ಜಿಲ್ಲಾದ್ಯಂತ ಓಕುಳಿ ಸಂಭ್ರಮ
ಕನ್ನಡಪ್ರಭ ವಾರ್ತೆ, ಯಾದಗಿರಿ, ಮಾ.27
ಜಿಲ್ಲೆಯಲ್ಲಿ ಬುಧವಾರ ಹೋಳಿ ಹಬ್ಬ ರಂಗೇರಿತ್ತು. ಬಣ್ಣದ ಓಕುಳಿಯಾಟ ಸಂಭ್ರಮ ಇಮ್ಮಡಿಗೊಳಿಸಿತ್ತು. ಮಹಿಳೆಯರು, ವೃದ್ಧರಾದಿಯಾಗಿ ಬಣ್ಣ ಎರಚಿ ಮಕ್ಕಳೊಂದಿಗೆ ಸಂಭ್ರಮಿಸಿದರು. ಜಿಲ್ಲಾದ್ಯಂತ ಶಾಂತಿಯುತವಾಗಿ ಹೋಳಿ ಆಚರಿಸಲಾಯಿತು.
ಬುಧವಾರ ಬೆಳಗ್ಗೆಯಿಂದಲೇ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಣ್ಣ ಎರಚಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಗರದ ಸ್ಟೇಶನ್ ರಸ್ತೆ, ಬಸ್ ನಿಲ್ದಾಣ, ಚಕ್ರಕಟ್ಟಾ, ಮೈಲಾಪುರ ಅಗಸಿ, ಗಾಂಧಿ ಚೌಕ್ ಪ್ರದೇಶದಲ್ಲಿ ನೂರಾರು ಯುವಕರು ಸೇರಿ ಮೈಕ್ ಹಚ್ಚಿಕೊಂಡು ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುತ್ತ ಬಣ್ಣ ಎರಚಿ ಸಂಭ್ರಮಿಸಿದರು. ಮಕ್ಕಳು ಪಿಚಕಾರಿಯಲ್ಲಿ ಬಣ್ಣದ ನೀರನ್ನು ತುಂಬಿ ರಸ್ತೆಯಲ್ಲಿ ಹೋಗುವವರಿಗೆ, ಪರಿಚಯಸ್ಥರಿಗೆ ಹಾರಿಸಿ ಖುಷಿಪಟ್ಟರು. ಓಣಿಗಳಲ್ಲಿ ಅಕ್ಕಪಕ್ಕದ ಮನೆಯ ಮಹಿಳೆಯರು ಸೇರಿ ಹೋಳಿ ಹಬ್ಬ ಆಚರಿಸಿದರು.
ಬಂಡಿಯಲ್ಲಿ ಬಣ್ಣ: ನಗರದ ಮೈಲಾಪುರ ಅಗಸಿ ಬಳಿಯಿಂದ ಸಿಂಗಾರಗೊಳಿಸಿದ್ದ ಎತ್ತಿನ ಬಂಡಿಗಳಲ್ಲಿ ಬ್ಯಾರೆಲ್ಗಳಲ್ಲಿ ಬಣ್ಣದ ನೀರು ತುಂಬಿಕೊಂಡು ನೂರಾರು ಜನರು ಓಕುಳಿಯಾಡಿದರು. ಅಲ್ಲಿಂದ ಗಾಂಧಿಚೌಕದ ಮೂಲಕ ನಗರಸಭೆ, ಅಂಬೇಡ್ಕರ್ ಚೌಕದಿಂದ ಬಂಡಿಗಳ ಮೆರವಣಿಗೆ ನಡೆಯಿತು. ಬಣ್ಣದ ನೀರಿನಲ್ಲಿ ಮಿಂದಿದ್ದ ಯುವಕರು ಬಳಿಕ ಭೀಮಾ ನದಿಗೆ ಹೋಗಿ ಸ್ನಾನ ಮಾಡಿದರು. ಯುವಕರ ಗುಂಪು ಬೈಕ್ಗಳಲ್ಲಿ ಬಣ್ಣ ಎರಚುತ್ತ, ಸಿಳ್ಳೆ ಹೊಡೆಯುತ್ತ ವೇಗವಾಗಿ ಚಾಲನೆ ಮಾಡಿ ಸಂತಸಪಟ್ಟರು. ಪೊಲೀಸರು, ಸರ್ಕಾರಿ ನೌಕರರೂ ತಮ್ಮ ಪರಿಚಯಸ್ಥರ ಮನೆಗೆ ತೆರಳಿ ಬಣ್ಣ ಹಚ್ಚಿ ಸಂಭ್ರಮಿಸಿದರು.
