ಗುಲ್ಬರ್ಗಾ

ಮಗನಿಂದ್ಲೇ ಮನೆಹಾಳು ಪ್ಲಾನ್

Published On :

ಗುಲ್ಬರ್ಗ: ಮಕ್ಕಳಿರಲವ್ವ ಮನೆತುಂಬ ಎಂಬುದು ಜಾಣ್ಣುಡಿ, ಕುಲ-ಕುಡಿಗಳ ಪ್ರತಿ ಮಮತೆ, ವಾತ್ಸಲ್ಯಕ್ಕೆ ಈ ಮಾತು ಕನ್ನಡಿ. ಆದರೆ ಮಕ್ಕಳೇ ಮನೆಹಾಳು ಪ್ಲಾನ್ ರೂಪಿಸಿ, ಮಾಡಬಾರದ್ದನ್ನೆಲ್ಲ ಮಾಡಿ ಪಾಲಕರನ್ನೇ ಪರೇಶಾನ್ ಮಾಡಿದರೆ..
ಗುಲ್ಬರ್ಗದಲ್ಲಿ ಮನೆ ಮಗನೇ ಮನೆಹಾಳು ಪ್ಲಾನ್ ರೂಪಿಸಿ ಪಾಲಕರನ್ನೇ ಪರದಾಡುವಂತೆ ಮಾಡಿರುವ ವಿಲಕ್ಷಣ ಪ್ರಸಂಗ ನಡೆದಿದೆ. ಕಳೆದ ಮಾರ್ಚ್ 24ರ ಮಧ್ಯರಾತ್ರಿ ಇಲ್ಲಿನ ಗಂಜ್ ಪ್ರದೇಶದ ನಿಮ್ರಾ ಮಂಜಿಲ್ ಸಾಕ್ಷಿಯಾದಂತಹ ಕಾವಲುಗಾರನ ಕೊಲೆ ಹಾಗೂ ದರೋಡೆ ಪ್ರಕರಣದಲ್ಲಿ ಆ ಮನೆ ಮಾಲೀಕನ ಪುತ್ರನೇ ಮನೆಹಾಳು ಪ್ಲಾನ್ ರೂಪಿಸಿ ಗೆಳೆಯರ ಸಹಾಯದೊಂದಿಗೆ ಅನುಷ್ಠಾನಕ್ಕೆ ತಂದು ಹೆತ್ತವರಿಗೇ ಮುಳುವಾಗಿದ್ದು ಪೊಲೀಸ್ ವಿಚಾರಣೆಯಿಂದ ಹೊರಬಿದ್ದಿದೆ.
ಘಟನೆ ಹಿನ್ನೆಲೆ: ಮಾರ್ಚ್ 24ರ ಮಧ್ಯರಾತ್ರಿ ನಿಮ್ರಾ ಮಂಜಿಲ್ ಭೀಕರ ಕೊಲೆ ಹಾಗೂ ದರೋಡೆ ಘಟನೆಗೆ ಸಾಕ್ಷಿಯಾಗಿತ್ತು. ಮನೆ ಕಾವಲುಗಾರ ಅಬ್ದುಲ್ ನಬಿ ಅಲ್ಲಾವುದ್ದೀನ್ ಸಾಬ್ (55) ಭೀಕರವಾಗಿ ಕೊಲೆಯಾಗಿದ್ದ. ರಿಯಲ್ ಎಸ್ಟೇಟ್ ಉದ್ಯಮಿ ಸೈಯ್ಯದ್ ಜಾವೆದ್ ನೂಮನ್‌ಗೆ ಸೇರಿದ್ದ ನಿಮ್ರಾ ಮಂಜಿಲ್‌ನಿಂದ ಚಿನ್ನಾಭರಣ, ನಗದು ಹಣವೂ ಕಳವಾಗಿತ್ತು. ಕೊಲೆ ಮಾಡಿ ಕಾವಲುಗಾರರನ್ನು ಸುಟ್ಟುಹಾಕಿ ಆರೋಪಿಗಳಿಂದ ಸಾಕ್ಷಿ ನಾಶಕ್ಕೂ ಪ್ರಯತ್ನವಾಗಿತ್ತು. ಮನೆ ಮಾಲೀಕ ನೂಮನ್ ಕುಟುಂಬ ಸಮೇತ ದೆಹಲಿಗೆ ಹೋಗಿದ್ದಾಗ ಈ ಘಟನೆ ಸಂಭವಿಸಿತ್ತು. 726 ಗ್ರಾಂ ಚಿನ್ನಾಭರಣ, 1 ಲಕ್ಷ ರು. ನಗದು ಹಣ ಕಳವಾಗಿದೆ ಎಂದು ದೆಹಲಿಯಿಂದ ಮರಳಿ ಬಂದ ನಂತರ ನೂಮನ್ ಪೊಲೀಸರಿಗೆ ದೂರು ನೀಡಿದ್ದರು.
