ಮರಿಯಮ್ಮ ಚರ್ಚ್ ಲೋಕಾರ್ಪಣೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.19
ಗುಲ್ಬರ್ಗ, ಯಾದಗಿರಿ, ಬೀದರ್ ಮತ್ತು ಬಿಜಾಪುರ ಕಂದಾಯ ಜಿಲ್ಲೆಗಳ ಅಧಿಕಾರ ವ್ಯಾಪ್ತಿಯ ಗುಲ್ಬರ್ಗ ಕ್ಯಾಥೋಲಿಕ್ ಧರ್ಮ ಪ್ರಾಂತದ ಪ್ರಧಾನಾಲಯದ ನೂತನ ಕಟ್ಟಡವು ಧಾರ್ಮಿಕ ಸೇವೆಗೆ ಬುಧವಾರ ಸಮರ್ಪಣೆಗೊಂಡಿತ್ತು.
ಗಾಥಿಕ್ ಶೈಲಿಯ ಕಮಾನು ಕಿಟಕಿ ಮತ್ತು ಬಾಗಿಲುಗಳಿರುವ ಇದು, ಗುಮ್ಮಟಗಳ ನಗರ ಗುಲ್ಬರ್ಗದಲ್ಲಿ ವಿಶಿಷ್ಟ ಶೈಲಿಯ ಎರಡು ಗೋಪುರಗಳು ಮತ್ತು ಒಂದು ಗುಮ್ಮಟದಿಂದ ಪ್ರಮುಖ ಹೆಗ್ಗುರುತಾಗಲಿದೆ.
ಇತಿಹಾಸ: 20ನೇ ಶತಮಾನದ ಉತ್ತರಾರ್ಧದಲ್ಲಿ ಸ್ಥಳೀಯರೊಂದಿಗೆ ತಮಿಳುನಾಡು ಮತ್ತು ಕೇರಳ ಮೂಲದ ಕ್ರೈಸ್ತರು ಗುಲ್ಬರ್ಗ ಪಟ್ಟಣದಲ್ಲಿ ಬಂದು ನೆಲೆಸತೊಡಗಿದರು. 1960ರಲ್ಲಿ ಬೆರಳಣಿಕೆಯಷ್ಟಿದ್ದ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದ ಅಧ್ಯಾತ್ಮಿಕ ಅವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿಯನ್ನು ರಾಯಚೂರಿನಲ್ಲಿರುವ ಚರ್ಚಿನ ಧರ್ಮಕ್ಷೇತ್ರದ ಪಾಲನಾ ಗುರುಗಳಿಗೆ ಒಪ್ಪಿಸಲಾಗಿತ್ತು.
ಆಗ ಈ ಪ್ರದೇಶ ಹೈದ್ರಾಬಾದ್ ಕ್ಯಾಥೋಲಿಕ್ ಧರ್ಮಪ್ರಾಂತಕ್ಕೆ ಸೇರಿತ್ತು. ರಾಜ್ಯ ಪುನರ್ ವಿಂಗಡಣೆ ನಂತರ ಹೈ.ಕ. ವ್ಯಾಪ್ತಿಯ ಎಲ್ಲ ಜಿಲ್ಲೆಗಳೊಂದಿಗೆ ಗುಲ್ಬರ್ಗ ಕಂದಾಯ ಜಿಲ್ಲೆಯು ಬಳ್ಳಾರಿ ಧರ್ಮ ಪ್ರಾಂತ್ಯದ ವ್ಯಾಪ್ತಿಗೆ ಬಂದಿತ್ತು. ಮುಂದೆ 1962ರಲ್ಲಿ ಫಾದರ್ ಪಾಪಯ್ಯ ಎಡನಪಲ್ಲಿ ಗುಲ್ಬರ್ಗ ಧರ್ಮಕೇಂದ್ರದ ಪ್ರಥಮ ಸ್ಥಾನಿಕ ಪಾಲನಾ ಗುರುಗಳಾಗಿ ನೇಮಕಗೊಂಡ ನಂತರ ಗುಲ್ಬರ್ಗದಲ್ಲಿರುವ ದೈವಾನುಗ್ರಹ ಮಾತೆ ಮರಿಯಳ ಚರ್ಚಿನ ಇತಿಹಾಸ ಆರಂಭವಾಗುತ್ತದೆ.
