ಗುಲ್ಬರ್ಗಾ

ಏಳು- ಬೀಳಿಗೆ ಕ್ಷಣಗಣನೆ

Published On :

ಕನ್ನಡಪ್ರಭ ವಾರ್ತೆ   ,   ಗುಲ್ಬರ್ಗ   ,   ಮೇ 7
ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತಗಳ ಎಣಿಕೆ ಕಾರ್ಯಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈವರೆಗೆ ಸ್ವೀಕರಿಸಿದ 7,200 ಅಂಚೆ ಮತಪತ್ರ, 5,86,645 ಪುರುಷ ಹಾಗೂ 5,33,988 ಮಹಿಳಾ ಮತ ಸೇರಿ ಒಟ್ಟು 11,27,833 ಮತಗಳ ಎಣಿಕೆ ಕಾರ್ಯವನ್ನು ಗುಲ್ಬರ್ಗ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಕಟ್ಟಡದಲ್ಲಿ ಮೇ 8ರಂದು ಬೆ.8ರಿಂದ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಜಿ. ಜಗದೀಶ ತಿಳಿಸಿದರು.
ನಗರದಲ್ಲಿ ಮಂಗಳವಾರ ಮತ ಎಣಿಕೆ ಕಾರ್ಯದ ಸಿದ್ಧತೆಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬೆ.7 ಗಂಟೆಯವರೆಗೆ ಬರುವ ಅಂಚೆ ಮತಪತ್ರಗಳನ್ನು ಸಹ ಸ್ವೀಕರಿಸಲಾಗುವುದು ನಂತರ ಬಂದ ಮತಪತ್ರಗಳನ್ನು ಮತ ಎಣಿಕೆಯಲ್ಲಿ ಪರಿಗಣಿಸಲಾಗುವುದೆಂದು ಸ್ಪಷ್ಟಪಡಿಸಿದರು.
500 ಸಿಬ್ಬಂದಿ: ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್‌ಗಳಿದ್ದು, ಚಿತ್ತಾಪುರ ಕ್ಷೇತ್ರಕ್ಕೆ ಮಾತ್ರ 12 ಟೇಬಲ್‌ಗಳಿರುತ್ತವೆ. ಇದಲ್ಲದೆ ಪ್ರತಿ ಟೇಬಲ್ಲಿಗೆ ಒಬ್ಬ ಮತ ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕರು ಮತ್ತು ಮೈಕ್ರೋ ಅಬ್ಸರ್ವರ್ ಇರುವರು. 70 ಜನ ಕಾಯ್ದಿರಿಸಿದ ಸಿಬ್ಬಂದಿ ಸೇರಿದಂತೆ 500 ಜನ ಸಿಬ್ಬಂದಿಗಳು ಮತಗಳ ಎಣಿಕೆ ಕಾರ್ಯದಲ್ಲಿ ತೊಡಗಲಿದ್ದಾರೆ ಎಂದರು.
ಪ್ರತಿ ವಿಧಾನಸಭಾ ಕ್ಷೇತ್ರದ ಭದ್ರತಾ ಕೋಣೆ ಮತ್ತು ಮತ ಎಣಿಕೆ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, 24 ಗಂಟೆ ಕಾಲ ಕಾರ್ಯ ನಿರ್ವಹಿಸಲಿವೆ. ಇದಲ್ಲದೆ ಪ್ರತಿ ಮತ ಎಣಿಕೆ ಕೇಂದ್ರದ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಇಂಟರ್‌ನೆಟ್‌ನಲ್ಲಿ ಸ್ಟ್ರೀಮ್ ಆಗುತ್ತಿರುತ್ತದೆ ಹಾಗೂ ಪ್ರತಿ ಎಣಿಕೆ ಕೇಂದ್ರದಲ್ಲಿ ನಡೆಯುವ ಪ್ರಕ್ರಿಯೆ ಗಮನಿಸಬಹುದು ಎಂದರು.
ಡಿಸ್ ಪ್ಲೇ: ಮತ ಎಣಿಕೆಯ ಪ್ರಗತಿಯನ್ನು ಆನ್‌ಲೈನ್ ಮೂಲಕ ಡಿಸ್‌ಪ್ಲೇ ಮಾಡಲಾಗುವುದು. ಸ್ಪರ್ಧಿಸಿದ ಅಭ್ಯರ್ಥಿಗಳು ಮತ್ತು ಏಜೆಂಟರು ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ. ಏಜೆಂಟರಿಗೆ ಕುಡಿವ ನೀರಿನ ವ್ಯವಸ್ಥೆ ಮಾತ್ರ ಮಾಡಲಾಗಿದೆ ಎಂದು ಹೇಳಿದರು.