ಫೈಜಲ್- ನಯೀಂ ನಿರಂತರ ಮಾತುಕತೆ: ಫೈಜಲ್ ಮಾ. 24ರಂದು ಪಾಲಕರೊಂದಿಗೆ ದೆಹಲಿಗೆ ಹೋಗುವ ರೈಲಿನಲ್ಲಿದ್ದರೂ ಸಹ ಪೊಲೀಸರು ಮಾ. 24, 25 2 ದಿನಗಳ ಫೈಜಲ್ ಮೊಬೈಲ್ ಕರೆಗಳನ್ನು ಪಡೆದು ಪರಿಶೀಲಿಸಿದಾಗ ಅಚ್ಚರಿ ಕಾದಿತ್ತು. ಫೈಜಲ್ ರೈಲಿನಲ್ಲಿದ್ದರೂ ಮಾ. 24 ರ 11ರಿಂದ ಬೆಳಗಿನ ಜಾವದವರೆಗೂ ತನ್ನ ಗೆಳೆಯ ನಯೀಂ ಜೊತೆ ನಿಮಿಷ, ಎರಡು ನಿಮಿಷಕ್ಕೆ ಒಮ್ಮೆ ಕರೆ ಮಾಡಿ ಮಾತನಾಡಿದ್ದು ಪೊಲೀಸರ ಗಮನ ಸೆಳೆಯಿತು.
ಆ ದಿನ ಫೈಜಲ್, ನಯೀಂಗೆ 25ಕ್ಕೂ ಹೆಚ್ಚು ಕಾಲ್‌ಗಳನ್ನು ಮಾಡಿದ್ದ. ಇದೇ ಆಧಾರದಲ್ಲಿ ಫೈಜಲ್‌ನ ಗೆಳೆಯರ ಬಳಗದ ಪಟ್ಟಿ ತಯಾರಿಸಿದ ಪೊಲೀಸರು ಅವರನ್ನೆಲ್ಲ ಸಂಪರ್ಕಿಸಿದಾಗ ಆ ಪೈಕಿ ನಯೀಂ ತಲೆಮರಿಸಿಕೊಂಡಿದ್ದು ಗೊತ್ತಾಯ್ತು. ತಕ್ಷಣ ಜಾಗೃತರಾದ ಪೊಲೀಸರು ನಯೀಂ ಬಂಧನಕ್ಕೆ ಬಲೆ ಬೀಸಿದರು. ಈ ಸಂಗತಿ ಅರಿವಿಗೆ ಬರುತ್ತಿದಂತೆಯೇ ಇತ್ತ ಫೈಜಲ್ ಸಹ ನಾಪತೆಯಾಗಿಬಿಟ್ಟ.
ನಯೀಂ ಚಹರೆಪಟ್ಟಿ ಆಧರಿಸಿ ಆತನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಖಚಿತ ಮಾಹಿತಿ ಆಧರಿಸಿ 2 ದಿನಗಳ ಹಿಂದಷ್ಟೆ ಆತನನ್ನು ಗುಲ್ಬರ್ಗ ರೈಲು ನಿಲ್ದಾಣದಲ್ಲಿ ಬಂಧಿಸಿ ವಿಚಾರಣೆ ನಡೆಸಿದಾಗ ನಿಮ್ರಾ ಮಂಜಿಲ್ ಕೊಲೆ- ದರೋಡೆ ಸಂಗತಿ ಬಯಲಿಗೆ ಬಂತು.
ರೈಲಿನಿಂದಲೇ ಫೈಜಲ್ ಡೈರೆಕ್ಷನ್: ಸಯ್ಯದ್ ಜಾವೆದ್ ನೂಮನ್ ಉದ್ಯಮಿ, ಆಗರ್ಭ ಸಿರಿವಂತ. ತಂದೆಯ ಸಂಪತ್ತೇ ಮಗ ಫೈಜಲ್ (ಪಿಯುಸಿ ಡ್ರಾಪೌಟ್)ನ ಕಣ್ಣು ಕುಕ್ಕಿತ್ತು. ಹೇಗಾದರೂ ಮಾಡಿ ಹಣ, ಬಂಗಾರ ಲಪಟಾಯಿಸೋಣ ಎಂದು ಹೊಂಚು ಹಾಕಿದ್ದ ಫೈಜಲ್ ತಂದೆಯೊಂದಿಗಿದ್ದರೂ ಗೆಳೆಯರಾದ ನಯೀಂ ಹಾಗೂ ವಾಸೀಂ (ಇವರಿಬ್ಬರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು) ಸಹಾಯದಿಂದ ಮನೆಗೆ ಅವರನ್ನು ನುಗ್ಗುವಂತೆ ಮಾಡಿ ದರೋಡೆ ಮಾಡಿಸಿದ್ದ.