ಬಿಗಿ ಪೊಲೀಸ್ ಭದ್ರತೆ: ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಬುಧವಾರದಿಂದಲೇ ಮದ್ಯ ಮಾರಾಟ ನಿಷೇಧಿಸಿತ್ತು. ಹೋಳಿ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂಡಿ ಸಾಗುವ ಮಾರ್ಗ ಹಾಗೂ ಪ್ರಮುಖ ವೃತ್ತದ ಬಳಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಇದರಿಂದ ಜಿಲ್ಲಾದ್ಯಂತ ಹೋಳಿ ಶಾಂತಿಯುತವಾಗಿ ಮುಗಿಯಿತು.
ಕಾಮದಹನ: ಮಂಗಳವಾರ ರಾತ್ರಿ ಸ್ಟೇಶನ್ ರಸ್ತೆ, ಗಂಜ್, ಚಿತ್ತಾಪುರ ರಸ್ತೆ ಇನ್ನಿತರ ಕಡೆಗಳಲ್ಲಿ ಕಾಮದಹನ ಮಾಡಲಾಯಿತು. ಗ್ರಾಮೀಣ ಭಾಗಗಳಲ್ಲಿ ಬೆಂಕಿಯನ್ನು ಮೆರವಣಿಗೆಯಲ್ಲಿ ತಂದು ಕಾಮದಹನ ಮಾಡಲಾಯಿತು.
ಹೋಳಿ ಹಬ್ಬದ ನಿಮಿತ್ತ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ವಾಹನ ಸಂಚಾರವೂ ಕಡಿಮೆಯಿತ್ತು. ಟಂಟಂ ರಿಕ್ಷಾಗಳು ಮಧ್ಯಾಹ್ನದವರೆಗೆ ರಸ್ತೆಗಿಳಿಯಲೇ ಇಲ್ಲ. ಜನ ಸಂಚಾರವೂ ವಿರಳವಾಗಿತ್ತು. ಹೋಟೆಲ್ಗಳು, ಇಂಟರ್ನೆಟ್ ಕೇಂದ್ರಗಳು, ಕಿರಾಣಿ ಅಂಗಡಿ ಸೇರಿದಂತೆ ವ್ಯಾಪಾರ ವಹಿವಾಟು ಬಂದ್ ಆಗಿತ್ತು. ಆದರೆ ಬಣ್ಣ ಎರಚುವ ಕಾರ್ಯ ಮುಗಿಯುತ್ತಿದ್ದಂತೆ ಸಂಜೆ ವೇಳೆ ಕೆಲ ಅಂಗಡಿಗಳು ಬಾಗಿಲು ತೆರೆದವು.
ಶಹಾಪುರ ಹಾಗೂ ಸುರಪುರ, ಗುರುಮಮಠಕಲ್, ಹುಣಸಗಿ, ಕೆಂಭಾವಿ ಸೇರಿದಂತೆ ಜಿಲ್ಲಾದ್ಯಂತ ಹೋಳಿ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಹಿರಿಕಿರಿಯರೆನ್ನದೆ ಬಣ್ಣ ಹಾಕುವ ಮೂಲಕ ಮಧ್ಯಾಹ್ನದವರೆಗೂ ಸಂಭ್ರಮಿಸಿದರು. ಬಣ್ಣ ಎರಚಿ ಸಂಬ್ರಮಿಸಿದ ಯುವಕರು ನಂತರ ಭೀಮಾ ನದಿಗೆ ತೆರಳು ಸ್ನಾನ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

