ಗುಲ್ಬರ್ಗಾ

ಶಾಂತಿಯುತ ಮತದಾನ: ಡಿಸಿ, ಎಸ್ಪಿ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 5
ಜಿಲ್ಲೆಯ 9 ಅಸೆಂಬ್ಲಿ ಕ್ಷೇತ್ರಗಳಿಗೆ ಭಾನುವಾರ ನಡೆದ ಮತದಾನ ಶಾಂತಿಯುತವಾಗಿತ್ತು. ಜಿಲ್ಲೆಯ ಯಾವ ಸ್ಥಳದಲ್ಲಿಯೂ ಅಹಿತಕರ ಘಟನೆಗಳು ವರದಿಯಾಗಿಲ್ಲ. ಜಿಲ್ಲಾ ಪೊಲೀಸ್, ಕೆಎಸ್ಸಾರ್ಪಿ, ಬಿಎಸ್‌ಎಫ್, ಅರೆ ಸೇನಾಪಡೆ ಹೀಗೆ 15 ಸಾವಿರಕ್ಕೂ ಅಧಿಕ ಸಶಸ್ತ್ರ ಪೊಲೀಸ್ ಬಲ ಜಿಲ್ಲೆಯ ಎಲ್ಲಾ 9 ಕ್ಷೇತ್ರಗಳಲ್ಲಿ ಹರಡಲಾಗಿತ್ತು. ಹೀಗಾಗಿ ಚುನಾವಣೆ ಸಂಬಂಧಿತ ಯಾವುದೇ ಅಹಿತಕರ ಘಟನೆಗಳಿಗೆ ಎಲ್ಲಿಯೂ ಅವಕಾಶ ದೊರಕದಂತೆ ಎಲ್ಲವೂ ಶಾಂತಿಯುತವಾಗಿ ಸಾಗಿದೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಡಾ. ಜಗದೀಶ್, ಪೊಲೀಸ್ ವರಿಷ್ಠ ಸತೀಶ ಕುಮಾರ್ ತಿಳಿಸಿದ್ದಾರೆ.
ಚಿಂಚನಸೂರದಲ್ಲಿ ಬೆಳಗಿನ ಮತದಾನ ಆರಂಭದ ಅವಧಿಯಲ್ಲಿಯೇ ಮತಯಂತ್ರ ಕಿರಿಕಿರಿ ಎದುರಿಸಿತ್ತು. ಇದಾದ ನಂತರ ತಕ್ಷಣ ಪರಿಣಿತರು ಸ್ಥಳಕ್ಕೆ ಧಾವಿಸಿ ಇಲ್ಲಿನ ಸಮಸ್ಯೆಗೆ ಪರಿಹಾರ ನೀಡಿದಾಗ ಮತ್ತೆ ಮತದಾನ ಇಲ್ಲಿ ಆರಂಭವಾಯ್ತು. ಇದನ್ನು ಹೊರತುಪಡಿಸಿದರೆ ಜಿಲ್ಲೆಯ ಎಲ್ಲಾಕಡೆ ಮತದಾನ ಸುಗಮವಾಗಿ ನಡೆದಿದೆ.
ಯುವಕರಿಂದ ಬಿರುಸಿನ ಮತದಾನ
ಕನ್ನಡಪ್ರಭ ವಾರ್ತೆ, ಚಿಂಚೋಳಿ, ಮೇ 5
ಚಿಂಚೋಳಿ (ಪಜಾ) ಮೀಸಲು ವಿಧಾನಸಭಾ ಮತಕ್ಷೇತ್ರಕ್ಕೆ ಭಾನುವಾರ ನಡೆದ ಚುನಾವಣೆಯೂ ಶಾಂತಿಯುತವಾಗಿ ನಡೆದಿದೆ.
ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರ 224 ಮತಗಟ್ಟೆ ಕೇಂದ್ರಗಳಲ್ಲಿ ಮತದಾರರು ಬೆಳಗ್ಗಿನಿಂದಲೇ ತಮ್ಮ ಮತ ಚಲಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಬಿಸಿಲಿನ ತಾಪವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಬೆಳಗ್ಗೆ 7 ಗಂಟೆಯಿಂದಲೇ ಮಹಿಳೆಯರು, ವಯೋವೃದ್ಧರು ಮತ್ತು ಯುವಕರು ತಮ್ಮ ಮತಗಳನ್ನು ಚಲಾಯಿಸಿದರು.
