ಗುಲ್ಬರ್ಗಾ

ವರದಕ್ಷಿಣೆ ದಾಹಕ್ಕೆ ಬಲಿ

Published On :

ಕ.ಪ್ರ. ವಾರ್ತೆ, ಗುಲ್ಬರ್ಗ, ಫೆ.5
ಇಲ್ಲಿನ ಲುಕ್ಮಾನ್ ಕಾಲೇಜಿನ ದರ್ಶನಾಪುರ ಲೇಔಟ್‌ನಲ್ಲಿರುವ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ, ಮಾಜಿ ಜಿಪಂ ಸದಸ್ಯ ಮುಕ್ರಂಖಾನ್ ಇವರ ಪುತ್ರಿ ಆಫ್ರಿನ್ ಖಾನ್ ತನ್ನ ಕರುಳ ಕುಡಿ, ನಾಲ್ಕೂವರೆ ವರ್ಷದ ಹಾನಾ ಖಾನ್‌ಳನ್ನು ಗುಂಡಿಟ್ಟು ಕೊಂದಿದ್ದಾಳೆ. ನಂತರ ತಾನೂ ಅದೇ ರಿವಾಲ್ವರ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ದಾರುಣ ಸಾವನ್ನಪ್ಪಿರುವ ಪ್ರಕರಣದ ಹಿಂದೆ ವರದಕ್ಷಿಣೆ ಕರಾಳ ಮುಖವಿರುವುದು ಬಹಿರಂಗವಾಗಿದೆ.
ಮಂಗಳವಾರ ಸಂಜೆ ಮನೆಯಲ್ಲೇ ಸಂಭಸಿರುವ ದುರಂತ ಘಟನೆಯ ಬಗ್ಗೆ ಮುಕ್ರಂಖಾನ್ ಕುಟುಂಬ ಸದಸ್ಯರು ವರದಕ್ಷಿಣೆ ದಾಹವೇ ತಮ್ಮ ಕುಟುಂಬದ ಸದಸ್ಯೆ ಆಫ್ರಿನ್ ಖಾನ್ ಮತ್ತವಳ ಪುಟಾಣಿ ಮಗು ಹಾನಾಖಾನ್‌ಳನ್ನು ಬಲಿ ಪಡೆದದ್ದು, ಎಂದು ದೂರಿ ಬಸವೇಶ್ವರ ನಗರ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾರೆ.
ಮುಕ್ರಂಖಾನ್ ಪುತ್ರ ಇಮ್ರಾನ್ ಖಾನ್ ದೂರು ನೀಡಿದ್ದು ಅಕ್ಕ ಆಫ್ರೀನಾ ಸಾವಿಗೆ ಆಕೆಯ ಬೆಂಗಳೂರಿನಲ್ಲಿರುವ ಎಂಜಿನಿಯರ್ ಗಂಡ ಸಾದಿಕವುಲ್ಲಾ ಖಾನ್, ಅತ್ತೆ ಅಕ್ತರ್ ಬೇಗಂ, ಮಾವ ಹಬೀಬ್‌ಉಲ್ಲಾ ಖಾನ್, ನಾದನಿಯರಾದ ನಿಖಿತ ಗಂಡ ಶಕೀಲ್, ಫಿರ್ದೋಜ್ ಗಂಡ ಅಬ್ದುಲ್ ಖಾದರ್ ಹಾಗು ತಸ್ಲೀಮ್ ಇವರೆಲ್ಲರೂ ಅಕ್ಕನಿಗೆ ಮಾನಸಿಕವಾಗಿ ತುಂಬ ಕಿರುಕುಳ ನೀಡಿದ್ದರು. ಇದರಿಂದ ಜರ್ಝರಿತಳಾಗಿದ್ದ ಅಕ್ಕ ಕಳೆದ 8 ತಿಂಗಳಿಂದ ನಮ್ಮ ತಂದೆಯ ಮನೆಗೇ ಬಂದು ಉಪಜೀವನ ನಡೆಸುತ್ತಿದ್ದಳು ಎಂದು ಹೇಳಿದ್ದಾರೆ.
ಅದ್ಧೂರಿ ಮದುವೆ: 2008ರಲ್ಲಿ ಆಫ್ರೀನಾಳ ವಿವಾಹವಾಗಿತ್ತು. ವಿವಾಹ ಸಂದರ್ಭದಲ್ಲಿ ವರದಕ್ಷಿಣೆ ರೂಪದಲ್ಲಿ 60 ತೊಲೆ ಬಂಗಾರ, 1 ಕೆಜಿ ಬೆಳ್ಳಿ ಸಾಮಾನುಗಳು, ರು. 25 ಲಕ್ಷ, ಅಂದಾಜು ರು. 10 ಲಕ್ಷ ಮೌಲ್ಯದಷ್ಟು ಗೃಹ ಬಳಕೆಯ ವಸ್ತುಗಳನ್ನು ಕೊಟ್ಟು ಅದ್ಧೂರಿಯಿಂದ ಮದುವೆ ಮಾಡಲಾಗಿತ್ತು. ಇಷ್ಟು ಬಂಗಾರ, ಹಣ, ಬೆಳ್ಳಿ, ಸಂಸಾರಕ್ಕೆ ಅಗತ್ಯವಿರುವ ಪರಿಕರಗಳನ್ನು ನೀಡಿದ್ದರೂ, ಇನ್ನೂ ರು. 25 ಲಕ್ಷ, 20 ತೊಲೆ ಬಂಗಾರ, 1 ಸ್ವಿಫ್ಟ್  ಕಾರು ತರುವಂತೆ ಗಂಡ, ಅತ್ತೆ ಮನೆಯವರೆಲ್ಲರೂ ಆಗ್ರಹಿಸಿದ್ದರು. ಇದೇ ಕಾರಣಕ್ಕೆ ಆಫ್ರಿನಾ ಜರ್ಝರಿತಳಾಗಿದ್ದಳು ಎಂದು ಇಮ್ರಾನ್ ಖಾನ್ ದೂರಿನಲ್ಲಿ ಹೇಳಿದ್ದಾನೆ.
