ತೊಗರಿ ರೈತರ ಅಲಸಂದಿ ಪ್ರೇಮ
ಕ.ಪ್ರ. ವಾರ್ತೆ, ಗುಲ್ಬರ್ಗ, ಜು.28
ತೊಗರಿ ಕಣಜವೆಂದೇ ಹೆಸರಾಗಿರುವ ಗುಲ್ಬರ್ಗದಲ್ಲಿ ರೈತರು ಅಲಸಂದಿ (ಸೋಯಾಬಿನ್) ಪರ ಹೆಚ್ಚಿನ ಒಲವು ತೋರುತ್ತಿರುವ ಬೆಳವಣಿಗೆ ದಾಖಲಾಗಿದೆ. ಇದು ಅಚ್ಚರಿದಾಯಕವಾದರೂ ವಾಸ್ತವ.
ಕೃಷಿ ಇಲಾಖೆಯ ಲಭ್ಯ ದಾಖಲೆಗಳ ಪ್ರಕಾರ ದಶಕದ ಬೆಳವಣಿಗೆಯನ್ನಾಧರಿಸಿ ಅಲಸಂದಿ ಬಿತ್ತನೆಗೆ ಎಂದಿನಂತೆ 7000 ಹೆಕ್ಟರ್ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ ಈ ಬಾರಿ ಜಿಲ್ಲೆಯ ತೊಗರಿ ರೈತರು ಅಲಸಂದಿ ಮೇಲಿನ ಪ್ರೀತಿ ದುಪ್ಪಟ್ಟಾಗಿದೆ. ಅದರ ಫಲವಾಗಿ ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಹಂಗಾಮಿನಲ್ಲಿ ಅಲಸಂದಿ 13 ಸಾವಿರ ಹೆಕ್ಟರ್ ಪ್ರದೇಶ ಬಿತ್ತನೆಯಾಗಿದೆ.
ದಿಢೀರನೆ ತೊಗರಿ ನಾಡಲ್ಲಿ ಕಾಣಿಸಿಕೊಂಡಿರುವ ಅಲಸಂದಿ ಪರ ರೈತರ ಪ್ರೀತಿ ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ಪರಿಣಿತರು ಸೇರಿದಂತೆ ಅನೇಕರನ್ನು ಬೆರಗುಗೊಳಿಸಿದೆ. ಜಿಲ್ಲೆಯಲ್ಲಿ ಮಣ್ಣಿನ ಮಕ್ಕಳು ಮೊದಲೆಲ್ಲಾ ಅಲಸಂದಿ ಅಂದ್ರೆ ಒಲ್ಲೆ ಎಂದು ಹೇಳುತ್ತಿದ್ದರು. ಹೀಗಾಗಿ ಕೇವಲ ಸಾವಿರ ಹೆಕ್ಟರ್ನಲ್ಲೇ ಅದರ ಬಿತ್ತನೆ ರಾಶಿ ಎಲ್ಲವೂ ಮುಗಿದು ಹೋಗುತ್ತಿತ್ತು.
ಆದರೀಗ ಅಲಸಂದಿಯನ್ನೇ ತಮ್ಮ ಹಣ ಗಳಿಸುವ ಬೆಳೆಯನ್ನಾಗಿ ಸ್ವೀಕರಿಸಿದಂತಿರುವ ರೈತರು ಅದರತ್ತಲೇ ವಾಲುತ್ತಿರುವುದು ನೋಡಿದರೆ ಬರುವ ದಿನಗಳಲ್ಲಿ ಅಲಸಂದಿ ಪ್ರದೇಶ ಇನ್ನೂ ಹಿಗ್ಗಿದರೂ ಅಚ್ಚರಿಪಡಬೇಕಾಗಿಲ್ಲ ಎಂಬ ಮಾತುಗಳು ಕೇಳಿ ಬರಲಾರಂಭಿಸಿವೆ.
