ರೋಹಿಣಿಗಾಗಿ ಕಾದಿರುವ ರೈತ
-ನಾರಾಯಣ ಹೆಗಡೆ
ಯಾದಗಿರಿ: ಮೇ ಮುಗಿದು ಜೂನ್ ತಿಂಗಳಿಗೆ ಕಾಲಿಡುತ್ತಿದ್ದರೂ ಈ ಭಾಗದಲ್ಲಿ ಮಳೆರಾಯನ ಆಗಮನವಿಲ್ಲದೆ ರೈತಾಪಿ ವರ್ಗ ನಿತ್ಯವೂ ಆಕಾಶವನ್ನು ನೋಡುವಂತಾಗಿದೆ. ಕೃಷಿ ಚಟುವಟಿಕೆಗಾಗಿ ಸಿದ್ಧತೆ ಮಾಡಿಕೊಂಡಿರುವ ನೇಗಿಲ ಯೋಗಿ ರೋಹಿಣಿ ಮಳೆಗಾಗಿ ಕಾಯುತ್ತಿದ್ದಾನೆ.
ಈಗಾಗಲೇ ಜಿಲ್ಲಾದ್ಯಂತ ರೈತರು ಕೃಷಿ ಚಟುವಟಿಕೆ ಪ್ರಾರಂಭಿಸಿದ್ದು, ತಮ್ಮ ಜಮೀನಿನಲ್ಲಿ ಬೆಳೆದ ಕಳೆ ತೆಗೆದು ಹೊಲವನ್ನು ಹದ ಮಾಡಿಕೊಳ್ಳುತ್ತಿದ್ದಾರೆ. ಬಿಸಿಲಿನ ತಾಪ ಇನ್ನೂ ಏರುಗತಿಯಲ್ಲೇ ಇದ್ದು, ರೈತರು ಬೆಳಗ್ಗೆ 5 ಗಂಟೆಗೇ ಎದ್ದು ತಮ್ಮ ಜಮೀನುಗಳಿಗೆ ತೆರಳುವುದು ಸಾಮಾನ್ಯವಾಗಿದೆ. ರೋಹಿಣಿ ಮಳೆಯಾದರೆ ಓಣಿ ತುಂಬಾ ಕಾಳು ಎಂದು ನಂಬಿರುವ ರೈತ ಅದಕ್ಕಾಗಿ ಕಾಯುತ್ತಿದ್ದಾನೆ. ಏಕೆಂದರೆ ರೋಹಿಣಿ ಮಳೆಯಾದರೆ ಭೂಮಿಯಲ್ಲಿ ಹೆಚ್ಚಿನ ತೇವಾಂಶವಿರುತ್ತದೆ. ನಂತರ ಮೃಗಶಿರಾದಲ್ಲಿ ಬಿತ್ತಿದರೆ ಒಳ್ಳೆಯ ಬೆಳೆ ಬರುತ್ತದೆ ಎಂಬುದು ರೈತರ ನಂಬಿಕೆ. ಆದರೆ ಈ ಮಳೆ ಇದುವರೆಗೂ ಬಾರದೇ ಇರುವದರಿಂದ ರೈತರು ಕಂಗಾಲಾಗಿದ್ದಾರೆ.
ಕಳೆದ ಎರಡು ವರ್ಷದಿಂದಲೂ ಮಳೆ ಪರಿಸ್ಥಿತಿ ಇದೇ ರೀತಿಯಾಗಿದೆ. ಕಳೆದ ಬಾರಿ ಹೊಲಿಸಿದರೆ ಈ ಸಲ ಮುಂಗಾರು ಪೂರ್ವ ಮಳೆ ಜಿಲ್ಲೆಯಲ್ಲಿ ಕಡಿಮೆಯಾಗಿದೆ. ಜನೇವರಿ ಮೊದಲ ವಾರದಿಂದ ಏಪ್ರಿಲ್ ಅಂತ್ಯದವರೆಗೆ ಜಿಲ್ಲೆಯ ವಾಡಿಕೆ ಮಳೆ 111 ಮಿಮೀ ಬೀಳಬೇಕಿತ್ತು. ಆದರೆ ಇದುವರೆಗೂ ಜಿಲ್ಲೆಯಲ್ಲಿ ಕೇವಲ 18 ಮಿಮೀ ನಷ್ಟು ಮಳೆ ಬಿದ್ದಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಇದು ರೈತರನ್ನು ನಿದ್ದೆಗಡೆಸುವಂತೆ ಮಾಡಿದೆ.
