ಗುಲ್ಬರ್ಗಾ

ಜಿಲ್ಲೆಯಲ್ಲಿ ಶಾಂತಿಯುತ ಮತದಾನ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 5
ಜಿಲ್ಲೆಯ 7 ವಿಧಾನಸಭೆ ಕ್ಷೇತ್ರಗಳಿಗೆ ಭಾನುವಾರ ನಡೆದ ಮತದಾನ ರಾಜಕೀಯ ಪಕ್ಷಗಳ ಕಾರ್ಯಕರ್ತರ ಮಧ್ಯೆ ವಾಗ್ವಾದ, ಜಿಪಂ ಸದಸ್ಯರ ಸಹೋದರನ ಮೇಲೆ ಹಲ್ಲೆ, ಮತಯಂತ್ರ ಬಿಸಾಕಿದ ಪ್ರಕರಣ ಸೇರಿ ಸಣ್ಣಪುಟ್ಟ ಘಟನೆಗಳ ಹೊರತಾಗಿಯೂ ಶಾಂತಿಯುತ ಮತದಾನ ನಡೆದಿದೆ.
ನಗರ ಸೇರಿದಂತೆ ಜಿಲ್ಲಾದ್ಯಂತ ಭಾನುವಾರ ಬೆಳಗ್ಗೆಯಿಂದಲೇ ಮತಗಟ್ಟೆಗಳ ಮುಂದೆ ಮತದಾರರು ಸಾಲುಗಟ್ಟಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಬಿರುಬಿಸಿಲ ತಾಪದಿಂದ ಪಾರಾಗಲು ಅನೇಕರು ಬೆಳಗ್ಗೆ 7ರಿಂದಲೇ ಮತಗಟ್ಟೆಯ ಬಳಿ ಧಾವಿಸಿದ್ದು ಕಂಡುಬಂದಿತು.
ನಗರ ಸೇರಿದಂತೆ ಜಿಲ್ಲಾದ್ಯಂತ ಮತದಾರರು ಗುರುತಿನ ಚೀಟಿಯೊಂದಿಗೆ ಮತಗಟ್ಟೆಗಳಿಗೆ ಧಾವಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮತಗಟ್ಟೆಗಳ ಪ್ರವೇಶ ದ್ವಾರದಲ್ಲಿಯೇ ಅರೆಸೇನಾ ಪಡೆಯ ಸಿಬ್ಬಂದಿ ಮತದಾರರ ಗುರುತಿನ ಚೀಟಿ ಪರಿಶೀಲಿಸಿ ಪ್ರವೇಶಕ್ಕೆ ಅನುವು ಮಾಡಿಕೊಡುತ್ತಿದ್ದುದು ಎಲ್ಲೆಡೆ ಕಂಡುಬಂದಿತು.
ಮತಯಂತ್ರ ವೈಫಲ್ಯ: ಈ ಮಧ್ಯೆ ಮತದಾನದ ವೇಳೆ ಕೆಲವೆಡೆ ಮತಯಂತ್ರಗಳು ಕೈಕೊಟ್ಟಿದ್ದರಿಂದ ಬೆಳಗ್ಗೆ ಮತದಾನ ವಿಳಂಬವಾಯಿತು. ದೇವದುರ್ಗ ತಾಲೂಕಿನ ಹಂಚಿನಾಳ, ಸಿಂಧನೂರು ನಗರದ 20, 23 ಮತ್ತು 24ನೇ ವಾರ್ಡಿನಲ್ಲಿ ಮತಯಂತ್ರಗಳಲ್ಲಿನ ದೋಷದಿಂದ ಮತದಾನ ತಡವಾಯಿತು.
ಮಾನವಿ ತಾಲೂಕಿನ ಉದ್ಬಾಳ್ ಗ್ರಾಮದ ಮತಗಟ್ಟೆಯಲ್ಲಿ ಸಹ ಮತಯಂತ್ರದ ವೈಫಲ್ಯದಿಂದ ಮತದಾರರು ಕೆಲಕಾಲ ಕಾಯುವಂತಾಯಿತು.
