ಗುಲ್ಬರ್ಗಾ

ಸಣ್ಣ ಕೆರೆ ಅಭಿವೃದ್ಧಿ ಪುರಾಣ

Published On :

ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ  ಯಾದಗಿರಿ  ಜೂ.24
ಮೂರು ಬೇಸಿಗೆ, ಮಳೆಗಾಲ ಕಳೆದಾಯ್ತು. ಜಿಲ್ಲಾಧಿಕಾರಿಗಳೂ ಮೂವರು ಬದಲಾದರು. ಆದರೆ ಗುಲ್ಬರ್ಗದ ಅಪ್ಪನ ಕೆರೆಯ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವುದಾಗಿ ಹೇಳಿ ಆರಂಭಿಸಿದ್ದ ನಗರದ ಸಣ್ಣ ಕೆರೆ ಕಾಮಗಾರಿ ಮಾತ್ರ ಹಾಗೆಯೇ ಉಳಿದಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಸಿಗುತ್ತಿರುವ ಉತ್ತೇಜನಕ್ಕೆ ಇದೇ ಸಾಕ್ಷಿ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಕಚೇರಿಯಿಂದ ಕಣ್ಣಳತೆ ದೂರದಲ್ಲಿರುವ ಈ ಕೆರೆ ನಗರದ ಮಧ್ಯ ಭಾಗದಲ್ಲಿದೆ. ಹೂಳು ತುಂಬಿ, ಸುತ್ತ ಜಾಲಿಗಿಡ ಬೆಳೆದು ಪುರಾತನ ಕೆರೆಯಂತಾಗಿದ್ದ ಇದಕ್ಕೆ ಕಾಯಕಲ್ಪ ಕೊಡುವ ನಿಟ್ಟಿನಲ್ಲಿ ಜಿಲ್ಲೆಯ ಪ್ರಥಮ ಜಿಲ್ಲಾಧಿಕಾರಿಯಾಗಿದ್ದ ಕೆ.ಜಿ. ಜಗದೀಶ ಯೋಜನೆಯೊಂದನ್ನು ರೂಪಿಸಿದ್ದರು. ಗುಲ್ಬರ್ಗದ ಅಪ್ಪನ ಕೆರೆಯ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೂರದೃಷ್ಟಿಯನ್ನು ಇಟ್ಟುಕೊಂಡಿದ್ದರು.
ಅಲ್ಲದೇ ಸುತ್ತ ಆಕರ್ಷಕ ಉದ್ಯಾನವನ ನಿರ್ಮಾಣ, ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿ ಜನಾಕರ್ಷಣೆಯ ಕೇಂದ್ರಬಿಂದು ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದರು. ಈ ನಿಟ್ಟಿನಲ್ಲಿ ಕಾಮಗಾರಿಯೂ ಆರಂಭವಾಯಿತು. ವರ್ಷಾನುಗಟ್ಟಲೆ ಕೆರೆಯ ಹೂಳೆತ್ತಲಾಯಿತು. ಸುತ್ತ ಕಲ್ಲಿನಿಂದ ತಡೆಗೋಡೆಯೂ ನಿರ್ಮಾಣವಾಯಿತು. ಅಷ್ಟೇ, ಅಲ್ಲಿಗೆ ಮುಗಿಯಿತು ಈ ಕೆರೆ ಅಭಿವೃದ್ಧಿ ಕಾಮಗಾರಿ.
1 ಕೋಟಿ ಖರ್ಚು: ಕೆರೆ ಹೂಳೆತ್ತುವ ಕಾಮಗಾರಿ ಆರಂಭವಾಗಿದ್ದೇ ತಡ, ಜಿಲ್ಲಾ ಕೇಂದ್ರದ ಜನರು ತಮ್ಮಲ್ಲೂ ಆಕರ್ಷಕ ಉದ್ಯಾನವನ ನಿರ್ಮಾಣವಾಗುತ್ತದೆ ಎಂಬ ಕಲ್ಪನಾ ಲೋಕದಲ್ಲಿ ತೇಲಾಡಿದರು. ಕೆಆರ್ಎಸ್ನಂತೆಯೇ ನೃತ್ಯ ಕಾರಂಜಿ ಇಲ್ಲಿಯೇ ಚಿಮ್ಮುತ್ತದೆ ಎಂದುಕೊಂಡಿದ್ದರು. 2010ರಲ್ಲೇ ಕೆರೆ ಹೂಳೆತ್ತುವ ಕಾಮಗಾರಿ ನಡೆಯಲಾಯಿತು. ಕೆರೆ ಅಭಿವೃದ್ಧಿ ಬಗ್ಗೆ ಆಗಿನ ಜಿಲ್ಲಾಧಿಕಾರಿ ಜಗದೀಶ ವಿಶೇಷ ಆಸಕ್ತಿಯನ್ನೂ ವಹಿಸಿದ್ದರು. ಆದರೆ ಅವರ ವರ್ಗಾವಣೆ ನಂತರ ಕೆರೆ ಕಾಮಗಾರಿಯೂ ನಿಂತಿತು.
ಮತ್ತೆ 1 ಕೋಟಿ ಬಿಡುಗಡೆ: ಆದರೆ ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆಯಾದ 1 ಕೋಟಿ ಖರ್ಚಾಗಿದ್ದು ಮಾತ್ರ ಸತ್ಯ. ಈಗ ಮತ್ತೆ ಪ್ರವಾಸೋದ್ಯಮ ಇಲಾಖೆಯಿಂದ 1 ಕೋಟಿ ಬಿಡುಗಡೆಯಾಗಿದೆ. ಅದನ್ನು ಯಾವಾಗ ಮತ್ತು ಹೇಗೆ ಖರ್ಚು ಮಾಡುತ್ತಾರೋ ಗೊತ್ತಿಲ್ಲ. ಬೇಸಿಗೆಯಲ್ಲಿ ಕೆರೆ ಸಂಪೂರ್ಣ ಬತ್ತಿದಾಗ ಕಾಮಗಾರಿ ನಡೆಸದೇ ಇನ್ನು ಮಳೆ ಬಂದು ಕೆರೆ ತುಂಬಿದ ಮೇಲೆ ಕೆಲಸ ಆರಂಭಿಸುವ ಸಾಧ್ಯತೆಯಿದೆ.
ಒತ್ತುವರಿ ತೆರವಿಲ್ಲ: ಈ ಕೆರೆ 100ಕ್ಕೂ ಹೆಚ್ಚು ಎಕರೆ ವಿಸ್ತೀರ್ಣ ಹೊಂದಿದೆ. ಆದರೆ ಈಗ ಅದರ ವ್ಯಾಪ್ತಿ ದಿನೇ ದಿನೆ ಕ್ಷೀಣಿಸುತ್ತಿದೆ. ಸುತ್ತ ಅತಿಕ್ರಮಣವಾಗಿ ಮನೆಗಳು ತಲೆ ಎತ್ತಿವೆ, ಇನ್ನೂ ಎತ್ತುತ್ತಲೇ ಇವೆ. ಆದರೆ ಈ ಬಗ್ಗೆ ಯಾವ ಅಧಿಕಾರಿಗಳೂ ಗಮನ ನೀಡುತ್ತಿಲ್ಲ. ಒತ್ತುವರಿಯಾಗಿರುವ ಕೆರೆಯ ಜಾಗ ತೆರವುಗೊಳಿಸುವ ಗೋಜಿಗೆ ಯಾರೂ ಮುಂದಾಗುತ್ತಿಲ್ಲ. ಇದರಿಂದ ಕೆರೆಯ ದಂಡೆಯಲ್ಲೇ ಮನೆಗಳು ನಿರ್ಮಾಣವಾಗಿವೆ.
ಮೂರು ವರ್ಷಗಳಿಂದ ಕೆರೆ ಅಭಿವೃದ್ಧಿ ಎಂದು ಹೇಳುತ್ತಲೇ ಬರಲಾಗಿದ್ದು ಇನ್ನೂ ಅದು ಸಾಕಾರಗೊಂಡಿಲ್ಲ. ಈಗ ಮತ್ತೆ ಕೆರೆಯಲ್ಲಿ ಹೂಳು ತುಂಬಿದೆ. ಜಾಲಿ ಗಿಡಗಳು ಬೆಳೆದು ನಿಂತಿವೆ. ಮಾಡಿದ ಅಷ್ಟಿಷ್ಟು ಕಾಮಗಾರಿಗಳೂ ಕಾಣದಂತಾಗಿವೆ.



