ಸೊಗಸಾಗುವುದೇ ಬಿಸಿಲೂರು...
ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಮೇ 18
ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು...
- ಕನ್ನಡದ ಈ ಕವಿವಾಣಿಯಂತೆಯೇ ಸಿಎಂ ಸಿದ್ದರಾಮಯ್ಯ ತಮ್ಮ ಸಚಿವ ಸಂಪುಟದಲ್ಲಿ ಗುಲ್ಬರ್ಗದ ಹಿರಿಯ ಶಾಸಕ, ಮಾಜಿ ಮಂತ್ರಿ ಖಮರುಲ್ ಇಸ್ಲಾಂ ಹಾಗೂ ಮಂತ್ರಿಗಿರಿ ಚೊಚ್ಚಲ ಅನುಭವದ ಡಾ. ಶರಣಪ್ರಕಾಶರಿಗೆ ಸ್ಥಾನ ನೀಡಿದ್ದಾರೆ.
ಕೃಷ್ಣ ಸಂಪುಟದಲ್ಲಿ ವಸತಿ, ಕಾರ್ಮಿಕ ಸಚಿವರಾಗಿದ್ದ ಖಮರುಲ್ ಇಸ್ಲಾಂ ಅವರಿಗೆ ಇದು 2ನೇ ಅವಕಾಶ. ಸೇಡಂ ಶಾಸಕ, ಯುವ ವೈದ್ಯ ಡಾ. ಶರಣಪ್ರಕಾಶ ಅವರಿಗೆ ಇದು ಮೊದಲ ಅನುಭವ. ಹೀಗಾಗಿ ಜಿಲ್ಲೆಯ ಜನತೆ ತಮ್ಮ ಸಂಪುಟದಲ್ಲಿ ಗುಲ್ಬರ್ಗ ಪ್ರತಿನಿಧಿಸಲು ಸಿದ್ದು ಮಾಡಿಕೊಂಡಿರುವ ಈ ಎರಡೂ ಆಯ್ಕೆಗಳನ್ನು ಮುಕ್ತವಾಗಿ ಸ್ವಾಗತಿಸಿದ್ದಾರೆ.
ಗೆದ್ದ ಏಳು ಜನ ಕಾಂಗ್ರೆಸ್ಸಿಗರಲ್ಲಿ ಘಟಾನುಘಟಿ ನಾಯಕರಾದ ಖರ್ಗೆ, ಧರಂ ಪುತ್ರರಾದ ಪ್ರಿಯಾಂಕ್, ಡಾ. ಅಜಯ್, ಮಾಜಿ ಮಂತ್ರಿಗಳಾದ ರಾಮಕೃಷ್ಣ, ಮಾಲೀಕಯ್ಯರಂತಹ ಅನುಭವಿಗಳೇ ಇದ್ದರೂ ಸಿದ್ದರಾಮಯ್ಯ ಇವರನ್ನೆಲ್ಲ ಬದಿಗೆ ಸರಿಸಿ ಹಳೆ ಬೇರು, ಹೊಸ ಚಿಗುರು ಎಂಬಂತೆ ಅಲ್ಪಸಂಖ್ಯಾತರ ಪ್ರಾತಿನಿಧ್ಯದಡಿಯಲ್ಲಿ ಇವರಿಬ್ಬರನ್ನು ಮಂತ್ರಿಗಳಾಗಿಸಿದ್ದು ಜಿಲ್ಲೆಯ ಜನತೆ ಯಾವುದೇ ಅಸಮಾಧಾನಗಳಿಲ್ಲದಂತೆ ಸ್ವಾಗತಿಸುವಂತಾಗಿದೆ.
ಖಮರುಲ್- ಡಾ. ಶರಣ ಜಿದ್ದಿನ ರಾಜಕಾರಣಿಗಳು: ಸಚಿವರಾದ ಖಮರುಲ್ ಇಸ್ಲಾಂ ಹಾಗೂ ಡಾ. ಶರಣಪ್ರಕಾಶ ಜಿಲ್ಲೆಯ ರಾಜಕಾರಣದಲ್ಲಿ ತುಂಬ ಹಠವಾದಿಗಳೆಂದೇ ಹೆಸರುವಾಸಿ. ಅದರಲ್ಲೂ ಪ್ರಗತಿಪರ ವಿಚಾರಗಳಲ್ಲಿ ಇವರಿಬ್ಬರೂ ತಾವು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಯಾವುದೇ ಕೊಂಕಾಗದಂತೆ, ಅಲ್ಲಿನ ಜನರನ್ನು ನೇರವಾಗಿ ಸಂಪರ್ಕಿಸಿ ಸಮಸ್ಯೆಯ ಆಳ- ವಿಸ್ತಾರ ಅರಿತು ಸಭೆಗಳಲ್ಲಿ, ಪರಿಶೀಲನೆ ಸಂದರ್ಭಗಳಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಳ್ಳುವ ಪರಿ ಎಲ್ಲರಿಗೂ ಗೊತ್ತಿರುವ ಸಂಗತಿ.
