ಕೃಷಿ ಮೇಳ-2013; ರೈತರ ದಿಲ್ಖುಷ್
ಕನ್ನಡಪ್ರಭ ವಾರ್ತೆ ಗುಲ್ಬರ್ಗ ನ.24
ಇಲ್ಲಿನ ಆಳಂದ ರಸ್ತೆಯ ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿದ್ಯಾಲಯ ಆವರಣದಲ್ಲಿ ಸಂಘಟಿಸಲ್ಪಟ್ಟಿರುವ ಕೃಷಿ ಮೇಳ 2013 ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ಕೃಷಿಕರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.
ಮೊದಲ ದಿನದ ಮೇಳದಲ್ಲೇ 5 ರಿಂದ 6 ಸಾವಿರ ರೈತರು ಬಂದು ಹೋದರೆ, 2 ದಿನವಾದ ಭಾನುವಾರ ಕೃಷಿ ಮೇಳಕ್ಕಂತೂ 10 ಸಾವಿರಕ್ಕೂ ಹೆಚ್ಚು ರೈತರು ಸಾಕ್ಷಿಯಾದರು.
ಮೇಳದ ವಿಶಾಲ ಅಂಗಳದಲ್ಲಿ ಒಪ್ಪ ಓರಣವಾಗಿ ಅಳವಡಿಸಲಾಗಿದ್ದ ಯಾಂತ್ರಿಕ ಕೃಷಿ ಸಲಕರಣೆಗಳು, ಯಂತ್ರೋಪಕರಣಗಳು, ಆಧುನಿಕ ಬೇಸಾಯ ಕ್ರಮಗಳು, ಪರಂಪರಾಗತಚ ಬೇಸಾಯದಲ್ಲಿನ ಸುಧಾರಿತ ಕ್ರಮಗಳು, ಕೀಟನಾಶಕ, ರಸಗೊಬ್ಬರ... ಹೀಗೆ ಹತ್ತು ಹಲವು ರೂಪಗಳಲ್ಲಿ ಕೃಷಿಯಲ್ಲಿ ಅದೆಂತಹ ಸುಧಾರಣೆ ತರಲು ಸಾಧ್ಯ ಎಂಬುದನ್ನೆಲ್ಲ ಪ್ರತ್ಯಕ್ಷವಾಗಿ ಕಂಡು ಮಾಹಿತಿ ಅರಿತರು.
ಸೌರಬೇಲಿಗೆ ಬೆರಗಾದ ರೈತರು: ಬಹುವರ್ಷಗಲಿಂದಲೂ ಚಾಲ್ತಿಯಲ್ಲಿರುವ ಸೌರಬೇಲಿ ಬಗ್ಗೆ ಅಷ್ಟಾಗಿ ಅರಿಯದ ಬಿಸಿಲೂರು ರೈತರು ಆ ಬೇಲಿ ಕೆಲಸ ಮಾಡುವ ಪರಿಯನ್ನು ಕಂಡು ದಂಗು. ಹತ್ತಿರ ಹೋಗಿ ಬೇಲಿಯ ಪ್ರಾತ್ಯಕ್ಷಿಕೆ ಮುಟ್ಟಿ ಅಲ್ಪ ಪ್ರಮಾಣದ ಶಾಕ್ ಅನುಭವ ಪಡೆದ ರೈತರು ತಮ್ಮ ಹೊಲಗದ್ದೆಗಳಿಗೆ ಈ ಬೇಲಿ ಅತ್ಯಂತ ಸೂಕ್ತ ಎಂದು ಸುರಪುರದ ಕರಿಬಸವೇಶ್ವರ ಏಜನ್ಸಿಯವರೊಂದಿಗೆ ಚೌಕಾಸಿ ವ್ಯಾಪಾರಕ್ಕೆ ಮುಂದಾಗಿದ್ದರು.
ಸೆಲ್ಕೋ ಕಂಪನಿಯ ಸೌರಬೇಲಿ, ಅದರ ಪರಿಣಾಮಕಾರಿ ಉಪಯೋಗಗಳನ್ನೆಲ್ಲ ರೈತರಿಗೆ ಕಂಪನಿಯ ತಂತ್ರಜ್ಞರು ವಿವರಿಸಿ ಹೇಳುತ್ತ ಸ್ಫೂರ್ತಿ ತುಂಬುತ್ತಿದ್ದರು. ಈಗಾಗಲೇ ಗುಲ್ಬರ್ಗ, ಯಾದಗಿರಿಯಲ್ಲಿ 2 ಸಾವಿರ ಎಕರೆಗೂ ಅಧಿಕ ಹೊಲಗದ್ದೆಗೆ ಸೌರಬೇಲಿಯೇ ಕಾವಲು ಎಂದು ಮಾಹಿತಿ ನೀಡಿದ ಏಜನ್ಯಿ ಜನ ರೈತರು ಈ ಬಗ್ಗೆ ತುಂಬಾ ಮಾಹಿತಿ ಪಡೆಯುತ್ತಿರುವದರಿಂದ ಬರುವ ದಿನಗಳಲ್ಲಿ ಭರ್ಜರಿ ವಹಿವಾಟಿನ ಕನಸು ಕಂಡಿದ್ದರು.