ಗುಲ್ಬರ್ಗ(ದ) ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರಗಳ ಫಲಿತಾಂಶ ಬೇಗ ಪ್ರಕಟವಾಗಬಹುದು. ಕಳೆದ ಚುನಾವಣೆಗಿಂತ ಈ ಸಲ ಮತದಾನದ ಪ್ರಮಾಣ ಶೇ.9ರಷ್ಟು ಹೆಚ್ಚಾಗಿದೆ ಎಂದ ಅವರು, ಮತದಾನದ ಪ್ರಮಾಣ ಶೇ.75ರಷ್ಟು ಹೆಚ್ಚಿಸುವ ಗುರಿ ಹೊಂದಿದ್ದು, ಶೇ.64.16ರಷ್ಟು ಮತದಾನವಾಗಿರುವುದು ಜಿಲ್ಲಾದ್ಯಂತ ಹಮ್ಮಿಕೊಂಡಿದ್ದ ಸ್ವೀಪ್ ಕಾರ್ಯಕ್ರಮದ ಸಾಧನೆಯಾಗಿದೆ. ಇದು ಸಮಾಧಾನ ತಂದಿದೆ ಎಂದು ಹೇಳಿದರು.
ಪ್ರಜಾಪ್ರತಿನಿಧಿ ಕಾಯ್ದೆಯ 49(ಒ) ಪ್ರಕಾರ ಗುಲ್ಬರ್ಗ ಜಿಲ್ಲೆಯಲ್ಲಿ 23 ಜನ ಮತ ಚಲಾಯಿಸಲು ನಿರಾಕರಿಸಿದ ಪ್ರಕರಣಗಳು ನಡೆದಿವೆ. ಅವುಗಳಲ್ಲಿ ಅಫಜಲ್ಪುರ- 4, ಜೇವರ್ಗಿ- 1, ಚಿತ್ತಾಪುರ- 1, ಸೇಡಂ- 1, ಚಿಂಚೋಳಿ- 1, ಗುಲ್ಬರ್ಗ ಗ್ರಾಮೀಣ- 2, ಗುಲ್ಬರ್ಗ ಉತ್ತರ- 6, ಗುಲ್ಬರ್ಗ ದಕ್ಷಿಣ- 7 ಮತದಾರರು ಯಾವುದೇ ಅಭ್ಯರ್ಥಿಗೆ ಮತ ಚಲಾಯಿಸಲು ನಿರಾಕರಿಸಿದ್ದಾರೆ ಎಂದರು.
ಮತ ಎಣಿಕೆ ಕೇಂದ್ರಗಳ ವಿವರ: ಗುಲ್ಬರ್ಗ ಗ್ರಾಮೀಣ(ಎಸ್ಸಿ), ಆಳಂದ, ಜೇವರ್ಗಿ- ಗುವಿವಿ ಪರೀಕ್ಷಾ ಕಟ್ಟಡ, ಗುಲ್ಬರ್ಗ ದಕ್ಷಿಣ ಮತ್ತು ಸೇಡಂ- ಗುವಿವಿ ಒಳ ಕ್ರೀಡಾಂಗಣ ಕಟ್ಟಡ, ಅಫಜಲ್ಪುರ- ಗುವಿವಿ ಗಣಿತ ವಿಭಾಗ ಕಟ್ಟಡ, ಚಿತ್ತಾಪುರ- ಗುವಿವಿ ಕನ್ನಡ ವಿಭಾಗ ಕಟ್ಟಡ, ಚಿಂಚೋಳಿ- ಗುವಿವಿ ಸಸ್ಯಶಾಸ್ತ್ರ ವಿಭಾಗ ಕಟ್ಟಡ, ಗುಲ್ಬರ್ಗ ಉತ್ತರ- ಗುವಿವಿ ಕನ್ನಡ ವಿಭಾಗ ಕಟ್ಟಡಗಳಲ್ಲಿ ಮತ ಎಣಿಕೆ ನಡೆಯಲಿದೆ.