ಈಗ ಇವರಿಬ್ಬರೂ ಮಂತ್ರಿಗಳಾಗಿದ್ದರಿಂದ ಜಿಲ್ಲೆಯ ಪ್ರಗತಿಯೋಗ ಕೂಡಿ ಬರುವ ಲಕ್ಷಣಗಳಿವೆ. ಡಾ. ಶರಣ ಸಹ ಜಿಪಂ ಉಪಾಧ್ಯಕ್ಷರಾಗಿ ಜಿಲ್ಲೆಯ ಭೌಗೋಳಿಕ ಸಂಗತಿಗಳನ್ನು ಅರಿತವರು. ಯಾರಿಂದಲೂ ಬೆರಳು ಮಾಡಿಸಿಕೊಂಡವರಲ್ಲ. ಅದರಲ್ಲೂ ಪರಿಶೀಲನಾ ಸಭೆಗಳಲ್ಲಿ ಜನಪರ ವಿಷಯಗಳನ್ನು ಮುಂದಿಟ್ಟುಕೊಂಡು ಜಿಲ್ಲಾಡಳಿತವನ್ನು, ಸರ್ಕಾರವನ್ನು(ಬಿಜೆಪಿ ಆಡಳಿತವಿದ್ದಾಗ) ತರಾಗೆಟೆಗೆ ತೆಗೆದುಕೊಳ್ಳುತ್ತ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿ ಯಶಸ್ವಿಯಾಗಿದ್ದನ್ನು ಜನ ಮರೆತಿಲ್ಲ.
ಜಿಲ್ಲೆಯ ಸಮಗ್ರ ಚಿಂತಕರಾಗಲಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆ ಎದುರಿಸಿದ್ದ ದೊಡ್ಡ ಕೊರತೆ ಎಂದರೆ ಅಧಿಕಾರದಲ್ಲಿದ್ದ ಸಚಿವರಲ್ಲಿ ಯಾರೂ ಪ್ರಗತಿಯ ವಿಚಾರಗಳಲ್ಲಿ ಸಮಗ್ರವಾಗಿ ಇಡೀ ಜಿಲ್ಲೆಯನ್ನು ಎಂದಿಗೂ, ಯಾವ ಸಭೆಗಳಲ್ಲಿಯೂ ಪ್ರತಿನಿಧಿಸಲಿಲ್ಲ. ಉಸ್ತುವಾರಿಗಳೂ ಸಹ ತಾವು ಆಯ್ಕೆಯಾಗಿ ಬಂದಂತಹ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗುವ ಮೂಲಕ ಸಂಕುಚಿತ ಮನೋಧೋರಣೆಗೆ ಸಾಕ್ಷಿಯಾದದ್ದು ಜನತೆಗೆ ತುಂಬ ಬೇಸರ ತರಿಸಿದ ಸಂಗತಿ.
ಆದರೆ ಈ ಬಾರಿಯಾದರೂ ಸಚಿವರಾಗಿರುವ ಡಾ. ಶರಣ, ಖಮರುಲ್ ಕಳೆದ ಅವಧಿಯ ಜನರ ಬೇಸರಕ್ಕೆ ಕಾರಣವಾದಂತಹ ಸಂಕುಚಿತ ದೃಷ್ಟಿಕೋನದ ಚಿಂತನೆ ಬದಿಗೊತ್ತಿ ವಿಶಾಲಾರ್ಥದಲ್ಲಿ, ದೂರದೃಷ್ಟಿಯ, ಸಮಗ್ರ ಜಿಲ್ಲೆಯ ಚಿಂತನೆಗೆ ಒಲವು ತೋರಬೇಕಾಗಿದೆ. ಅಂದಾಗ ಮಾತ್ರ ಜಿಲ್ಲೆಯ ಸರ್ವತೋಮುಖ ಪ್ರಗತಿ ಸಾಧ್ಯ. ಇಲ್ಲದೆ ಹೋದಲ್ಲಿ ಜಿಲ್ಲೆಯೊಳಗೆ ಪ್ರಗತಿ ಅಸಮತೋಲನಗೊಂಡು ಜನತೆ ತೊಂದರೆ ಎದುರಿಸಬೇಕಾಗುತ್ತದೆ.
ಸಹಜ, ಸಾಮಾಜಿಕ ನ್ಯಾಯದಡಿಯಲ್ಲಿ, ಪ್ರಾದೇಶಿಕ ಪ್ರಗತಿ- ವಿಗತಿಗಳ ನಿಷ್ಪಕ್ಷಪಾತ ಚಿಂತನ- ಮಂಥನಕ್ಕೆ ಮಂತ್ರಿಗಳು ಹೆಚ್ಚು ಆದ್ಯತೆ ನೀಡಲಿ ಎಂಬುದೇ ಜಿಲ್ಲೆಯ ಜನಸಾಮಾನ್ಯರ ಸದಾಶಯ.
ಪ್ರಗತಿಪರ ಖಾತೆ ದೊರಕಲಿ...: ಗುಲ್ಬರ್ಗದ ಇಬ್ಬರೂ ಸಚಿವರಿಗೆ ಪ್ರಗತಿಗೆ ಸಾಕಷ್ಟು ಅವಕಾಶಗಳಿರುವಂತಹ ಖಾತೆಗಳು ದೊರಕಬೇಕು ಎಂಬುದು ಜನತೆ ಆಗ್ರಹ. ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಗುಲ್ಬರ್ಗ ಜಿಲ್ಲೆಯಲ್ಲಿ ಕೊರತೆ ತುಂಬಬೇಕಾದಲ್ಲಿ ಬಲಿಷ್ಠ ಖಾತೆಗಳು ಇಲ್ಲಿನವರಿಗೆ ದೊರಕಬೇಕು. ಸಹಜವಾಗಿಯೇ ಕೆಲಸಗಳು ವೇಗಗೊಳ್ಳುತ್ತವೆ. ಸಿದ್ದರಾಮಯ್ಯ ಬಿಸಿಲೂರಿನ ಈ ಮಂತ್ರಿಗಳಿಗೆ ಅದ್ಯಾವ ಜವಾಬ್ದಾರಿ ವಹಿಸಿಕೊಡುವರೋ ಕಾದುನೋಡಬೇಕಷ್ಟೆ.
-ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

