ಸಂಕಟದ ಗೊಂದೇನೂರು ಶಾಲೆ
ಯಾದಗಿರಿ: ಸರ್ಕಾರ ಶಾಲೆಯನ್ನು ತೆರೆದು ಅದಕ್ಕೆ ಮೂಲಭೂತ ಸೌಕರ್ಯವನ್ನು ಕೊಡದೇ ನಮ್ಮೂರ ಶಾಲೆ ಎಂದು ನಾಮಕರಣ ಮಾಡಿ ಕಣ್ಣು ಮುಚ್ಚಿ ಕುಳಿತಿರುವುದಕ್ಕೆ ಶಹಾಪುರ ತಾಲೂಕಿನ ಗೊಂದೇನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೇ ಜೀವಂತ ನಿದರ್ಶನವಾಗಿದೆ.
ಮಕ್ಕಳಿಗೆ ಕಲಿಕೆ ಸೂಕ್ತವೇ: ಗೊಂದೆನೂರ ಗ್ರಾಮದಲ್ಲಿರುವ ಈ ಶಾಲೆಯಲ್ಲಿ 1ನೇ ತರಗತಿಯಿಂದ 7ತರಗತಿಯವರೆಗೆ 209 ಮಕ್ಕಳಿದ್ದಾರೆ. ಆದರೆ ಇಲ್ಲಿರುವ ಶಿಕ್ಷಕರ ಸಂಖ್ಯೆ ಕೇವಲ ಎರಡು. ಅಂದರೆ ಒಬ್ಬ ಶಿಕ್ಷಕ ಮತ್ತು ವಿದ್ಯಾರ್ಥಿಯ ಅನುಪಾತ ಒಂದಕ್ಕೆ ನೂರಾ ಐದು. ಶಾಲೆಯಲ್ಲಿ ಒಟ್ಟು ಏಳು ಜನ ಶಿಕ್ಷಕರ ಹುದ್ದೆ ಮಂಜೂರಿಯಿದೆ. ಆದರೆ ಕೇವಲ ಇಬ್ಬರೇ ಶಿಕ್ಷಕರಿದ್ದು, ಇವರಲ್ಲಿ ಒಬ್ಬರು ಮುಖ್ಯ ಗುರುಗಳು.
ಒಂದರಿಂದ ಮೂರನೇ ತರಗತಿಯವರೆಗೆ ನಲಿಕಲಿ ತರಗತಿಯನ್ನು ಬೆಳಗ್ಗೆಯಿಂದ ಸಂಜೆವರೆಗೂ ನೋಡಿಕೊಳ್ಳಬೇಕು. ಆ ಸಂದರ್ಭದಲ್ಲಿ ಉಳಿದ ತರಗತಿ ಮಕ್ಕಳು ಸುಮ್ಮನೆ ಕುಳಿತುಕೊಳ್ಳಬೇಕು. ಕೆಲ ಸಂದರ್ಭದಲ್ಲಿ ಮುಖ್ಯ ಗುರುಗಳು ಕಾರ್ಯನಿಮಿತ್ತ ತೆರಳಿದಾಗ ಒಬ್ಬರೇ ಶಿಕ್ಷಕರು ಎಲ್ಲಾ ತರಗತಿಯನ್ನು ನೋಡಿಕೊಳ್ಳಬೇಕು. ಆಗ ಎಲ್ಲಾ ತರಗತಿ ವಿಲೀನ ಮಾಡಿ ಬೋಧಿಸುತ್ತಾರೆ. ಇವರಿಬ್ಬರಲ್ಲಿ ಒಬ್ಬರು ರಜೆಯ ಮೇಲೆ ಹೋದರೆ ಆಗಲೂ ಇದೇ ಪರಿಸ್ಥಿತಿ. ಆದ್ದರಿಂದ ಶಾಲೆಯ ಮಕ್ಕಳಿಗೆ ಸರಿಯಾಗಿ ತರಗತಿ ಮಾಡಲು ತೊಂದರೆಯಾಗುತ್ತಿದೆ.
ಸುತ್ತ ತಿಪ್ಪೆಗುಂಡಿ: ಶಾಲೆಯ ಸುತ್ತಲಿನ ಪರಿಸರ ಉತ್ತಮವಾಗಿದ್ದರೆ ಮಕ್ಕಳ ಕಲಿಕೆ ಚೆನ್ನಾಗಿರುತ್ತದೆ. ಆದರೆ ಗೊಂದೇನೂರು ಶಾಲೆಯ ಸುತ್ತಲಿನ ಪರಿಸರವು ಗೊಬ್ಬರದ ವಾಸನೆಯಿಂದ ಕೂಡಿದೆ. ಏಕೆಂದರೆ ಶಾಲೆ ಸುತ್ತ ತಿಪ್ಪೆಗುಂಡಿಗಳನ್ನು ಹಾಕಿರುವುದರಿಂದ ಶಾಲೆಯ ಸುತ್ತಲಿನ ಪರಿಸರವು ಸಂಪೂರ್ಣವಾಗಿ ಹಾಳಾಗಿದೆ. ಈ ಶಾಲೆಗೆ ಮಕ್ಕಳು ಬರಬೇಕಾದರೆ ತಿಪ್ಪೆಗಳನ್ನು ದಾಟುತ್ತಾ ಬರಬೇಕು. ಮಳೆ ಬಂತೆಂದರೆ ತಿಪ್ಪೆಗುಂಡಿಗಳ ದುರ್ವಾಸನೆ ಮತ್ತಷ್ಟು ಹೆಚ್ಚುತ್ತದೆ. ಇದರಿಂದ ಕಲಿಕೆಯಲ್ಲಿ ಮಕ್ಕಳು ಮನಸ್ಸನ್ನು ಕೇಂದ್ರೀಕರಿಸಲು ತೊಡಕಾಗುತ್ತಿದೆ ಎಂದು ಪಾಲಕರು ದೂರುತ್ತಾರೆ.
ಶಿಕ್ಷಕರ ನೇಮಕ ಅಗತ್ಯ: ಈ ಕುರಿತು ಶಹಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ರಾಯಪ್ಪರಡ್ಡಿ ಅವರನ್ನು ಕೇಳಿದಾಗ, ತಾಲೂಕಿನಲ್ಲಿ 485 ಶಿಕ್ಷಕರ ಕೊರತೆಯಿದೆ. ಪ್ರತಿಯೊಂದು ಶಾಲೆಯಲ್ಲಿ ಒಂದೆರಡು ಶಿಕ್ಷಕರ ಕೊರತೆಯಿದೆ. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಗಿದ ನಂತರ ಸ್ಪಷ್ಟ ಚಿತ್ರಣ ದೊರಕುತ್ತದೆ. ಆಗ ಗೊಂದೇನೂರು ಶಾಲೆಗೆ ಹೆಚ್ಚಿನ ಶಿಕ್ಷಕರನ್ನು ನಿಯೋಜಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಆದ್ದರಿಂದ ಶೀಘ್ರದಲ್ಲಿ ಶಾಲೆಗೆ ಶಿಕ್ಷಕರನ್ನು ನೇಮಿಸಬೇಕಿದೆ. ಇಲ್ಲದಿದ್ದರೆ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಗ್ರಾಮೀಣ ಶಾಲೆಗಳಿಗೆ ಮೂಲಭೂತ ಸೌಲಭ್ಯ ಕೊಡುವತ್ತ ಗಮನ ನೀಡಬೇಕು ಎಂದು ಪಾಲಕರಾದ ಹಣಮಂತ ದೊರೆ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

