ಗುಲ್ಬರ್ಗಾ

ಪದವಿ ಕಾಲೇಜಿನ ವಿಲೀನ; ಖಂಡನೆ

Published On :

ಯಾದಗಿರಿ: ಪದವಿ ಕೋರ್ಸ್‌ಗಳಾದ ಬಿಎ, ಬಿಎಸ್ಸಿ, ಬಿಬಿಎಂ, ಬಿಸಿಎ ಐಚ್ಛಿಕ ವಿಷಯಗಳಿಗೆ 15ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೆ, ಆ ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ವರ್ಗಾವಣೆ(ವಿಲೀನ) ಮಾಡುವ ಸರ್ಕಾರದ ನಿರ್ಧಾರವನ್ನು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ ಖಂಡಿಸಿದೆ. ಈ ನೀತಿಯು ಪದವಿ ಶಿಕ್ಷಣದ ಖಾಸಗೀಕರಣಕ್ಕೆ ರಹದಾರಿಯೆಂದು ಸಂಘಟನೆ ಅಭಿಪ್ರಾಯಪಟ್ಟಿದೆ. ಕೂಡಲೇ ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯಬೇಕೆಂದು ಎಐಡಿಎಸ್‌ಒ ಜಿಲ್ಲಾ ಸಮಿತಿ ಆಗ್ರಹಿಸಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕೊರತೆ, ಶಿಕ್ಷಕರ ಹಾಗೂ ಮೂಲ ಸೌಲಭ್ಯಗಳ ಕೊರತೆಗೆ ಕಾರಣಗಳನ್ನು ಅರಿತು, ಪ್ರಜಾತಾಂತ್ರಿಕ ಚರ್ಚೆಗಳ ಮುಖಾಂತರ ಪರಿಹಾರವನ್ನು ಕಂಡುಕೊಳ್ಳಬೇಕು. ಅದನ್ನು ಮಾಡದೇ ಸರ್ಕಾರವು ಬೆರಳಿಗೆ ಗಾಯವಾಗಿದೆ ಎಂದು ಬೆರಳನ್ನೇ ಕತ್ತರಿಸಲು ಹೊರಟಿದೆ. ಒಟ್ಟಿನಲ್ಲಿ ಇಂತಹ ನೀತಿಗಳಿಂದಾಗಿ ಅಂತಿಮವಾಗಿ ಶಿಕ್ಷಣವನ್ನು ಖಾಸಗೀಕರಣದೆಡೆಗೆ ಸಾಗಿಸುತ್ತಿರುವ ಸರ್ಕಾರದ ಹುನ್ನಾರವು ಎದ್ದು ಕಾಣುತ್ತದೆ. ವಿದ್ಯಾರ್ಥಿಗಳನ್ನು ವರ್ಗಾಯಿಸುವುದರಿಂದ ಅತಿಥಿ ಉಪನ್ಯಾಸಕರ ನೇಮಕಾತಿ ಸಮಸ್ಯೆ ತಪ್ಪುತ್ತದೆ ಎಂದು ಹೇಳುತ್ತ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಶಾಶ್ವತವಾಗಿ ಮುಚ್ಚುವ ಹೆಜ್ಜೆ ಸರ್ಕಾರದ್ದಾಗಿದೆ. ಇದರಿಂದ ಖಾಸಗೀ ಕಾಲೇಜುಗಳು ಎಲ್ಲೆಡೆ ತಲೆಯೆತ್ತಿ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುವುದರಲ್ಲಿ ಸಂದೇಹವಿಲ್ಲ. ಖಾಸಗೀಕರಣದ ಪರವಾದ ಈ ನೀತಿಯನ್ನು ಕೈಬಿಟ್ಟು ಎಲ್ಲಾ ರೀತಿಯ ಮೂಲ ಸೌಲಭ್ಯಗಳೊಂದಿಗೆ ಅವಶ್ಯವಿರುವಷ್ಟು ಸರ್ಕಾರಿ ಪದವಿ ಮಹಾವಿದ್ಯಾಲಯಗಳಿಗೆ ಅನುಮತಿ ಕೊಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಐಡಿಎಸ್‌ಒ ಜಿಲ್ಲಾ ಸಮಿತಿ ಅಧ್ಯಕ್ಷೆ ಗೌರಮ್ಮ ಸಿ.ಕೆ. ಎಚ್ಚರಿಸಿದ್ದಾರೆ.
ಸಚಿವರ ಪ್ರವಾಸ
ಯಾದಗಿರಿ: ಜಿಲ್ಲಾ ಉಸ್ತುವಾರಿ ಮತ್ತು ಜವಳಿ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಬಾಬುರಾವ ಚಿಂಚನಸೂರ್ ಜೂ.14ರಿಂದ 16ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಜೂ.14ರಂದು ಬೆಳಗ್ಗೆ 11.30ಕ್ಕೆ ಯಾದಗಿರಿ ಸನ್ನತಿ ಏತ ನೀರಾವರಿ ಯೋಜನೆ ವೀಕ್ಷಣೆ, ಯಾದಗಿರಿ ನಗರ ಅಭಿವೃದ್ಧಿ ಕುರಿತು ಪರಿಶೀಲನೆ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದು, ಸಂಜೆ 6 ಗಂಟೆಗೆ ಗುಲ್ಬರ್ಗಕ್ಕೆ ಪ್ರಯಾಣ ಬೆಳೆಸುವರು. ಜೂ.15ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಸಲಿದ್ದಾರೆ. ಎಲ್ಲ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಂಜೆ 6 ಗಂಟೆಗೆ ಗುಲ್ಬರ್ಗಕ್ಕೆ ಪ್ರಯಾಣ ಬೆಳೆಸುವರು. ಜೂ. 16ರಂದು ಬೆಳಗ್ಗೆ 11ಕ್ಕೆ ಗುರುಮಠಕಲ್ ಕ್ಷೇತ್ರದ ಬಂದಳ್ಳಿಯಲ್ಲಿ ಬ್ಯಾರೇಜ್ ಉದ್ಫಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.