ಕುಸಿದ ಮನೆ; ಇಬ್ಬರಿಗೆ ಗಾಯ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರದ ವಾರ್ಡ್ 6ರ ಭೀಮಶಪ್ಪ ನಗರದಲ್ಲಿ ಶನಿವಾರ ರಾತ್ರಿ ಈರಣ್ಣ ಬೊರಗಿ ಎಂಬುವವರ ಮನೆ ಕುಸಿದು ಬಿದ್ದಿದ್ದು, ಇಬ್ಬರು ಮಕ್ಕಳಿಗೆ ಗಾಯವಾಗಿದ್ದು, ಇಡೀ ಕುಟುಂಬ ಸದಸ್ಯರು ಪ್ರಾಣಾಪಾಯದಿಂದ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.
ರಾತ್ರಿ ಇಡೀ ಕುಟುಂಬ ಮಲಗಿದ್ದಾಗ ಏಕಾಏಕಿ ಮನೆಯ ಜಂತಿಯ ಕಟ್ಟಿಗೆಗಳು ಮುರಿದು ಬಿದ್ದಿದ್ದರಿಂದ ಛಾವಣಿಯ ಕಲ್ಲುಗಳು ಕೆಳಗಿ ಬಿದ್ದಿವೆ. ಕಲ್ಲು ಬಿದ್ದಿದ್ದರಿಂದ ಪೂಜಾ (14), ದುರ್ಗಪ್ಪ (10) ಎಂಬ ಮಕ್ಕಳಿಗೆ ಗಾಯವಾಗಿವೆ. ಇನ್ನಿಬ್ಬರು ಮಕ್ಕಳಿಗೆ ಯಾವುದೇ ಹಾನಿಯಾಗಿಲ್ಲ. ಈರಣ್ಣ ಹಾಗೂ ಪತ್ನಿ ಇನ್ನೊಂದು ಕೋಣೆಯಲ್ಲಿ ಮಲಗಿದ್ದರಿಂದ ಅವರಿಗೆ ಯಾವುದೇ ಹಾನಿಯಾಗಿಲ್ಲ. ಮನೆ ಕುಸಿದಿದ್ದರಿಂದ ಆ ಕೋಣೆಯಲ್ಲಿದ್ದ ಟಿವಿ, ಹೊಲಿಗೆ ಯಂತ್ರ, ಪ್ಯಾನ್, ಕುರ್ಚಿಗಳು ಹಾನಿಗೆ ಒಳಗಾಗಿವೆ.
ವಿಷಯ ತಿಳಿದ ಸ್ಥಳೀಯರಾದ ದೇವದಾಸ, ಶರಣಪ್ಪ ಬನ್ನೇರ್, ಸದಾನಂದ ಕುಂಬಾರ 108 ಅಂಬುಲೆನ್ಸ್ ಕರೆಸಿ ಗಾಯಾಳುಗಳಿಗೆ ಆಸ್ಪತ್ರೆಗೆ ಸೇರಿಸಿದರು. ನಗರಸಭೆ ಸದಸ್ಯರಾದ ದುರ್ಗಪ್ಪ ಪವಾರ, ಲಕ್ಷ್ಮೀಬಾಯಿ ಕುಸಾಳೆ, ಶ್ಯಾಮಕುಮಾರ ದಂಡಗುಲಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಂಕೆ ಬೇಟೆ; ಮೂವರ ಬಂಧನ
ಗುಲ್ಬರ್ಗ: ತಾಲೂಕಿನ ಸಿಂಧಗಿ ತಾಲೂಕಿನಲ್ಲಿ ಜಿಂಕೆ ಬೇಟೆಯಾಡಿದ ಮೂವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಪ್ಸರ್ ತಂದೆ ಮಕ್ಬೂಲ್ ಪಾಶಾ, ಮನೋಹರ ತಂದೆ ಸಾಬಯ್ಯ ಘಾಟೆ ಮತ್ತು ಬಸವರಾಜ ತಂದೆ ಭದ್ರಪ್ಪಾ ವಡಕೇರಾ ಎಂಬುವರನ್ನು ಬಂಧಿಸಿ ಜಿಂಕೆಯ ಕಾಲು, ಚರ್ಮ ಮತ್ತು ಮಾಂಸವನ್ನು ಜಪ್ತಿ ಮಾಡಿಕೊಂಡಿದ್ದಾರೆ. ಜಿಂಕೆಯನ್ನು ಬೇಟೆಯಾಡಿ ಗ್ರಾಮದ ಮರಗಮ್ಮದೇವಿ ಮಂದಿರದ ಬಳಿ ಮಾಂಸ ಪಾಲು ಮಾಡಿಕೊಳುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಗ್ರಾಮೀಣ ಠಾಣೆಯ ಸಿಪಿಐ ಸತೀಶ, ಪಿಎಸ್ಐ ಆನಂದರಾವ ಹಾಗೂ ಸಿಬ್ಬಂದಿ ಭಾನುವಾರ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅನೀಲ ತಂದೆ ಪೀರಪ್ಪ ಜಮಾದಾರ, ಚಂದ್ರಶಾ ತಂದೆ ಶರಣಪ್ಪ ಜಮಾದಾರ ಮತ್ತು ಲಕ್ಷ್ಮಣ ತಂದೆ ಸಿದ್ದಪ್ಪ ಪೂಜಾರಿ ಎಂಬವರು ಪರಾರಿಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ
ಗುಲ್ಬರ್ಗ: ಗಂಡ ಮತ್ತು ಮಾವ ನೀಡುತ್ತಿದ್ದ ದೈಹಿಕ, ಮಾನಸಿಕ ಕಿರುಕುಳ ತಾಳದೆ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಗಣೇಶ ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಸೋಮವಾರ ನಡೆದಿದೆ. ಶ್ರೀದೇವಿ ಗಂಡ ಸಿದ್ದರಾಮ(28) ಆತ್ಮಹತ್ಯೆ ಮಾಡಿಕೊಂಡ ನತದೃಷ್ಟೆ. ಆತ್ಮಹತ್ಯೆಗೆ ಶರಣಾದ ಶ್ರೀದೇವಿ ಸಿದ್ದರಾಮನ 3ನೇ ಪತ್ನಿಯಾಗಿದ್ದು, ಎರಡು ಗಂಡು, ಹೆಣ್ಣು ಮಗುವಿದೆ ಎಂದು ತಿಳಿದು ಬಂದಿದೆ. ಗಂಡ ಮತ್ತು ಮಾವ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿರುವುದರಿಂದ ಬೇಸತ್ತ ಶ್ರೀದೇವಿ ಸೋಮವಾರ ಬೆಳಗ್ಗೆ ಗಂಡ ಸಿದ್ದರಾಮ ಹಾಲು ತರಲೆಂದು ಹೊರಗೆ ಹೋಗಿದ್ದ ವೇಳೆ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳ ತಾಯಿ ಶರಣಮ್ಮ ಎಂ.ಬಿ. ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಯುವತಿಯ ನಂಬಿಸಿ ಅಪಹರಣ
ಗುಲ್ಬರ್ಗ: ಮದುವೆಯಾಗುವುದಾಗಿ ನಂಬಿಸಿ 19 ವರ್ಷದ ಯುವತಿಯನ್ನು ಯುವಕನೊಬ್ಬ ಒತ್ತಾಯಪೂರ್ವಕವಾಗಿ ಅಪಹರಿಸಿಕೊಂಡು ಹೋದ ಘಟನೆ ಕಮಲಾಪುರ ಗ್ರಾಮದಲ್ಲಿ ನಡೆದಿದೆ. ಶೈಲೇಶ ತಂದೆ ಶ್ರಾವಣ ಗಾಜರೆ ಎಂಬ ಯುವಕ ಯುವತಿಯನ್ನು ಅಪಹರಿಸಿಕೊಂಡು ಹೋಗಿ ಮುಂಬೈನ ಕುರಲಾದಲ್ಲಿನ ಮನೆಯೊಂದರಲ್ಲಿ ಬಚ್ಚಿಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಕಮಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಖರ್ಗೆಗೆ ರೇಲ್ವೆ ಮಂತ್ರಿ: ಅಭಿವೃದ್ಧಿಗೆ ಸಂದ ಗೌರವ
