗುಲ್ಬರ್ಗ: ಸ್ಥಳೀಯ ಸಂಸ್ಥೆಗಳಿಂದ ವಿಲೀನಗೊಂಡು ಜಿಪಂ ಸಿಬ್ಬಂದಿಯದ್ದರೂ ಸರ್ಕಾರ 2009ರಲ್ಲಿ ವಿಲಕ್ಷಣ ಆದೇಶ ಹೊರಡಿಸಿ ಜಿಪಂ, ತಾಪಂ ನೌಕರರು ಯಾರೂ ಸರ್ಕಾರಿ ನೌಕರರಲ್ಲ, ಅವರಿಗೆ ಯಾವುದೇ ಸವಲತ್ತುಗಳಿಲ್ಲ ಎಂದು ಹೊರಡಿಸಿದ್ದ ಕಂಟಕ ಆದೇಶ ಶೀಘ್ರ ಸರ್ಕಾರವೇ ವಾಪಸ್ ಪಡೆಯಲಿದೆ.
ಈಗಾಗಲೇ ಈ ಕುರಿತಂತೆ ಅನೇಕ ವಿಚಾರಗಳು ನೌಕರರ ಮೂಲಕ, ಮಾಧ್ಯಮ ವರದಿ ಮೂಲಕ ತಮ್ಮ ಗಮನಕ್ಕೆ ಬಂದಿವೆ. ನಾಲ್ಕು ದಿನಗಳ ಹಿಂದೆಯೇ ಅಧಿಕಾರಿಗಳ ಸಭೆ ನಡೆಸಿರುವೆ. ಇನ್ನೊಂದು ವಾರದಲ್ಲಿ ಜಿಪಂ ಹಾಗೂ ತಾಪಂ ನೌಕರರ ಪಾಲಿಗೆ ಮಾರಕವಾಗಿದ್ದ ಆದೇಶ ವಾಪಸ್ ಪಡೆಯಲಾಗುತ್ತದೆ ಎಂದು ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ರಾಜ್ಯಾದ್ಯಂತ ಇರುವ ಜಿಪಂ ಹಾಗೂ ತಾಪಂನ 1,500 ಕ್ಕೂ ಅಧಿಕ ನೌಕರರು ಈ 2009ರ ಆದೇಶದಿಂದ ತುಂಬ ತೊಂದರೆಗೊಳಪಟ್ಟಿದ್ದಾರೆ. ಅನೇಕರು ಪಿಂಚಣಿ, ಇತರೆ ಸವಲತ್ತುಗಳಿಂದ ವಂಚಿತರಾಗಿದ್ದಾರೆ ಎಂದು 'ಕನ್ನಡಪ್ರಭ' ಕಳೆದ ವಾರವಷ್ಟೇ ವಿಶೇಷ ವರದಿ ಪ್ರಕಟಿಸಿ ನೌಕರರ ಈ ಸಮಸ್ಯೆಯ ಮೇಲೆ ಬೆಳಕು ಚೆಲ್ಲಿತ್ತು. ಇದೀಗ ಸಚಿವರೇ ಈ ಸಮಸ್ಯೆ ಬೇಗ ಪರಿಹರಿಸುವುದಾಗಿ ಹೇಳುವ ಮೂಲಕ ನೌಕರರಿಗೆ ಸಿಹಿ ಸುದ್ದಿ ನೀಡಿದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

