ಗುಲ್ಬರ್ಗಾ

ಅಧಿಕಾರಿಗಳ ಅದೇ ರಾಗ, ಅದೇ ಹಾಡು

Published On :

ಕನ್ನಡಪ್ರಭ ವಾರ್ತೆ, ಆಳಂದ, ಜೂ.5
23 ತಾಪಂ ಸದಸ್ಯರು, 7 ಜಿಪಂ ಸದಸ್ಯರು ಅಲ್ಲದೆ, ತಾಲೂಕಿಗೆ ಸಂಬಂಧಿಸಿದ ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರದ ಶಾಸಕರು ಮತ್ತು ಆಳಂದ ವಿಧಾನಸಭಾ ಕ್ಷೇತ್ರದ ಹಿಂದಿನ ಶಾಸಕರ ಅಧಿಕಾರವಧಿಯ ಮಧ್ಯೆಯೂ ಇಲಾಖೆಯ ಯಾವ ಕಾಮಗಾರಿಗಳು ಬಹುತೇಕ ಪೂರ್ಣಗೊಳ್ಳದೆ ಇರುವ ಅಂಶವು ಬುಧವಾರ ನಡೆದ ಸಭೆಯಲ್ಲಿ ಬಯಲಾಗಿದೆ.
ಪಟ್ಟಣದ ತಾಪಂ ಅಧ್ಯಕ್ಷೆ ಬಾಯಮ್ಮ ಮೋಹನಗೌಡ ಪಾಟೀಲರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಕಟ್ಟಡ ಕಾಮಗಾರಿ ನೆನೆಗುದ್ದಿಗೆ ಬಿದ್ದಿರುವ ಕುರಿತು ಚರ್ಚಿಸಲಾಯಿತು.
ಕಳೆದ ಮೂರ್ನಾಲ್ಕು ವರ್ಷಗಳಿಂದ ಕೈಗೆತ್ತಿಕೊಂಡ ಶಾಲೆ, ಕಾಲೇಜು, ಅಂಗನವಾಡಿ ಕಟ್ಟಡ, ಶೌಚಾಲಯ ಹೀಗೆ ಇನ್ನಿತರ ಕಾಮಗಾರಿಗಳು ಪೂರ್ಣಗೊಳ್ಳದೆ ನೆನೆಗುದ್ದಿಗೆ ಬಿದ್ದಿವೆ. ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ ಏಕೆ ಎಂದು ಸಭೆಯಲ್ಲಿ ಜೆಡಿಎಸ್‌ನ ತಾಪಂ ಉಪಾಧ್ಯಕ್ಷ ಲಕ್ಷ್ಮಣ ಬೀಳಗಿ ಹಾಗೂ ಸ್ಥಾಯಿ ಸಮಿತಿ ಸದಸ್ಯ ಮಲ್ಲಣ್ಣ ನಾಗೂರೆ ಅವರು ಭೂಸೇನಾ ಅಧಿಕಾರಿಗಳಿಗೆ ಏರು ಧ್ವನಿಯಲ್ಲಿ ಪ್ರಶ್ನಿಸಿದರು.
ವಾದ- ಪ್ರತಿವಾದ: ಸಹಾಯಕ ನಿರ್ದೇಶಕ ವಿ.ಬಿ. ಕಲಗುರ್ಕಿ ಅವರು ತಾಲೂಕಿನಲ್ಲಿ ನಡೆದ ವಿವಿಧ ಕಾಮಗಾರಿಗಳ ಪ್ರಗತಿಯಲ್ಲಿವೆ. ಮುಕ್ತಾಯ ಹಂತದಲ್ಲಿವೆ ಎಂದು ಉತ್ತರಿಸಿದಾಗ ಶಾಲೆಗಳಲ್ಲಿ ಎಲ್ಲೂ ಶೌಚಾಲಯ ಪೂರ್ಣಗೊಳಿಸಿಲ್ಲ. ಇದಕ್ಕಾಗಿ ಸಮಿತಿ ರಚನೆಯ ಮೂಲಕ ಪರಿಶೀಲನೆಗೆ ದಿನಾಂಕ ನಿಗದಿಪಡಿಸಬೇಕೆಂದು ವಾದ- ಪ್ರತಿವಾದ ನಡೆಯಿತು.
ಕೃಷಿ ಇಲಾಖೆ: ಮುಂಗಾರು ಹಂಗಾಮಿಗಾಗಿ ಬೀಜ, ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ಸಮರ್ಪಕ ಮಳೆಯಾದ ನಂತರ ರೈತ ಸಂಪರ್ಕ ಕೇಂದ್ರಗಳಿಂದ ರಿಯಾಯಿತಿ ಬೀಜ ವಿತರಣೆ ಮಾಡಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಶಶಾಂಕ ಶಹಾ ಅವರು ಸಭೆಗೆ ಮಾಹಿತಿ ಒದಗಿಸಿದರು.
ಬೇಯದ ಬಿಸಿಯೂಟ: ಅಕ್ಷರ ದಾಸೋಹ ಅಧಿಕಾರಿ ಸಿದ್ದರಾಮ ಚನ್ನಿಗುಂಡ ವರದಿ ಮಂಡಿಸಿದರು. ಬೇಸಿಗೆಯಲ್ಲಿ ಮಕ್ಕಳಿಗೆ ಬಿಸಿಯೂಟ ವಿತರಣೆಗೆ ಸರ್ಕಾರ ನೀಡಿತ್ತು. ಯಾವ ಶಾಲೆಯಲ್ಲಿ ಬಿಸಿಯೂಟ ನೀಡಿದ್ದೀರಿ ಎಂದು ಲಕ್ಷ್ಮಣ ಬೀಗಿ ಪ್ರಶ್ನಿಸಿದಾಗ, ಅಧಿಕಾರಿಗಳು ಅನೇಕ ಕಡೆ ಊಟ ನೀಡಲಾಗಿದೆ. ರಜೆಯಲ್ಲಿ ಆಹಾರಧಾನ್ಯ ಪೂರೈಕೆಯಾಗಿಲ್ಲ. ಹಿಂದಿದ್ದ ಆಹಾರ ಧಾನ್ಯದಲ್ಲೇ ಊಟ ನೀಡಲಾಗಿದೆ ಎಂದು ಹೇಳಿದರು.
ಸಭೆಗೆ ಅಧಿಕಾರಿಗಳೇ ಬರಬೇಕು: ತಾಪಂ ಇಒ ಅಬ್ದುಲ್ ಸಲಾಂ ಮಾತನಾಡಿ, ಪ್ರತಿ ಸಭೆಗೆ ಇಲಾಖೆಯ ಅಧಿಕಾರಿಗಳು ಹಾಜರಾಗಬೇಕು. ತಮ್ಮ ಪರವಾಗಿ ಸಿಬ್ಬಂದಿ ಕಳುಹಿಸಿದೆ ಸಮರ್ಪಕವಾದ ವರದಿಯ ಪ್ರತಿಗಳನ್ನು ನೀಡಬೇಕು. ಜೂ.10 ರಂದು ಕರೆಯುವ ಸಾಮಾನ್ಯ ಸಭೆಗೆ ತಪ್ಪದೇ ಎಲ್ಲರೂ ಹಾಜರಿರಬೇಕು ಎಂದು ಸೂಚಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಸುಚಿತ್ರಾ ಬಿಲಗುಂದಿ, ಸಮನ್ವಯಾಧಿಕಾರಿ ಬಸವಂತರಾಯ ಜಿಡ್ಡೆ, ಜಲಾನಯನ ಅಧಿಕಾರಿ ಮೋಮಿನ್, ತೋಟಗಾರಿಕೆಯ ರಾಹುಲ್, ಸಾಮಾಜಿಕ ಅರಣ್ಯಾಧಿಕಾರಿ ಮಹ್ಮದ್ ಅಲಿ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಸಂಜಯ ರೆಡ್ಡಿ, ಸಮಾಜ ಕಲ್ಯಾಣ ಪ್ರಭಾರಿ ಅಧಿಕಾರಿ ಕಮಲಾಬಾಯಿ ತಮನ್ ಇತರರ ಅಧಿಕಾರಿಗಳು ಇಲಾಖೆ ವರದಿ ಮಂಡಿಸಿದರು. ತಾಪಂ ವ್ಯವಸ್ಥಾಪಕ ಬಸವರಾಜ ಪಾಟೀಲ್, ಯೋಜನಾಧಿಕಾರಿ ಗುರುನಾಥ ಗೌಡಪ್ಪನವರು ಹಾಜರಿದ್ದರು.

