ಗುಲ್ಬರ್ಗಾ

ನಗರಸಭೆ ಶುಲ್ಕ ದುಪ್ಪಟ್ಟು

Published On :

ಕನ್ನಡಪ್ರಭ ವಾರ್ತೆ  ಯಾದಗಿರಿ  ಜು.27
ಇಲ್ಲಿಯ ನಗರಸಭೆಯ 2013- 14ನೇ ಸಾಲಿನ ಮುಂಗಡ ಪತ್ರದಲ್ಲಿ ಪರವಾನಗಿ ಶುಲ್ಕ, ಅಭಿವೃದ್ಧಿ ಶುಲ್ಕ, ಭೂ ಬಾಡಿಗೆ ಇತ್ಯಾದಿ ದರಗಳನ್ನು ದ್ವಿಗುಣಗೊಳಿಸಿ ಏಪ್ರಿಲ್ ತಿಂಗಳಿಂದ ಪರಿಷ್ಕೃತ ದರಗಳನ್ನು ಜಾರಿಗೆ ತರಲಾಗಿದೆ.
  ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದರೂ ಇನ್ನೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗದ ಕಾರಣ ಕಳೆದ ನಾಲ್ಕು ತಿಂಗಳಿಂದ ಜಿಲ್ಲಾಧಿಕಾರಿಗಳೇ ನಗರಸಭೆ ಆಡಳಿತಾಧಿಕಾರಿಯಾಗಿ  ಕಾರ್ಯನಿರ್ವಹಿಸುತ್ತಿದ್ದಾರೆ.
  ಪ್ರಸಕ್ತ ಸಾಲಿನ ಮುಂಗಡ ಪತ್ರವನ್ನು ಕಳೆದ ಮಾ.15ರಂದು ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎಫ್.ಆರ್. ಜಮಾದರ ಪರಿಶೀಲನೆ ನಡೆಸಿ ಈಗಿರುವ ದರಗಳಿಂದ ನಗರಸಭೆಗೆ ಯಾವುದೇ ಆರ್ಥಿಕ ಹೆಚ್ಚಳವಾಗುವುದಿಲ್ಲ. ಇದರಿಂದ ನಗರಸಭೆಯು ನಗರ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ 1999ರಿಂದ ಅಂದರೆ ಸುಮಾರು 14 ವರ್ಷಗಳಿಂದ ಯಾವುದೇ ದರಗಳನ್ನು ಪರಿಷ್ಕೃತಗೊಳಿಸಿಲ್ಲ. ಅದಕ್ಕಾಗಿ ನಗರಸಭೆಯ ಆರ್ಥಿಕ ಸ್ಥಿತಿ ಸುಧಾರಿಸುವ ದೃಷ್ಟಿಯಿಂದ ಪ್ರಸಕ್ತ ಬಜೆಟ್‌ನಲ್ಲಿ ಎಲ್ಲ ದರಗಳನ್ನು ದುಪ್ಪಟ್ಟುಗೊಳಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಮೊಹ್ಮದ್ ಮುನೀರ ತಿಳಿಸಿದ್ದಾರೆ.
ಸಾರ್ವಜನಿಕರ ಅಸಮಾಧಾನ: ಕಳೆದ 14 ವರ್ಷಗಳಿಂದ ದರಗಳನ್ನು ಪರಿಷ್ಕೃತಗೊಳಿಸಿಲ್ಲ ಎಂದು ನಗರಸಭೆ ಆಡಳಿತಾಧಿಕಾರಿಗಳು ಜನಾಭಿಪ್ರಾಯ ಕೇಳದೆ ಒಮ್ಮಿಂದೊಮ್ಮೆಲೆ ಏಕಾಭಿಪ್ರಾಯ ತೆಗೆದುಕೊಂಡು ಎಲ್ಲ ಲೈಸೆನ್ಸ್ ಶುಲ್ಕಗಳನ್ನು ದುಪ್ಪಟ್ಟು ಮಾಡಿದ್ದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೇ ಜನರಿಂದ ಆಯ್ಕೆಯಾಗಿರುವ ಸದಸ್ಯರಿಗೆ ಇನ್ನೂ ಅಧಿಕಾರ ಇಲ್ಲದ ವೇಳೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಕ್ಕೆ ಆಕ್ಷೇಪ ಕೇಳಿಬಂದಿದೆ.