ದೈಹಿಕ ಹಿಂಸೆ: ವರದಕ್ಷಿಣೆ ಹೆಚ್ಚಿನ ಹಣ, ಬಂಗಾರ, ಕಾರು ತರುವಂತೆ ಅಕ್ಕ ಆಫ್ರಿನಳನ್ನು ಗಂಡನ ಮನೆಯಲ್ಲಿ ಹೊಡಿಬಡಿ ಸಹ ಮಾಡಿದ್ದಾರೆ. ದೈಹಿಕವಾಗಿ ಹಿಂಸೆ ನೀಡಿದ್ದಾರೆ. ಮನೆಯಿಂದ ಹೊರಹಾಕಿದ ನಂತರ ಆಫ್ರಿನಾ ತವರು ಮನೆಗೆ ಮರಳಿದ್ದು, 8 ತಿಂಗಳಿಂದ ಇಲ್ಲೇ ವಾಸವಾಗಿದ್ದಳು. ಇದೇ ವಿಚಾರದಲ್ಲಿ ಸದಾಕಾಲ ಚಿಂತೆಯಲ್ಲಿರುತ್ತಿದ್ದ ಅಕ್ಕ ಆಫ್ರಿನಾ ಮಂಗಳವಾರ ಮನೆಯ ಕೋಣೆಯಲ್ಲಿ ಹೋಗಿ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ದುರಂತದ ಸಾವನ್ನಪ್ಪಿದ್ದಾಳೆ ಎಂದು ದೂರಿನಲ್ಲಿ ಇಮ್ರಾನ್ ಹೇಳಿದ್ದಾರೆ.
ಮುಕ್ರಂಖಾನ್ ಹೆಸರಲ್ಲಿದ್ದ ಪರವಾನಗಿ ಸಹಿತ ರಿವಾಲ್ವರ್ ಲಾಕರ್‌ನಲ್ಲಿ ಇಡಲಾಗಿತ್ತು. ಆದಾಗ್ಯೂ ಲಾಕರ್‌ನಿಂದ ಪಿಸ್ತೂಲ್ ತೆಗೆದುಕೊಂಡು ಆಫ್ರೀನಾ ಮಗಳಿಗೆ ಮೊದಲು ಹೊಡೆದು ನಂತರ ತನ್ನ ತಲೆಗೆ ತಾನೇ ಗುಂಡು ಹಾರಿಸಿಕೊಂಡಿದ್ದಾಳೆ. ವರದಕ್ಷಿಮೆಗಾಗಿ ಕಿರುಕುಳ ನೀಡಿದವರ ವಿರುದ್ಧ ಕ್ರಮ ಜರುಗಿಸಿ ಎಂದು ಆಗ್ರಹಿಸಿ ಇಮ್ರಾನ್ ನೀಡಿರುವ ದೂರನ್ನು ಬಸವೇಶ್ವರ ನಗರ ಠಾಣೆಯಲ್ಲಿ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ದೂರು ದಾಖಲು: ಆಫ್ರಿನಾ ತಾನು ಗುಂಡು ಹಾರಿಸಿಕೊಂಡಿದ್ದಲ್ಲದೆ, ಮಗಳನ್ನೂ ಗುಂಡಿನಿಂದ ಹೊಡೆದು ಸಾಯಿಸಿರುವ ಘಟನೆಯ ಬಗ್ಗೆ ನಿದಾಖಾನ್ ಮುಕ್ರಂಖಾನ್  ಪ್ರತ್ಯೇಕ ದೂರು ದಾಖಲಿಸಿದ್ದು, ಇದೂ ಸಹ ಬಸವೇಶ್ವರ ನಗರ ಠಾಣೆಯಲ್ಲಿ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಅಣ್ಣ ಇಮ್ರಾನ್ ಜೊತೆಗೆ ಮನೆಯಲ್ಲಿ ಇದ್ದಾಗ ಅಕ್ಕ ಆಫ್ರೀನಾ ಖಾನ್ ತನ್ನ ಮಗಳು ಹಾನಾಖಾನ್ ಜೊತೆಗೆ ಬೆಡ್‌ರೂಂ ಮಂಚದ ಬಳಿ ಇದ್ದಳು. ನಾವು ವಿಶ್ರಾಂತಿಗೆಂದು ಹೋದೆವು. ನಂತರ ಅಕ್ಕ ನಿಂತಿದ್ದ ಕೋಣೆಯಿಂದ ಡಮ್ ಎಂಬ ಸದ್ದು, ಜೊತೆಗೇ ಅರಚಾಟದ ಸದ್ದು ಕೇಳಿಬಂತು. ಗಾಬರಿಯಿಂದ ಹೋಗಿ ನೋಡುವಷ್ಟರಲ್ಲಿ ಆಫ್ರಿನ್ ಖಾನ್ ತಾನು ಮಗಳೊಂದಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು ಎಂದು ದೂರಿನಲ್ಲಿ ಹೇಳಲಾಗಿದ್ದು ಮಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಸದರಿ ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.