ಗುಲ್ಬರ್ಗಾ

ಧಂಗಾಪುರಕ್ಕೆ ಡಿಎಚ್‌ಒ ಭೇಟಿ

Published On :

ಕನ್ನಡಪ್ರಭ ವಾರ್ತೆ ಟಿ ಆಳಂದ ಟಿ ನ.8
ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉತ್ತಮ ಸೇವೆ ದೊರೆಯಲಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ ಅವರು ತಾಲೂಕಿನ ಧಂಗಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರೂ, ಕೂಡ ಪ್ರಾಥಮಿಕ ಆರೋಗ್ಯ ಕೇಂದ್ರ ಗಬ್ಬೆದ್ದು ನಾರುತ್ತಿರುವುದಕ್ಕೆ ಧಂಗಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಸಾಕ್ಷಿಯಾಯಿತು.
ಧಂಗಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳೆದ 3-4 ದಿನಗಳ ಹಿಂದೆ ಡಿಎಚ್‌ಒ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಕಂಡು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಕೆಲಸಕ್ಕೆ ಹಾಜರಾಗದ ಸಿಬ್ಬಂದಿಯ ಗೈರು ಹಾಜರಿ ಹಾಕಿ ಹೋದ ಹಿನ್ನಲೆಯಲ್ಲಿ ಗುರುವಾರ ಗ್ರಾಪಂ ಅಧ್ಯಕ್ಷ ಚಂದ್ರಕಾಂತ ಫುಲಾರೆ, ಸದಸ್ಯ ಆಲಗೌಡ ಪಾಟೀಲ್, ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಶಿವಲಿಂಗ ತೇಲ್ಕರ್, ಗ್ರಾಮದ ಬಾಬು ಜವಳಿ ಭೇಟಿ ನೀಡಿದಾಗ ದುರ್ವಾಸನೆಯಿಂದ ಕೂಡಿದ ಆಸ್ಪತ್ರೆ ಸಮಸ್ಯೆ ಬೆಳಕಿಗೆ ಬಂತು.
ಕೆಲಸಕ್ಕೆ ಗೈರು: ವೈದ್ಯಾಧಿಕಾರಿ ಸುನೀಲಕುಮಾರ್ ಶೇರಿಕಾರ ಇವರಿಗೆ 6 ತಿಂಗಳ ಹಿಂದೆ ಜಿಲ್ಲಾ ಮಲೇರಿಯಾ ಕಚೇರಿಗೆ ನಿಯೋಜನೆಯ ಮೇರೆಗೆ ನೇಮಕ ಮಾಡಿರುವುದರಿಂದ ಆಸ್ಪತ್ರೆಯಲ್ಲಿ ಸಿಬ್ಬಂದಿಗಳಾದ ಸಿಪಾಯಿ ಸಂತೋಷ ಹೀರಾಪುರ, ಎಫ್‌ಡಿಸಿ ಅಣವೀರಪ್ಪ ಕೆಲಸಕ್ಕೆ ಹಾಜರಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಕಸ ಗುಡಿಸುವುದು, ನೆಲ ತೊಳೆಯುವುದು, ಲ್ಯಾಬೋರೇಟರಿ ಸ್ವಚ್ಛಗೊಳಿಸುವುದು, ಪ್ರಥಮ ಚಿಕಿತ್ಸೆ, ಅಯೋಡಿನ್, ಬ್ಯಾಡೇಂಜು ಮಾಡಬೇಕಾದ ಸಂತೋಷ ಕೆಲಸಕ್ಕೆ ಬರದೇ ಡಿಎಚ್‌ಒ ಕಚೇರಿಯಲ್ಲೇ ಪ್ರತಿ ತಿಂಗಳು ಸಂಬಳ ಮಾಡಿಕೊಳ್ಳುತ್ತಿದ್ದಾನೆ ಎಂಬುದು ಬೆಳಕಿಗೆ ಬಂತು.
6 ಹಾಸಿಗೆಯುಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಧಂಗಾಪುರ, ಬಟ್ಟರ್ಗಾ, ನಿಂಬರ್ಗಾ, ನಿಂಬರ್ಗಾ ತಾಂಡಾ, ಹಿತ್ತಲಶಿರೂರ, ವೈಜಾಪುರ, ಬಮ್ಮನಳ್ಳಿ ಗ್ರಾಮಗಳು ಒಳಪಡುತ್ತಿದ್ದು, 11 ಜನ ಸಿಬ್ಬಂದಿ ಕಾರ್ಯ ನಿರ್ವಹಿಸಬೇಕಾಗಿದ್ದು, ಅದರಲ್ಲಿ ಸಂತೋಷ ಹಾಗೂ ಅಣವೀರಪ್ಪ ಕೆಲಸಕ್ಕೆ ಹಾಜರಾಗದೇ ಸಂಬಳ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಗರ್ಭಿಣಿಯರು, ಬಾಣಂತಿಯರು, ರೋಗಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಕಸದ ರಾಶಿ ತುಂಬಿದ ಸ್ಥಳಗಳಲ್ಲಿ ಕೂಡುವ ಪರಿಸ್ಥಿತಿ ಉಂಟಾಗಿದೆ.
ನಿಯೋಜನೆ ಮೇಲೆ ಹೋದ ವೈದ್ಯಾಧಿಕಾರಿ ಸುನೀಲಕುಮಾರ್ ಶೇರಿಕಾರ ಮರಳಿ ಬರಬೇಕು. ಕರ್ತವ್ಯ ಲೋಪ ಎಸಗುತ್ತಿರುವ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕಾಗಿ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಗ್ರಾಪಂ ಚಂದ್ರಕಾಂತ ಫುಲಾರೆ, ಸದಸ್ಯ ಆಲಗೌಡ ಪಾಟೀಲ್ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.