ಸಾರಿಗೆ ವ್ಯವಸ್ಥೆ: ಮತ ಎಣಿಕೆಗೆ ಅಭ್ಯರ್ಥಿಗಳನ್ನು, ಆಯಾ ಪಕ್ಷಗಳ ಏಜೆಂಟರನ್ನು ಹಾಗೂ ಎಣಿಕಾ ಪ್ರಕ್ರಿಯೆಯಲ್ಲಿ ಕಾರ್ಯನಿರತ ಸಿಬ್ಬಂದಿಯನ್ನು ಕರೆದೊಯ್ಯಲು ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಗುವಿವಿ ಮುಖ್ಯ ದ್ವಾರದಿಂದ ಮತ ಎಣಿಕೆ ಕೇಂದ್ರಗಳಿಗೆ ಯಾವುದೇ ತರಹದ ವಾಹನ ಪ್ರವೇಶ ನಿಷೇಧಿಸಲಾಗಿದ್ದು, ಅಭ್ಯರ್ಥಿಗಳು ತಮ್ಮ ವಾಹನಗಳನ್ನು ಬುದ್ಧವಿಹಾರದ ಪ್ರವೇಶ ದ್ವಾರದ ಹತ್ತಿರ ನಿಲುಗಡೆ ಮಾಡಬಹುದಾಗಿದೆ ಎಂದರು.
ಈಗಾಗಲೇ ಎಲ್ಲ ಸಿಬ್ಬಂದಿ, ಅಭ್ಯರ್ಥಿಗಳಿಗೆ, ಏಜೆಂಟರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ. ಅಭ್ಯರ್ಥಿಗಳು ಮತ್ತು ಏಜೆಂಟರನ್ನು ವಿವಿಯ ಮುಖ್ಯ ದ್ವಾರದಿಂದ ಮತ ಏಣಿಕೆ ಕೇಂದ್ರದವರೆಗೆ ಕರೆದೊಯ್ಯಲು ಗುಲಾಬಿ(ಪಿಂಕ್) ಬಣ  ,  ದ ಲೇಬಲ್‌ಗಳುಳ್ಳ ಅದೇ ರೀತಿ ಗುರುತಿನ ಚೀಟಿಯುಳ್ಳ ಅಧಿಕಾರಿ ಹಾಗೂ ಸಿಬ್ಬಂದಿಗೆ ಮತ ಎಣಿಕಾ ಕೇಂದ್ರಗಳಿಗೆ ಕರೆದೊಯ್ಯಲು ಬಿಳಿ ಬಣ  ,  ದ ಲೇಬಲ್‌ಗಳುಳ್ಳ ಬಸ್ಸುಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಸಾರ್ವಜನಿಕರು ವಿವಿಯನ್ನು ಪ್ರವೇಶಿಸುವಂತಿಲ್ಲ. ಮತ ಎಣಿಕೆಯ ಸುತ್ತುವಾರು ಫಲಿತಾಂಶವನ್ನು ಧ್ವನಿವರ್ಧಕದ ಮೂಲಕ ಘೋಷಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಪೊಲೀಸ್ ಬಂದೋಬಸ್ತ್: ಜಿಲ್ಲಾ ಪೊಲೀಸ್ ಅಧೀಕ್ಷಕ ಸತೀಶಕುಮಾರ್ ಮಾತನಾಡಿ, ಮತ ಎಣಿಕೆ ಕಾರ್ಯಕ್ಕಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಿದ್ದು, 600 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಶಾಂತಿ ಉದ್ದೇಶದಿಂದ ಜಿಲ್ಲಾದ್ಯಂತ ಎಲ್ಲ ತರಹದ ಮದ್ಯ ಮಾರಾಟದ ಹಾಗೂ ಮೆರವಣಿಗೆ, ಪಟಾಕಿ ಸಿಡಿಸುವುದನ್ನು ನಿಷೇಧಿಸುವ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ, ಐಎಎಸ್ ಪ್ರಶಿಕ್ಷಣಾರ್ಥಿ ಅಭಿರಾಮ ಶಂಕರ್, ಗುವಿವಿ ಕುಲಸಚಿವ ಡಾ. ದಯಾನಂದ, ಕೆಎಎಸ್ ಪ್ರಶಿಕ್ಷಣಾರ್ಥಿ ಚಿದಾನಂದ ವಠಾರೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.