200 ಪೊಲೀಸರ ಕೊರತೆ
ಆಳಂದ: ಗುಲ್ಬರ್ಗ ಜಿಲ್ಲೆಯಲ್ಲಿ 200 ಪೊಲೀಸರ ಕೊರತೆ ಉಂಟಾಗಿದ್ದು, ಹಂತ ಹಂತವಾಗಿ ಹುದ್ದೆ ಭರ್ತಿ ಮಾಡಲಾಗುವುದು. 39 ಠಾಣೆಗಳ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಬರಲಾಗುತ್ತಿದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತಸಿಂಗ್ ಹೇಳಿದರು.
ತಾಲೂಕಿನ ನರೋಣಾ ಠಾಣೆ ಆವರಣದಲ್ಲಿ ಏರ್ಪಡಿಸಿದ್ದ ಜನಸಂಪರ್ಕ ಸಭೆಯ ಅಧ್ಯಕ್ಷ ವಹಿಸಿ ಮಾತನಾಡಿ, ಪ್ರತಿ ಠಾಣೆಯಲ್ಲಿ 8 ಸಿಬ್ಬಂದಿ ಕೊರತೆಯಾಗಿದ್ದು, ಹಂತಹಂತವಾಗಿ ಪೊಲೀಸರ ನೇಮಕಾತಿ ಮಾಡಿಕೊಳ್ಳಲು ಇಲಾಖೆ ಸರ್ಕಾರಕ್ಕೆ ಕೋರಿದೆ ಎಂದರು.
ನಿಯೋಜನೆ ಕಷ್ಟಸಾಧ್ಯ: ಜಾತ್ರೆ- ಉತ್ಸವಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಕಷ್ಟ ಸಾಧ್ಯವಾಗಿದೆ. ಹೀಗಾಗಿ ಅವುಗಳ ಆಯೋಜಕರೇ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವುದು ಜನಸಾಮಾನ್ಯರ ಜವಾಬ್ದಾರಿಯೂ ಆಗಿದೆ. ಪೊಲೀಸರಿಗೆ ಜನರ ಸಹಕಾರ ಬೇಕು. ಅವರಿಗೂ ಬಹಳಷ್ಟು ಕೆಲಸಗಳ ಒತ್ತಡಗಳಿದ್ದರೂ ತಮ್ಮ ಕರ್ತವ್ಯ ನಿಭಾಯಿಸುವರು ಎಂದರು.
ಗ್ರಾಪಂ ಅಧ್ಯಕ್ಷ ಶ್ರೀಕಾಂತ ಹೊಳ್ಕರ್, ಸತೀಶ ಪನಶೆಟ್ಟಿ ಅವರು ಕಡಗಂಚಿ ಗ್ರಾಮಕ್ಕೆ ಪೊಲೀಸ್ ಉಪಠಾಣೆ ಮಂಜೂರು ಮಾಡಬೇಕೆಂದು ಮನವಿ ಮಾಡಿದರು. ಅದಕ್ಕೆ ಎಸ್ಪಿ ಜಮೀನು ನೀಡಿದರೆ ತಕ್ಷಣವೇ ಠಾಣೆ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಬ್ಯಾಂಕ್ ಕಳ್ಳತನ: ತಾಲೂಕಿನ ಕಡಗಂಚಿ ಎಸ್ಬಿಐ ಬ್ಯಾಂಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಅವರಿಂದ 25 ಲಕ್ಷ ವಸೂಲಿ ಮಾಡಲಾಗಿದೆ. ಕೆಲ ಆರೋಪಿಗಳು ಪರಾರಿಯಾಗಿದ್ದು, ಬೇರೆ ರಾಜ್ಯದ ಇಬ್ಬರೂ ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಒಟ್ಟು 1.78 ಕೋಟಿ ಬ್ಯಾಂಕ್ನಲ್ಲಿ ಕಳ್ಳತನವಾಗಿದೆ ಎಂದು ಅಮಿತಸಿಂಗ್ ಹೇಳಿದರು.
ಬಸವನ ಸಂಗೋಳಗಿ ಗ್ರಾಮದಲ್ಲಿ ಪ್ರತಿ ವರ್ಷ ದಲಿತರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಪೊಲೀಸ್ ಇಲಾಖೆ ಗ್ರಾಮದ ದಲಿತರಿಗೆ ರಕ್ಷಣೆ ನೀಡಬೇಕೆಂದು ಯುವ ಮುಖಂಡ ಲಕ್ಷ್ಮೀಕಾಂತ ಮೇಲಿನಕೇರಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ, ತಾಲೂಕಿನ ಡಿವೈಎಸ್ಪಿ, ಸಿಪಿಐ ಹಾಗೂ ಪಿಎಸ್ಐ ಜತೆ ಚರ್ಚಿಸಿ ಶಾಂತಿ ಸಭೆ ನಡೆಸಲಾಗುವುದೆಂದು ಭರವಸೆ ನೀಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ರಶೀದ ಖಜೂರಿ, ಮಾಜಿ ಸದಸ್ಯ ನಾಗಪ್ಪ ಕೋರೆ, ಪ್ರಭು ಹೀರಾ, ಯಲ್ಲಾಲಿಂಗ ಕೊಚನ ಮಾತನಾಡಿದರು. ಪ್ರಶಿಕ್ಷಣಾರ್ಥಿ ಡಿವೈಎಸ್ಪಿ ರಾಮು, ಡಿವೈಎಸ್ಪಿ ಎಸ್.ಎಲ್.ಝಂಡೇಕಾರ, ಸಿಪಿಐ ಕೆ.ಎಸ್.ಹಟ್ಟಿ, ಪಿಎಸ್ಐ ಎಂ.ಎಸ್. ದೊರೆ, ಮಂಗಲಾ ನರೋಣಿ, ಚಂದ್ರಕಾಂತ, ಮಲ್ಲಿಕಾರ್ಜುನ ಮದಲಿ, ಶಿವಪುತ್ರಪ್ಪ ಕೊಟ್ಟರ್ಕಿ, ಕಲ್ಲಪ್ಪ ಚೀಲಿ, ಸಿದ್ರಾಮಪ್ಪ ನಾಟಿಕರ, ಲಕ್ಷ್ಮೀಪುತ್ರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

