ನೀರಿಗಾಗಿ ಪರದಾಟ, ಕಿತ್ತಾಟ
ಯಾದಗಿರಿ: ಸತತ ಎರಡು ವರ್ಷಗಳ ಬರದಿಂದ ತತ್ತರಿಸಿರುವ ಜಿಲ್ಲೆಯ ಜನತೆಗೆ ಈ ಬಾರಿ ಬಿಸಿಲು ತನ್ನ ವಿರಾಟ್ ರೂಪವನ್ನು ತೋರಿಸುತ್ತಿದೆ. ಜಿಲ್ಲಾ ಕೇಂದ್ರದಲ್ಲೇ ನಾಗರಿಕರು ಕುಡಿವ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ.
ವರ್ಷದಿಂದ ಸಮಸ್ಯೆ: ನಗರದಿಂದ ಕೇವಲ 2 ಕಿಮೀ ಅಂತರದಲ್ಲಿ ಭೀಮಾ ನದಿ ಹರಿಯುತಿದ್ದರೂ ಈ ಬಾರಿಯ ಬೇಸಿಗೆಯ ಪ್ರಖರತೆಯಿಂದಾಗಿ ಜನತೆ ನೀರಿಗಾಗಿ ಪರದಾಡುವಂತಾಗಿದೆ. ನಗರದ ವಾರ್ಡ್ ಸಂಖ್ಯೆ 17 ಮತ್ತು 18ರಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ದಿನ ಬೆಳಗಾದರೆ ಸಾಕು ನಾಗರಿಕರು ನೀರಿಗಾಗಿ ಕಿತ್ತಾಡುವಂತಾಗಿದೆ. ವಾರ್ಡ್ 18ರಲ್ಲಿ ಕಳೆದ ಒಂದೂವರೆ ವರ್ಷದಿಂದ ಇದೇ ಸಮಸ್ಯೆ ಇದ್ದು, ನಗರಸಭೆ ಅಧಿಕಾರಿಗಳು ಮಾತ್ರ ಇದಕ್ಕೆ ಸ್ಪಂದಿಸುತ್ತಿಲ್ಲ. ವಾರ್ಡಿನ ನಿವಾಸಿಗಳೆಲ್ಲಾ ಸೇರಿ ಹಲವು ಬಾರಿ ನಗರಸಭೆಯ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ನಿವಾಸಿಗಳು ದೂರುತ್ತಿದ್ದಾರೆ.
ನೆಮ್ಮದಿ ಇಲ್ಲ: ವಾರ್ಡ್ ನಂ.18ರಲ್ಲಿ ಅಂಬೇಡ್ಕರ್ ನಗರ ಬಹುತೇಕ ಕೋಟೆ ವ್ಯಾಪ್ತಿಗೆ ಒಳಪಟ್ಟಿದ್ದು, ಇಲ್ಲಿ ನೀರು ಸರಬರಾಜಾಗಲು ಸಮಸ್ಯೆಯಾಗುತ್ತಿದೆ. ಎತ್ತರ ಪ್ರದೇಶದಲ್ಲಿನ ಬಡಾವಣೆಯ ನಿವಾಸಿಗಳಿಗೆ ಪೈಪ್ನಿಂದ ನೀರು ಬರುತ್ತಿಲ್ಲ. ಹೀಗಾಗಿ ಬರುವ ಅಲ್ಪ ಪ್ರಮಾಣದ ನೀರಿಗಾಗಿ ಪ್ರತಿದಿನ ಬೆಳಗ್ಗೆ 3 ಗಂಟೆಗೆ ಎದ್ದು ಸರದಿಯಲ್ಲಿ ಕಾಯುವಂತಾಗಿದೆ ಎಂದು ಮಹಿಳೆಯರು ಅಳಲು ತೋಡಿಕೊಳ್ಳುತ್ತಿದ್ದಾರೆ. ಕಳೆದ 3 ದಿನಗಳಿಂದ ಈ ಸಮಸ್ಯೆ ಮತ್ತಷ್ಟು ತೀವ್ರಗೊಂಡಿದೆ. ನೀರಿಗಾಗಿ ದಿನವೂ ಜಗಳ ನಡೆಯುತ್ತಿದ್ದು, ಬಡಾವಣೆಯಲ್ಲಿ ಶಾಂತಿ ಇಲ್ಲದಂತಾಗಿದೆ ಎಂದು ನಿವಾಸಿ ಮಲ್ಲಿನಾಥ ಸುಂಗಲಕರ್ ಆರೋಪಿಸಿದ್ದಾರೆ.
್ಡಹಾರಿಕೆ ಉತ್ತರ: ಇತ್ತೀಚೆಗೆ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ನಿವಾಸಿಗಳೆಲ್ಲ ನಗರಸಭೆ ಪೌರಾಯುಕ್ತರನ್ನು ಭೇಟಿ ಮಾಡಿದಾಗ, ಸದ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಾವೇನು ಮಾಡಲು ಆಗುವುದಿಲ್ಲ ಎಂಬ ಹಾರಿಕೆ ಉತ್ತರ ನೀಡಿ ಕಳುಹಿಸಿದ್ದಾರೆ ಎಂದು ಬಡಾವಣೆ ನಿವಾಸಿಗಳು ಆರೋಪಿಸಿದ್ದಾರೆ. ಮೊದಲೇ ಖಡಕ್ ಬೇಸಿಗೆಗೆ ನಗರ ಪ್ರದೇಶದ ಜನತೆ ತತ್ತರಿಸಿದ್ದಾರೆ. ಇನ್ನು ಕುಡಿಯುವ ನೀರಿಗಾಗಿ ಮೈಲುಗಟ್ಟಲೆ ಅಲೆದಾಡುವಂತಾಗಿದೆ. ಬೋರ್ವೆಲ್ನಿಂದ ತಂದ ನೀರು ಕುಡಿಯಲು ಯೋಗ್ಯವಾಗಿಲ್ಲ. ಹೀಗಾಗಿ 17 ಮತ್ತು 18ನೇ ವಾರ್ಡಿನಲ್ಲಿ ಕುಡಿವ ನೀರಿಗಾಗಿ ಪ್ರತ್ಯೇಕ ಟ್ಯಾಂಕ್ ಮತ್ತು ಬೋರ್ವೆಲ್ಗಳ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಬಡಾವಣೆ ನಾಗರಿಕರೆಲ್ಲರೂ ನಗರಸಭೆ ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