ಮಾ. 24 ರ ರಾತ್ರಿ 11ರಿಂದಲೇ ಶುರುವಾಗಿದ್ದ ಈ ದರೋಡೆ ಕಾರ್ಯಾಚರಣೆ ಯಶ ಕಂಡಿತಾದರೂ ಕಾವಲುಗಾರ ಇದನ್ನೆಲ್ಲ ನೋಡಿ ವಿಷಯ ಹೇಳಿದರೆ ಹೇಗೆ ಎಂಬ ಭಯದಲ್ಲಿ ಆತನ ಕತ್ತು ಕುಯ್ದು ಕೊಲೆ ಮಾಡಲಾಯ್ತು. ಮನೆಗೆ ಹೋಗಿ ಏನೆಲ್ಲಾ ಮಾಡಬೇಕೆಂದು ಫೈಜಲ್ ರೈಲಲ್ಲಿದ್ದೇ (ಪಕ್ಕದಲ್ಲೇ ಪಾಲಕರು) ನಿರ್ದೇಶನ ನೀಡಿದ್ದ ಎಂಬುದು ಇಡೀ ಪ್ರಕರಣದಲ್ಲಿ ಆಘಾತಕಾರಿ ವಿಚಾರ.
ನಯೀಂ ಬಂಧನ: ನಂಬರ್ ಸಿಸ್ಟಂ ತಿಜೋರಿ ಲಾಕರ್ ಹಾಗೂ ಮೊಬೈಲ್ ಕರೆಗಳ ಆಧಾರದಲ್ಲಿ ನಿಮ್ರಾ ಮಂಜಿಲ್ ಕೊಲೆ- ದರೋಡೆ ಪ್ರಕರಣ ಬೆಳಕಿಗೆ ಬಂದಿದ್ದು ನಯೀಂ ಸಿಕ್ಕಿದ್ದಾನೆ. ಸೈಯದ್ ಫೈಜಲ್ (ಮನೆ ಮಗ) ಹಾಗೂ ಈತನ ಗೆಳೆಯ ವಾಸೀಂ ತಲೆಮರೆಸಿಕೊಂಡಿದ್ದಾರೆ.

ಮನೆಮಗ ಸಿಕ್ಕಿಬಿದ್ದದ್ದು ಹೀಗೆ
ಸೈಯ್ಯದ್ ಜಾವೆದ್ ನೂಮನ್ ದಂಪತಿಯೊಂದಿಗಿನ ಚರ್ಚೆ ಸಂದರ್ಭದಲ್ಲಿ ಕುಟುಂಬದ ಆಪ್ತರಿಂದಲೇ ಈ ಕೆಲಸವಾಗಿದೆ ಎಂಬ ಬಲವಾದ ಶಂಕೆಯನ್ನು ದಂಪತಿ ಪೊಲೀಸರ ಮುಂದೆ ವ್ಯಕ್ತಪಡಿಸಿದರು. ಏಕೆಂದರೆ ದರೋಡೆಕೋರರು ಮನೆಯ ಒಂದೇ ಕೋಣೆ ಬಾಗಿಲು ಮುರಿದಿದ್ದರು. ಅಲ್ಲಿದ್ದ ನಂಬರ್ ಲಾಕಿಂಗ್ ಸಿಸ್ಟಂ ಅಳವಡಿಸಿದ್ದ ತಿಜೋರಿಯಿಂದ ಸುಲಭದಲ್ಲಿ ಹಣ ಎಗರಿಸಿದ್ದರು. ಈ ತಿಜೋರಿ ನಂಬರ್ ಲಾಕಿಂಗ್ ತಮ್ಮ ಪುತ್ರ ಫೈಜಲ್ ಹಾಗೂ ತಮಗೆ ಬಿಟ್ಟರೆ ಇನ್ನೊಬ್ಬರಿಗೆ ಗೊತ್ತಿಲ್ಲ ಎಂದು ಮನೆ ಮಾಲೀಕ ಹೇಳಿದಾಗ ಪೊಲೀಸರಿಗೆ ಮನೆಮಗ ಫೈಜಲ್‌ನ ಮೇಲೆ ಶಂಕೆ ಬಲವಾಯ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.