ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ
ಯಾದಗಿರಿ: ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡವಾಣ ಹಾಕಿದಂತಾಗುತ್ತದೆ. ಅಲ್ಲದೆ ಸಮಾಜದಲ್ಲಿ ಸಾಮರಸ್ಯ ಮೂಡಲು ಇದು ನೆರವಾಗುತ್ತದೆ ಎಂದು ಬೆಳಗಾವಿ ಜಿಲ್ಲೆಯ ಇಚಲಕರಂಜಿಯ ಶಿವಾನಂದ ಭಾರತೀ ಸ್ವಾಮೀಜಿ ನುಡಿದರು.
ಶಹಾಪುರ ತಾಲೂಕಿನ ಗೊಂದೆನೂರ ಗ್ರಾಮದಲ್ಲಿ ಸಿದ್ಧಪುರುಷ ಬಸ್ಸಯ್ಯತಾತನವರ ಪುಣ್ಯಶ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 51 ನವ ದಂಪತಿಗೆ ಆಶೀರ್ವದಿಸಿ ಅವರು ಮಾತನಾಡಿದರು. ಸಾಮೂಹಿಕ ವಿವಾಹದಿಂದ ಕುಟುಂಬ ವರ್ಗಕ್ಕೆ ಹೆಚ್ಚಿನ ಹೊರೆ ಬೀಳುವುದಿಲ್ಲ. ಅಲ್ಲದೇ ಮುಂದಿನ ಜನಾಂಗಕ್ಕೆ ಇದು ಉತ್ತಮ ದಾರಿದೀಪ. ಪುಣ್ಯಾಶ್ರಮದ ಪೀಠಾಧಿಪತಿ ಲಿಂಗಣ್ಣ ತಾತನವರ ಕೈಂಕರ್ಯ ಶ್ಲಾಘನೀಯವಾದದ್ದು. ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ನವದಂಪತಿ ಸಾಮರಸ್ಯ ಜೀವನ ನಡೆಸುವಂತೆ ಶ್ರೀಗಳು ಹಾರೈಸಿದರು.
ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಲ್ಲಣ್ಣಗೌಡ ಕೌಳೂರ, ಕೆಎಂಎಫ್ ಮಾಜಿ ಅಧ್ಯಕ್ಷ ಸಿದ್ದಣ್ಣಗೌಡ ಕಾಡಂನೋರ್, ಮಲ್ಲರೆಡ್ಡೆಪ್ಪಗೌಡ ಅರಕೇರಾ, ವೆಂಕಣ್ಣಗೌಡ ಗೋರೆಬಾಳ ಹುಬ್ಬಳ್ಳಿ, ಅಮರೇಗೌಡ ಯಾಟಗಲ್, ಸಿದ್ರಾಮರೆಡ್ಡಿ ಚೆನ್ನೂರ, ಸಿದ್ದಲಿಂಗಪ್ಪಗೌಡ ಕರಕಳ್ಳಿ, ಬಸವರಾಜಪ್ಪಗೌಡ ದಳಪತಿ ಮುಷ್ಟೂರ, ಸಾಯಬಣ್ಣಾ ವರಕೇರಿ, ಚಂದ್ರಾಯ ಕೊಂಕಲ್, ಲಿಂಗಣ್ಣಗೌಡ ಕೊಪ್ಪೂರ, ಬಸವರಾಜ ಕೊದಂಡ, ಗೋಪಾಲ ನಾಯಕ್, ನಿಂಗಣ್ಣ ಜಡಿ ಇತರರು ಇದ್ದರು. ಬಸವರಾಜ ಯಾಟಗಲ್ ನಿರೂಪಿಸಿದರು. ಅಂಬಣ್ಣ ಸ್ವಾಗತಿಸಿದರು. ಶಂಭುಲಿಂಗ ವಂದಿಸಿದರು.
