ಗುಲ್ಬರ್ಗಾ

ಆಚಾರ್ಯ ಮಧ್ವರ ಜಯಂತ್ಯುತ್ಸವ ವೈಭವ

Published On :

ಗುಲ್ಬರ್ಗ: ದ್ವೈತ ಮತ ಸಂಸ್ಥಾಪಕ, 13ನೇ ಶತಮಾನದ ದಾರ್ಶನಿಕ, ಕನ್ನಡಿಗ ಆಚಾರ್ಯ ಮಧ್ವರ ಜಯಂತ್ಯುತ್ಸವವನ್ನು ನಗರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ದ್ವೈತ ಮತ ಸ್ಥಾಪನೆ ಮಾಡುವ ಮೂಲಕ ಇಡೀ ಜಗತ್ತಿಗೆ ಹರಿ ಸರ್ವೋತ್ತಮ, ವಾಯು ಜೀವೋತ್ತಮ ಎಂಬ ಹೊಸತೊಂದು ಸಿದ್ಧಾಂತ ಕೊಡುಗೆ ರೂಪದಲ್ಲಿ ನೀಡಿರುವ ಉಡುಪಿ ಹತ್ತಿರದ ಪಾಜಕ ಕ್ಷೇತ್ರದಲ್ಲಿ ಅವತಾರ ಎತ್ತಿರುವ ಆಚಾರ್ಯ ಮಧ್ವರ ಜಯಂತಿ ನಿಮಿತ್ತ ಶನಿವಾರ ನಗರದ ಬಿದ್ದಾಪುರ ರಾಯರಮಠದಲ್ಲಿ ಉಪನ್ಯಾಸ ನಡೆಯಿತು.
ವಿಶ್ವ ಮಧ್ವ ಮಹಾ ಪರಿಷತ್‌ನಿಂದ ಭವ್ಯ ಶೋಭಾಯಾತ್ರೆ, ಭಜನೆ ಜನಮನ ಸೆಳೆದವು. ಜೇವರ್ಗಿಯ ವರಹಳ್ಳೆರಾಯ ನೆಲೆ ನಿಂತಿರುವ ದುಮ್ಮದ್ರಿಯಲ್ಲಂತೂ ಕಳೆದೊಂದು ವಾರದಿಂದ ಸಾಗಿರುವ ಮಧ್ವೋತ್ಸವಕ್ಕೆ ಶನಿವಾರ ವೈಭವೋಪೇತ ರಥೋತ್ಸವದೊಂದಿಗೆ ತೆರೆ ಬಿತ್ತು.
ಭವ್ಯ ಶೋಭಾಯಾತ್ರೆ: ವಿಶ್ವ ಮಧ್ವ ಮಹಾಪರಿಷತ್ ನಡೆಸಿದ ಭವ್ಯ ಶೋಭಾಯಾತ್ರೆ ಜನಮನ ಸೆಳೆಯಿತಲ್ಲದೆ ಆಚಾರ್ಯ ಮಧ್ವರ ಸಂದೇಶ ಸಾರಿ ಹೇಳಿತು. ಜಯಂತಿ ದಿನವಾದ ಶನಿವಾರ ಸಂಜೆ 5ಕ್ಕೆ ಭವ್ಯ ಶೋಭಾಯಾತ್ರೆ ಧ್ಯಾನಾಂಜನೇಯ ದೇವಸ್ಥಾನದಿಂದ ಶುರುವಾಯ್ತು. ಭಜನಾ ಮಂಡಳಿಗಳ ಸುಮಂಗಲಿಯರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಶೋಭಾಯಾತ್ರೆ ಹರಿನಾಮ ಸ್ಮರಣೆಯೊಂದಿಗೆ ಜೇವರ್ಗಿ ಕಾಲೋನಿ ರಾಘವೇಂದ್ರ ಸ್ವಾಮಿಗಳ ಮಠದವರೆಗೂ ನಡೆಯಿತು.