ಇನ್ನು ಲಿಂಗಸ್ಗೂರು ತಾಲೂಕಿನ ತುರಡಗಿ ಗ್ರಾಮದಲ್ಲಿ ಮತಯಂತ್ರದಲ್ಲಿ ಮತಹಾಕುವ ಬಗ್ಗೆ ಗೊತ್ತಿಲ್ಲದ ವ್ಯಕ್ತಿಯೊಬ್ಬ ತಪ್ಪಾಗಿ ಮತದಾನ ಮಾಡಿ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿ, ಕೊನೆಗೆ ಮತಯಂತ್ರವನ್ನು ಎತ್ತಿ ಬಿಸಾಕಿ ಹಾನಿಗೊಳಿಸಿದ ಘಟನೆ ನಡೆಯಿತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಮತಯಂತ್ರವನ್ನು ಪುನಾ ಸರಿಪಡಿಸಿ ಮತದಾನಕ್ಕೆ ಅವಕಾಶ ಮಾಡಿದ್ದಾರೆ.
ಸ್ಥಳಾಂತರ ತಂದ ಪರದಾಟ: ಸಿಂಧನೂರು ನಗರದ 22ನೇ ವಾರ್ಡಿನಲ್ಲಿದ್ದ ಮತಗಟ್ಟೆಯನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಿದ್ದರಿಂದ ಮತದಾರರು ಗೊಂದಲಕ್ಕೆ ಬಿದ್ದರು. ದೂರದವರೆಗೆ ತೆರಳಿ ಮತಗಟ್ಟೆ ಹುಡುಕಿ ಮತದಾನ ಮಾಡುವಂತಾಯಿತು. ಸಿಂಧನೂರು ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಸಿಂಧನೂರಿನ 27ನೇ ವಾರ್ಡಿನಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಕರಿಯಪ್ಪ ಮತ್ತು ಕಾಂಗ್ರೆಸ್‌ನ ಮುಖಂಡ ಶಶಿಧರ್ ಭಂಗಿ ಎಂಬುವವರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ನಡೆಯಿತು. ರಾಯಚೂರು ನಗರಕ್ಷೇತ್ರದ ವ್ಯಾಪ್ತಿಯ ವಿವಿಧ ಮತಗಟ್ಟೆಗಳ ಬಳಿ ಮತದಾರರು ಗುರುತಿನ ಚೀಟಿಯಿದ್ದರೂ ಬಿಎಲ್‌ಒಗಳು ಮತದಾನದ ಚೀಟಿ ಸರಿಯಾಗಿ ವಿತರಿಸದ್ದಕ್ಕೆ ಪರದಾಡುವಂತಾಯಿತು.
ಹಲ್ಲೆ: ಮಾನವಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಸಿರವಾರ ಪಟ್ಟಣದ ಮತಗಟ್ಟೆಯ ಬಳಿ ಜಿಪಂ ಸದಸ್ಯ ಅಸ್ಲಂಪಾಷಾ ಸಹೋದರ ಮಂಜೂರ್ ಪಾಷಾ ಮೇಲೆ ಕೆಜೆಪಿ ಕಾರ್ಯಕರ್ತರು ಹಲ್ಲೆ ಮಾಡಿದ ಘಟನೆ ನಡೆಯಿತು. ಇದರಿಂದ ಮತಗಟ್ಟೆಯ ಬಳಿ ಕೆಲಹೊತ್ತು ಗೊಂದಲದ ವಾತಾವರಣವಿತ್ತು. ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತು.
ಇನ್ನುಳಿದಂತೆ ಜಿಲ್ಲೆಯ ಬಹುತೇಕ ಕಡೆ ಮತದಾನ ಶಾಂತಿಯುತವಾಗಿತ್ತು. ಮತದಾನದ ಹಿನ್ನೆಲೆಯಲ್ಲಿ ಭಾರೀ ಪೊಲೀಸ್ ಮತ್ತು ಅರೆಸೇನಾ ಪಡೆಯ ಬಿಗಿ ಕಾವಲು ಹಾಕಲಾಗಿತ್ತು.
ಕಳೆದ ನಗರಸಭೆ ಚುನಾವಣೆ ವೇಳೆ ಮತದಾರರ ಪಟ್ಟಿಯಲ್ಲಿನ ದೋಷದಿಂದ ಸಮಸ್ಯೆ ಎದುರಿಸಿದ್ದ ಮತದಾರರ ಪೈಕಿ ಬಹುತೇಕರು ಈ ಬಾರಿ ಮತದಾನ ಮಾಡುವ ಅವಕಾಶ ಪಡೆವ ಮೂಲಕ ಉಂಟಾಗಿದ್ದ ಆತಂಕ ನಿವಾರಣೆಯಾಯಿತು. ಅಷ್ಟೇ ಅಲ್ಲ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರಿದವರಷ್ಟೇ ಅಲ್ಲದೇ ಅನೇಕ ಯುವಮತದಾರರು ಹೆಚ್ಚಿಗೆ ಮತದಾನಕ್ಕೆ ಆಗಮಿಸಿದ್ದು ಕಂಡುಬಂದಿತು.