ಮತ ಚಲಾಯಿಸಲು ಅವಕಾಶ: ತಾಲೂಕಿನ ಬೆನಕೆಪಳ್ಳಿ ಗ್ರಾಮದ ಮತಗಟ್ಟೆ ಕೇಂದ್ರ ಸಂಖ್ಯೆ 7ರಲ್ಲಿ ಹುಮನಾಬಾದ್ ತಾಲೂಕಿನ ಕೊಡಂಬಲ ಗ್ರಾಮದ 45 ಜನರು ತಮ್ಮ ಮತ ಚಲಾಯಿಸಲು ಆಗಮಿಸಿದಾಗ ಕಾಂಗ್ರೆಸ್ ಪಕ್ಷದ ಚುನಾವಣಾ ಪೋಲಿಂಗ್ ಏಜೆಂಟ್ ಹಣಮಂತರೆಡ್ಡಿ ಬೆನೆಕೆಪಳ್ಳಿ ಅವರು ನಮ್ಮ ಊರಿನವರು ಅಲ್ಲ, ನಿಮ್ಮ ಮನೆಗಳಿಲ್ಲ ಪಡಿತರ ಚೀಟಿ ಇಲ್ಲ, ನೀವು ಹೇಗೆ ಮತ ಹಾಕಲು ಬಂದಿದ್ದೀರಿ ಎಂದು 3 ತಾಸು ಮತ ಚಲಾಯಿಸದಂತೆ ಅಡ್ಡಿಪಡಿಸಿದರು. ಸುದ್ದಿ ತಿಳಿದ ಚಿಂಚೋಳಿ ಡಿವೈಎಸ್ಪಿ ಪರಶುರಾಮ ಕೋರವಾರ ಗ್ರಾಮಕ್ಕೆ ತೆರಳಿ ಪರಿಶೀಲಿಸಿ ಮತ ಚಲಾಯಿಸಲು ಅವಕಾಶ ಮಾಡಿಕೊಟ್ಟರು ಎಂದು ವರದಿಯಾಗಿದೆ.
ಗಣ್ಯರ ಮತದಾನ: ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಯಾಕಾಪುರ ಮತ್ತು ಕೆಜೆಪಿ ಅಭ್ಯರ್ಥಿ ಮಾಜಿ ಸಚಿವ ಸುನೀಲ್ ವಲ್ಯಾಪುರೆ ಇಲ್ಲಿನ ಚಂದಾಪುರ ನಗರದ ಸರ್ಕಾರಿ, ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು ಮತ್ತು ಸೇಡಂ ಮತಕ್ಷೇತ್ರದ ಕೆಜೆಪಿ ಅಭ್ಯರ್ಥಿ ಮಾಜಿ ಸಚಿವ ವೈಜನಾಥ ಪಾಟೀಲ್ ತಮ್ಮ ಪತ್ನಿ ಜ್ಞಾನೇಶ್ವರಿ ಅವರೊಂದಿಗೆ ಆಗಮಿಸಿ ಪಟ್ಟಣದ ಶರಣಬಸವೇಶ್ವರ ವಿದ್ಯಾಮಂದಿರ ಶಾಲೆ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು. ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಗಾಜರೆ ಅವರು ಮುಕರಂಬಾ ಗ್ರಾಮದಲ್ಲಿ ಮತ ಚಲಾಯಿಸಿದರು.
9 ಸಾವಿರ ಮತದಾರರು ಆಗಮನ: ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್- ಬಿಜೆಪಿ- ಕೆಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಲು ಅಟೋ, ಜೀಪ್ ಮತ್ತು ದ್ವಿಚಕ್ರ ವಾಹನಗಳ ಮೇಲೆ ಮತದಾರರನ್ನು ತರುತ್ತಿದ್ದರು. ಉದ್ಯೋಗಕ್ಕಾಗಿ ಮುಂಬಯಿ, ಪುಣೆ, ಹೈದ್ರಾಬಾದ್ ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದ ಅನೇಕ ಲಂಬಾಣಿ ತಾಂಡಾಗಳಲ್ಲಿನ 9 ಸಾವಿರ ಮತದಾರರು ತಮ್ಮ ಮತ ಚಲಾಯಿಸಲು ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.
