ಗುಲ್ಬರ್ಗಾ

ಗುಲ್ಬರ್ಗದಲ್ಲಿ ಗಣ್ಯರ ಮತದಾನ

Published On :

ಗುಲ್ಬರ್ಗ: ಗುಲ್ಬರ್ಗ ನಗರದಲ್ಲಿ ಭಾನುವಾರ ಅಸೆಂಬ್ಲಿ ಮತದಾನದಲ್ಲಿ ಗಣ್ಯರು, ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ಮತ ಚಲಾಯಿಸಿದರು. ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ತಮ್ಮ ಮತವನ್ನು ಬಸವನಗರ ಸರ್ಕಾರಿ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಪತ್ನಿ ರಾಧಾಬಾಯಿ ಜೊತಗೂಡಿ ಚಲಾಯಿಸಿದರು. ಹೋರಾಟಗಾರ, ಗುಲ್ಬರ್ಗ ದಕ್ಷಿಣ ಕೆಜೆಪಿ ಹುರಿಯಾಳು ಎಸ್ಕೆ ಕಾಂತಾ, ಇದೇ ಕ್ಷೇತ್ರದ ಬಿಜೆಪಿ ಹುರಿಯಾಳು ದತ್ತಾತ್ರೇಯ ರೇವೂರ್ (ಅಪ್ಪೂಗೌಡ) ಇಬ್ಬರೂ ಸೂಪರ್ ಮಾರ್ಕೆಟ್ ಎಂಪಿಎಚ್‌ಎಸ್ ಶಾಲಾಂಗಣದಲ್ಲಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು. ದತ್ತಾತ್ರೇಯ ಜೊತೆಗೆ ಮಾಜಿ ಶಾಸಕಿ ಅರುಣಾದೇವಿ ಪಾಟೀಲ್ ಹಾಗೂ ಶ್ರೀಮತಿ ದತ್ತು ರೇವೂರ್ ಜೊತೆಗಿದ್ದರು. ಶಶೀಲ್ ನಮೋಶಿ ತಮ್ಮ ಪುತ್ರ ಪ್ರಫುಲ್ ಜೊತೆಗೂಡಿ ನೂತನ ವಿದ್ಯಾಲಯ ಕನ್ಯಾ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಗುಲ್ಬರ್ಗ ಸರ್ಕಾರಿ ಐಟಿಐನಲ್ಲಿ ಬಿಜೆಪಿ ಮುಖಂಡ, ಗುಲ್ಬರ್ಗ ಉತ್ತರ ಬಿಜೆಪಿ ಹುರಿಯಾಳು ರಾಜಗೋಪಾಲರೆಡ್ಡಿ ತಮ್ಮ ಧರ್ಮಪತ್ನಿ ಜೊತೆಗೂಡಿ ಮತದಾನ ಮಾಡಿದರು. ಉತ್ತರದ ಕಾಂಗ್ರೆಸ್ ಹುರಿಯಾಳು ಖಮರುಲ್ ಇಸ್ಲಾಂ ಪಿಡ್ಬ್‌ಡೂಡಿ ಕಚೇರಿ ಮತಗಟ್ಟೆಯಲ್ಲಿ ಇದೇ ಕಣದ ಜೆಡಿಎಸ್ ಹುರಿಯಾಳು ಸೈಯ್ಯದ್ ಜಾಫರ್ ಹುಸೇನ್ ದರ್ಗಾ ಪ್ರದೇಶದಲ್ಲಿನ ಮತಗಟ್ಟೆಗೆ ಹೋಗಿ ಪತ್ನಿ, ಪುತ್ರರು, ತಾಯಿ- ಪೋಷಕರು, ಅಭಿಮಾನಿಗಳೊಂದಿಗೆ ಮತದಾನ ಮಾಡಿದರು.
