ಡಿಕ್ಕಿ: ಬೈಕ್ ಸವಾರ ಸಾವು
ಚಿಂಚೋಳಿ: ಪಟ್ಟಣದ ಹೊರ ವಲಯದ ಚಂದಾಪುರ ನಗರದ ಪ್ರವಾಸಿ ಮಂದಿರ ಮುಂದಿನ ಚಿಂಚೋಳಿ- ತಾಂಡೂರ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ಭಾರಿ ವಾಹನಮೊಂದು ಗುರುವಾರ ಮಧ್ಯರಾತ್ರಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರನು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಚಂದನಕೇರಾ ಗ್ರಾಮದ ಮಲ್ಲಪ್ಪ ಹಣಮಂತಪ್ಪ ಕೊಡಂಬಲ (26) ಎಂಬಾತನೇ ಮೃತಪಟ್ಟಿದ್ದಾನೆ. ಮೃತನು ತನ್ನ ಪತ್ನಿ ತವರೂರಾದ ಚಿಕ್ಕನಿಂಗದಳ್ಳಿ ಗ್ರಾಮಕ್ಕೆ ಮಧ್ಯರಾತ್ರಿ ದ್ವಿಚಕ್ರ ವಾಹನ ಮೇಲೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅಪಘಾತ ಮಾಡಿದ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ ಎಂದು ಪಿಎಸ್ಐ ಸುರೇಶ ಬೆಂಡೆಗುಂಬಳ ತಿಳಿಸಿದ್ದಾರೆ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಸಾವು
ಚಿಂಚೋಳಿ: ತಾಲೂಕಿನ ಮಿರಿಯಾಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ವಿಕಾಟ ಸಾಗರ ಸಿಮೆಂಟ್ ಕಂಪನಿ ರಸ್ತೆ ಮಾರ್ಗದಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ಮಿರಿಯಾಣ ಪಿಎಸ್ಐ ರಾಘವೇಂದ್ರ ತಿಳಿಸಿದ್ದಾರೆ. ಅಂದಾಜು 30 ವರ್ಷ ವಯಸ್ಸಿನ ಮಾನಸಿಕ ಅಸ್ವಸ್ಥಗೊಂಡಿರುವ ಮಹಿಳೆಗೆ ಗುರುವಾರ ರಾತ್ರಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಅವಳು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾಳೆ. ಮೃತಳ ಹೆಸರು, ವಿಳಾಸ ಯಾವುದು ಪತ್ತೆಯಾಗಿಲ್ಲ. ಈ ಕುರಿತು ಮಿರಿಯಾಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಿಶ್ವಕರ್ಮ ನಿಗಮ ಸ್ಥಾಪನೆ: ಸ್ವಾಗತ
ಚಿತ್ತಾಪುರ: ರಾಜ್ಯ ಸರ್ಕಾರ ವಿಶ್ವಕರ್ಮ ಕುಶಲ ಕರ್ಮಿಗಳ ನಿಗಮ ರಚನೆ ಮಾಡಿ ಸಮಾಜದ ಅಭಿವೃದ್ಧಿಗೆ ರು. 5 ಕೋಟಿ ಅನುದಾನ ರಾಜ್ಯದ ಬಜೆಟ್ನಲ್ಲಿ ನೀಡಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಲೂಕು ವಿಶ್ವಕರ್ಮ ಸಮಾಜವು ಅಭಿನಂದಿಸಿದೆ. ಕೇಂದ್ರ ಸಚಿವ ಅಸ್ಕರ್ ಫರ್ನಾಂಡಿಸ್ ಹಾಗೂ ವಿಶ್ವಕರ್ಮ ಸಮಾಜ ರಾಜ್ಯಧ್ಯಕ್ಷ ಕೆ.ಪಿ. ನಂಜುಂಡಿ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ನಿಗಮ ರಚನೆಯಾಗಲು ಪ್ರಯತ್ನಿಸಿದ್ದಾರೆ ಅವರಿಗೆ ತಾಲೂಕ ವಿಶ್ವಕರ್ಮ ಸಮಾಜದ ಅಧ್ಯಕ್ಷ ಮೋಹನ್ಬಾಬು ಪಂಚಾಳ, ಪ್ರಹ್ಲಾದ ವಿಶ್ವಕರ್ಮ, ಕಾಶೀಪತಿ, ಶಿವಕುಮಾರ್ ಭಕ್ತಿ, ಸದಾಶಿವ ಯರಗಲ್ಲ, ಶ್ರೀನಿವಾಸ ಪೆಡಕುಂಟಿ ಮತ್ತಿತರರು ಅಭಿನಂದಿಸಿದ್ದಾರೆ.