ತಾಲೂಕಿನ ಕುಸರಂಪಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 22ರಲ್ಲಿ ಮತ್ತು ಪಟ್ಟಣದ ಕೇಂದ್ರ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 122 ರಲ್ಲಿ ವಿದ್ಯುನ್ಮಾನ ಮತಯಂತ್ರ ಮತದಾನ ವೇಳೆಯಲ್ಲಿ ಬ್ಯಾಟರಿ ಇಳಿಕೆಯಿಂದಾಗಿ ತೊಂದರೆಪಡಬೇಕಾಯಿತು. ಕೂಡಲೇ ಇನ್ನೊಂದು ಯಂತ್ರ ಬಳಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು. ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರಕ್ಕೆ ಸಂಜೆ ತನಕ ಶೇ. 65.73 ಮತದಾನವಾಗಿದೆ ಚುನಾವಣಾಧಿಕಾರಿ ಡಿ. ಮಂಜುನಾಥ ತಿಳಿಸಿದ್ದಾರೆ.
ಚಿತ್ತಾಪುರದಲ್ಲಿ ಶಾಂತಿ ಮತದಾನ
ಕನ್ನಡಪ್ರಭ ವಾರ್ತೆ, ಚಿತ್ತಾಪುರ, ಮೇ 5
ಚಿತ್ತಾಪುರ ಮತಕ್ಷೇತ್ರದಲ್ಲಿ ಭಾನುವಾರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿ ಶಾಂತಿಯುತ ಮತದಾನ ಜರುಗಿತು.
ಬೆಳಗ್ಗೆ ಗುಂಡಗುರ್ತಿ, ಇವಣಿ, ಅಲ್ಲೂರ, ರಾಮತೀರ್ಥ, ನಾಲವಾರ, ವಾಡಿ ಹಾಗೂ  ಚಿತ್ತಾಪುರ ಪಟ್ಟಣದಲ್ಲಿ ಉದ್ದನೆಯ ಸಾಲಿನಲ್ಲಿ ನಿಂತು ಮತದಾರರು ಮತದಾನ ಮಾಡಿದರು.
ಸ್ಟೇಶನ್ ಚಿತ್ತಾಪುರ, ದಂಡೋತಿ, ಬೆಳಗೇರ, ಯಾಗಾಪುರ, ಮತಗಟ್ಟೆಗಳಲ್ಲಿ ಮತ ಚಲಾಯಿಸಲು ಮತದಾರರ ನೀರಸ ಪ್ರತಿಕ್ರಿಯೆ ಕಂಡುಬಂದಿತು.
ಮಧ್ಯಾಹ್ನ 3 ಗಂಟೆಯಿಂದ ಸಂಜೆ 6ರವರೆಗೆ ಮತದಾನ ಮಾಡಲು ಮತದಾರರು ಹೆಚ್ಚು ಒಲವು ತೋರಿಸಿ ಮತದಾನ ಮಾಡಿದರು.
ಮಾತಿನ ಚಕಮಕಿ: ಅಲ್ಲೂರ್ (ಬಿ) ಹಾಗೂ ಚಂದುನಾಯಕ ತಾಂಡಾದಲ್ಲಿ ಮತದಾನ ಸಮಯದಲ್ಲಿ ಕೆಲಹೊತ್ತು ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ತಾಲೂಕಿನ ಗುಂಡಗುರ್ತಿಯ ಮತಗಟ್ಟೆ ಸಂ. 24ರಲ್ಲಿ ಅವರ ಅಜ್ಜಿ ಶಿವಮ್ಮ ದೊಡ್ಮನಿ ಅವರೊಂದಿಗೆ ಬಂದು ಮತಚಲಾಯಿಸಿದರು. ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ವಾಲ್ಮೀಕಿ ನಾಯಕ ವಾಡಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಚಿತ್ತಾಪುರ ಪುರಸಭೆಯ ವಾರ್ಡ್ 23ರಲ್ಲಿ ನೀರಿನ ಸೌಲಭ್ಯ ಕಲ್ಪಿಸಿಲ್ಲ ಎಂದು ಮತದಾನ ಮಾಡಲು 37 ಮತದಾರರು ನಿರಾಕರಿಸಿದರು. 6 ತಿಂಗಳೊಳಗಾಗಿ ನೀರು ಕಲ್ಪಿಸುವ ಭರವಸೆ ಪುರಸಭೆ ಸದಸ್ಯೆ ವನಮಲ್ಲಮ್ಮ ಪಾಲಪ ನೀಡಿದ ನಂತರ 37 ಮತದಾರರು ಮತದಾನ ಮಾಡಿದರು.