ಬಂಡೆಗಲ್ಲು ಶಾಸನ ಪತ್ತೆ
ಯಾದಗಿರಿ: ತಾಲೂಕಿನ ಯರಗೋಳದಲ್ಲಿ ಬೆಟ್ಟದಲ್ಲಿರುವ ಹಳೆ ಯರಗೋಳ ಅಗಸಿಯ ಮುಂಭಾಗದ ಹನುಮಾನ್ ದೇವಾಲಯದ ಗೋಡೆಯ ಹಿಂದೆ ಬೃಹತ್ ಬಂಡೆಗಲ್ಲು ಶಾಸನವನ್ನು ಸುರಪುರದ ರಂಗಂಪೇಟೆ ಬಿಇಡಿ ಕಾಲೇಜಿನ ಉಪನ್ಯಾಸಕ ಧರ್ಮಣ್ಣ ಬಡಿಗೇರ ಕ್ಷೇತ್ರಕಾರ್ಯ ಕೈಗೊಂಡ ವೇಳೆ ಪತ್ತೆಹಚ್ಚಿದ್ದಾರೆ. ಈ ಶಾಸನವು 16ನೇ ಶತಮಾನಕ್ಕೆ ಸೇರಿದ್ದಾಗಿದೆ ಎಂದು ಅವರು ತಿಳಿಸಿದ್ದಾರೆ. ಯರಗೋಳ ಗ್ರಾಮದ ಪಕ್ಕದ ಕೆರೆಗೆ ಸಂಬಂಧಿಸಿದ್ದಾಗಿದ್ದು, ಖ್ಯಾತ ಇತಿಹಾಸ ಸಂಶೋಧಕ ಡಿ.ಎನ್. ಅಕ್ಕಿಯವರ ಮಾರ್ಗದರ್ಶನದಲ್ಲಿ ಕ್ಷೇತ್ರಕಾರ್ಯ ಕೈಗೊಂಡು ಈ ಶಾಸನ ಪತ್ತೆಹಚ್ಚಿದ್ದಾರೆ. ಯರಗೋಳ ಗ್ರಾಮದಲ್ಲಿ ದೊರಕಿರುವ 3ನೇ ಶಾಸನ ಇದಾಗಿದ್ದು, ಸಂಶೋಧಕರಿಂದ ಸಮಗ್ರ ಮಾಹಿತಿಯನ್ನು ಪಡೆಯಲಾಗುವುದು ಎಂದು ತಿಳಿಸಿದ್ದಾರೆ. ಸಂಶೋಧನಾ ಕಾರ್ಯದಲ್ಲಿ ಗ್ರಾಮದ ಶಿಕ್ಷಕರಾದ ದೇವಿಂದ್ರಪ್ಪ ಹತ್ತಿಕುಣಿ, ವಿದ್ಯಾರ್ಥಿ ಮಲ್ಲಪ್ಪ ಅವರು ಸಹಕರಿಸಿದ್ದಾರೆ. ಯರಗೋಳ ಬೆಟ್ಟದಲ್ಲಿ ಅನೇಕ ಐತಿಹಾಸಿಕ ಕುರುಹುಗಳಿವೆ. ಅವುಗಳ ಕುರಿತು ಸಂಶೋಧನೆ ಮತ್ತು ಉತ್ಖನನ ಕಾರ್ಯಗಳು ಪರಿಣಾಮಕಾರಿಯಾಗಿ ನಡೆಯಬೇಕೆಂದು ಧರ್ಮಣ್ಣ ಬಡಿಗೇರ ಕಳಕಳಿ ವ್ಯಕ್ತಪಡಿಸಿದ್ದಾರೆ.