ತೀರ್ಪಿಗೆ ಸ್ವಾಗತ
ಚಿತ್ತಾಪುರ: ಯಾವುದೇ ಪ್ರಕರಣಗಳಲ್ಲಿ ಜನಪ್ರತಿನಿಧಿಗಳು ಅಪರಾಧ ಎಸಗಿ ತಪ್ಪಿತಸ್ಥರು ಎಂದು ಸಾಬೀತಾಗಿ, ಶಿಕ್ಷೆಗೆ ಗುರಿಯಾದ ತಕ್ಷಣವೇ ಅವರ ಸದಸ್ಯತ್ವವನ್ನು ಅನರ್ಹಗೋಳಿಸಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದನ್ನು ದಸಂಸ ಭಾಗೋಡಿ ಗ್ರಾಮ ಶಾಖೆ ಸಂಚಾಲಕ ಭೀಮರಾಯ ಹೆಡಗಿ, ಮಲ್ಲಿಕಾರ್ಜುನ ಏರಿ ಸ್ವಾಗತಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿ ಕೋರ್ಟ್ ತೀರ್ಪಿನಿಂದ ಇಂತಹ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ ಎಂದು ತಿಳಿಸಿದ್ದಾರೆ.
ಗುಲ್ಬರ್ಗದಲ್ಲಿ ಮಳೆ
ಗುಲ್ಬರ್ಗ: ಕಳೆದ ನಾಲ್ಕು ದಿನಗಳಿಂದ ಸತತ ಮಳೆ ಸುರಿಯುತ್ತಿರುವ ನಗರ ಹಾಗೂ ಜಿಲ್ಲೆಯಲ್ಲಿ ಶನಿವಾರ ಸಂಜೆ ಹೊತ್ತು ಬಿರುಸಿನ ಎರಡು ಗಂಟೆ ಕಾಲ ಮಳೆ ಸುರಿದಿದೆ.ಈ ಮುಂಗಾರು ಹಂಗಾಮಿನ ಅತಿ ಹೆಚ್ಚಿನ ಮಳೆ ಎಂದು ಹೇಳಬಹುದಾಗಿದೆ. ಇದರಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಅನೇಕ ತಾಲೂಕಿನಲ್ಲಿಯೂ ಮಳೆಯಾಗಿರುವುದರಿಂದ ಹಳ್ಳ ಕೊಳ್ಳ ತುಂಬಿವೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಆನ್ಲೈನ್ ಮೂಲಕ ಅರ್ಜಿ ಆಹ್ವಾನ
ಗುಲ್ಬರ್ಗ: ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮದಲ್ಲಿ ನೀಡಲಾಗುತ್ತಿರುವ ಸೇವೆಗಳನ್ನು ಜಿಲ್ಲಾ, ತಾಲೂಕು, ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿರುವ ಖಾಸಗಿ ಸೇವೆ ನಿರ್ವಹಿಸುವ ಆನ್ಲೈನ್ ಕೇಂದ್ರಗಳ ಮೂಲಕ ನೀಡುವ ಗಣಕಯಂತ್ರ, ಮುದ್ರಣ, ಅಂತರ್ಜಾಲ ಮುಖಾಂತರ ದೃಶ್ಯ ಸಂಗ್ರಹಿಸುವವರು, ವೆಬ್ ಕ್ಯಾಮರಾ ಹೊಂದಿರುವವರು, ಬಯೋವುಟ್ರಿಕ್ ತಂತ್ರಜ್ಞಾನ ಸಾಮಗ್ರಿ ಹೊಂದಿರುವವರು ಹಾಗೂ ಫೋಟೋ ಸ್ಟುಡಿಯೋ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರು.ಅರ್ಜಿಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿನ ಸಕಾಲ ಶಾಖೆಯಿಂದ ಪಡೆದು ಭರ್ತಿಮಾಡಿ, ಜುಲೈ 15ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾಧಿಕಾರಿ ಕಚೇರಿಗೆ ಅಥವಾ ಸಕಾಲ ಸೇವೆಗಳ ಅಂತರ್ಜಾಲ ಢಿಢಿಢಿ.ಡಛ್ಞಛಟ.್ಞಛ್ಠ.ಟ್ಝ್ಛಿ.್ಝಟಿ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ತಿಳಿಸಿದ್ದಾರೆ.