ಅಬಸಾಥ್ ರಾಜಕಾರಣ
ಪ್ರತಿ ಸಭೆಯಲ್ಲಿ ಅಧಿಕಾರಿಗಳು ಅದೇ ವರದಿ ಓದುತ್ತಾರೆ, ಸಭೆ ಮುಗಿದ ಮೇಲೆ ನೀವ್ಯಾರು ನಾವ್ಯಾರು ಎನ್ನುತ್ತಾರೆ. ಅಬ್ಬಬ್ಬಾ ಎಂದರೆ ವರ್ಷದಲ್ಲೇ ಪೂರ್ಣವಾಗಬೇಕಿದ್ದ ಕ್ಷೇತ್ರದಲ್ಲಿನ ಕಟ್ಟಡ ಕಾಮಗಾರಿಗಳು ಮೂರ್ನಾಲ್ಕು ವರ್ಷ ಕಳೆದರೂ ಪೂರ್ಣಗೊಳ್ಳುತ್ತಿಲ್ಲ. ಜನಪ್ರತಿನಿಧಿಗಳು ಉನ್ನತ ಮಟ್ಟದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಗಿ ಎಲ್ಲವೂ ಅಬಸಾಥ್ ರಾಜಕಾರಣ ಎನ್ನುವಂತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.