13 ಸಾವಿರ ಹೆಕ್ಟರ್ ಬಿತ್ತನೆ: ಅಲಸಂದಿ ಅತಿ ಮಳೆಯನ್ನು ತಡೆದುಕೊಳ್ಳುವ ಬೆಳೆ. ಇದೇ ಕಾರಣದಿಂದಲೇ ಈ ಹಂಗಾಮಿನಲ್ಲಿ ಜಿಲ್ಲಾದ್ಯಂತ 13 ಸಾವಿರಕ್ಕೂ ಅಧಿಕ ಹೆಕ್ಟರ್ನಲ್ಲಿ ಈ ಬೆಳೆ ಹಸಿರು ಚಿಗುರಿದೆ. ರೈತರಿಗೆ ಇದರ ಮೇಲೆ ನಿಧಾನವಾಗಿ ಪ್ರೀತಿ ಉಕ್ಕುತ್ತಿದೆ. ಜೊತಗೆ ಅಲ್ಪಾವಧಿ ಬೆಳೆಯಾದರೂ ಬೆಲೆ ಮಾತ್ರ ಬಂಪರ್. ಕಳೆದ ಬಾರಿಯಂತೂ ಕ್ವಿಂಟಾಲ್ ಅಲಸಂದಿ ಬೆಲೆ 3,500 ರಿಂದ 4,000 ವರೆಗೂ ಇತ್ತು. ಇವೆಲ್ಲ ಕಾರಣಗಳೇ ಇರಬೇಕು, ಗುಲ್ಬರ್ಗ ರೈತರಿಗೂ ಅಲಸಂದಿ ಅಚ್ಚುಮೆಚ್ಚು ಆಗಲು.
ತೊಗರಿ ಕ್ಷೇತ್ರ ಹಿಗ್ಗಿಲ್ಲ: ಮುಂಗಾರು ಹಂಗಾಮಿನಲ್ಲಿ ಹಣ ತರುವ ಬೇಳೆಕಾಳು ಬೆಳೆಗಳನ್ನೇ ರೈತರು ಬಿತ್ತಿ ಬೆಳೆಯುತ್ತಾರೆ. ಜಿಲ್ಲೆಯಲ್ಲಿ ಹೆಸರು- ಉದ್ದು, ಎಳ್ಳು ಬಿತ್ತನೆ ಅವಧಿ ಪೂರ್ಣಗೊಂಡಾ ಕ್ಷಣ ರೈತರೆಲ್ಲರೂ ತೊಗರಿಯತ್ತ ವಾಲುತ್ತಿದ್ದರು. ಈ ವರ್ಷ ಈ ಬೆಳವಣಿಗೆ ನಿಂತು ಹೋಗಿದೆ. ಕಳೆದ ವರ್ಷದಷ್ಟೇ, ಅಂದರೆ 3.65 ಲಕ್ಷ ಹೆಕ್ಟರ್ ಪ್ರದೇಶವೇ ತೊಗರಿ ಬಿತ್ತನೆ ಗುರಿಯಾಗಿದೆ. ವಾರ್ಷಿಕ ಅಲ್ಪ ಪ್ರಮಾಣದಲ್ಲಿ ಕಂಡು ಬರುತ್ತಿದ್ದ ಏರಿಕೆ ಈ ವರ್ಷ ಕಂಡಿಲ್ಲ. ಬದಲಾಗಿ ರೈತರು ಅಲಸಂದಿಯನ್ನು ಬಿತ್ತಿದ್ದರಿಂದ ಆ ಪ್ರದೇಶ ಹಿಗ್ಗಿದೆ.
ಎಕರೆಗೆ 7 ರಿಂದ 8 ಕ್ವಿಂಟಾಲ್ ಇಳುವರಿಗೆ ಖೋತಾ ಅಂತೂ ಇಲ್ಲ. ವಾತಾವರಣ ಅದೆಷ್ಟೇ ಪ್ರತಿಕೂಲವಾಗಿದ್ದರೂ ಅಲಸಂದಿ ಅದನ್ನೆಲ್ಲ ಮೆಟ್ಟಿ ನಿಲ್ಲುವ ಬೆಳೆಯಾಗಿದೆ.
-ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