ವಿಶ್ವ ಜನಸಂಖ್ಯಾ ದಿನಾಚರಣೆ
ಗುಲ್ಬರ್ಗ: ಭಾರತೀಯ ರೆಡ್ಕ್ರಾಸ್ ಸಂಸ್ಥೆ ಹಾಗೂ ವಿ.ಜಿ. ಮಹಿಳಾ ಕಾಲೇಜು ಸಂಯುಕ್ತಾಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಆಚರಿಸಲಾಯಿತು.ಖ್ಯಾತ ವೈದ್ಯ ಹಾಗೂ ವೈದ್ಯ ಸಾಹಿತಿಗಳಾದ ಡಾ. ಪಿ.ಎಸ್. ಶಂಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ನಿಯಮಿತ ಜನಸಂಖ್ಯೆಯಿಂದ ದೇಶದ ಉದ್ಧಾರ ಸಾಧ್ಯ ಮತ್ತು ಇಂತಹ ಕಾರ್ಯಕ್ರಮಗಳಿಂದ ದೇಶದಲ್ಲಿರುವ ಯುವ ಪೀಳಿಗೆಗಳಿಗೆ ಉತ್ತಮ ಮಾಹಿತಿ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಖಜಾಂಚಿ ಭಾಗ್ಯಲಕ್ಷ್ಮೀ ಮೊಳಗಿ ಪ್ರಾಸ್ತಾವಿಕ ಮಾತನಾಡುತ್ತಾ, ರೆಡ್ಕ್ರಾಸ್ ಸಂಸ್ಥೆಯ ಧ್ಯೇಯೋದ್ದೇಶ ಹಾಗೂ ಸೇವೆಗಳ ಬಗ್ಗೆ ಮಾತನಾಡಿ, ಈ ವರ್ಷದ ಜನಸಂಖ್ಯೆ ದಿನದ ವಿಷಯವಾದ ಹದಿಹರೆಯದ ಗರ್ಭಾವಸ್ಥೆಯ ಬಗ್ಗೆ ವಿಷಯ ಮಂಡನೆ ಮಾಡುತ್ತಾ, ಈ ಮಹಿಳಾ ವಿದ್ಯಾಲಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವು ಬಹಳ ಸಮಂಜಸವೆಂದು ತಿಳಿಸಿದರು.ಸರ್ಕಾರಿ ಪದವಿ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ.ಟಿ. ಗುರುಬಸಪ್ಪ ಮಾತನಾಡಿ, ಜನಸಂಖ್ಯೆ ಬೆಳೆದು ಬಂದ ರೀತಿ, ಹೆಚ್ಚಳಕ್ಕೆ ಕಾರಣ ಹಾಗೂ ಪರಿಣಾಮಗಳನ್ನು ಸವಿಸ್ತಾರವಾಗಿ ವಿಸ್ತರಿಸಿದರು. ವಿ.ಜಿ. ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲ ಸಂಗಣ್ಣ ಧೂಳಗುಂಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ಸದಸ್ಯರ ಕಲಾವತಿ ಡಿ ಸ್ವಾಗತ ಕೋರಿದರು. ಕುಮಾರಿ ಭಾಗ್ಯ ಹಾಗೂ ಸೌಮ್ಯ ಪ್ರಾರ್ಥನ ಹಾಡಿದರು. ಸಿದ್ರಾಮಪ್ಪ ಬೋಮ್ನಾಳ್ಕರ್ ಕಾರ್ಯಕ್ರಮ ನಿರೂಪಿಸಿದರು. ಡಾ. ಬಸವರಾಜ ಗುಳಶೆಟ್ಟಿ, ಧನರಾಜ ಭಾಸಗಿ ಉಪಸ್ಥಿತರಿದ್ದರು. ರವೀಂದ್ರ ಶಾಬಾದಿ ವಂದಿಸಿದರು.
