ಬಂಡೆ ಬಲಿ ಪಡೆದ ಗುಂಡು ಯಾವುದು?
ಕ.ಪ್ರ. ವಾರ್ತೆ, ಗುಲ್ಬರ್ಗ, ಫೆ.5
ಗುಲ್ಬರ್ಗ ಶೂಟೌಟ್ನಲ್ಲಿ ಪಿಎಸ್ಐ ಬಂಡೆ ಪ್ರಾಣ ತೆಗೆದ ಗುಂಡು ಯಾರು ಹಾರಿಸಿದ್ದು? ಯಾವ ಪಿಸ್ತೂಲ್ನಿಂದ ಬಂತು ಎಂಬುದು ಇನ್ನೂ ನಿಗೂಢವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಂಡೆ ಸಾವಿನ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ. ಪ್ರಕರಣದ ಗಂಭೀರತೆಯನ್ನು ಸರ್ಕಾರ ಅರ್ಥ ಮಾಡಿಕೊಂಡಿಲ್ಲ. ಮುನ್ನಾ ಬಳಿ ಗನ್ ಇರಲಿಲ್ಲ ಎಂದು ಆತನ ಪತ್ನಿಯೇ ಹೇಳಿಕೆ ನೀಡಿದ್ದಾಳೆ. ಹಾಗಾದರೆ ಬಂಡೆ ಬಲಿ ಪಡೆದ ಗುಂಡು ಎಲ್ಲಿಂದ ಬಂತು ಎಂಬುದೇ ಪ್ರಶ್ನೆ. ಕಣ್ಣೊರೆಸುವ ತಂತ್ರವಾಗಿ ಸಿಐಡಿ ತನಿಖೆ ನಡೆಸಲಾಗಿದೆ, ಈ ರಹಸ್ಯ ಭೇದಿಸಲು ಸಿಬಿಐ ತನಿಖೆಯೇ ಸೂಕ್ತ ಎಂದು ಆಗ್ರಹಿಸಿದರು.
ಬೆಂಗಳೂರಿನ ಎಟಿಎಂ ಕೇಂದ್ರದಲ್ಲಿ ಮಹಿಳೆ ಮೇಲೆ ಹಲ್ಲೆಯಾಗಿ 90 ದಿನ ಕಳೆದರೂ ಆರೋಪಿ ಪತ್ತೆಯಾಗಿಲ್ಲ. ಕಗ್ಗಲಿಪುರದಲ್ಲಿ ಗೂಂಡಾಗಳು ಬಹಿರಂಗವಾಗಿಯೇ ಲಾಂಗು ಮಚ್ಚು ಹಿಡಿದು ತಿರುಗುತ್ತಿದ್ದಾರೆ. ಅವರನ್ನು ಮಟ್ಟ ಹಾಕಲು ರಾಜ್ಯ ಸರ್ಕಾರಕ್ಕೆ ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.
ಸಿದ್ದು ಸಂಪುಟದ ಸಚಿವರು ಒಂದಿಲ್ಲೊಂದು ಹೇಳಿಕೆ ನೀಡುತ್ತಾರೆ. ಜನರ ವಿರೋಧ ಕಂಡಾಕ್ಷಣ ಹಿಂದೆ ಸರಿಯುತ್ತಿದ್ದಾರೆ. ಇದೊಂದು ತುಘಲಕ್ ದರ್ಬಾರ್. ಇಂತಹ ನಡವಳಿಕೆಯಿಂದ ರಾಜ್ಯದ ಪ್ರಗತಿ ಕುಂಠಿತವಾಗಿದೆ ಎಂದರು.
ಹದಗೆಟ್ಟ ಪೊಲೀಸ್ ವ್ಯವಸ್ಥೆ: ಪೊಲೀಸರು ಸ್ಥಳೀಯವಾಗಿ ರಿಯಲ್ ಎಸ್ಟೇಟ್ ದಂಧೆದಾರರ ಜೊತೆ ಶಾಮೀಲಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯನವರೇ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಪೊಲೀಸ್ ವ್ಯವಸ್ಥೆಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ ಎನ್ನುವುದಕ್ಕೆ ಇದಕ್ಕಿಂತಲೂ ಸಾಕ್ಷಿ ಬೇಕೇ ಎಂದು ಪ್ರಶ್ನಿಸಿದರು.
