ಗುಲ್ಬರ್ಗಾ

ಆಳಂದ; ಆಟೋ ಚಾಲಕರ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ಆಳಂದ, ಮೇ 30
ಗುಲ್ಬರ್ಗ ನಗರದ ಹೊರವಲಯದ ಕೆರಿಭೋಸಗಾ ಕ್ರಾಸ್ ಹತ್ತಿರದ ದಾಬಾದ ಪಾಳು ಬಿದ್ದ ಬಾವಿಗೆ ಬಿದ್ದು ಅಸುನೀಗಿದ ಆಳಂದ ಪಟ್ಟಣದ ಆಟೋ ಚಾಲಕ ಮೊಹ್ಮದ್ ಬಾಬಾ ಹುಸೇನ್ ತಂದೆ ಬಾಬಾ ಹುಸೇನ್ (23) ಸಾವಿನ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.
ಹತ್ಯೆಯಿಂದ ತಪ್ಪಿಸಿಕೊಳ್ಳಲು ಮೊಹ್ಮದ್ ಬಾಬಾ ಹುಸೇನ್ ಹಾಗೂ ಆತನ ಗೆಳೆಯ ಮನೋಹರ್ ಅಲಿಯಾಸ್ ಮನೋಜ್ ಇಬ್ಬರೂ ಓಡಿ ಹೋಗುತ್ತಿರುವಾಗ ಮೊಹ್ಮದ್ ಬಾಬಾ ಹುಸೇನ್ ದಾಬಾದ ಬಳಿಯ ಪಾಳು ಬಾವಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದನು.
ಗಾಯಗೊಂಡ ಗೆಳೆಯನನ್ನು ಬದುಕಿಸಲು ಮನೋಹರ ಆತನನ್ನು ಸೊಲ್ಲಾಪುರ ಆಸ್ಪತ್ರೆಗೆ ಹಲವರ ನೆರವಿನಿಂದ ದಾಖಲಿಸಿದ್ದನು. ಮೊಹ್ಮದ್ ಬಾಬಾನು ಆಸ್ಪತ್ರೆಯಲ್ಲಿ ಬುಧವಾರ ಅಸುನೀಗಿದ್ದು, ಆತನ ಸಾವಿನ ಹಿಂದೆ ಆತನ ಗೆಳೆಯ ಮನೋಹರ ಕೈವಾಡವಿದೆ ಎಂದು ಆಳಂದನಲ್ಲಿ ಆಟೋ ಚಾಲಕರು ಪ್ರತಿಭಟನೆ ನಡೆಸಿದ್ದರಿಂದ ಸಾವಿನ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ.
ಘಟನೆ ಹಿನ್ನೆಲೆ: ಮೊಹ್ಮದ್ ಬಾಬಾ ಹುಸೇನ್ ಅಣ್ಣನ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ಹಂಚಲು ಮೊಹ್ಮದ್ ಬಾಬಾ ಹುಸೇನ್ ಹಾಗೂ ಆತನ ಗೆಳೆಯ ಮನೋಹರ ಇಬ್ಬರೂ ಗುಲ್ಬರ್ಗಕ್ಕೆ ಬಂದು ಕೆಲಸ ಮುಗಿಸಿಕೊಂಡು ಕೆರಿಭೋಸಗಾ ಕ್ರಾಸ್ ಹತ್ತಿರದ ದಾಬಾದಲ್ಲಿ ಸ್ವಲ್ಪ ಹೊತ್ತು ಉಳಿದುಕೊಂಡರು.
ಆಗ ಅಲ್ಲಿಯೇ ಮನೋಹರನ ಚಿಕ್ಕಮ್ಮ ದಿನಸಿ (ಕೆ) ಗ್ರಾಮದ ಶಿವಲಿಂಗಪ್ಪ ತಂದೆ ನಿಂಗಪ್ಪ ಪೊಲೀಸ್ ಪಾಟೀಲ್ ಎಂಬಾತನೊಂದಿಗೆ ನಗುತ್ತಾ ಕುಳಿತುಕೊಂಡಿದ್ದನ್ನು ನೋಡಿದ ಮನೋಹರ, ತಕ್ಷಣವೇ ಮೊಬೈಲ್ ಮೂಲಕ ವಿಷಯವನ್ನು ತನ್ನ ಚಿಕ್ಕಪ್ಪನಿಗೆ ತಿಳಿಸಿದ್ದನು. ಚಿಕ್ಕಪ್ಪನು ಕೂಡಲೇ ಸ್ಥಳಕ್ಕೆ ಆಗಮಿಸಿ, ಶಿವಲಿಂಗಪ್ಪನಿಗೆ ಹೊಡೆದು ತನ್ನ ಪತ್ನಿಯನ್ನು ಎಳೆದುಕೊಂಡು ಹೋಗಿದ್ದನು ಎನ್ನಲಾಗಿದೆ.
