ವೈದ್ಯರ ಕಾಳಜಿ ಅಂದ್ರೆ ಇದೇನಾ?
ಕನ್ನಡಪ್ರಭ ವಾರ್ತೆ ಯಾದಗಿರಿ ಮೇ 19
ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೂ ವೈದ್ಯರಿಗಾಗಿ ಬಾಣಂತಿಯರು ಕಾದು ಸುಸ್ತಾದ ಘಟನೆ ನಡೆದಿದೆ.
ನವಜಾತ ಶಿಶುಗಳೊಂದಿಗೆ ಆರು ಗಂಟೆಗೂ ಅಧಿಕ ಕಾಲ ಉಪವಾಸ ಇದ್ದ ಘಟನೆ ಶಹಾಪುರ ತಾಲೂಕಿನ ವಡಗೇರಾ ಪ್ರಾಥಮಿಕ ಆಸ್ಪತ್ರೆಯಲ್ಲಿ ಜರುಗಿದೆ.
ಹಸಿದು ಕುಳಿತರು: ಶಹಾಪುರ ತಾಲೂಕಿನ ವಡಗೇರಾ ಆಸ್ಪತ್ರೆಯಲ್ಲಿ ಶನಿವಾರ ಸಂತಾನಹರಣ ಶಸ್ತ್ರಚಿಕಿತ್ಸೆ ಏರ್ಪಡಿಸಲಾಗಿತ್ತು. ಕಾದು ಸುಸ್ತಾದ ಬಾಣಂತಿಯರು ನಂತರ ಮಧ್ಯಾಹ್ನ 3.30ರ ಸುಮಾರಿಗೆ ವೈದ್ಯರು ಆಗಮಿಸಿ ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಹಿಡಿಶಾಪ ಹಾಕುತ್ತಾ ಮನೆಗೆ ಮರಳಿದ ಘಟನೆ ನಡೆಯಿತು.
ಕಳೆದ ಎರಡು ಮೂರು ದಿನಗಳ ಹಿಂದೆ ಆಶಾ ಕಾರ್ಯಕರ್ತೆಯರು ಹೋಬಳಿಯ ಅನೇಕ ಗ್ರಾಮಗಳಲ್ಲಿರುವ ಬಾಣಂತಿಯರಿಗೆ ಶನಿವಾರ ಬೆಳಗ್ಗೆ 10 ಗಂಟೆಗೆ ವಡಗೆರಾದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಾರೆ. ಅಂದು ಬೆಳಗ್ಗೆ 8 ಗಂಟೆಗೆ ಆಸ್ಪತ್ರೆಯ ಆವರಣದಲ್ಲಿರಬೇಕು, ಕೆಲವೊಂದು ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಏನು ತಿನ್ನದೇ ಖಾಲಿ ಹೊಟ್ಟೆಯಲ್ಲಿ ಬರಬೇಕು ಎಂದು ಆಶಾ ಕಾರ್ಯಕರ್ತೆಯರು ಸೂಚಿಸಿದ್ದರು.
ವೈದ್ಯರು ಬರಲಿಲ್ಲ: ಅದರಂತೆ ಹೋಬಳಿ ವ್ಯಾಪ್ತಿಯ ಸುತ್ತಲಿನ ಸುಮಾರು 20ಕ್ಕೂ ಹೆಚ್ಚು ಜನ ಬಾಣಂತಿಯರು ಬೆಳಗ್ಗೆ 8 ಗಂಟೆಗೆ ಬಂದು ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ್ದರು. ವೈದ್ಯರು ಈಗ ಬರುತ್ತಾರೆ ಆಗ ಬರುತ್ತಾರೆ ಎಂದು ಕುಳಿತೇ ಹಸಿ ಬಾಣಂತಿಯರು ಕಾದು ಕುಳಿತಿದ್ದರು.
ಆದರೆ ಆಸ್ಪತ್ರೆಗೆ ವೈದ್ಯರು ಬರಲಿಲ್ಲ. ಅಲ್ಲಿದ್ದ ಸಿಬ್ಬಂದಿಯನ್ನು ಕೇಳಿದರೆ ಈಗ ಬರುತ್ತಾರೆ ಎಂಬ ಉತ್ತರ ಬರುತ್ತಿತ್ತು. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೂ ಬಾಣಂತಿಯರು ತಮ್ಮ ನವಜಾತ ಶಿಶುಗಳೊಂದಿಗೆ ಉಪವಾಸ ಕಳೆಯುವಂತಾಯಿತು.
ಅಸಹನೆ: ಉಪವಾಸದಿಂದ ಇದ್ದ ಬಾಣಂತಿಯರು ಮಧ್ಯಾಹ್ನ ಕಳೆಯುತ್ತಿದ್ದಂತೆ ಸಹನೆ ಕಳೆದುಕೊಂಡರು. ಅವರ ಜತೆಗೆ ಬಂದಿದ್ದ ಕೆಲವರು ಗ್ರಾಮಸ್ಥರನ್ನು ಸಂಪರ್ಕಿಸಿದರು. ಆಗ ಕರವೇ ಅಧ್ಯಕ್ಷ ಶಿವುಕುಮಾರ ಕೊಂಕಲ್ ಅವರಲ್ಲಿ ಸಮಸ್ಯೆ ಹೇಳಿಕೊಂಡಾಗ ಅರು ವೈದ್ಯಾಧಿಕಾರಿಯನ್ನು ಸಂಪರ್ಕಿಸಿದರು. ನನಗೆ ಮಾಹಿತಿಯಿಲ್ಲ, ವಿಚಾರಿಸಿ ತಿಳಿಸುತ್ತೇನೆ ಎಂದು ವೈದ್ಯಾಧಿಕಾರಿ ಹೇಳಿದರು.
ಹೀಗೆ ಹೇಳಿ 1 ಗಂಟೆ ನಂತರ 3.30ರ ಸುಮಾರಿಗೆ ಶಹಾಪುರದಿಂದ ಬಂದ ವೈದ್ಯರು ಅರ್ಧ ಗಂಟೆಯಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಮಾಡಿ ಮುಗಿಸಿದರು. ವೈದ್ಯರ ಬೇಜವಾಬ್ದಾರಿ ಬಗ್ಗೆ ಬಾಣಂತಿಯರು ಹಾಗೂ ಕರವೇ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಸೌಲಭ್ಯ ಕೊಟ್ಟರೂ ಅದನ್ನು ನೀಡುವಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಅಲ್ಲದೇ ಮಹಿಳೆಯರ ಜೀವದ ಬಗ್ಗೆ ವೈದ್ಯರಿಗೆ ಕಾಳಜಿಯೇ ಇಲ್ಲದಂತಾಗಿದೆ ಎಂದು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