ರಾವುರ ಮತಗಟ್ಟೆ ಸಂಖ್ಯೆ 91ರಲ್ಲಿ ಬೆಳಗ್ಗೆ ಮತಯಂತ್ರ ದೋಷದಿಂದ ಒಂದು ಗಂಟೆ ತಡವಾಗಿ ಮತದಾನ ಆರಂಭವಾಯಿತು. ಹೀಗಾಗಿ ಇಲ್ಲಿ ಒಂದು ಗಂಟೆ ಕಾಲ ಅವಧಿ ವಿಸ್ತರಿಸಲಾಗಿತ್ತು.
ಮತದಾನದಿಂದ ವಂಚಿತ: ಚಿತ್ತಾಪುರದ 58 ಹಾಗೂ 75 ಮತಗಟ್ಟೆ ಕೇಂದ್ರದಲ್ಲಿ ಮತದಾರರಾದ ವಿಶ್ವನಾಥ ಸೀತಾರಾಮ, ಶಾಂತಪ್ಪ ಸಿದ್ರಾಮಪ್ಪ ಅವರ ಮತವನ್ನು ಚುನಾವಣಾ ಕರ್ತವ್ಯ ಸಿಬ್ಬಂದಿ ಅಂಚೆ ಮತಪತ್ರದಲ್ಲಿ ಮತ ಚಲಾಯಿಸಿದ್ದರಿಂದ ಮತದಾನದಿಂದ ವಂಚಿತಗೊಂಡು ವಾಪಸ್ಸು ಹೋಗಬೇಕಾಯಿತು.
ಬೆಳಗೇರಾ 189 ಮತಗಟ್ಟೆಯಲ್ಲಿ ಶರಣಮ್ಮ ಎಂಬುವವಳು ಬಿಸಿಲಿನ ಝಳಕ್ಕೆ ಪ್ರಜ್ಞೆ ತಪ್ಪಿ ಬಿದ್ದ ಘಟನೆ ಜರುಗಿದೆ. ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆ ಜರುಗದೆ ಶಾಂತಿಯುತವಾಗಿ ಚುನಾವಣೆ ನಡೆದಿರುವುದರಿಂದ ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಟ್ಟರು.
ಆಳಂದ; ಮತಯಂತ್ರದಲ್ಲಿ ಭವಿಷ್ಯ
ಕನ್ನಡಪ್ರಭ ವಾರ್ತೆ, ಆಳಂದ, ಮೇ 5
ಆಳಂದ ಪಟ್ಟಣ ಸೇರಿದಂತೆ 103 ಗ್ರಾಮಗಳಲ್ಲಿ ಭಾನುವಾರ ನಡೆದ ವಿಧಾನಸಭೆ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆದಿದೆ.
ಬೆಳಗಿನ 7ಕ್ಕೆ ಆರಂಭಗೊಂಡ ಮತದಾನ ಸಂಜೆ 6 ಗಂಟೆಯವರೆಗೆ ನಡೆಯಿತ್ತಾದರೂ, ಬೆಳಗಿನ ಹೊತ್ತಿನಲ್ಲಿ ಮತದಾರರು ಹುಮ್ಮಸಿನಿಂದ ಮತದಾನ ಕೇಂದ್ರಕ್ಕೆ ಧಾವಿಸಿ ಮತಚಲಾಯಿಸಿದರೆ, ಮಧ್ಯಾಹ್ನನದ ಬಿಸಿಲು ನೆತ್ತಿಗೇರುತ್ತಿದ್ದಂತೆ ಮತದಾರರ ಸಂಖ್ಯೆ ಕಡಿಯಾಗಿ ಸಂಜೆ ಹೊತ್ತಿಗೆ ಮತದಾರರು ಆಗಮಿಸಿ ಮತಚಲಾಯಿಸಿದರು.
ಆಳಂದ, ಹೆಬಳಿ, ಮಟಕಿ, ಹಿತ್ತಲಶಿರೂರ ಮತ್ತಿತರ ಕಡೆ ರಾಜಕೀಯ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಕ್ಷುಲಕ ಜಗಳ ಹೊರತು ಪಡಿಸಿದರೆ ಇತರ ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.
