ಇದೇನು ರಸ್ತೆ ದುರ್ಗತಿ?
ಯಾದಗಿರಿ: ಜಿಲ್ಲಾ ಕೇಂದ್ರದಿಂದ ಘೋಷಿತ ತಾಲೂಕು ಕೇಂದ್ರ ವಡಗೇರಾಕ್ಕೆ ಇರುವ ಅಂತರ ಕೇವಲ 18 ಕಿ.ಮೀ. ಆದರೆ ಈ ರಸ್ತೆ ಮೂಲಕ ವಡಗೇರಾಕ್ಕೆ ವಾಹನದಲ್ಲಿ ತಲುಪಲು ಕನಿಷ್ಠ 1 ಗಂಟೆಯಾದರೂ ಬೇಕು.
ಹೌದು. ಇದು ಈ ರಸ್ತೆಯ ಅಧೋಗತಿಗೆ ಸಾಕ್ಷಿಯಾಗಿದೆ. ವಡಗೇರಾಕ್ಕೆ ಹೋಗುವುದೆಂದರೆ ಮೂಗು ಮುರಿಯುವ ಮಂದಿಯೇ ಜಾಸ್ತಿ. ಏಕೆಂದರೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆ ತುಂಬ ದೊಡ್ಡ ಹೊಂಡಗಳೇ ಕಾಣುತ್ತವೆ. ಮಳೆಗಾಲದಲ್ಲಿ ಆ ಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರು ಏಳುತ್ತ ಬೀಳುತ್ತ ಸವಾರಿ ಮಾಡಬೇಕು. ಸಾರಿಗೆ ವಾಹನ ಚಾಲಕರು ಹಾಗೂ ಪ್ರಯಾಣಿಕರು ಹಿಡಿಶಾಪ ಹಾಕುತ್ತಾ ಈ ರಸ್ತೆಯ ಮೇಲೆ ಸಂಚರಿಸುವಂತಾಗಿದೆ.
ಮುಖ್ಯ ರಸ್ತೆ: ಯಾದಗಿರಿಯಿಂದ ರಾಯಚೂರಿಗೆ ಹೋಗಬೇಕಾದರೆ ಈ ರಸ್ತೆಯ ಮುಖಾಂತರವೇ ಹೋಗಬೇಕು. ಗೂಗಲ್ ಸೇತುವೆ ಮೂಲಕ ದೇವದುರ್ಗಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಈ ಭಾಗದ ಪ್ರಸಿದ್ಧ ದೇವಾಲಯಗಳಾದ ಗೂಗಲ್ ಅಲ್ಲಮಪ್ರಭು, ಸಂಗಮದ ಸಂಗಮನಾಥ ದೇವಾಲಯ, ತುಮಕೂರಿನ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಗೆ ಹೋಗಬೇಕಾದರೆ ಈ ರಸ್ತೆಯೇ ಆಧಾರ. ಹತ್ತಾರು ಹಳ್ಳಿಗಳ ಜನರೂ ಇದೇ ರಸ್ತೆಯಲ್ಲಿ ಸಂಚರಿಸಬೇಕು.
ಎಲ್ಲರಿಗೂ ತೊಂದರೆ: ವಡಗೇರಾ ಭಾಗದ ಬೆಂಡೆಬೆಂಬಳಿ, ಕದರಾಪುರ, ತುಮಕೂರು, ರೋಟ್ನಡಗಿ, ಹಾಲಗೇರಾ, ಗಡ್ಡೆಸೂಗೂರ ಇನ್ನಿತರ ಗ್ರಾಮದ ವಿದ್ಯಾರ್ಥಿಗಳು ಯಾದಗಿರಿಯಲ್ಲಿರುವ ಕಾಲೇಜುಗಳಲ್ಲಿ ಪ್ರವೇಶವನ್ನು ಪಡೆದಿದ್ದಾರೆ. ರಸ್ತೆ ಹಾಳಾಗಿರುವುದರಿಂದ ಬೆಳಗಿನ ಅವಧಿಯ ತರಗತಿಗಳಿಗೆ ಸರಿಯಾದ ಸಮಯದಲ್ಲಿ ಹಾಜರಾಗಲು ಆಗುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರುತ್ತಾರೆ. ಅದೇ ರೀತಿ ರೋಗಿಗಳಿಗೆ ಆಸ್ಪತ್ರೆಗೆ ಬರಲೂ ತೀವ್ರ ತೊಂದರೆಯಾಗಿದೆ. ವಡಗೇರಾ ಹೋಬಳಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳು ಬರುತ್ತವೆ. ಇಲ್ಲಿಯ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಯಾದಗಿರಿ ಹೋಗಬೇಕಾಗುತ್ತದೆ. ರಸ್ತೆ ಹದಗೆಟ್ಟಿರುವುದರಿಂದ ಸಕಾಲದಲ್ಲಿ ರೋಗಿಗಳಿಗೆ ಚಿಕಿತ್ಸೆ ದೊರೆಯದೆ ಮಾರ್ಗ ಮಧ್ಯದಲ್ಲಿ ಅಸುನೀಗಿದ ಉದಾಹರಣೆಗಳು ಸಾಕಷ್ಟಿವೆ.
