ಗುಲ್ಬರ್ಗಾ

ಬಹಿರಂಗಕ್ಕೆ ಭರ್ಜರಿ ಅಂತ್ಯ

Published On :

ಕನ್ನಡಪ್ರಭ ವಾರ್ತೆ, ಯಾದಗಿರಿ, ಮಾ.4
ನೆತ್ತಿ ಸುಡುವ ಬಿಸಿಲು, ಇತ್ತ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಏರುತ್ತಿರುವ ರಾಜಕೀಯ ಕಾವು. ಇವುಗಳ ಮಧ್ಯೆ ಹೇಗಾದರೂ ಮಾಡಿ ಗೆಲ್ಲುವ ತವಕ. ಅದಕ್ಕಾಗಿ ಹಗಲಿರುಳು ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಅಬ್ಬರ ಪ್ರಚಾರ..
- ಇವು ಪೌರ ಸಂಸ್ಥೆ ಚುನಾವಣೆಯ ಬಹಿರಂಗ ಪ್ರಚಾರದ ಕೊನೆ ದಿನವಾದ ಸೋಮವಾರ ಕಂಡುಬಂದ ದೃಶ್ಯಗಳು.
ಒಂದು ಕೈಯಲ್ಲಿ ಮತಪತ್ರ, ಮತ್ತೊಂದು ಕೈಯಲ್ಲಿ ಕರವಸ್ತ್ರ ಹಿಡಿದು ಮನೆಮನೆ ಪ್ರಚಾರ ನಡೆಸುವ ಮೂಲಕ ಬಿಸಿಲಲ್ಲೂ ಪ್ರಚಾರದ ಅಬ್ಬರ ಮಾತ್ರ ತಣ್ಣಗಾಗಿಲ್ಲ. ಅಭ್ಯರ್ಥಿಗಳು, ಮುಖಂಡರು ಹಾಗೂ ಅವರ ಹಿಂದೆ ನೂರಾರು ಕಾರ್ಯಕರ್ತರು ಜೈಕಾರ ಹಾಕುತ್ತ ಪ್ರಚಾರ ನಡೆಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಬಹಿರಂಗ ಪ್ರಚಾರಕ್ಕೆ ಸೋಮವಾರವೇ ಕೊನೆ ದಿನವಾದ್ದರಿಂದ ಅಬ್ಬರ ತುಸು ಜೋರಾಗಿಯೇ ಇತ್ತು. ಇದುವರೆಗೆ ಹತ್ತಾರು ಜನರು ಸೇರಿ ನಡೆಸುತ್ತಿದ್ದ ಪ್ರಚಾರ ಸೋಮವಾರ ದೊಡ್ಡದಾಗಿ ಬೆಳೆದಿತ್ತು. ಇದಕ್ಕೆ ಯಾವ ಪಕ್ಷಗಳೂ ಹೊರತಾಗಿರಲಿಲ್ಲ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿ ಗೆಲವಿಗಾಗಿ ಮತದಾರನನ್ನು ಓಲೈಸಲು ಇನ್ನಿಲ್ಲದ ಕಸರತ್ತು ನಡೆಸಿದರು.
ಇಂದಿನಿಂದ ಬಹಿರಂಗವಿಲ್ಲ: ಚುನಾವಣಾ ಆಯೋಗದ ನಿರ್ದೇಶನದಂತೆ ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಬಹಿರಂಗ ಪ್ರಚಾರ ನಡೆಸುವಂತಿಲ್ಲ. ಮಾ. 7ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ಈ ಎರಡು ದಿನಗಳ ಅವಧಿಯಲ್ಲಿ ಮತದಾರರನ್ನು ಓಲೈಸಿಕೊಳ್ಳಲು ಏನೆಲ್ಲ ಕಸರತ್ತು ನಡೆಯುತ್ತದೆ ಎನ್ನುವುದನ್ನು ಹೇಳಲಿಕ್ಕಾಗದು. ಈಗಾಗಲೇ ಇಂಥ ಓಲೈಕೆ ಕಾರ್ಯದಲ್ಲಿ ಅನೇಕ ಅಭ್ಯರ್ಥಿಗಳು ಮಗ್ನರಾಗಿರುವುದು ಬಹಿರಂಗ ಸತ್ಯ.