ಇಂತಹ ಅವ್ಯವಸ್ಥೆಯಲ್ಲೇ ಸಿದ್ದರಾಮಯ್ಯ ಬಜೆಟ್ ಮಂಡನೆಗೆ ಸಿದ್ಧರಾಗುತ್ತಿರುವುದು ದೌರ್ಭಾಗ್ಯ. ಕಾಂಗ್ರೆಸ್ ಸರ್ಕಾರ ಸಾಮರಸ್ಯ ಕದಡುತ್ತಿದೆ. ತನ್ನ ಮತಬ್ಯಾಂಕ್, ಅಲ್ಪಸಂಖ್ಯಾತರ ತುಷ್ಟೀಕರಣದ ನೀತಿಗಳಿಂದ ರಾಜ್ಯದಲ್ಲಿ ಜಾತಿಗಳ ಮಧ್ಯೆ ಕಂದಕ ನಿರ್ಮಿಸುತ್ತಿದೆ. ಇಂತಹ ಸರ್ಕಾರದಿದಂ ರಾಜ್ಯಕ್ಕೇ ತೊಂದರೆ ಎಂದರು.
ಕಲಂ 371 (ಜೆ) ಉಭಯ ಸದನಗಳಲ್ಲಿ ಠರಾವು ಮಂಡಿಸಿ ಕೇಂದ್ರದ ಗಮನ ಸೆಳೆದದ್ದು ಬಿಜೆಪಿ. ಆಡ್ವಾಣಿ ಕಾಲದಲ್ಲಿ ಈ ಬೇಡಿಕೆಗೆ ಸ್ಪಂದನೆ ಸಿಕ್ಕಿರಲಿಲ್ಲ. ಆದರೆ ಈ ಭಾಗದ ಜನರ ಹೋರಾಟವನ್ನು ಬಿಜೆಪಿ ಗುರುತಿಸಿದೆ. ಆದ್ದರಿಂದಲೇ ಜನಪರ ಹೋರಾಟದ ಬೇಡಿಕೆ ಈಡೇರುವಂತಾಯ್ತು. ಇದೆಲ್ಲ ನಾವೇ ಮಾಡಿದ್ದು ಎಂದು ಯಾರಾದರೂ ಹೇಳಿಕೊಂಡರೆ ಅದು ಅಷ್ಟು ಸಮಂಜಸವಾಗದು ಎಂದರು.
ಶಿವಮೊಗ್ಗದಿಂದ ಯಡಿಯೂರಪ್ಪ ಲೋಕಸಭೆ ಕಣಕ್ಕಿಳಿಯಬೇಕು ಎಂಬುದು ಎಲ್ಲರ ಅಭಿಮತ. ಅದಕ್ಕೆ ಅವರು ಏನೂ ಹೇಳಿಲ್ಲ. ಆದರೆ ಪಕ್ಷದ ವರಿಷ್ಠರು ಬಯಸಿದರೆ ಕಣದಲ್ಲಿರುವೆ ಎಂದಿದ್ದಾರೆ. ರಾಜ್ಯದ ಲೋಕಸಭೆ ಸ್ಪರ್ಧಾಳುಗಳ ವಿಚಾರ, ರಾಜ್ಯದಲ್ಲಿ ಲೋಕಸಭೆ ಕಾರ್ಯತಂತ್ರದ ಬಗ್ಗೆ ಗಮನ ಸೆಳೆಯಲು ಫೆ. 6ರಂದು ದೆಹಲಿಗೆ ಪಕ್ಷದ ಮಂಡಳಿ ಹೊರಟಿದೆ. ಅಲ್ಲಿ ಈ ಎಲ್ಲ ಸಂಗತಿಗಳು ಚರ್ಚಿಸಲ್ಪಡುತ್ತವೆ ಎಂದರು.
ಕಂದಾಯ ನಿರೀಕ್ಷೆಯಂತೆ ಸಂಗ್ರಹವಾಗುತ್ತಿಲ್ಲ, ಸಾರಿಗೆ ಕಂದಾಯದಲ್ಲಿಯೂ ಹಿನ್ನಡೆ ಕಾಣಿಸಿಕೊಂಡಿದೆ. ಹೀಗಾಗಿ ರಾಜ್ಯದ ಆದಾಯ ವಿಚಾರವಾಗಿ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದ್ದರೂ ಯಾರೂ ಕ್ಯಾರೆ ಎಂದಿಲ್ಲ. ಇದು ಸರ್ಕಾರದ ಇಚ್ಛಾಶಕ್ತಿ ಕುಸಿತಕ್ಕೆ ಸಾಕ್ಷಿ ಎಂದರು.
ಮಾಜಿ ಸಚಿವ ರೇವುನಾಯಕ ಬೆಳಮಗಿ, ಎಂಎಲ್ಎ ದತ್ತಾತ್ರೇಯ ರೇವೂರ್, ಎಂಎಲ್ಸಿ ಅಮರನಾಥ ಪಾಟೀಲ್, ರಾಜಕುಮಾರ ತೇಲ್ಕೂರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