ಹೃದಯಾಘಾತದಿಂದ ಯೋಧ ಸಾವು
ಕನ್ನಡಪ್ರಭ ವಾರ್ತೆ, ಶಹಾಪುರ, ಮೇ 13
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ(ಸಿಐಎಸ್ಎಫ್) ಸೇವೆಯಲ್ಲಿದ್ದ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಸಗರ ಗ್ರಾಮದ ವೀರಯೋಧ ಹೃದಯಾಘಾತದಿಂದ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಮಲ್ಲಪ್ಪ ಭಾಗಪ್ಪ ಅಂದ್ಯಾಳ(42) ಮೃತ ಯೋಧ. ದೊಡ್ಡ ಬಳ್ಳಾಪುರದಿಂದ ಚುನಾವಣಾ ಕರ್ತವ್ಯ ಮುಗಿಸಿ ಸೇವೆ ಸಲ್ಲಿಸುತ್ತಿದ್ದ ಮಧ್ಯಪ್ರದೇಶದ ಝಾನ್ಸಿಗೆ ತೆರಳಿದಾಗ ಅಲ್ಲಿ ಹೃದಯಾಘಾತದಿಂದ ಭಾನುವಾರ ಮೃತಪಟ್ಟಿದ್ದಾರೆ. ಪತ್ನಿ, ಮೂವರು ಮಕ್ಕಳು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರ ಹೈದ್ರಾಬಾದ್ ಮೂಲಕ ಶಹಾಪುರ ತಾಲೂಕಿನ ಸಗರ ಗ್ರಾಮಕ್ಕೆ ತರಲಾಗುತ್ತಿದೆ. ಮೃತ ಯೋಧನ ಸ್ವಗ್ರಾಮ ಸಗರದಲ್ಲಿ ಈ ಸುದ್ದಿ ಕೇಳಿ ಮೌನ ಮಡುಗಟ್ಟಿದೆ. ಕುಟುಂಬ ಸದಸ್ಯರು ಸೇರಿದಂತೆ ಇಡೀ ಗ್ರಾಮವೇ ಕಂಬನಿ ಮಿಡಿದಿದೆ.
ಕಾಕತಾಳೀಯವಿದು..: ಕಾಕತಾಳೀಯ ಎಂಬಂತೆ ಕಳೆದ ವರ್ಷ ನಕ್ಸಲೈಟ್ರೊಂದಿಗೆ ಹೋರಾಡಿ ಜೀವ ತೆತ್ತ ಸುಭಾಶ್ಚಂದ್ರ ಮಡಿವಾಳ ಎಂಬುವವರ ಪ್ರಥಮ ವರ್ಷದ ಪುಣ್ಯಸ್ಮರಣೆಯನ್ನು ಸಗರ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿತ್ತು. ಅದೇ ದಿನ ಸಗರದ ಮತ್ತೊಬ್ಬ ವೀರ ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಬರುತ್ತಿರುವುದು ಸಾವಿನಲ್ಲೂ ಇಬ್ಬರು ವೀರಯೋಧರು ಒಂದಾಗಿರುವುದು ವೀರಯೋಧರ ವಿಶ್ವಾಸಕ್ಕೆ ಸಾಕ್ಷಿಯಾಗಿತ್ತು. ಹಿಂದೆ ಸುಭಾಶ್ಚಂದ್ರ ಮಡಿವಾಳ ಸಾವನ್ನಪ್ಪಿದಾಗ ಅವರ ಪಾರ್ಥಿವ ಶರೀರ ಜೊತೆ ಇದೇ ಮಲ್ಲಪ್ಪ ಭಾಗಪ್ಪ ಅವರು ಬಂದಿದ್ದರು. ಅವರ ಗೆಳೆತನ ಮರೆಯುವಂತಿಲ್ಲವೆಂದು ಗ್ರಾಮಸ್ಥರು ಸ್ಮರಿಸಿಕೊಳ್ಳುತ್ತಿದ್ದಾರೆ.
ಅಂತ್ಯಕ್ರಿಯೆ: ವೀರ ಯೋಧ ಮಲ್ಲಪ್ಪ ಅವರ ಪಾರ್ಥಿವ ಶರೀರ ಗ್ರಾಮಕ್ಕೆ ಸೋಮವಾರ ರಾತ್ರಿ ಆಗಮಿಸಿತು. ಸರ್ಕಾರದ ಸಕಲ ಗೌರವದೊಂದಿಗೆ ತಡರಾತ್ರಿ ಅಂತ್ಯಕ್ರಿಯೆ ನೆರವೇರಿತು.