ಸೌರಶಕ್ತಿ ಬಳಸಿ ಕೃಷಿಯಲ್ಲಿ ಅದ್ಹೇಗೆ ಕ್ರಾಂತಿ ತರಬಹುದು ಎಂಬುದನ್ನು ಸಾರಲು ಮೇಳದಲ್ಲಿ ಸೌರ ಚಾಲಿತ ಕೀಟನಾಶ ಸಿಂಪರಣಾ ಯಂತ್ರ ಬಂಡಿ, ನೀರೆತ್ತುವ ಯಂತ್ರ, ಸೌರದೀಪಗಳಂತಹ ತರಹೇವಾರಿ ಸಲಕರಣೆಗಳು ರೈತರ ಮನ ಸೂರೆಗೊಂಡವು. ಅನೇಕ ರೈತರು ಸಂಬಂಧಪಟ್ಟಂತಹ ಏಜನ್ಸಿಗಳನ್ನು ಕಂಡು ತಮ್ಮ ಹೆಸರು- ವಿಳಾಸ ನೊಂದಣಿ ಮಾಡಿಕೊಂಡು ಅದರ ಬಳಕೆಯ ಬಗ್ಗೆ ಆಸಕ್ತಿ ತೋರಿದರು.
ಇದಲ್ಲದೆ ಬಿತ್ತನೆಗೆ, ನಂತರದಲ್ಲಿ ಬೆಳೆ ಇದ್ದಾಗ ಹರಗಲು ಹಿಂದೆಲ್ಲ ಬಳಸುತ್ತಿದ್ದ ಕಟ್ಟಿಗೆಯಿಂದ ಸಿದ್ಧಪಡಿಸಿದ ಸಲಕರಣೆಗಳ ಜಾಗದಲ್ಲಿ ಕಬ್ಬಿಣದ ಸಲಕರಣೆಗಳು ಅಭಿವೃದ್ಧಿ ಪಡಿಸಲಾಗಿದ್ದು ವಿಜಾಪುರದ ಸಂಸ್ಥೆಯವರ ಈ ಸಲಕರಣೆಗಳಿಗೂ ರೈತರು ಬೆರಗಿನಿಂದಲೇ ಕಂಡರು.
ಈ ಬಾರಿ ಮೇಳದಲ್ಲಿ ಕೃಷಿ ಯಂತ್ರೋಪಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶನಕ್ಕೆ ಬಂದಿದ್ದರಿಂದ ಹೆಚ್ಚಿನ ರೈತರ ಗಮನ ಸೆಳೆದವು. ಹನಿ ನೀರಾವರಿ, ತುಂತುರು ನಿರಾವರಿ, ಹೊಸ ಮಾದರಿಯ ಹನಿ ನೀರಾವರಿಯಂತಹ ಹಲವು ಪ್ರಾತ್ಯಕ್ಷಿಕೆಗಳು ರೈತರಿಗೆ ನೀರಿನ ಮಿತ ಬಳಕೆ ಚಿಂತನೆಗೂ ಹಚ್ಚಿದ್ದವು.
ಆಯುರ್ವೇದ, ದೇಸಿ ಔಷಧಿ. ಪರಿಚಯದ ಮಳಿಗೆಗಳು, ಮೊಲ ಸಾಕಣೆಯಂತಹ ಪ್ರಾತ್ಯಕ್ಷಿಕೆಗಳು, ಆಕಳು ಬದುಕಿನ ಶೈಲಿಯ ಬಗೆಗಿನ ಮಾಹಿತಿ ಮೇಳದಲ್ಲಿ ಗಮನ ಸೆಳೆದವು. ಇದಲ್ಲದೆ ತೋಟಗಾರಿಕೆ, ಕೃಷಿ, ಪಶು ಸಂಗೋಪನೆ, ಮೀನುಗಾರಿಕೆ, ಜಲಾನಯನ, ರೇಷ್ಮೆ ಇಲಾಖೆಗಳವರ ಪ್ರಾತ್ಯಕ್ಷಿಕೆಗಳು, ಸರ್ಕಾರದಿಂದ ರೈತರಿಗೆ ಇರುವಂತಹ ನೆರವಿನ ಮಾಹಿತಿ ಮಳಿಗೆಗಳು ಗಮನ ಸೆಳೆದವು.
-ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