ಗುಲ್ಬರ್ಗ/ಶಹಾಬಾದ್: ಕೇಂದ್ರ ಸರ್ಕಾರ ಮಲ್ಲಿಕಾರ್ಜುನ ಖರ್ಗೆಯವರಿಗೆ ಕೇಂದ್ರ ರೇಲ್ವೆ ಖಾತೆ ಸಚಿವ ಸ್ಥಾನ ನೀಡಿದ್ದು, ಅಭಿವೃದ್ಧಿ ಪರ ಅವರ ಚಿಂತನೆಗೆ ಸಂದ ಗೌರವ ಎಂದು ಚಿತ್ತಾಪುರ ತಾಲೂಕ ಎಪಿಎಂಸಿ ಮಾಜಿ ಅಧ್ಯಕ್ಷ ವೀರಣ್ಣಗೌಡ ಪರಸರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ನಾಲವಾರದಲ್ಲಿ ಪತ್ರಿಕಾ ಹೇಳಿಕೆ ನೀಡಿ, ಖರ್ಗೆ ರಾಜ್ಯದಲ್ಲಿದ್ದಾಗ, ಗುಲ್ಬರ್ಗಕ್ಕೆ ಹೈಕೋರ್ಟ್ ಪೀಠ, ಪೊಲೀಸ್ ತರಬೇತಿ ಕೇಂದ್ರ ತಂದಿದ್ದಲ್ಲದೆ, ಕೇಂದ್ರದಲ್ಲಿ ಯಾರ ಗಮನಕ್ಕೂ ಬಾರದಂಥ ಕಾರ್ಮಿಕ ಸಚಿವರಾದ ನಂತರ ಗುಲ್ಬರ್ಗ ಜಿಲ್ಲೆಗೆ ಇಎಸ್ಐ ಕಾಂಪ್ಲೆಕ್ಸ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಅನುಮೋದನೆ ಅಲ್ಲದೆ ಹಲವು ಅಭಿವೃದ್ಧಿಕಾರ್ಯಗಳನ್ನು ಕೈಗೊಂಡರು. ಹಲುವು ವರ್ಷಗಳಿಂದ ಹೋರಾಟ ನಡೆಸಿದರು. ಈಗ ಕೇಂದ್ರ ರೇಲ್ವೆ ಸಚಿವರಾಗಿದ್ದು, ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ರೇಲ್ವೆ ವಿಭಾಗೀಯ ಕಚೇರಿ, ರೇಲ್ವೆ ಕಾರ್ಯಾಗಾರ ಸ್ಥಾಪನೆ ಮಾಡುವುದು, ನಾಲವಾರದಲ್ಲಿ ರೈಲುಗಳ ನಿಲುಗಡೆಗೆ ಖರ್ಗೆ ಪ್ರಯತ್ನಿಸುವರು ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂದು ನಗರಕ್ಕೆ ಉತ್ತರಾದಿ ಮಠಾಧೀಶ
ಗುಲ್ಬರ್ಗ: ಗುಲ್ಬರ್ಗ ಮಹಾನಗರಕ್ಕೆ ಜೂನ್ 18 ಉತ್ತರಾದಿ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಪಾದಂಗಳು ಆಗಮಿಸುತ್ತಿದ್ದಾರೆ. ಶ್ರೀಮದ್ಭಾಗವತ ಸಂವತ್ಸರ ಜ್ಞಾನ ಸತ್ರದ ದ್ವಿತೀಯ ಸ್ಕಂದದ ಮಂಗಳ ಮಹೋತ್ಸವದ ಪ್ರಯುಕ್ತ ಗುಲ್ಬರ್ಗಕ್ಕೆ 1 ದಿನದ ಭೇಟಿ ನೀಡುತ್ತಿರುವ ಶ್ರೀಗಳು ಈ ಸಂದರ್ಭದಲ್ಲಿ ಬ್ರಹ್ಮಪುರ ರಾಯರ ಮಠದಲ್ಲಿ ಸಂಜೆ 6.30ಕ್ಕೆ ಭಕತ್ರನ್ನು ಉದ್ದೇಶಿಸಿ ಅನುಗ್ರಹ ಸಂದೇಶ ನೀಡಲಿದ್ದಾರೆ ಎಂದು ಉತ್ತರಾದಿ ಮಠದ ಮಠಾಧಿಕಾರಿ ಘಂಟಿ ರಾಮಾಚಾರ್ಯ ತಿಳಿಸಿದ್ದಾರೆ. ವಿಶ್ವ ಮಧ್ವ ಮಹಾ ಪರಿಷತ್, ಗುಲ್ಬರ್ಗದಲ್ಲಿ ಶ್ರೀಮದ್ಭಾಗವತ ಸಂವತ್ಸರ ಸತ್ರದ ದ್ವಿತೀಯ ಸ್ಕಂದದ ಪ್ರವಚನ ಪಂಡಿತ ಹಣಮಂತಾಚಾರ್ಯ ಸರಡಗಿ ನಡೆಸಿಕೊಡುತ್ತಿದ್ದಾರೆ.