ಡಿಫೆನ್ಸ್ ಪೆನ್ಷನ್ ಅದಾಲತ್
ಗುಲ್ಬರ್ಗ: ಚೆನ್ನೆ ೈನ ಡಿಫೆನ್ಸ್ ಪೆನ್ಷನ್ ಅಧಿಕಾರಿಗಳು ಸೆಪ್ಟಂಬರ್ 16 ಮತ್ತು 17ರಂದು ಬೆಳಗಾವಿಯಲ್ಲಿ ಡಿಫೆನ್ಸ್ ಪೆನ್ಷನ್ ಅದಾಲತ್ನ್ನು ಆಯೋಜಿಸಿರುತ್ತಾರೆ. ಡಿಫೆನ್ಸ್ ಪೆನ್ಷನ್ನಲ್ಲಿ ಯಾವುದಾದರೂ ತೊಂದರೆಯಿದ್ದಲ್ಲಿ ಪಿಪಿಒ ಪ್ರತಿ, ಡಿಸ್ಚಾರ್ಜ್ ಬುಕ್ ಪ್ರತಿ, ಹಿಂದಿನ ಆರು ತಿಂಗಳ ಬ್ಯಾಂಕ್ ಪಾಸ್ಬುಕ್ ಪ್ರತಿಗಳನ್ನು ಇಂಗ್ಲಿಷ್ನಲ್ಲಿ ಬರೆದ ಅರ್ಜಿಯೊಂದಿಗೆ ಜು.31ರೊಳಗಾಗಿ ದಿ ಅದಾಲತ್ ಆಫೀಸರ್, ಆಫೀಸ್ ಆಫ್ ದ ಕಂಟ್ರೋಲರ್ ಆಫ್ ಡಿಫೆನ್ಸ್ ಅಕೌಂಟ್ಸ್, 618, ಅಣ್ಣಾಸಲೈ, ಟೆಯನಂಪೇಟ್, ಚೆನ್ನೆ ೈ- 600018 ಇವರಿಗೆ ಕಳುಹಿಸಿಕೊಡಲು ಕೋರಲಾಗಿದೆ. ವಿವರಕ್ಕೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಗುಲ್ಬರ್ಗ ಕಚೇರಿಯನ್ನು ಸಂಪರ್ಕಿಸಬಹುದು.
ಕಾಲೇಜಿಗೆ ಪ್ರವೇಶ
ಗುಲ್ಬರ್ಗ: ಇಲ್ಲಿನ ಜೇವರ್ಗಿ ಕಾಲೋನಿಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ, ರಾಜ್ಯಶಾಸ್ತ್ರ ಹಾಗೂ ವಾಣಿಜ್ಯ ಶಾಸ್ತ್ರ ವಿಷಯಗಳಲ್ಲಿ ಎಂ.ಎ., ಮತ್ತು ಎಂ.ಕಾಂ. ಪ್ರಥಮ ವರ್ಷದ ತರಗತಿಗಳಿಗೆ ಪ್ರವೇಶ ಪ್ರಾರಂಭವಾಗಿದೆ.ಅರ್ಜಿಗಳನ್ನು ಕಾಲೇಜಿನಲ್ಲಿ ವಿತರಿಸಲಾಗುತ್ತಿದೆ. ಆಸಕ್ತ ವಿದ್ಯಾರ್ಥಿನಿಯರು ಜುಲೈ 27ರೊಳಗೆ ಅರ್ಜಿಗಳನ್ನು ಪಡೆಯಬಹುದಾಗಿದೆ. ದಂಡ ರಹಿತ ಜು.27, ದಂಡ ಸಹಿತ ಆಗಸ್ಟ್ 5ರವರೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನ. ವಿವರಕ್ಕೆ ದೂ. 08472-205197, 99809 04999 ಸಂಪರ್ಕಿಸಬಹುದು.
ಅರ್ಜಿ ಆಹ್ವಾನ
ಗುಲ್ಬರ್ಗ: ಕನ್ನಡ ಸಾಹಿತ್ಯ ಪರಿಷತ್ತು ವಿವಿಧ ದತ್ತಿ ಪ್ರಶಸ್ತಿ ನೀಡಲು ಲೇಖಕರಿಂದ ಪುಸ್ತಕಗಳನ್ನು ಆಹ್ವಾನಿಸಿದೆ.ವಿ. ಗೌರಮ್ಮ ಗಂಗಾಧರಯ್ಯ ಮಕ್ಕಳ ಸಾಹಿತ್ಯ ದತ್ತಿ ಪ್ರಶಸ್ತಿ, ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಮತ್ತು ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿ ಪ್ರಶಸ್ತಿಗಳಿಗೆ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.ಸ್ಪರ್ಧೆಗೆ ಪುಸ್ತಕಗಳನ್ನು ಆಗಸ್ಟ್ 30ರೊಳಗಾಗಿ ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು- 18 ಇವರಿಗೆ ಕಳುಹಿಸಬೇಕು. ವಿವರಕ್ಕೆ ದೂ. 080-26623584 ಸಂಪರ್ಕಿಸಬಹುದು.
ಅಧಿಕಾರ ಸ್ವೀಕಾರ
ಗುಲ್ಬರ್ಗ: ಇಲ್ಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಯ ಕಾರ್ಯಭಾರವನ್ನು ಸಿದ್ಧರಾಮ ಜಿ. ಲೋಣಿ ಅವರು ಜುಲೈ 5ರಂದು ವಹಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

