ಕಾರ ಹುಣ್ಣಿಮೆಗೆ ಕಾರ್ಮೋಡ
ಯಾದಗಿರಿ: ಮುಂಗಾರು ಹಬ್ಬ ಎಂದೇ ಕರೆವ ಕಾರ ಹುಣ್ಣಿಮೆ ಬಂದಿದೆ. ಆದರೆ ಈ ಬಾರಿ ರೈತರ ಮೊಗದಲ್ಲಿ ಹಬ್ಬದ ಸಂಭ್ರಮ ಕಾಣುತ್ತಿಲ್ಲ. ಮುಂಗಾರು ಮಳೆಯಿಲ್ಲದೇ ರೈತರು ಆತಂಕದಲ್ಲಿ ದಿನ ದೂಡುತ್ತಿದ್ದು, ಕಾರಹುಣ್ಣಿಮೆ ಸಂಭ್ರಮಕ್ಕೆ ಕಾರ್ಮೋಡ ಕವಿದಂತಾಗಿದೆ.
ಕಾರಹುಣ್ಣಿಮೆಯಲ್ಲಿ ರೈತರು ಸಂತಸದಿಂದ ಮುಂಗಾರು ಬಿತ್ತನೆ ಮುಗಿಸುವುದು ವಾಡಿಕೆ. ಬಿತ್ತಿನ ಬೀಜ ಮೊಳಕೆ ಒಡೆದು ಮೇಲೇಳುವ ಸಂದರ್ಭದಲ್ಲಿ ಸಂಭ್ರಮದಿಂದ ಹುಣ್ಣಿಮೆಯನ್ನು ಸ್ವಾಗತಿಸಿ, ಒಡನಾಡಿ ಎತ್ತುಗಳನ್ನು ಸಿಂಗರಿಸಿ, ಬಣ್ಣದ ಓಕುಳಿ ಆಡಿ ಸಂಭ್ರಮಿಸಬೇಕಿತ್ತು. ಆದರೆ ಈ ವರ್ಷ ಮುಂಗಾರು ಕೈಕೊಟ್ಟಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಭಾನುವಾರ ಕಾರಹುಣ್ಣಿಮೆ ಬಂದಿದ್ದು, ಜಿಲ್ಲೆಯ ರೈತರು ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ.
ಮುಗಿಲಿನತ್ತ ಮುಖ: ಕಾರಹುಣ್ಣಿಮೆ ದಿನದಂದು ಎತ್ತುಗಳ ಮೈತೊಳೆದು ಬಣ್ಣ ಬಣ್ಣದ ಗುಲ್ಲುಗಳನ್ನು, ಹಚ್ಚೆಗಳನ್ನು ಹಾಕಿ ಸಿಂಗಾರ ಮಾಡುತ್ತಿದ್ದ. ಆದರೆ ರೈತರು ಈ ಬಾರಿ ಸಿಂಗಾರದ ಸಾಮಗ್ರಿಗಳನ್ನು ಖರೀದಿಸಲು ಮನಸ್ಸು ಮಾಡದೇ ಬಾಡಿದ ಮುಖದಿಂದ ಮುಗಿಲಿನತ್ತ ಮುಖ ಮಾಡಿಕೊಂಡು ಕುಳಿತಿರುವ ದೃಶ್ಯ ಸಾಮಾನ್ಯವಾಗಿದೆ. ಯಾದಗಿರಿ ಸೇರಿದಂತೆ ಸುತ್ತಮುತ್ತಲ ಪ್ರಮುಖ ವ್ಯಾಪಾರಿ ಕೇಂದ್ರಗಳಲ್ಲಿ ಮಾರಾಟಕ್ಕಿಟ್ಟ ಎತ್ತುಗಳ ಸಿಂಗರಿಸುವ ಗೊಂಡೆ, ದಾಂಡು, ಹಣೆಕಟ್ಟು, ಟೊಂಕಬಾರು, ಗೆಜ್ಜೆ, ಜಂಗು, ಹಣೆಬಾರು, ಚಿಣಿಚಿಣಿ, ಹಣಿಗೆಜ್ಜೆ, ಕಾಲ್ಗೆಜ್ಜೆ, ಶಂಖರಿ (ಶಂಖಹಣೆಕಟ್ಟು), ಜೂಲು ಸೇರಿದಂತೆ ಇನ್ನಿತರ ಸಾಮಗ್ರಿಗಳು ಖರೀದಿಯಾಗದೇ ಉಳಿಯುವಂತಾಗಿದೆ. ರೈತರು ಬಾರದೇ ಇರುವುದರಿಂದ ಅಂಗಡಿಗಳು ಬಿಕೋ ಎನ್ನುತ್ತಿದೆ.
ನಿರಾಶೆ: ಮಳೆರಾಯನ ಅವಕೃಪೆಯಿಂದಾಗಿ ಜಿಲ್ಲಾದ್ಯಂತ ಬಿತ್ತನೆ ಕಾರ್ಯ ಚುರುಕು ಪಡೆದಿಲ್ಲ. ಇದು ರೈತರಿಗೆ ಆತಂಕ ಹೆಚ್ಚಿಸಿದೆ. ಕೆಲವು ಭಾಗಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಿದ್ರೆ ಇನ್ನು ಕೆಲ ಕಡೆಗಳಲ್ಲಿ ಇದುವರೆಗೆ ಮಳೆ ಹನಿಯೇ ಬಿದ್ದಿಲ್ಲ. ಇದರಿಂದ ರೈತರು ಕಂಗಾಲಾಗಿರುವುದರ ಮಧ್ಯೆಯೇ ಕಾರಹುಣ್ಣಿಮೆಯ ಆಗಮನವಾಗಿದೆ. ಎಲ್ಲೂ ಹಬ್ಬದ ಸಂಭ್ರಮ ಕಾಣುತ್ತಿಲ್ಲ. ಎತ್ತುಗಳ ಸಿಂಗಾರಕ್ಕೆ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಮಾಡಬೇಕು ಎಂಬ ಕಾರಣಕ್ಕಾಗಿ ಕೆಲ ರೈತರು ಸಾಂಪ್ರದಾಯಿಕವಾಗಿ ಹಬ್ಬ ಆಚರಿಸುತ್ತಿದ್ದಾರೆಯೇ ಹೊರತು ಮುಖದಲ್ಲಿ ಸಂತಸವಿಲ್ಲ. ಮಳೆಯಿಲ್ಲದ್ದರಿಂದ ಕೆಲ ಗ್ರಾಮಗಳಲ್ಲಿ ಹನಿ ನೀರಾವರಿಗೆ ಮೊರೆ ಹೋಗಿದ್ದಾರೆ. ಪಂಪ್ಸೆಟ್ ಹಚ್ಚಿ ಹೊಲಕ್ಕೆ ನೀರುಣಿಸುತ್ತಿದ್ದಾರೆ. ಇದೇ ರೀತಿ ಇನ್ನು ಕೆಲ ದಿನ ಮಳೆಯಾಗದಿದ್ದರೆ ಮತ್ತೊಂದು ಬರದ ವರ್ಷಕ್ಕೆ ಮುನ್ನುಡಿಯಾಗುವುದು ಖಚಿತ ಎಂದು ಟೋಕರಿ ಕೋಲಿ ಸಮಾಜದ ಅಧ್ಯಕ್ಷ ಉಮೇಶ ಮುದ್ನಾಳ ಕಳವಳ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