ಅದೇ ಸಮಯದಲ್ಲಿ ಕೇರಳದ ಸಂತ ತೆರಸಾಳ ಕಾರ್ಮೆಲೈಟ್ ಕ್ರೈಸ್ತ ಸನ್ಯಾಸಿನಿಯರು ಗುಲ್ಬರ್ಗಕ್ಕೆ ಕಾಲಿರಿಸಿದರು. 1967ರಲ್ಲಿ ಇಂದು ಚರ್ಚಿನ ಪಾಲನಾ ಗುರುಗಳ ಮನೆ ಇರುವ ಜಾಗದಲ್ಲಿ ಚಾಪೆಲ್ ಅಸ್ತಿತ್ವಕ್ಕೆ ಬಂದಿತ್ತು. ಮುಂದೆ 1975ರಲ್ಲಿ ದೈವಾನುಗ್ರಹ ಮಾತೆ ಸಂತ ಮರಿಯಳ ಚರ್ಚ್ ಕಟ್ಟಲಾಯಿತು.
ಬಿಷಪ್ ನೇಮಕ: 2005ರಲ್ಲಿ ಗುಲ್ಬರ್ಗ ಕ್ಯಾಥೋಲಿಕ್ ಕ್ರೈಸ್ತರ್ ಧರ್ಮ ಪ್ರಾಂತವು ಅಸ್ತಿತ್ವಕ್ಕೆ ಬಂದಿತ್ತು. ಬೀದರ ಜಿಲ್ಲೆಯಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ ರೆ. ಫಾ. ರಾಬರ್ಟ, ಮೈಕಲ್ ಮಿರಾಂಡರನ್ನು ಈ ಹೊಸ ಧರ್ಮ ಪ್ರಾಂತ್ಯದ ಪ್ರಥಮ ಬಿಷಪ್ರೆಂದು ನೇಮಕ ಮಾಡಲಾಯಿತು.
ದಾನಿಗಳ ಮತ್ತು ಭಕ್ತರ ಆಸಕ್ತಿಯಿಂದ ಸುಮಾರು ರು. 5 ಕೋಟಿ ವೆಚ್ಚದಲ್ಲಿ ಪ್ರಧಾನಾಲಯದ ನೂತನ ಕಟ್ಟಡವನ್ನು ಕಟ್ಟಲಾಗಿದೆ. ಈ ಹೊಸ ಕಟ್ಟಡದಲ್ಲಿ ಏಕಕಾಲಕ್ಕೆ 800 ಮಂದಿ ಭಕ್ತರು ಪೂಜೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಅದರಷ್ಟೇ ವಿಶಾಲವಾದ ನೆಲಮಹಡಿಯಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶ ಕಲ್ಪಿಸಲಾಗಿದೆ.
ಸಮರ್ಪಣೆ: ಬುಧವಾರ ಬೆಳಗ್ಗೆ ನಡೆದ ಸಮಾರಂಭದಲ್ಲಿ ಬೆಂಗಳೂರಿನ ಮಹಾ ಧರ್ಮಾಧ್ಯಕ್ಷ ಡಾ. ಬರ್ನಾಡ ಮೋರಾಸ್ ಅವರು ಕ್ಯಾಥೋಲಿಕ್ ಧರ್ಮ ಪ್ರಾಂತದ ಪ್ರಧಾನಾಲಯದ ನೂತನ ಕಟ್ಟಡವು ಧಾರ್ಮಿಕ ಸೇವೆಗೆ ಸಮರ್ಪಣೆ ಮಾಡಿದರು.
ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ಆಸ್ಕರ್ ಫರ್ನಾಂಡಿಸ್, ಶಾಸಕ ಜಿ. ರಾಮಕೃಷ್ಣ, ಡಾ.ಎ.ಬಿ. ಮಲಕರೆಡ್ಡಿ, ಎಚ್ಕೆಇ ಸಂಸ್ಥೆ ಅಧ್ಯಕ್ಷ ಶಶೀಲ್ ನಮೋಶಿ, ಬಳ್ಳಾರಿಯ ಧರ್ಮಾಧ್ಯಕ್ಷ ಹೆನ್ರಿ ಡಿಸೋಜಾ, ಉಡುಪಿಯ ಧರ್ಮಾಧ್ಯಕ್ಷ ಜೆರಾಲ್ಡ್ ಐಕಾಸ್ ಲೋಬೋ ಸೇರಿದಂತೆ ವಿವಿಧ ಧರ್ಮಾಧ್ಯಕ್ಷರು. ಗುಲ್ಬರ್ಗದ ಧರ್ಮಗುರುಗಳಾದ ವಿಕ್ಟರ್ ಮಚಾದೋ, ಧರ್ಮಾಧ್ಯಕ್ಷ ರಾಬರ್ಟ್ ಮೈಕಲ್ ಮಿರಾಂಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