ತೇಪೆ ಕಾರ್ಯ: ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಪ್ರಯಾಣಿಸಬೇಕಾದರೆ ಸೀಟಿನ ಮುಂದಿರುವ ಕಬ್ಬಿಣದ ಸಲಾಕೆಯನ್ನು ಹಿಡಿಯುವುದನ್ನು ಮರೆಬಾರದು. ಒಂದು ವೇಳೆ ಆರಾಮವಾಗಿ ಬಸ್ಸಿನಲ್ಲಿ ಕುಳಿತರೆ ಹಲ್ಲು ಮುರಿದುಕೊಳ್ಳುವುದು ನಿಶ್ಚಿತ. ಎಲ್ಲೆಂದರಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿದ್ದು, ಈ ರಸ್ತೆಯಲ್ಲಿ ವಾಹನ ಸವಾರಿ ಮಾಡುವುದೇ ಒಂದು ಸಾಹಸವಾಗಿದೆ. ಆದರೂ ಹೊಂಡ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ. ಮಳೆ ನೀರು ನಿಂತು ಅದರ ಮೇಲಿಂದ ವಾಹನ ಹೋದರೆ ಪಕ್ಕದಲ್ಲಿ ಪಾದಚಾರಿಗಳಿಗೆ ಕೆಸರು ಎರಚುತ್ತದೆ. ಆದರೂ ರಸ್ತೆ ಸುಧಾರಣೆಗೆ ಮಾತ್ರ ಸಂಬಂಧಪಟ್ಟ ಇಲಾಖೆ ಗಮನ ನೀಡುತ್ತಿಲ್ಲ. ಬೇಸಿಗೆಯಲ್ಲಿ ಅಲ್ಲಲ್ಲಿ ಅಷ್ಟಿಷ್ಟು ಮಣ್ಣು ಹಾಕಿ ತೇಪೆ ಹಾಕುವ ಕೆಲಸ ಮಾಡಲಾಗಿತ್ತು. ಈಗ ಮತ್ತೆ ಅದೇ ಸ್ಥಿತಿ ಬಂದಿದೆ.
ಭಾರೀ ವಾಹನಗಳೂ ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಮರಳು ಸಾಗಣೆ, ಸಕ್ಕರೆ ಕಾರ್ಖಾನೆಗೆ ಕಬ್ಬು ತರುವ ವಾಹನಗಳೂ ಸಂಚರಿಸುತ್ತವೆ. ಇದರಿಂದ ರಸ್ತೆ ಮತ್ತಷ್ಟು ಹದಗೆಟ್ಟಿದ್ದು, ವಡಗೇರಾ ಭಾಗದ ಜನರಿಗೆ ಈ ರಸ್ತೆಯೇ ದೊಡ್ಡ ಶಾಪವಾಗಿ ಪರಿಣಮಿಸಿದೆ. ಚುನಾವಣೆ ಸಂದರ್ಭದಲ್ಲಿ ಎಲ್ಲ ಪಕ್ಷಗಳ ಅಭ್ಯರ್ಥಿಗಳೂ ತಾವು ಗೆದ್ದರೆ ರಸ್ತೆ ಸುಧಾರಣೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ರಸ್ತೆ ಅಭಿವೃದ್ಧಿಗೆ ಮಾತ್ರ ಯಾರೂ ಗಮನ ನೀಡುತ್ತಿಲ್ಲ. ಇನ್ನಾದರೂ ವಡಗೇರಾ ರಸ್ತೆ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಕೊಂಚ ಗಮನ ಹರಿಸಿದರೆ ಜನ ನೆಮ್ಮದಿಯಿಂದ ಸಂಚರಿಸಬಹುದು.
---
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

