'ಕೈ'ಗೆ ಅಲ್ಪಸಂಖ್ಯಾತರ ಬೆಂಬಲ
ಕ.ಪ್ರ. ವಾರ್ತೆ, ಚಿತ್ತಾಪುರ, ಮೇ1
ಚಿತ್ತಾಪುರ ತಾಲೂಕಿನ ಅಲ್ಪಸಂಖ್ಯಾತರ ಸಮುದಾಯದಿಂದ ಕಾಂಗ್ರೆಸ್ಗೆ ಬೆಂಬಲ ನೀಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖಾತರ ಘಟಕದ ಆಧ್ಯಕ್ಷ ಮುಕ್ತಾರ ಪಟೇಲ್ ತಿಳಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರವು ಕೋಮವಾದಿ ಪಕ್ಷವಾಗಿದ್ದು, ಮುಸ್ಲಿಂರನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಸರ್ವ ಜನಾಂಗದ ಏಳಿಗೆಯು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ ಎಂದು ಅಲ್ಪಸಂಖ್ಯಾತರ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿ ಕಾಂಗ್ರೆಸ್ಗೆ ಬೆಂಬಲ ಸೂಚಿಸಲು ವಾಡಿ, ನಾಲವಾರ, ಚಿತ್ತಾಪುರಗಳಲ್ಲಿ ಮುಸ್ಲಿಂ ಸಮುದಾಯದವರು ಸಭೆ ಸೇರಿ ನಿರ್ಣಯಿಸಿದ್ದಾರೆ. ಮಾಜಿ ಬ್ಲಾಕ್ ಅಧ್ಯಕ್ಷ ಡಾ. ಅಬ್ದಲ್ ಕರಿಂ, ಹಾಜಿ ಉಸ್ಮಾನ ಗೋಲಾ, ಅಬ್ದಲ್ ರಶೀದ್, ಸೈಯದ್ ಮಕಬೂಲ್ ನಾಜ, ಬಾಬಾಸೇಠ, ಅಲಿಂ, ಆದಮ್ ಅಲಿ, ಆರೀಪ್ ಮೊಹ್ಮದ್ ಖಾನ್, ಅಬ್ದುಲ್ ಸಲಿಂ ನಾಲವಾರ, ಅಜುಂ ಖಾಜಿ, ಮಕ್ಸೂದ್ ಜುನೈದಿ ವಾಡಿ, ಮ್ಮಹದ್ ಇಕ್ಬಾಲ್ ವಾಡಿ, ಶೇಖ ಮಹ್ಮದ್ ಸೌದಾಗರ, ಅಬ್ದಲ್ ಸಲಿಂ ತೇಲಿ, ಅಹ್ಮದ್ ಶೇಠ, ಮೆಹಮೂದ್ ಸಾಬ್ ವಾಡಿ ಇದ್ದರು.
--
'ಮತದಾರರಿಗೆ ಆಮಿಷ ಸಲ್ಲ'
ಕ.ಪ್ರ. ವಾರ್ತೆ, ಗುಲ್ಬರ್ಗ, ಮೇ 1
ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಚುನಾವಣೆಯು ಮೇ. 5 ರಂದು ಬೆಳಗಿನ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಲು ಭಾರತ ಚುನಾವಣಾ ಆಯೋಗ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಂಡಿದೆ.
ಭಾರತ ದಂಡ ಸಂಹಿತೆ (ಐಪಿಸಿ) 1860ರ ಕಲಂ 171 ಬಿ ಯಂತೆ ಚುನಾವಣೆಗೆ ಸಂಬಂಧಿಸಿದಂತೆ ಮತದಾರರಿಗೆ ಹಣದ ಆಸೆ- ಆಮಿಷ ತೋರಿಸುವುದು ಅಪರಾಧವಾಗಿದೆ. ಆಮಿಷ ಹಣದ ರೂಪದಲ್ಲಿರಬಹುದು ಅಥವಾ ವಸ್ತು ರೂಪದಲ್ಲಿರಬಹುದು. ಇದನ್ನು ಅಪರಾಧ ಎಂದು ಪರಿಗಣಿಸಲಾಗುವುದು.ಯಾರೇ ವ್ಯಕ್ತಿ, ಯಾವುದೇ ವ್ಯಕ್ತಿಯ ಪರವಾಗಿ ಮತ ನೀಡುವ ಸಲುವಾಗಿ ಒಡ್ಡುವ ಆಸೆ ಆಮಿಷಗಳು ಇದರ ವ್ಯಾಪ್ತಿಗೆ ಬರುತ್ತವೆ. ಇದಕ್ಕೆ ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ದಂಡ ಅಥವಾ ಈ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ.
ಇದಲ್ಲದೆ ಈ ನಿಯಮದ ಕಲಂ 171 ಸಿ ಯಂತೆ ಯಾವುದೇ ವ್ಯಕ್ತಿ, ಅಭ್ಯರ್ಥಿ ಅಥವಾ ಮತದಾರ, ಅಥವಾ ಇನ್ನಾರನ್ನಾದರೂ ಯಾವುದೇ ರೀತಿಯಲ್ಲಿ ಹೆದರಿಸುವುದು, ಗಾಯಗೊಳಿಸುವುದು ಶಿಕ್ಷಾರ್ಹ ಅಪರಾಧ. ಇದಕ್ಕೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಈ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ. ಇವುಗಳನ್ನು ಗಮನಿಸಲು ಗುಲ್ಬರ್ಗ ಜಿಲ್ಲಾದ್ಯಂತ ಚಲಿಸುವ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಲಂಚ ನೀಡುವ ಹಾಗೂ ಅದನ್ನು ಸ್ವೀಕರಿಸುವ ಮತ್ತು ಮತದಾರರನ್ನು ಬೆದರಿಸುವ ಪ್ರಕರಣಗಳನ್ನು ಗಮನಿಸಿ ಅಂತಹವರ ವಿರುದ್ಧ ಮೊಕದ್ದಮೆ ದಾಖಲಿಸುವೆವು.
ಗುಲ್ಬರ್ಗ ಜಿಲ್ಲೆಯ ಎಲ್ಲ ನಾಗರಿಕರು ಈ ರೀತಿ ವಿಷಯ ತಮ್ಮ ಗಮನಕ್ಕೆ ಬಂದಲ್ಲಿ ಕೂಡಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಿದ ಕಾಲ್ ಸೆಂಟರಿನ ಶುಲ್ಕರಹಿತ ದೂರವಾಣಿ ಸಂಖ್ಯೆ 18004251784 ಅಥವಾ 18004250785ಗೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

