ಎಚ್‌ಐವಿ ಪೀಡಿತರ ದಿವ್ಯ ಜೀವನ
ಗುಲ್ಬರ್ಗ: ಏಡ್ಸ್ ಸೋಂಕಿತರಿಗಾಗಿ, ಏಡ್ಸ್ ಸೋಂಕಿತರಿಗೋಸ್ಕರ, ಏಡ್ಸ್ ಸೋಂಕಿತರೇ ಸೇರಿಕೊಂಡು ಗುಲ್ಬರ್ಗದಲ್ಲಿ 'ದಿವ್ಯ ಜೀವನ' ಹೆಸರಿನ ಪಾಸಿಟಿವ್ ನೆಟ್‌ವರ್ಕ್ ರಚಿಸಿಕೊಂಡು ಮಹಾಮಾರಿ ವಿರುದ್ಧ ಆಂದೋಲನವನ್ನು ಹುಟ್ಟುಹಾಕಿದ್ದಾರೆ.
2004ರಲ್ಲಿಯೇ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ 'ದಿವ್ಯ ಜೀವನ' ಎಂಬ ಏಡ್ಸ್ ಹಾಗೂ ಎಚ್‌ಐವಿ ಪೀಡಿತರ ಸಂಘಟನೆಯ ಹಸಿರು ಚಿಗುರಿದ್ದು ಇದೀಗ ಹೆಮ್ಮರವಾಗಿದೆ. ಆರಂಭದಲ್ಲಿ ಸಂಘದಲ್ಲಿ ಸದಸ್ಯರು ನೂರರ ಆಸುಪಾಸಿನಲ್ಲಿದ್ದರು. ಇದೀಗ 5,300ರ ಗಡಿ ದಾಟಿದೆ. 4,300 ವಯಸ್ಕ ಮಹಿಳೆ, ಪುರುಷರೊಂದಿಗೆ 350ಕ್ಕೂ ಹೆಚ್ಚು ಮಕ್ಕಳೂ ಈ ಸಂಘದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಜಿಲ್ಲೆಯ 7 ತಾಲೂಕುಗಳಲ್ಲಿಯೂ ಸಂಘದ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಪ್ರತಿ ತಾಲೂಕಿನಿಂದ ಒಬ್ಬರಂತೆ ವೈರಸ್‌ನ ಸೋಂಕಿತರೇ ಕಾರ್ಯಕಾರಿ ಮಂಡಳಿಗೆ ಆಯ್ಕೆಯಾಗುತ್ತಾರೆ. 11 ಶುಲ್ಕ ಸಲ್ಲಿಸಿ ಸದಸ್ಯರಾದವರಿಗೆ ಸಂಘದ ಚುನಾವಣೆ ಇತ್ಯಾದಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಕ್ಕಿರುತ್ತದೆ. ಪ್ರತಿ 2 ವರ್ಷಕ್ಕೊಮ್ಮೆ ಚುನಾವಣೆ ನಡೆಯುವ ಇಲ್ಲಿ ಸೋಂಕಿತರೇ ಸಂಘದ ಪ್ರಮುಖ ಹುದ್ದೆಗಳಿಗೆ ಆಯ್ಕೆಯಾಗುತ್ತಾರೆ.
ಪೀಡಿತರಿಗಿದೆ ಸ್ವ ಸಹಾಯ ಸಂಘ: ಸ್ವಸಹಾಯ ಸಂಘ ರಚನೆ, ಆರ್ಥಿಕ ಸ್ವಾವಲಂಬನೆ ಪಾಠ, ಕಾನೂನು ನೆರವು, ಸೋಂಕಿನ ಬಗ್ಗೆ ಅರಿವು, ಔಷಧಿ, ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವ ಜತೆಗೆ ಸೋಂಕಿತರಿಗೆ ಅನುಕೂಲವಾಗುವಂತೆ ಹಲವಾರು ಚಟುವಟಿಕೆಗಳನ್ನು ಈ ಸಂಘ ನಡೆಸಿಕೊಂಡು ಬರುತ್ತಿದೆ.
ಇಷ್ಟೇ ಅಲ್ಲದೆ ಏಡ್ಸ್ ಸೋಂಕು ಹರಡುವ ಬಗೆ, ಪಾರಾಗುವ ಮಾರ್ಗ ಇತ್ಯಾದಿ ಬಗ್ಗೆಯೂ ತಿಂಗಳಿಗೆ 15ರಂತೆ ವರ್ಷಕ್ಕೆ 250ಕ್ಕೂ ಅಧಿಕ ಬಾರಿ ಸಭೆಗಳನ್ನು ನಡೆಸಿ ಅರಿವು ಮೂಡಿಸುವ ಕೆಲಸವನ್ನು ಈ ಸಂಘ ಮಾಡುತ್ತಿದೆ.
ಗರ್ಭಿಣಿಯರು ಏಡ್ಸ್ ಪೀಡಿತರಾದಲ್ಲಿ ಸೂಕ್ತ ಔಷಧ ಕೊಡಿಸಿ ಮಗು ಏಡ್ಸ್ ಮುಕ್ತವಾಗಿರುವಂತೆ ಶ್ರಮಿಸುತ್ತೇವೆ. ಸೋಂಕು ಪೀಡಿತರಿಗೆ ಶಸ್ತ್ರಚಿಕಿತ್ಸೆ ನೀಡಲು ಆಸ್ಪತ್ರೆಗಳು ನಿರಾಕರಿಸಿದಲ್ಲಿ ಅವರ ನೆರವಿಗೆ ಸಂಘ ಸದಾ ಮುಂದಾಗುತ್ತದೆ.
ವಿಹಾನ್ ಯೋಜನೆ ಮಂಜೂರು: ಕರ್ನಾಟಕ ಸರ್ಕಾರದ ಕೆಎಚ್‌ಟಿಪಿ (ಕರ್ನಾಟಕ ಹೆಲ್ತ್ ಪ್ರಮೋಷನ್ ಪ್ರೋಗ್ರಾಮ್) ಯೋಜನೆಯಡಿಯಲ್ಲಿ ಈ ಸಂಘಕ್ಕೆ 3 ವರ್ಷಗಳ ಅವಧಿಯ ವಿಹಾನ್ ಯೋಜನೆ ದಕ್ಕಿದೆ. ಈ ಯೋಜನೆಯಡಿಯಲ್ಲಿ ಎಚ್‌ಐವಿ ಸೋಂಕಿತರು ಔಷಧಿ ಸೇವನೆ ಬಿಟ್ಟ ಪ್ರಕರಣಗಳನ್ನು ಗುರುತಿಸಿ, ಅವರಿಗೆ ಸಮಾಲೋಚನೆ ನಡೆಸಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ಕೆಲಸ ಮಾಡುತ್ತದೆ.
ಏಡ್ಸ್ ಮಹಾಮಾರಿ ಇದ್ದವರೂ 'ದಿವ್ಯ ಜೀವನ' ಕಟ್ಟಿಕೊಳ್ಳಬಹುದು ಎಂಬುದನ್ನು ಸಂಘದ ಸದಸ್ಯರು ಸಾಧಿಸಿ ತೋರಿಸಿದ್ದಾರೆ.
-ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