ಧರಂ ನೆಲೋಗಿಯಲ್ಲಿ ಮತದಾನ: ಮಾಜಿ ಸಚಿವ, ಚಿತ್ತಾಪುರ ಕೆಜೆಪಿ ಅಭ್ಯರ್ಥಿ ಸಿ. ಗುರುನಾಥ ಶಹಾಬಾದ್‌ನಲ್ಲಿ ಮತದಾನ ಮಾಡಿದರೆ, ಮಾಜಿ ಸಿಎಂ ಧರ್ಮಸಿಂಗ್ ತಮ್ಮ ತವರೂರು, ಜೇವರ್ಗಿ ತಾಲೂಕಿನ ನೆಲೋಗಿಯಲ್ಲಿ ಮತದಾನ ಮಾಡಿದರು. ಸೇಡಂ ಕೆಜೆಪಿ ಅಭ್ಯರ್ಥಿ ವೈಜನಾಥ ಪಾಟೀಲ್, ಎಂಎಸ್‌ಐಎಲ್ ಅಧ್ಯಕ್ಷ ಡಾ. ವಿಕ್ರಂ ಪಾಟೀಲ್, ಗುಲ್ಬರ್ಗದ ಕೈಲಾಸ ವೀರೇಂದ್ರ ಪಾಟೀಲ್, ಜೇವರ್ಗಿ ಬಿಜೆಪಿ ಹುರಿಯಾಳು ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಸೇರಿದಂತೆ ಕಣದಲ್ಲಿರುವ ಮಾಜಿ ಶಾಸಕರು, ಮಾಜಿ ಸಚಿವರು ಹುರುಪಿನಿಂದ ಬೆಳಗ್ಗೆಯೇ ಮತದಾನ ಮಾಡಿ ಕ್ಷೇತ್ರ ಸಂಚಾರಕ್ಕೆ ತೆರಳಿದ್ದು ವಿಶೇಷವಾಗಿತ್ತು. ಮತದಾನ ಮಾಡಿದವರಲ್ಲಿ ಎಲ್ಲರೂ ನೇರವಾಗಿ ಮತಗಟ್ಟೆಗೆ ನುಗ್ಗದೆ ಎಂದಿನಂತೆ ಎಲ್ಲರ ಜೊತೆಗೇ ಸರತಿಯಲ್ಲಿ ನಿಂತುಕೊಂಡೇ ಮತ ಚಲಾಯಿಸಿದ್ದು, ಗಮನಾರ್ಹವಾಗಿತ್ತು.
ಸುಗಮ ಮತದಾನ
ಜೇವರ್ಗಿ: ಮತಕ್ಷೇತ್ರದಲ್ಲಿ ಭಾನುವಾರ ಶಾಂತಿಯುತವಾಗಿ ಮತದಾನ ನಡೆಯಿತು. ಶೇ.49ರಷ್ಟು ಮತದಾನವಾಗಿದೆ ಎಂದು ಅಂದಾಜಿಸಲಾಗಿದೆ. ಮತದಾನ ಸಂದರ್ಭದಲ್ಲಿ ಸಂಪೂರ್ಣ ಶಾಂತಿ ಸುವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ತಾಲೂಕಿನಲ್ಲಿ 239 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಪ್ರತಿ ಮತಗಟ್ಟೆಗೆ 4 ಜನ ಚುನಾವಣಾ ಸಿಬ್ಬಂದಿ ನೇಮಕ ಮಾಡಲಾಗಿತ್ತು. ತಾಲೂಕಿನಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಸಂಪೂರ್ಣ ಶಾಂತಿಯುತವಾಗಿ ನಡೆಯಿತು. ಮತಗಟ್ಟೆ ಕೇಂದ್ರದ ಸುತ್ತ 100 ಮೀ. ನಿಷೇದಾಜ್ಞೆ ಜಾರಿಗೊಳಿಸಲಾಗಿತ್ತು. ತಾಲೂಕಿನಲ್ಲಿ ಒಟ್ಟು 239 ಮತಗಟ್ಟೆಗಳಿದ್ದವು. ಅವುಗಳಲ್ಲಿ 72 ಸೂಕ್ಷ್ಮ, 33 ಅತೀ ಸೂಕ್ಷ್ಮ, 134 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿತ್ತು. ಪ್ರತಿ ಮತಗಟ್ಟೆಗೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.