ಹೀಗಿದೆ ಹೆಚ್ಚಳ ಶುಲ್ಕ..: ಬ್ರೆಡ್ ತಯಾರಿಸುವ ಕಾರ್ಖಾನೆಗೆ ಇದುವರೆಗೆ ವರ್ಷಕ್ಕೆ 150 ಲೈಸೆನ್ಸ್ ಫೀ ಇತ್ತು. ಅದನ್ನು ಈಗ 1 ಸಾವಿರಕ್ಕೆ ಏರಿಸಲಾಗಿದೆ. ಬ್ರೆಡ್ ಮಾರಾಟ ಅಂಗಡಿಗೆ 50ರಿಂದ 500, ಫೋಟೋ ಫ್ರೇಮ್ ಮತ್ತು ಗಾಜು ಕತ್ತರಿಸುವವರಿಗೆ 100ರಿಂದ 400, ವೈದ್ಯಕೀಯ ಪ್ರಯೋಗಾಲಯಗಳಿಗೆ 1'ಎ' ವರ್ಗಕ್ಕೆ 600 ರಿಂದ 2 ಸಾವಿರಕ್ಕೆ, ಬಿ ವರ್ಗಕ್ಕೆ 400 ರಿಂದ 1 ಸಾವಿರಕ್ಕೆ, ಬೆಳ್ಳಿ ಆಭರಣ ಮಾರಾಟದ ಅಂಗಡಿಗೆ 150 ಇದ್ದದ್ದನ್ನು 1 ಸಾವಿರಕ್ಕೆ ಏರಿಸಲಾಗಿದೆ.
ಇವುಗಳಿಗೆ ಶುಲ್ಕ ಹೆಚ್ಚಳವಿಲ್ಲ: ಕನ್ನಡಕ, ಹಣ್ಣಿನ ಅಂಗಡಿ, ಹೂ ಮಾರುವ ಅಂಗಡಿಗಳಿಗೆ, ಮಿನರಲ್ ವಾಟರ್, ಮಂಡಾಳ ಬಟ್ಟಿ ಸೇರಿದಂತೆ ಕೆಲವು ಮಳಿಗೆಗಳಿಗೆ ದರದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ.
  ನಗರಸಭೆಯ ದಾಖಲಾತಿ ಪಡೆಯಲು ಈಗಿರುವ ಬೆಲೆಗಳನ್ನು ದ್ವಿಗುಣಗೊಳಿಸಿಲಾಗಿದ್ದು, ಅದನ್ನು ಜು.11ರ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ನಗರಸಭೆಯು ಈ ಎಲ್ಲ ಬೆಲೆಗಳನ್ನು ದ್ವಿಗುಣಗೊಳಿಸುವ ಮುನ್ನ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು 30 ದಿನಗಳ ಕಾಲಾವಕಾಶ ಕೊಡಲಾಗಿತ್ತು. ಆದರೆ ಇದು ಜನರ ಗಮನಕ್ಕೇ ಬಂದಿಲ್ಲ. ಹೀಗಾಗಿ ಯಾರೂ ಆಕ್ಷೇಪಣೆ ಸಲ್ಲಿಸಲಾಗಿಲ್ಲ ಎಂಬುದು ತಿಳಿದು ಬಂದಿದೆ. ಆದಾಗ್ಯೂ ನಗರಸಭೆ ಈ ತೀರ್ಮಾನ ತೆಗೆದುಕೊಳ್ಳುವ ಮುನ್ನ ಸಾರ್ವಜನಿಕರ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕಿತ್ತು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಒಟ್ಟಾರೆ ನಗರಸಭೆಯಲ್ಲಿ ಜನಪ್ರತಿನಿಧಿಗಳಿಲ್ಲದ ಸಂದರ್ಭದಲ್ಲಿ ಆಡಳಿತಾಧಿಕಾರಿಗಳು ಕೈಗೊಂಡಿರುವ ಈ ದರ ಪರಿಷ್ಕರಣೆ ನಿರ್ಧಾರವನ್ನು ನಾಗರಿಕರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.