ನಂತರ ಜೇವರ್ಗಿ ಕಾಲೋನಿ ರಾಯರ ಮಠದಲ್ಲಿ ಪಂಡಿತರು ಮಧ್ವಚಾರ್ಯರ ಜೀವನ ಚರಿತ್ರೆಯ ಮೇಲೆ ಬೆಳಕು ಚಲ್ಲುವಂತಹ ಉಪನ್ಯಾಸಗಳನ್ನು ಮಾಡಿದರು. ಮಧ್ವಾಚಾರ್ಯರರ ತತ್ವ- ಸಿದ್ಧಾಂತಗಳ ಬಗ್ಗೆ ಪಂಡಿತರು ಉಪನ್ಯಾಸ ನೀಡಿ ಆಚಾರ್ಯರ ಸಂದೇಶ ಎಳೆಎಳೆಯಾಗಿ ವಿವರಿಸಿದರು. ಸಮಸ್ತ ವಿಪ್ರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಸಮಾರಂಭದಲ್ಲಿ ಮಧ್ವ ಮಹಾ ಪರಿಷತ್ ಜಿಲ್ಲಾಧ್ಯಕ್ಷ ಅರವಿಂದ ನವಲಿ, ಉತ್ತರಾದಿ ಮಠಾಧಿಕಾರಿ ರಾಮಾಚಾರ್ಯ ಘಂಟಿ ಸೇರಿದಂತೆ ಅನೇಕರು ಮುಂಚೂಣಿಯಲ್ಲಿದ್ದರು.
ದುಮ್ಮದ್ರಿಯಲ್ಲಿ  ರಥೋತ್ಸವ: ಜೇವರ್ಗಿ ತಾಲೂಕಿನ ದುಮ್ಮದ್ರಿಯ ವರಹಳ್ಳೆರಾಯ ಮಂದಿರದಲ್ಲಿ ಕಳೆದೊಂದು ವಾರದಿಂದ ಮಧ್ವೋತ್ಸವ ವೈಭವದಿಂದ ಸಾಗಿದ್ದು ನವಮಿ ದಿನ ರಥೋತ್ಸವ, ಭವ್ಯ ಶೋಭಾಯಾತ್ರೆ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಮಳ್ಳಿ ಗ್ರಾಮದಿಂದ ದುಮ್ಮದ್ರಿವರೆಗೂ ಮಧ್ವರ ಉತ್ಸವಮೂರ್ತಿ ಮೆರವಣಿಗೆ ನಡೆಯಿತು. ಇದಾದ ನಂತರ ಜ.31ರಿಂದ ಆರಂಭವಾಗಿದ್ದ ಮಧ್ವೋತ್ಸವಕ್ಕೆ ನವಮಿ ದಿನ ವೈಭವದ ತೆರೆಬಿತ್ತು.
ಉತ್ಸವದ ಎಲ್ಲ ದಿನ ನಿತ್ಯ ವಾಯುಸ್ತುತಿ ಪುನಶ್ಚರಣೆ ನಡೆದಿದ್ದು ಪಂಚಾಮೃತ ಅಭಿಷೇಕ ವರಹಳ್ಳೆರಾಯನಿಗೆ ಅರ್ಪಿಸಲಾಗಿತ್ತು.  ಮಧ್ವನವಮಿಯಂದು ಮ.12ಕ್ಕೆ ರಥೋತ್ಸವ ಸಾಮೂಹಿಕ ಪವಮಾನ ಹೋಮ ಹಾಗೂ ಮಧ್ವಾಚಾರ್ಯರ ಭಾವಚಿತ್ರ ಶೋಭಾಯಾತ್ರೆ ದುಮ್ಮದ್ರಿಯಲ್ಲಿ ಭಕ್ತರನ್ನು ಬಹುವಾಗಿ ಸೆಳೆದಿತ್ತು. ಹಣಮಂತರಾವ ಕುಲ್ಕರ್ಣಿ ಮಳ್ಳಿ ಇವರ ದಾಸವಾಣಿ ಕಾರ್ಯಕ್ರಮ, ಭಜನಾ ಮಂಡಳಿಗಳ ದಾಸರ ಪದಗಳ ಕೀರ್ತನೆ ಮಧ್ವೋತ್ಸವ ಕಳೆಗಟ್ಟುವಂತೆ ಮಾಡಿತ್ತು.
ಇದಲ್ಲದೆ ಜಯತೀರ್ಥರ ಸನ್ನಿಧಾನ ಮಳಖೇಡ, ಮಾಧವತೀರ್ಥರು, ವೇದೇಶತೀರ್ಥರ ಪುಣ್ಯತಾಣ ಮಣ್ಣೂರು ಹಾಗೂ  ಗುಲ್ಬರ್ಗದ ವಿವಿಧೆಡೆಗಳಲ್ಲಿ ಮಧ್ವರ ಜಯಂತಿ ಆಚರಣೆ ಕಾರ್ಯಕ್ರಮಗಳು ನಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.