ಕೈಕೊಟ್ಟ ಯಂತ್ರ: ಪಟ್ಟಣದ ಬಾಲಕಿಯರ ಕಾಲೇಜಿನ ಮತಗಟ್ಟೆ ಸಂಖ್ಯೆ 68ರಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ಅರ್ಧಗಂಟೆ ತಡವಾಗಿ ಮತದಾನ ಆರಂಭವಾಗಿದ್ದು, ಕಡಗಂಚಿ ಗ್ರಾಮದ 169ನೇ ಮತಗಟ್ಟೆ ಅಧಿಕಾರಿ ಹಾಗೂ ಬಿಎಲ್‌ಓ ನಡುವೆ ಮತದಾನ ಚೀಟಿಯ ಮೇಲೆ ಸಹಿ ಮಾಡುವ ವಿಷಯಕ್ಕೆ ಸಂಬಂಧಿಸಿ ವಾಗ್ವಾದ ನಡೆದು 10 ನಿಮಿಷಗಳ ಕಾಲ ತಡೆಯಾಗಿತ್ತು.
ಅಭ್ಯರ್ಥಿಗಳು ಮತದಾನ: ತಡಕಲ ಗ್ರಾಮದಲ್ಲಿ ಸುಭಾಷ ಗುತ್ತೇದಾರ, ಬಸವರಾಜ ಪವಾಡಶೆಟ್ಟಿ, ಸರಸಂಬಾದಲ್ಲಿ ಬಿ.ಆರ್. ಪಾಟೀಲ್, ಧಂಗಾಪುರದಲ್ಲಿ ಸಿದ್ದಣ್ಣ ಮಾಸ್ಟರ್ ಶೇಗಜಿ, ಖಾನಾಪುರದಲ್ಲಿ ಎಸ್.ಎಂ. ಹಿರೇಮಠ, ಇತರರು ಮತದಾನ ಕೈಗೊಂಡರು.
ಬಿಗಿ ಬಂದೋಬಸ್ತ್: ಮತಕ್ಷೇತ್ರಾದ್ಯಂತ ಮತಗಟ್ಟೆಗಳಲ್ಲಿ ಪೊಲೀಸ್ ಸಿಬ್ಬಂದಿ, ಅರೆಸೇನಾಪಡೆ, ಗ್ರಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಿ ಭದ್ರತೆ ಒದಗಿಸಲಾಗಿತ್ತು.
ಚುನಾವಣಾಧಿಕಾರಿ ಡಾ. ಬಿ. ರಾಜಣ್ಣ, ಸಹಾಯಕ ಅಧಿಕಾರಿ ಆರ್.ಆರ್. ಮಣ್ಣೂರ, ಡಿವೈಎಸ್‌ಪಿ ಎಸ್.ಬಿ. ಸಾಂಬಾ ಹಾಗೂ ವೀಕ್ಷಕರಾಗಿರುವ ಐಎಎಸ್ ಅಧಿಕಾರಿ ರವಿಶಂಕರ ಶರ್ಮಾ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಸುವ್ಯವಸ್ಥಿತವಾಗಿ ಚುನಾವಣೆ ಪ್ರಕ್ರಿಯೆ ನೆರವೇರಿಸಿದರು. ಮತಗಟ್ಟೆ ಕೆಂದ್ರಕ್ಕೆ ಮತದಾರರು ದ್ವಿಚಕ್ರ ಹಾಗೂ ತ್ರಿಚಕ್ರ ವಾಹನದ ಮೂಲಕ ಆಗಮಿಸಿ ಮತದಾನ ಕೈಗೊಂಡರು.
ಮತಹಾಕದೆ ತಿರುಗಿದ: ಪಟ್ಟಣದ ಮತಗಟ್ಟೆಮೊಂದರಲ್ಲಿ ಮತ ಚಲಾವಣೆಗಾಗಿ ರೈತನೊಬ್ಬನು ಭೂತ್ ಕಡೆಬರುತ್ತಿದ್ದಂತೆ ದಾರಿಯಲ್ಲಿ ಮೊದಲು ಜೆಡಿಎಸ್ ನಂತರ ಕೆಜೆಪಿ ಭೂತ್ ಹತ್ತಿರ ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತನೊಬ್ಬ ನಮ್ಮ ಪಕ್ಷಕ್ಕೆ ಮತಹಾಕುವಂತೆ ಕೋರಿದ್ದರೆನ್ನಲಾಗಿದ್ದು, ಎಲ್ಲರೂ ಮನಮೊಲಿಸಲು ಯತ್ನಿಸುತ್ತಿದ್ದಂತೆ ಕುಪಿತಗೊಂಡ ಆ ವ್ಯಕ್ತಿ ನಾನು ಯಾರಿಗೂ ಮತಹಾಕುವುದಿಲ್ಲ ಎಂದು ಮತಚಲಾಯಿಸದೆ ಮರಳಿಹೋದ ಪ್ರಸಂಗ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.