ಹಣಬಲ ಹೊಂದಿರುವ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಈ ಎರಡು ದಿನಗಳಲ್ಲಿ ಗೆಲವಿಗಾಗಿ ತಂತ್ರ- ಪ್ರತಿತಂತ್ರ ರೂಪಿಸಲಿದ್ದಾರೆ. ಬಹಿರಂಗ ಪ್ರಚಾರಕ್ಕೆ ಅವಕಾಶ ಇಲ್ಲದ್ದರಿಂದ ಮನೆಮನೆಗೆ ತೆರಳಿ ಆಸೆ ಆಮಿಷ ಒಡ್ಡುವವರ ಸಂಖ್ಯೆಗೇನು ಕಡಿಮೆಯಿಲ್ಲ.
ಕಾರ್ಮಿಕರೂ ಪ್ರಚಾರಕರು: ಈಗ ಚುನಾವಣೆ ಕಾರ್ಯದಲ್ಲಿ ರಾಜಕೀಯ ಪಕ್ಷದವರು, ಕಾರ್ಯಕರ್ತರು ಮಾತ್ರ ಭಾಗಿಯಾಗಿಲ್ಲ. ರಾಜಕೀಯದ ಬಗ್ಗೆ ಏನೂ ಗೊತ್ತಿರದ ಕೂಲಿ ಕಾರ್ಮಿಕರೂ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಚಿಂದಿ ಆಯುವ ಮಕ್ಕಳೂ ಕರಪತ್ರ ಹಿಡಿದು ಅಡ್ಡಾಡುತ್ತಿದ್ದಾರೆ. ಕೂಲಿ ಕಾರ್ಮಿಕರೇ ಸಿಗುತ್ತಿಲ್ಲ. ದಿನಕ್ಕೆ 200- 300 ಪಡೆದುಕೊಂಡು ಅಭ್ಯರ್ಥಿಗಳ ಪರವಾಗಿ ಕರಪತ್ರ ಹಂಚುವ ಕೆಲಸ ಮಾಡುತ್ತಿದ್ದಾರೆ.
ಹೀಗೆ ಪ್ರಚಾರಕ್ಕೆ ಬಂದಿದ್ದ ಕಾರ್ಮಿಕ ಮಹಿಳೆಯೊಬ್ಬರನ್ನು ಕೇಳಿದಾಗ, 'ದಿನಕ್ಕೆ 200, ಎರಡು ಊಟ, ಬೆಳಗ್ಗೆ ಉಪಾಹಾರ ಕೊಡುತ್ತಾರೆ. ಕೆಲಸಕ್ಕೆ ಹೋದರೂ ಸಿಗುವುದು ಇಷ್ಟೇ. ಪ್ರಚಾರಕ್ಕೆ ಬರುವಂತೆ ಕೇಳಿಕೊಂಡಿದ್ದರಿಂದ ನಾವು ಬಂದಿದ್ದೇವೆ' ಎಂದು ಬಹಿರಂಗಪಡಿಸಿದಳು.
ಭರ್ಜರಿ ಪ್ರಚಾರ: ಎಲ್ಲ ರಾಜಕೀಯ ಪಕ್ಷ ಹಾಗೂ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದವರಿಂದಲೂ ಪ್ರಚಾರ ಜೋರಾಗಿಯೇ ನಡೆದಿದೆ. ಯಾದಗಿರಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ನಾಗನಗೌಡ ಕಂದಕೂರ ನೇತೃತ್ವದಲ್ಲಿ ಕಾರ್ಯಕರ್ತರು ವಿವಿಧ ವಾರ್ಡುಗಳಲ್ಲಿ ಪ್ರಚಾರ ಕಾರ್ಯ ನಡೆಸಿದರು. ಪಾದಯಾತ್ರೆ ಮೂಲಕ ಮನೆಮನೆಗೆ ತೆರಳಿ ಮತ ಯಾಚಿಸಿದರು.