ಕುಪಿತಗೊಂಡ ಶಿವಲಿಂಗಪ್ಪನು ಸಹ ಸಹಚರರಾದ ಬಸವರಾಜ ವೆಂಕಟಗಿರಿ, ಅಂಬಾರಾವ್ ಕಲ್ಯಾಣರಾವ್, ಸಿದ್ದು ಅವರೊಂದಿಗೆ ಸೇರಿಕೊಂಡು ದಾಬಾಕ್ಕೆ ಮರಳಿ ಬಂದು ಮೊಹ್ಮದ್ ಬಾಬಾ ಹುಸೇನ್ ಹಾಗೂ ಮನೋಹರ ಮೇಲೆ ದಾಳಿ ನಡೆಸಲು ಮುಂದಾದರು. ಇದನ್ನು ನೋಡಿದ ಇಬ್ಬರೂ ಗೆಳೆಯರು ತಮ್ಮ ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ ಓಡಿ ಹೋದರು.
ಪಾಳು ಬಾವಿಗೆ: ಓಡುವಾಗ ಪಾಳು ಬಾವಿಯೊಳಗೆ ಮೊಹ್ಮದ್ ಬಾಬಾ ಹುಸೇನ್ ಬಿದ್ದು ಬಿಟ್ಟ. ಶಿವಲಿಂಗಪ್ಪ ಹಾಗೂ ಸಹಚರರು ಇಬ್ಬರೂ ಪರಾರಿಯಾಗಿದ್ದಾರೆಂದುಕೊಂಡು ಹುಡುಕುವುದನ್ನು ಬಿಟ್ಟರು. ಆಗ ದಾಬಾದವರು ಹಾಗೂ ಮನೋಹರ ಅವರು ಸೇರಿ ಬಾವಿಗೆ ಬಿದ್ದ ಮೊಹ್ಮದ್ ಬಾಬಾ ಹುಸೇನನ್ನು ಮೇಲಕ್ಕೆ ಎತ್ತಿ ಚಿಕಿತ್ಸೆ ಕೊಡಿಸಲು ಸೊಲ್ಲಾಪುರ ಆಸ್ಪತ್ರೆಗೆ ಸೇರಿಸಿದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶಿವಲಿಂಗಪ್ಪ ಹಾಗೂ ಇತರ ಮೂವರನ್ನು ಬಂಧಿಸಿದ್ದರು. ಬಂಧಿತರು ಜಾಮೀನಿನ ಮೇಲೆ ಹೊರಗೂ ಬಂದಿದ್ದರು. ಆದರೆ ಈಗ ಮೊಹ್ಮದ್ ಬಾಬಾ ಹುಸೇನ್ನನ್ನು ಗೆಳೆಯ ಮನೋಹರನೇ ಕೊಂದಿದ್ದಾನೆಂಬ ಆರೋಪವನ್ನು ಆಳಂದ ಆಟೋ ಚಾಲಕರು ಮಾಡಿ ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ.
ಕೆಲ ದಿನಗಳ ಹಿಂದೆ ಮನೋಹರ, ಮೊಹ್ಮದ್ ಬಾಬಾ ಹುಸೇನ್ ಇಬ್ಬರಿಗೂ ಜಗಳವಾಗಿತ್ತು. ಆ ಹಿನ್ನೆಲೆಯಲ್ಲಿ ಮೊಹ್ಮದ್ ಬಾಬಾ ಹುಸೇನ್ನನ್ನು ಮನೋಹರ ಕೊಲೆ ಮಾಡಿದ್ದಾನೆಂಬ ಆಧಾರ ರಹಿತ ಆರೋಪವನ್ನು ಆಟೋ ಚಾಲಕರು ಮಾಡಿ ಪ್ರತಿಭಟನೆ ನಡೆಸಿದ್ದು, ಪೊಲೀಸರಿಗೂ ವಿಚಿತ್ರವಾಗಿ ಪರಿಣಮಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.