ಇಂದು ಯಾಜ್ಞವಲ್ಕ್ಯ ಮಹರ್ಷಿ ಜಯಂತಿ
ಗುಲ್ಬರ್ಗ: ಯೋಗೀಶ್ವರ ಯಾಜ್ಞವಲ್ಕ್ಯ ಮಹರ್ಷಿ ಜಯಂತಿ ಉತ್ಸವ ಇಲ್ಲಿನ ಯಾಜ್ಞವಲ್ಕ್ಯ ಸಭಾ ಭವನದಲ್ಲಿ ಜೂನ್ 18ಂದು ನಡೆಯಲಿದೆ.ಬೆಳಗ್ಗೆ ಅಷ್ಟೋತ್ತರ ಪಾರಾಯಣ, ಪಲ್ಲಕ್ಕಿ ಉತ್ಸವ, ಪರ್ಜನ್ಯ ಹೋಮ(ಭೀಮಪ್ಪಯ್ಯ ದೇವರು ನಡೆಸಿಕೊಡುವರು). ನಂತರ ಗಣ್ಯರಿಗೆ ಸನ್ಮಾನ, ತೀರ್ಥ- ಪ್ರಸಾದ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 7 ಗಂಟೆಗೆ ಖ್ಯಾತ ಸಂಗೀತಗಾರ ಹಣಮಂತರಾವ ಮಳ್ಳಿ ಹಾಗೂ ರಮೇಶ ಕುಲಕರ್ಣಿ ಇವರಿಂದ ದಾಸವಾಣಿ ನಡೆಯಲಿದೆ ಎಂದು ಸಮಿತಿಯ ಶಾಮಾಚಾರ್ಯ ಬೈಚಬಾಳ ತಿಳಿಸಿದ್ದಾರೆ.
ಮರಳಿಗೆ ನಿಷೇಧ
ಚಿತ್ತಾಪುರ: ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆಯನ್ನು ನಿಷೇಧಿಸಿದ್ದರೂ ಕೆಲವು ಕಡೆ ಅಕ್ರಮ ಮರಳು ಸಾಗಣಿಕೆ ನಡೆದಿರುವುದು ನಮ್ಮ ಗಮನಕ್ಕೆ ಬಂದಿದ್ದು, ಅದನ್ನು ತಡೆಯಲು ಹಲವು ಕಡೆ ದಾಳಿ ಮಾಡಿ ಮರಳು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿ, ಮರಳು ತೆಗೆಯದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಮಲ್ಲೇಶ ತಂಗಾ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.ಲೋಕೋಪಯೋಗಿ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್ ಇಲಾಖೆಯವರನ್ನೊಳಗೊಂಡ ವಿಶೇಷ ತನಿಖಾ ತಂಡ ರಚಿಸಿದಲ್ಲಿ ಸಂಪೂರ್ಣ ಅಕ್ರಮ ಮರಳು ಸಾಗಣಿ ತಡೆಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