ಬಿಜೆಪಿ ಸರ್ಕಾರ ದುರಾಡಳಿತದ ಬಗ್ಗೆ ಜನರಿಗೆ ತಿಳಿಸಿ, ತಮಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಮುಖಂಡರಾದ ಎ.ಸಿ. ಕಾಡ್ಲೂರ್, ವಿಶ್ವನಾಥ ಶಿವವಾರ, ಬಸವರಾಜ ಚಂಡ್ರಕಿ, ಚನ್ನಾರಡ್ಡಿಗೌಡ ಬಿಳ್ಹಾರ್, ರಾಜಶೇಖರಗೌಡ ವಡಗೇರಾ, ಬಸವರಾಜ ಹುನಗುಂದಿ, ಶಫಿ ಉಲ್ಲಾ ಖಾನ್ ಇತರರು ಪ್ರಚಾರದಲ್ಲಿ ಭಾಗಿಯಾಗಿದ್ದರು.
ಬಲಕಲ್ ಮತಯಾಚನೆ: ಬಿಜೆಪಿ ಅಭ್ಯರ್ಥಿಗಳ ಪರವಾಗಿ ತಾಲೂಕು ಅಧ್ಯಕ್ಷ ಸಿದ್ರಾಮರಡ್ಡಿ ಬಲಕಲ್ ಸೋಮವಾರ ನಗರದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ಮೈಲಾಪುರ ಅಗಸಿಯಿಂದ ನೂರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮೂಲಕ ಮತದಾರರ ಮನೆಗಳಿಗೆ ತೆರಳಿ ಮತಯಾಚಿಸಿದರು. ತೊಗರಿ ಮಂಡಳಿ ಅಧ್ಯಕ್ಷ ಡಾ. ವೆಂಕಟೇಶ ಗಡ್ಡಿಮನಿ, ದೇವೇಂದ್ರನಾಥ ನಾದ, ದೇವರಾಜ ನಾಯಕ ಸೇರಿದಂತೆ ಪ್ರಮುಖರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಅಬ್ಬರದ ಪ್ರಚಾರ ಕಾರ್ಯ ಕೈಗೊಂಡರು.
'ಕೈ' ಕಟ್ಟಿ ಕುಳಿತಿಲ್ಲ ಮಾಲಕರೆಡ್ಡಿ: ನಗರದ ಎಲ್ಲ ವಾರ್ಡುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕಾಂಗ್ರೆಸ್ ಜೋರಾಗಿಯೇ ಪ್ರಚಾರ ಕಾರ್ಯ ನಡೆಸಿದೆ. ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ಅವರು ಯುವಕರೂ ನಾಚುವಂತೆ ಓಡಾಡಿ ಪ್ರಚಾರ ನಡೆಸುತ್ತಿದ್ದಾರೆ. ಮಾಜಿ ಎಂಎಲ್‌ಸಿ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಹಾಗೂ ಇತರರು ಸೇರಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷವನ್ನು ಆಡಳಿತಕ್ಕೆ ತರಲು ಕಸರತ್ತು ನಡೆಸುತ್ತಿದ್ದಾರೆ.
ಕೆಜೆಪಿಯೂ ಜೋರು: ನೂತನ ಕೆಜೆಪಿಯೂ ನಗರದಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ. ಪ್ರಬಲ ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಡಾ. ವೀರಬಸವಂತರೆಡ್ಡಿ ಮುದ್ನಾಳ, ವೆಂಕಟರೆಡ್ಡಿ ಮುದ್ನಾಳ, ಡಾ. ಶರಣಭೂಪಾಲರೆಡ್ಡಿ ನಾಯ್ಕಲ್ ಇತರ ಮುಖಂಡರು ಪ್ರಚಾರ ನಡೆಸಿದ್ದಾರೆ.