ಪ್ರಮುಖರಿಂದ ಮತದಾನ: ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಭಾನುವಾರ ಆಯಾ ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳು ತಮ್ಮ ಮತದಾನ ಮಾಡಿದರು. ರಾಯಚೂರು ನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಡಾ.ಶಿವರಾಜ್ ಪಾಟೀಲ್, ಬಿಜೆಪಿ ಅಭ್ಯರ್ಥಿ ತ್ರಿವಿಕ್ರಮ್ ಜೋಷಿ, ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸೀನ್ ಮತ್ತಿತರರು ಬೆಳಗ್ಗೆ ಮತಗಟ್ಟೆಗಳಿಗೆ ತೆರಳಿ ಮತ ಹಾಕಿದರು. ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಿಗೆ ಭಾನುವಾರ ನಡೆದ ಮತದಾನ ಒಟ್ಟಾರೆಯಾಗಿ ಶಾಂತಿಯುತವಾಗಿ ಪೂರ್ಣಗೊಂಡಿತು. ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಸೇರ್ಪಡೆಯಾಯಿತು.

ಮತಯಂತ್ರದಲ್ಲಿ ರಾಜಕೀಯ ಭವಿಷ್ಯ
ರಾಯಚೂರು: ಪ್ರಚಾರದ ಭರಾಟೆ, ರಾಜಕೀಯದ ಜಿದ್ದಾಜಿದ್ದಿ ಕಂಡ ಜಿಲ್ಲೆಯಲ್ಲಿ ಭಾನುವಾರ ಮತದಾನ ಶಾಂತಿಯುತವಾಗಿ ಪೂರ್ಣಗೊಂಡಿದೆ. ಜಿಲ್ಲೆಯ ಒಟ್ಟು 86 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಿದ್ದು ಮತಯಂತ್ರದಲ್ಲಿ ಅಭ್ಯರ್ಥಿಗಳ ಹಣೆಬರೆಹ ಸೇರಿದ್ದು, ಮತಗಳ ಎಣಿಕೆ ಕಾರ್ಯ ಮೇ 8ರಂದು ನಡೆಯಲಿದೆ.
ಹಾಲಿ ಶಾಸಕರಾದ ಸೈಯದ್ ಯಾಸೀನ್, ಶಿವನಗೌಡ ನಾಯಕ, ಹಂಪಯ್ಯ ನಾಯಕ, ವೆಂಕಟರಾವ ನಾಡಗೌಡ, ರಾಜಾ ರಾಯಪ್ಪ ನಾಯಕ ಹಾಗೂ ಮಾಜಿ ಶಾಸಕರಾದ ಮಾನಪ್ಪ ವಜ್ಜಲ್, ಪ್ರತಾಪಗೌಡ ಪಾಟೀಲ್, ಗಂಗಾಧರ ನಾಯಕ, ಮಾಜಿ ಸಂಸದ ವೆಂಕಟೇಶನಾಯಕ ಅವರ ರಾಜಕೀಯ ಭವಿಷ್ಯ ಮತಯಂತ್ರದಲ್ಲಿ ಸೇರಿದೆ.
ಅದೇ ರೀತಿ ಹಾಲಿ ಮತ್ತು ಮಾಜಿ ಶಾಸಕರಿಗೆ ಪೈಪೋಟಿ ನೀಡಿರುವ ಕಣಕ್ಕೆ ಹೊಸಬರಾದ ಡಾ.ಶಿವರಾಜ್ ಪಾಟೀಲ್, ತ್ರಿವಿಕ್ರಮ್ ಜೋಶಿ, ತಿಪ್ಪರಾಜು, ಸಿದ್ದು ಬಂಡಿ, ಡಿ.ಎಸ್.ಹೂಲಗೇರಿ, ಮಹಾದೇವಪ್ಪಗೌಡ, ರಾಜಾ ವೆಂಕಟಪ್ಪ ನಾಯಕ, ಬಸನಗೌಡ ದದ್ದಲ್ ಸೇರಿದಂತೆ ಅನೇಕರ ಭವಿಷ್ಯ ಮತಯಂತ್ರಗಳಲ್ಲಿ ಸುಭದ್ರವಾಗಿ ಸೇರಿದ್ದು ಮೇ 8ರಂದು ಮತಗಳ ಎಣಿಕೆ ನಂತರ ವಿಜಯಲಕ್ಷ್ಮಿ ಯಾರ ಒಲಿಯುತ್ತಾಳೆಂಬುದು ಗೊತ್ತಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.