ವಾಡಿಕೆ ಮಳೆಯಿಲ್ಲ: ಆಕಾಶದಲ್ಲಿ ನಿತ್ಯ ಸಾಯಂಕಾಲವಾಗುತ್ತಿದ್ದಂತೆಯೇ ಮೋಡಗಳು ಒಂದಾಗುತ್ತಿದ್ದು, ಜೋರಾಗಿ ಗಾಳಿ ಬೀಸುವುದರಿಂದ ಗಾಳಿಯ ಹೊಡೆತಕ್ಕೆ ಮೋಡಗಳು ಚದುರಿ ಹೋಗುತ್ತಿವೆ. ಮಳೆಯಾಗುತ್ತದೆ ಎಂಬ ಆಶಾ ಭಾವನೆಯಿಂದ ಆಕಾಶದತ್ತ ಎದುರು ನೋಡುತ್ತಿರುವ ರೈತರಿಗೆ ನಿತ್ಯವೂ ನಿರಾಶೆಯಾಗುತ್ತಿದೆ. ಗುಡುಗು, ಗಾಳಿ ಜೋರಾಗಿ ಬರುತ್ತಿದ್ದರೂ ಅದು ಮಳೆ ಹನಿಯನ್ನು ಇಳೆಗೆ ತರುವಲ್ಲಿ ವಿಫಲವಾಗುತ್ತಿವೆ. ಸಿಡಿಲಿನ ಆರ್ಭಟಕ್ಕೆ ಈಗಾಗಲೇ ಜಿಲ್ಲೆಯ 5 ಜನರು ಮೃತಪಟ್ಟಿದ್ದು ಬಿಟ್ಟರೆ ಮುಂಗಾರು ಪೂರ್ವ ದಿನಗಳು ರೈತನಿಗೆ ನೆಮ್ಮದಿ ತರಲಿಲ್ಲ. ವಾಡಿಕೆ ಮಳೆ ಕಡಿಮೆಯಾದ ಕಾರಣ ಬಿತ್ತನೆ ಕಾರ್ಯಗಳು ಆರಂಭವಾಗಿಲ್ಲ. ರೋಹಿಣಿ ಮಳೆಯಾದರೆ ತೊಗಿರಿ, ಸೂರ್ಯಪಾನ, ಸಜ್ಜೆ ಹಾಗೂ ಹೆಸರು ಬೆಳೆಗೆ ಹೆಚ್ಚು ಅನುಕೂಲವಾಗಲಿದೆ ಎಂಬುದು ರೈತರ ಅಭಿಪ್ರಾಯ.
ಬಿತ್ತನೆ ಬೀಜದ ಕೊರತೆ: ಮುಂಗಾರು ಹಂಗಾಮಿನಲ್ಲಿ 2.60 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ ವಾಡಿಕೆ ಮಳೆ ಪ್ರಮಾಣ ಕಡಿಮೆಯಾಗಿದ್ದು, ಜೂನ್ ವೇಳೆಗೆ ಮುಂಗಾರು ಆರಂಭವಾಗುವ ಸೂಚನೆಯಿದೆ. ಸುಮಾರು 21 ಸಾವಿರ ಮೆ.ಟನ್ ರಸಗೊಬ್ಬರ ದಾಸ್ತಾನಿದೆ. ಆದರೆ ಕೇವಲ 25 ಕ್ವಿಂಟಲ್ ಬಿತ್ತನೆ ಹೆಸರು ಲಭ್ಯವಿದೆ. ಕನಿಷ್ಟ 1 ಸಾವಿರ ಕ್ವಿಂಟಲ್ ಬಿತ್ತನೆ ಹೆಸರು ಬೇಡಿಕೆಯಿದೆ. ಮಳೆ ವಿಳಂಬವಾದರೆ ರೈತರು ಹೆಸರು ಬಿತ್ತನೆ ಕೈಬಿಡುವುದರಿಂದ ಪೂರೈಕೆದಾರರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಮುಂಗಾರು ಪ್ರವೇಶಕ್ಕೂ ಮುನ್ನ ಬಿತ್ತನೆ ಬೀಜ ದಾಸ್ತಾನು ಇಟ್ಟುಕೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಅನುಸರಿಸುವುದು ಅಗತ್ಯವಾಗಿದೆ. ಇಲ್ಲದಿದ್ದರೆ ಮಳೆಯಾದರೂ ಬಿತ್ತನೆ ಬೀಜ ಸಿಗದೇ ರೈತರು ತೊಂದರೆ ಎದುರಿಸಬೇಕಾಗುತ್ತದೆ.
ವರುಣನ ಕೃಪೆಗಾಗಿ: ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗದೇ ರೈತರು ತೀವ್ರ ತೊಂದರೆ ಅನುಭವಿಸಿದ್ದಾರೆ. ಇದರಿಂದ ಕೃಷಿ ಉತ್ಪನ್ನ ಕಡಿಮೆಯಾಗಿದ್ದು ಒಂದೆಡೆಯಾದರೆ, ಬೆಳೆ ನಷ್ಟದಿಂದ ರೈತರು ಅಪಾರ ಹಾನಿ ಅನುಭವಿಸಿದ್ದಾರೆ. ಬೆಳೆ ನಷ್ಟಕ್ಕೆ ಸರ್ಕಾರ ನೀಡುವ ಪರಿಹಾರವೂ ಇದುವರೆಗೆ ವಿತರಣೆಯಾಗಿಲ್ಲ. ರೈತರು ಒಂದಲ್ಲ ಒಂದು ಕಷ್ಟವನ್ನು ಎದುರಿಸುತ್ತಲೇ ಇದ್ದು, ಈ ಬಾರಿಯಾದರೂ ಪ್ರಕೃತಿ ರೈತರ ನೆರವಿಗೆ ಬಂದಲ್ಲಿ ಜಿಲ್ಲೆಯ ರೈತರು ಸ್ವಲ್ಪ ನಿಟ್ಟುಸಿರು ಬಿಡಬಹುದು. ಇಲ್ಲದಿದ್ದರೆ ಜಾನುವಾರುಗಳನ್ನು ಮಾರಿ ಒಪ್ಪತ್ತಿನ ಊಟಕ್ಕೆ ಮತ್ತೆ ಗುಳೆ ಹೋಗುವುದು ಅನಿವಾರ್ಯವಾಗಲಿದೆ. ಆದ್ದರಿಂದ ವರುಣನ ಕೃಪೆಯಾಗಿ ರೈತರು ಎದುರು ನೋಡುತ್ತಿದ್ದಾರೆ. ರೋಹಿಣಿ, ಮೃಗಶಿರಾ ಎಂಬ ಲೆಕ್ಕಾಚಾರದಲ್ಲಿ ರೈತ ಮುಳುಗಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