ಜಿಲ್ಲಾ ಅಭಿವೃದ್ಧಿಗಾಗಿ
ಮಾಲಕರೆಡ್ಡಿಗೆ ಸಚಿವ ಸ್ಥಾನ ನೀಡಿ: ಕಂದಕೂರ
ಯಾದಗಿರಿ: ನೂತನ ಯಾದಗಿರಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಹೈಕ ಭಾಗದ ಹಿರಿಯ ಹಾಗೂ ಮುತ್ಸದ್ದಿ ರಾಜಕಾರಿಣಿಯಾಗಿರುವ ಡಾ.ಎ.ಬಿ.ಮಾಲಕರೆಡ್ಡಿಗೆ ಸಚಿವ ಸ್ಥಾನ ನೀಡುವುದು ಅವಶ್ಯ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಶ್ರೀನಿವಾಸರೆಡ್ಡಿ ಕಂದಕೂರ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಡಾ.ಮಾಲಕರೆಡ್ಡಿಯವರು ಇಡೀ ಹೈಕ ಭಾಗದ ಒಬ್ಬ ಹಿರಿಯ ಹಾಗೂ ಅಭಿವೃದ್ಧಿ ಚಿಂತಕರಾಗಿದ್ದಾರೆ. ಇಲ್ಲಿನ ಜನತೆಯ ಯಾವುದೇ ಸಮಸ್ಯೆಗಳನ್ನು ಬಹಳ ಹತ್ತಿರದಿಂದ ಬಲ್ಲವರಾಗಿದ್ದಾರೆ. ಯಾದಗಿರಿ ಮತಕ್ಷೇತ್ರದಿಂದ 5 ಬಾರಿ ಗೆಲವು ಸಾಧಿಸಿ, ಸಚಿವರಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬ್ರಿಜ್ ಕಮ್ ಬ್ಯಾರೆಜ್ಗಳನ್ನು ನಿರ್ಮಿಸಿ ನೀರಾವರಿ ಸೌಲಭ್ಯ, ರಾಯಚೂರಿನಲ್ಲಿ ಒಪೆಕ್ ಆಸ್ಪತ್ರೆ ನಿರ್ಮಿಸಿ ಶಾಶ್ವತ ಕಾರ್ಯ ಮಾಡಿದ್ದಾರೆ. ಜಿಲ್ಲೆಯ ಎಲ್ಲ ಕ್ಷೇತ್ರ, ಪ್ರತಿ ಹಳ್ಳಿಗೂ ನೀರಾವರಿ ಸೌಲಭ್ಯ, ಶಾಶ್ವತ ರಸ್ತೆಗಳ ನಿರ್ಮಾಣ ಕಾಮಗಾರಿ ಆಗಬೇಕಿದೆ. ಉನ್ನತ ಶಿಕ್ಷಣಕ್ಕಾಗಿ ಮೆಡಿಕಲ್ ಕಾಲೇಜು, ಎಂಜನಿಯರಿಂಗ್ ಕಾಲೇಜು ಪ್ರಾರಂಭಿಸಿ ಜಿಲ್ಲೆಯ ಶೈಕ್ಷಣಿಕ ಪ್ರಗತಿ ಆಗಬೇಕಿದೆ. ಆದ್ದರಿಂದ ಇಲ್ಲಿನ ಜನತೆಯ ನಿರೀಕ್ಷೆಯಂತೆ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕಾಗಿ ಮಾಲಕರೆಡ್ಡಿ ಯೋಗ್ಯ ವ್ಯಕ್ತಿಯಾಗಿದ್ದಾರೆ. ಈ ದೃಷ್ಟಿಯಿಂದ ಪಕ್ಷದ ಹೈಕಮಾಂಡ್ ಮತ್ತು ನೂತನ ಸಿಎಂ ಸಿದ್ದರಾಮಯ್ಯ ಡಾ.ಮಾಲಕರೆಡ್ಡಿಗೆ ಪ್ರಮುಖ ಖಾತೆ ನೀಡಬೇಕೆಂದು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