ಪ್ರವಾಸೋದ್ಯಮಕ್ಕಿಲ್ಲ ಉತ್ತೇಜನ
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರಶಸ್ತವಾದ ಅನೇಕ ಸ್ಥಳಗಳಿವೆ. ಯಾದಗಿರಿ ಕೋಟೆ ಅಭಿವೃದ್ಧಿಯದ್ದೂ ಇದೇ ಗತಿ. ಅನೇಕ ಸ್ಮಾರಕಗಳು, ಪುರಾತನ ದೇವಸ್ಥಾನಗಳು ಇದ್ದರೂ ಅವು ನಾಡಿನಾಚೆಗೆ ಸುದ್ದಿ ಮಾಡುತ್ತಿಲ್ಲ. ಯಾವುದೇ ಮೂಲ ಸೌಲಭ್ಯ ಇಲ್ಲದ್ದರಿಂದ ಜನರೂ ಜಿಲ್ಲೆಯ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವ ಆಸಕ್ತಿ ತೋರುತ್ತಿಲ್ಲ. ಪ್ರವಾಸೋದ್ಯಮ ಇಲಾಖೆ ಎನ್ನುವುದೂ ಒಂದಿದೆ ಎನ್ನುವುದೇ ಜನರಿಗೆ ಗೊತ್ತಿಲ್ಲ. ಆದ್ದರಿಂದ ಈಗಿನ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಗಮನ ನೀಡಬೇಕಿದೆ. ಸಣ್ಣ ಕೆರೆ ಅಭಿವೃದ್ಧಿಯತ್ತ ಕಣ್ಣು ಹಾಯಿಸಬೇಕಿದೆ. ಜಿಲ್ಲಾ ಕೇಂದ್ರದಲ್ಲಿ ಒಂದಾದರೂ ಆಕರ್ಷಣೀಯ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.