ಬಿಎಸ್ಸಾರ್ ಕಾಂಗ್ರೆಸ್‌ನಿಂದದೂ ನಗರದಲ್ಲಿ ಪ್ರಚಾರ ಅಬ್ಬರವಾಗಿಯೇ ನಡೆಯುತ್ತಿದೆ. ನಿರ್ಗಮಿತ ಅಧ್ಯಕ್ಷೆ ಲಲಿತಾ ಅನಪುರ, ಅವರ ತಂದೆ ಮೌಲಾಲಿ ಅನಪುರ ಸೇರಿದಂತೆ ಅನೇಕರು ಪ್ರಚಾರ ಕಾರ್ಯ ನಡೆಸಿದ್ದಾರೆ.
ಹೀಗೆ ಎಲ್ಲ ಪಕ್ಷಗಳಿಂದ ಅಂತಿಮ ಹಂತದ ಪ್ರಚಾರ ಜೋರಾಗಿಯೇ ನಡೆದಿದೆ. ಆದರೆ ಮತದಾರ ಮಾತ್ರ ತನ್ನ ಗುಟ್ಟನ್ನು ಬಿಟ್ಟುಕೊಡುತ್ತಿಲ್ಲ. ಆದ್ದರಿಂದ ಸಾರ್ವಜನಿಕರಲ್ಲಿ ಕುತೂಹಲ ಹೆಚ್ಚಿದೆ.

ಬಿಎಸ್ಸಾರ್ ಆಯ್ಕೆಗೆ ಚವ್ಹಾಣ ಮನವಿ
ಗುರುಮಠಕಲ್: ಬರುವ ದಿನಗಳಲ್ಲಿ ಬಿಎಸ್ಸಾರ್ ಕಾಂಗ್ರೆಸ್‌ಗೆ ಉಜ್ವಲ ಭವಿಷ್ಯವಿದ್ದು, ಮತದಾರರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮುಂದಾಗಬೇಕು ಎಂದು ಪಕ್ಷದ ರಾಜ್ಯ ಎಸ್‌ಸಿ ಘಟಕದ ಸಂಘಟನಾ ಕಾರ್ಯದರ್ಶಿ ಬಾಬು ಚವ್ಹಾಣ ಹೇಳಿದರು.
ಅವರು ಗುರುಮಠಕಲ್ ಪಪಂ.ಗೆ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದರು. ಪಟ್ಟಣದಲ್ಲಿ ಕಳೆದ 5 ವರ್ಷಗಳಿಂದ ಅಭಿವೃದ್ಧಿ ಮರೀಚಿಕೆಯಾಗಿದೆ. ನಾಗರಿಕರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಪಟ್ಟಣದ ವಾರ್ಡುಗಳಲ್ಲಿನ ಬಡಾವಣೆಗಳ ಚರಂಡಿಗಳು ಮತ್ತು ರಸ್ತೆಗಳು ಹದಗೆಟ್ಟು ಹೋಗಿದ್ದು, ಪಂಚಾಯಿತಿ ಸದಸ್ಯರು ಅಭಿವೃದ್ಧಿ ಕಾರ್ಯ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಎಸ್‌ಆರ್ ಪಕ್ಷದ ಜಿಲ್ಲಾ ಉಸ್ತುವಾರಿ ಶಂಕ್ರಣ್ಣ ವಣಿಕ್ಯಾಳ ಮತ್ತು ಜಿಲ್ಲಾಧ್ಯಕ್ಷ ಚೆನ್ನಬಸ್ಸು ವನದುರ್ಗ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವ್ಯಾಪಕ ಸಿದ್ಧತೆಗಳನ್ನು ನಡೆಸಲಾಗಿದೆ. ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಮತದಾರರು ಅಭಿವೃದ್ಧಿ ಕಾಳಜಿಯುಳ್ಳ ಬಿಎಸ್ಸಾರ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು. ಯುವ ಮುಖಂಡ ಬಸವರಾಜ ಯಲ್ಹೇರಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.